ಕಾರವಾರ: ವರ್ಷದಲ್ಲಿ ಏಳು ದಿನ ಮಾತ್ರ ಬಾಗಿಲು ತೆರೆಯುವ ತಾಲೂಕಿನ ಹಣಕೋಣದ ಪ್ರಸಿದ್ಧ ಶ್ರೀ ಸಾತೇರಿ ದೇವಿಯ ಜಾತ್ರಾ ಮಹೋತ್ಸವ ಕಳೆದ ರವಿವಾರದಿಂದ ಆರಂಭವಾಗಿದ್ದು, ಕಳೆದ ನಾಲ್ಕು ದಿನಗಳಿಂದ ಭಕ್ತರು ಸಾಲು ಸಾಲಾಗಿ ಸಾತೇರಿಯ ದರ್ಶನ ಪಡೆದು ಹರಕೆ ತೀರಿಸಿದರು. ಹೊರ ರಾಜ್ಯ ಹಾಗೂ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರೀ ದೇವಿಯ ದರ್ಶನ ಪಡೆದು ಧನ್ಯತೆ ಅನುಭವಿಸಿದರು.
ಗೋವಾ, ಮಹಾರಾಷ್ಟ್ರ ರಾಜ್ಯ, ಜಿಲ್ಲೆ ಮತ್ತು ನೆರೆ ಜಿಲ್ಲೆಗಳಲ್ಲಿ ಹಣಕೋಣ ಸಾತೇರಿ ದೇವಿಯ ಭಕ್ತರಿದ್ದು, ಅವರೆಲ್ಲ ದೇವಿಯ ದರ್ಶನಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಬಂದಿದ್ದರು. ವರ್ಷದಲ್ಲಿ ಏಳು ದಿನ ಮಾತ್ರ ದೇವಾಲಯ ತೆರೆಯುವ ಸಾತೇರಿ ದೇವಿ ದೇವಸ್ಥಾನ ಭಕ್ತರ ಇಷ್ಟಾರ್ಥ ಸಿದ್ಧಿಸುವ ಕಾರಣ ಪ್ರಸಿದ್ಧಿ ಗಳಿಸಿದೆ. ವರ್ಷಕ್ಕೊಮ್ಮೆ ಭಾದ್ರಪದ ಮಾಸದ ಚೌತಿ ಹಬ್ಬದ ನಾಲ್ಕು ದಿನಗಳ ನಂತರ ಮಧ್ಯರಾತ್ರಿ ಬಾಗಿಲು ತೆರೆಯುವುದು ಸಾತೇರಿ ದೇವಸ್ಥಾನದ ವಿಶೇಷತೆಯಾಗಿದೆ. ವಿವಿಧೆಡೆಯಿಂದ ಬರುವ ಭಕ್ತರು ಶ್ರದ್ಧಾ ಭಕ್ತಿಯಿಂದ ದೇವಿಯನ್ನು ಪೂಜಿಸಿದರು. ಜಾತ್ರೆಯ ಏಳು ದಿನಗಳಲ್ಲಿ ದೇವಸ್ಥಾನ ಕಮಿಟಿಯು ಕುಳಾವಿಗಳಾದ ಕೊಂಕಣ ಮರಾಠ ಸಮುದಾಯದವರಿಗೆ ದೇವಸ್ಥಾನದ ಬಾಗಿಲು ತೆರೆಯುವ ಮೊದಲ ದಿನ (ಕಳೆದ ರವಿವಾರ ಮತ್ತು ಸೋಮವಾರ) ಸಂಪ್ರದಾಯದಂತೆ ದರ್ಶನಕ್ಕೆ ವ್ಯವಸ್ಥೆ ಮಾಡಿತ್ತು. ನಂತರ ಸಾರ್ವಜನಿಕರಿಗೆ ಮಂಗಳವಾರದಿಂದ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತು. ವರ್ಷದ 358 ದಿನ ಬಾಗಿಲು ಹಾಕಿರುವ ಸಾತೇರಿ ದೇವಸ್ಥಾನ ವರ್ಷದಲ್ಲಿ ಏಳು ದಿನ ಮಾತ್ರ ತೆರೆಯುವ ಕಾರಣ ಏಳು ದಿನವೂ ಜಾತ್ರೆಯ ವಾತಾವರಣ ಸೃಷ್ಟಿಯಾಗುತ್ತದೆ.
ನಂಬಿಕೆ: ಶ್ರೀ ಸಾತೇರಿ ದೇವಿಯಲ್ಲಿ ಮಕ್ಕಳು ಇಲ್ಲದವರು ದೇವಿಯಲ್ಲಿ ಹರಕೆ ಹೊತ್ತರೆ ಮಕ್ಕಳ ಭಾಗ್ಯ ಕರುಣಿಸುತ್ತದೆ ಎಂಬ ನಂಬಿಕೆ ತಲೆಮಾರುಗಳಿಂದ ಪ್ರತೀತಿಯಲ್ಲಿದೆ. ಮದುವೆಯಾಗದ ಹೆಣ್ಮಕ್ಕಳಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ. ರೋಗ ರುಜಿನಗಳು ವಾಸಿಯಾಗುತ್ತವೆ. ಆಸ್ತಿಪಾಸ್ತಿ ನಷ್ಟವಾದರೆ ಸರಿಹೋಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಸಾತೇರಿ ದೇವಿಯಲ್ಲಿ ನಿವೇದಿಸಿಕೊಂಡರೆ ವರ್ಷದೊಳಗೆ ಇಷ್ಟಾರ್ಥ ಪೂರ್ತಿಯಾಗುತ್ತದೆ ಎಂಬ ಅಚಲವಾದ ನಂಬಿಕೆ ಉಳಿದುಕೊಂಡು ಬಂದಿದೆ. ಹೀಗಾಗಿ ಭಕ್ತರು ಬಿಡುವು ಮಾಡಿಕೊಂಡು ಹರಕೆ ತೀರಿಸಲು ದೊಡ್ಡ ಪ್ರಮಾಣದಲ್ಲಿ ಆಗಮಿದ್ದರು. ಅಲ್ಲದೇ ಸರತಿ ಸಾಲಿನಲ್ಲಿ ನಿಂತು ಸಾತೇರಿಗೆ ಸೀರೆ, ಕುಪ್ಪಸದ ಜೊತೆ ಉಡಿ ತುಂಬಿದರು. ಹೂವು, ಹಣ್ಣು ,ಕಾಯಿ ಸಮರ್ಪಿಸಿದರು. ಇದಲ್ಲದೇ ಬಹುದಿನಗಳ ಬೇಡಿಕೆ ಈಡೇರಿಕೆಯಾದ ಭಕ್ತರು ಶ್ರೀದೇವಿಗೆ ಕಿವಿಯೋಲೆ,ನತ್ತು, ಮಾಂಗಲ್ಯಸರ ಮುಂತಾದ ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಾಣಿಕೆ ರೂಪದಲ್ಲಿ ಅರ್ಪಿಸಿದರು.
ಹರಾಜು ಸಂಸ್ಕೃತಿ: ಇಲ್ಲಿ ಭಕ್ತರು ಹರಕೆಯಾಗಿ ಸಲ್ಲಿಸುವ ಬಂಗಾರ ಮತ್ತು ಬೆಳ್ಳಿಯ ಒಡವೆ ಹಾಗೂ ಸೀರೆ, ಕುಪ್ಪಸಗಳನ್ನು ಹರಾಜು ಹಾಕಲಾಗುತ್ತದೆ. ದೇವಿಗೆ ಅಲಂಕರಿಸಲಾದ ಬಂಗಾರದ ಒಡವೆ, ಸೀರೆ, ಕುಪ್ಪಸಗಳನ್ನು ಖರೀದಿಸಲು ಭಕ್ತರು ಹೆಚ್ಚಿಗೆ ಇಷ್ಟ ಪಡುತ್ತಾರೆ. ದೇವಿಯ ಮೈ ಮೇಲೆ ಹಾಕಿದ ಆಭರಣ ಹರಾಜಿನಲ್ಲಿ ಖರೀದಿಸಿದರೆ ಶುಭವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಇಲ್ಲಿ ಹರಾಜಿನಲ್ಲಿ ಸಿಗುವ ಒಡವೆಗಳು ಮೂಲ ಬೆಲೆಗಿಂತ ಕಡಿಮೆ ದರದಲ್ಲಿ ಸಿಗುವುದು ಇನ್ನೊಂದು ವಿಶೇಷವಾಗಿದೆ. ಜಿಲ್ಲೆಯಲ್ಲಿ ಹರಕೆ ರೂಪದಲ್ಲಿ ಬಂದ ಬಂಗಾರ, ಬೆಳ್ಳಿಯ ಒಡವೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹರಾಜು ಮಾಡುವ ಏಕೈಕ ದೇವಸ್ಥಾನ ಇದಾಗಿದೆ. ದೇವಿ ದರ್ಶನಕ್ಕೆ ಬಂದ ಭಕ್ತರಲ್ಲಿ ಬಡವರು, ಶ್ರೀಮಂತರೆನ್ನದೇ ಯತಾಶಕ್ತಿ ಹರಾಜಿನಲ್ಲಿ ಪಾಲ್ಗೊಂಡು ಸೀರೆ, ಕುಪ್ಪಸ, ಆಭರಣಗಳನ್ನು ಖರೀದಿಸಿ ಖುಷಿ ಅನುಭವಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.