ಹುಮನಾಬಾದ: ಚಾಂಗ್ಲೇರಾ ಗ್ರಾಮದ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ದೇವಸ್ಥಾನ ಅಭಿವೃದ್ಧಿಗೆ ಮುಜರಾಯಿ ಇಲಾಖೆ ಮತ್ತು ಇತರೆ ಅನುದಾನ ತಂದು 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ, ಹೈ.ಕ. ಭಾಗಕ್ಕೆ ಮಾದರಿ ದೇವಸ್ಥಾನವಾಗಿ ಪರಿವರ್ತಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು.
ಚಾಂಗ್ಲೇರಾ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವಿಧ ಮಠಾಧೀಶರ ಸಲಹೆಯಂತೆ ಧರ್ಮಸ್ಥಳ ಮತ್ತು ಉಡುಪಿ ಮಾದರಿಯಲ್ಲಿ ವೇದ ಪಾಠಶಾಲೆ ಸೇರಿದಂತೆ ಉತ್ತಮ ಪರಿಸರ ನಿರ್ಮಿಸಲು ಶಕ್ತಿಮೀರಿ ಪ್ರಯತ್ನಿಸುವೆ. ಇಲ್ಲಿ ಅಶೀರ್ವಾದ ಪಡೆದ ನಂತರ ಶಾಸಕರಾಗಿ ಎರಡುಬಾರಿ ಸಚಿವನಾಗುವ ಯೋಗ ಬಂದಿದೆ. ಇಂಥ ಪುಣ್ಯ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವುದಾಗಿ ಸಚಿವ ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತೀಬಾಯಿ ಶೇರಿಕಾರ, ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ ದೇವಸ್ಥಾನಕ್ಕೆ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾದಷ್ಟು ಅನುದಾನ ನೀಡುವುದಾಗಿ ಭರವಸೆ ನೀಡಿದರು. ತಡೋಳಾದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಇಟಗಾದ ಚನ್ನಮಲ್ಲೇಶ್ವರ ತ್ಯಾಗಿ, ಹುಮನಾಬಾದ ಹಿರೇಮಠದ ರೇಣುಕ ಗಂಗಾಧರ ಸ್ವಾಮೀಜಿ ಆಶೀರ್ವಚನ ನೀಡಿದರು.
ತಹಶೀಲ್ದಾರ್ ಡಿ.ಎಂ.ಪಾಣಿ, ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ವಿಜಯಕುಮಾರ ವಾಲಿ, ರೇವಣಸಿದ್ದಯ್ಯ ಸ್ವಾಮಿ, ಜಿಲ್ಲೆಯ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು, ಗಣ್ಯರು, ಮಠಾಧಿಧೀಶರು ಇದ್ದರು. ರಾಜಶೇಖರಸ್ವಾಮಿ ಮಳ್ಳಿ ಸ್ವಾಗತಿಸಿದರು. ರವಿಕುಮಾರ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದ ಬಳಿಕ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ನಡೆಯಿತು. ವಿವಿಧ ರಾಜ್ಯಗಳ ಸಾವಿರು ಭಕ್ತರು ಭಾಗವಹಿಸಿ, ವೀರಭದ್ರಸ್ವಾಮಿ ದರ್ಶನ ಪಡೆದರು.