Advertisement

ಶುದ್ಧ ಸಸ್ಯಾಹಾರಿ ಖಾದ್ಯಗಳ ರುಚಿ ಸವಿದು ರಜೆಯ ಮಜಾ

08:00 AM Aug 08, 2017 | Team Udayavani |

ಕುಂದಾಪುರ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಸದಾ ಕ್ರಿಯಾಶೀಲವಾಗಿರುವ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ  ರವಿವಾರ  ಸಂಭ್ರಮದ ವಾತಾವರಣ. ಮಕ್ಕಳು ಶಾಲೆಯಲ್ಲಿ ಸೇರಿ ಶುದ್ಧ ಸಸ್ಯಾಹಾರಿ ಖಾದ್ಯಗಳ ರುಚಿ ಸವಿದು ರಜೆಯ ಮಜಾ ಪಡೆದರು.

Advertisement

ಪಕ್ಕಾ ದೇಸಿ ಶೈಲಿಯ ಆಹಾರ
ಕರಾವಳಿಯಲ್ಲಿ ಆಷಾಢ ಸಂದ‌ರ್ಭದಲ್ಲಿ ಊಟೋಪಚಾರಕ್ಕೆ ಅದರದ್ದೇ ಆದ ಮಹತ್ವವಿದೆ. ಸದಾ ಹೊಸತನ ಪರಿಚಯಿಸುತ್ತಿರುವ ಬಾಂಡ್ಯ ಎಜುಕೇಶನ್‌ ಟ್ರಸ್ಟ್‌ನ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಪಠ್ಯದ ಜತೆಗೆ ಆಹಾರ, ಕ್ರೀಡೆ, ಸಂಸ್ಕೃತಿ- ಸಾಂಸ್ಕೃತಿಕ, ಆರೋಗ್ಯ, ಯೋಗ ಮಾಹಿತಿ ಮೊದಲಾದ ಪಠ್ಯೇತರ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅದರಂತೆ ಪಕ್ಕಾ ದೇಸಿ ಶೈಲಿಯ ಆಹಾರ ಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಸ್ಯಾಮೃತ ಕಾರ್ಯಕ್ರಮ ನಡೆಯಿತು.

ಸಾಂಪ್ರದಾಯಿಕ ಸಸ್ಯಾಹಾರ ಸವಿ 
ಶುಂಠಿ ಲಿಂಬು ಕಷಾಯ, ಕಣಲೆ ಧಾರೆಹುಳಿ, ಉಪ್ಪಿನಕಾಯಿ, ಈರುಳ್ಳಿ ಸೊಪ್ಪಿನ ಕೋಸಂಬರಿ, ಸಾಂಬಾರ್‌ ಸೊಪ್ಪಿನ ಚಟ್ನಿ, ಕೆಸುವಿನ ಚಟ್ನಿ, ಚಗ್ತಿ ಸೊಪ್ಪಿನ ಚಟ್ನಿ, ಕಣಲೆ ಪಲ್ಯ, ಬಾಳೆದಿಂಡಿನ ಪಲ್ಯ, ಪತ್ರೋಡೆ ಪಲ್ಯ, ಗಜಗೆಂಡೆ ಸೊಪ್ಪಿನ ಪಲ್ಯ, ದಾಸವಾಳ ಸೊಪ್ಪಿನ ಇಡ್ಲಿ, ಪತ್ರೋಡೆ  ಗಾಲಿ , ನವಣೆ ಬೇಳೆ ಬಾತ್‌, ಅನ್ನ , ಬೂದು ನೇರಳೆ ತಂಬುಳಿ , ಎಲೆ ಉರಗ  ತಂಬುಳಿ, ಗೋವೆ ಕೆಸುವಿನ ಗೆಡ್ಡೆ ಸಾಸಿವೆ, ಕನ್ಯಕುಡಿ ಸಾಂಬಾರ್‌, ಹುರುಳಿ ಸಾರು, ಗೆಣೆಸಲೆ, ಸಾಮೆ ಅಕ್ಕಿಯ ಪಾಯಸ, ಸಬ್ಬಕ್ಕಿ ಸೊಪ್ಪಿನ ಹಾಲುಬಾಯಿ, ನುಗ್ಗೆ ಸೊಪ್ಪಿನ ಬೋಂಡಾ, ಹಲಸಿನ ಬೀಜದ ವಡೆ, ಮಜ್ಜಿಗೆ ಸೇರಿದಂತೆ ಸುಮಾರು 28 ಬಗೆಯ ವಿವಿಧ ಔಷ ಧೀಯ ಹಾಗೂ ಸಾಂಪ್ರದಾಯಿಕ ಖಾದ್ಯಗಳನ್ನು ಆಹ್ವಾನಿತ ಅತಿಥಿಗಳು ಸವಿದು ಖುಷಿಪಟ್ಟರು. ಬಸೂÅರಿನ ಬಾಣಸಿಗ ಮಹಾಬಲೇಶ್ವರ ಹರಿಕಾರ ಮತ್ತು ತಂಡ ಈ ಆಹಾರ ಖಾದ್ಯ ತಯಾರಿಸಿತ್ತು. 

ಸಸ್ಯ ಪ್ರಭೇದಗಳ ಮಹತ್ವ ಹಿಂದಿನ ಕಾಲದಲ್ಲಿ ಜನರು ಉಪಯೋಗಿಸುತ್ತಿದ್ದ ರೀತಿಯನ್ನು ಯುವ ಜನಾಂಗ ಮರೆಯಬಾರದು. ಜನರು ಆಯುರ್ವೇದದ ಮೇಲೆ ನಂಬಿಕೆ ಇಡಬೇಕಿದೆ. ಅಲ್ಲದೇ ಸ್ಥಳೀಯ ಔಷಧ ಸಂಪತ್ತುಗಳನ್ನು ಉಳಿಸಿ ಬೆಳೆಸುವುದರ ಜತೆಗೆ ಉಪಯೋಗಿಸುವುದನ್ನು ಕಲಿಯಬೇಕಿದೆ.
– ಬಿ. ಅಪ್ಪಣ್ಣ  ಹೆಗ್ಡೆ, ಬಾಂಡ್ಯ ಎಜುಕೇಶನಲ್‌ ಟ್ರಸ್ಟ್‌ನ ಅಧ್ಯಕ್ಷ

– ಉದಯ ಆಚಾರ್‌ ಸಾಸ್ತಾನ

Advertisement
Advertisement

Udayavani is now on Telegram. Click here to join our channel and stay updated with the latest news.

Next