ಸುಳ್ಯ: ಮನೆಯಲ್ಲಿ ಮಗ ನೋಡಿಕೊಳ್ಳುತ್ತಿಲ್ಲ, ಮನೆಗೆ ಸೇರಿಸುತ್ತಿಲ್ಲವೆಂದು ವೃದ್ಧೆಯೊಬ್ಬರು ತಹಶೀಲ್ದಾರ್‌ರಿಗೆ ನೀಡಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮನೆಗೆ ಹೋಗಿ ಮಗನ ಮನವೊಲಿಸಿ ವೃದ್ಧೆಯನ್ನು ಮನೆಗೆ ಸೇರಿಸಿದ ಘಟನೆ ಮಂಡೆಕೋಲಿನಲ್ಲಿ ನಡೆದಿದೆ.
ಮಂಡೆಕೋಲು ಗ್ರಾಮದ ಕಲ್ಲಡ್ಕ ಪೆರಾಜೆಯ ಶೇಷಮ್ಮ ಅವರು ತಹಶೀಲ್ದಾರ್‌ರಿಗೆ ಈ ಬಗ್ಗೆ ದೂರು ನೀಡಿದ್ದರು. ನನಗೆ ಅಸೌಖ್ಯವಿದೆ. ನಾನು ಮಗಳ ಮನೆಯಲ್ಲಿದ್ದೇನೆ. ನನಗೆ ನನ್ನ ಮನೆಗೆ ಹೋಗಬೇಕೆಂದು ದೂರು ನೀಡಿದ್ದರು.
ದೂರು ಸ್ವೀಕರಿಸಿದ ತಹಶೀಲ್ದಾರ್ ಜಿ. ಮಂಜುನಾಥ್ ಅವರು, ತಾ.ಪಂ. ಇ.ಒ. ಪರಮೇಶ್, ಸಿಡಿಪಿಒ ಶೈಲಜಾ, ಮಂಡೆಕೋಲು ಪಿಡಿಒ ರಮೇಶ್, ಮಂಡೆಕೋಲು ಗ್ರಾಮ ಆಡಳಿತಾಧಿಕಾರಿ ಅಜಯ್ ಹಾಗೂ ಶೇಷಮ್ಮರ ಮೂವರು ಪುತ್ರಿಯರ ಜತೆ ತಾಲೂಕು ಕಚೇರಿಯಲ್ಲಿ ಸಮಾಲೋಚನೆ ನಡೆಸಿದರು.
ತಾಯಿಗೆ ಮನೆಗೆ ಹೋಗಬೇಕಂತೆ, ಅಲ್ಲಿ ಸೇರಿಸಿಕೊಳ್ಳುತ್ತಿಲ್ಲ. ಅವರ ಮನೆಗೆ ಹೋದರೆ ಅಲ್ಲಿ ಅವರ ಕೆಲಸ ನಾವೇ ಮಾಡುತ್ತೇವೆ ಎಂದು ಹೆಣ್ಣು ಮಕ್ಕಳು ಹೇಳಿದರು. ಬಳಿಕ ಶೇಷಮ್ಮ ಅವರನ್ನು ಕರೆದುಕೊಂಡು ತಹಶೀಲ್ದಾರ್ ನೇತೃತ್ವದ ತಂಡ ಮಂಡೆಕೋಲು ಕಲ್ಲಡ್ಕ ಪೆರಾಜೆಯ ಅವರ ಮನೆಗೆ ತೆರಳಿದರು. ಅಲ್ಲಿ ಶೇಷಮ್ಮರ ಮಗ, ಸೊಸೆ ಇದ್ದು ಪ್ರಮುಖರ ಜತೆ ಸುದೀರ್ಘ ಸಮಾಲೋಚನೆ ನಡೆಯಿತು.
ತಹಶೀಲ್ದಾರ್, ಇ.ಒ ಹಾಗೂ ಸರಸ್ವತಿ ಕಾಮತ್ ವಯೋವೃದ್ಧ ತಾಯಿಯನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಕುರಿತು ತಿಳಿ ಹೇಳಿ ಮನವೊಲಿಸುವ ಕಾರ್ಯ ಮಾಡಿದರಲ್ಲದೆ ಅವರ ಮೂವರು ಸಹೋದರಿಯರಿಗೂ ತಿಳುವಳಿಕೆಯ ಮಾತುಗಳನ್ನಾಡಿದರು. ತಾಯಿಯನ್ನು ಮನೆಯೊಳಗೆ ಕರೆದುಕೊಂಡು ಹೋಗಲಾಯಿತು. ಅವರ ಆರೈಕೆ ಮಾಡಲು ಮದುವೆಯಾಗಿರುವ ಮೂವರು ಹೆಣ್ಣು ಮಕ್ಕಳು ಮನೆಯಲ್ಲೆ ಒಬ್ಬರಂತೆ ಇದ್ದು ನೋಡಿಕೊಳ್ಳುವುದಾಗಿ ತಹಶೀಲ್ದಾರ್‌ಎದುರು ಹೇಳಿದರು. ಆ ಮೂಲಕ ಕೌಟುಂಬಿಕ ವಿವಾದವೊಂದನ್ನು ಸಮಾಲೋಚನೆ ನಡೆಸಿ ಇತ್ಯರ್ಥ ಪಡಿಸುವಲ್ಲಿ ತಹಶೀಲ್ದಾರ್ ನೇತೃತ್ವದ ತಂಡ ಯಶಸ್ವಿಯಾಗಿದೆ.