Advertisement

ದಿ ಟೇಸ್ಟ್‌ ಆಫ್ ಕನಕಪುರ

11:03 AM Oct 16, 2017 | |

ಕನಕಪುರದ ವಾಸು ಹೋಟೆಲನ್ನು ಚಿಕ್ಕಂದಿನಿಂದಲೂ ಬಲ್ಲೆ. ಬೆಂಗಳೂರಿನ ಜನರಿಗೆ ಗಾಂಧಿಬಜಾರಿನ ವಿದ್ಯಾರ್ಥಿಭವನ್‌ ಹೇಗೋ, ಕನಕಪುರದ ಜನರಪಾಲಿಗೆ ವಾಸು ಹೋಟೆಲ್‌ ಕೂಡ ಹಾಗೆಯೇ. ಕನಕಪುರದ ಹೃದಯ ಭಾಗದಲ್ಲಿರುವ ಈ ಹೋಟೆಲ್‌ಗೆ ಸುಮಾರು 75 ವರ್ಷಗಳ ಇತಿಹಾಸದೆ. ಶ್ರೀ ಲಕ್ಷ್ಮೀ ವಿಲಾಸ ಕಾಫಿ ಕ್ಲಬ್‌ ಎಂಬ ಹೆಸರಿದ್ದ ಈ ಹೋಟೆಲನ್ನು ಆರಂಭಿಸಿದವರು ಶೃಂಗಾರಮ್ಮ ಮತ್ತು ಅವರ ಪತಿ. ಈ ದಂಪತಿ ಹೊಟ್ಟೆಪಾಡಿಗೆಂದು ಉಡುಪಿ ಜಿಲ್ಲೆಯ ಕೋಡಿ ಗ್ರಾಮದಿಂದ ಕನಕಪುರಕ್ಕೆ ಬಂದು ನೆಲೆಸಿದ್ದರು.

Advertisement

ಕಾಲಕ್ರಮೇಣ ಶೃಂಗಾರಮ್ಮ ಅವರ ಮಗ ವಾಸು ಅವರು  ಈ ಹೋಟೆಲನ ಉಸ್ತುವಾರಿ ವಹಿಸಿಕೊಂಡರು. ಈ ಕಾರಣದಿಂದಲೇ ಶ್ರೀಲಕ್ಷ್ಮೀ ವಿಲಾಸ ಕಾಫಿ ಕ್ಲಬ್‌ ಮುಂದೊಮ್ಮೆ ವಾಸು ಹೋಟೆಲ್‌ ಅಂತಲೇ ಹೆಸರಾಯಿತು. ವಾಸು ಅವರ ಅಕಾಲಿಕ ಮರಣದ ನಂತರ ಶೃಂಗಾರಮ್ಮ ಅವರ ತಮ್ಮ ವೆಂಕಟರಮಣಯ್ಯ ಅವರ ಸುಪರ್ದಿಗೆ ವಾಸು ಹೋಟೆಲ್‌ ಬಂತು. 1968ರಲ್ಲಿ ವೆಂಕಟರಮಣಯ್ಯ ಅವರೂ ತೀರಿಕೊಂಡ ಕಾರಣದಿಂದ ಸ್ವಲ್ಪ ಕಾಲ ನರಸಿಂಹಯ್ಯ ಎನ್ನುವವರು ಹೋಟೆಲನ್ನು ನೋಡಿಕೊಳ್ಳುತ್ತಿದ್ದರು.

ಅವರ ನಂತರ ವಾಸು ಹೋಟೆಲ್‌ನ ಜವಾಬ್ದಾರಿ ಹೊತ್ತು ಕೊಂಡವರು ರಾಮಚಂದ್ರ ಉಪಾಧ್ಯ.1969ರಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮ  ಸಮೀಪದ ಪಾರಂಪಳ್ಳಿಯಿಂದ ಒಬ್ಬ ಸಪ್ಲೆಯರ್‌ ರೂಪದಲ್ಲಿ ವಾಸು ಹೋಟೆಲ್‌ಗೆ ಬಂದ ಉಪಾಧ್ಯ ಅವರು 1983ರಲ್ಲಿ ಹೋಟೆಲ್‌ನ ಜವಾಬ್ದಾರಿ ಹೊತ್ತುಕೊಂಡು ಪ್ರಸ್ತುತ ಇಂದಿಗೂ ಆ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಇವರ ಮಗ ಜನಾರ್ಧನ ಉಪಾಧ್ಯ ಈಗ ತಂದೆಗೆ ಸಹಕಾರ ನೀಡುತ್ತಿದ್ದಾರೆ. 

ಗುಡಿಸಲಿನಿಂದ ಆರಂಭವಾದ ವಾಸು ಹೋಟೆಲ್‌ ಹಂತ ಹಂತವಾಗಿ ಪ್ರಗತಿ ಸಾಧಿಸುತ್ತಾ ಬೆಳೆದು ಇವತ್ತು ತನ್ನದೇ ಸ್ವಂತ ಕಟ್ಟಡವನ್ನು ಹೊಂದಿದೆ. ಕನಕಪುರದಲ್ಲಿ ಇನ್ನೊಂದು ಶಾಖೆ ಹೊಂದಿರುವುದರ ಜೊತೆಗೆ ಹಾರೋಹಳ್ಳಿ ಯಲ್ಲಿಯೂ ನೂತನ ಶಾಖೆಯೊಂದನ್ನು ಆರಂಭಿಸಿದೆ. ಕಾನಕಾನಹಳ್ಳಿ  ಎಂದು  ಕರೆಯಲ್ಪಡುತ್ತಿದ್ದ  ಕನಕಪುರಕ್ಕೂ ವಾಸು ಹೋಟೆಲ್‌ಗ‌ೂ ನಿಕಟವಾದ ಸಂಬಂಧವಿದೆ.

ಆಂಜನೇಯ ಸ್ವಾಮಿ ಜಾತ್ರೆ (ಹೊಳೆ ಪರಿಷೆ), ರಾಮದೇವರ ಜಾತ್ರೆ, ಕೆಂಕೇರಮ್ಮನ ಜಾತ್ರೆ, ಮಳಗಾಳು ಜಾತ್ರೆ… ಮುಂತಾದ ಜಾತ್ರೆಗಳಿಗೆ ಹಾಗೂ ಪ್ರತಿ ಗುರುವಾರ ನಡೆಯುವ ಸಂತೆಗೆ ದಶಕಗಳ ಹಿಂದಿನಿಂದಲೂ ಕನಕಪುರದ ಸುತ್ತಮುತ್ತಲ ಹಳ್ಳಿಗಳಿಂದ ಎತ್ತಿನ ಗಾಡಿಗಳನ್ನು ಕಟ್ಟಿಕೊಂಡು ಬರುತ್ತಿದ್ದ ಜನರ ಹಸಿವನ್ನು ನೀಗಿಸುತ್ತಿದ್ದ ಇತಿಹಾಸ ವಾಸು ಹೋಟೆಲ್‌ಗಿದೆ. ಇಡ್ಲಿ, ವಡೆ, ಮಸಾಲೆ ದೋಸೆ, ಸೆಟ್‌ದೋಸೆ, ಖಾರಾಬಾತ್‌, ಕೇಸರಿಬಾತ್‌ ಒಳಗೊಂಡಂತೆ ಉಡುಪಿ ಮಾದರಿಯ, ದಕ್ಷಿಣ ಭಾರತದ ಶೈಲಿಯ ವಿಶೇಷ ಚೌಚೌ ( ಮಿಕ್ಚರ್‌ ) … ಇನ್ನೂ ಮುಂತಾದ ತಿಂಡಿ ತಿನಿಸುಗಳು ವಾಸು ಹೋಟೆಲ್‌ನಲ್ಲಿ ಸಿಗುತ್ತವೆ.

Advertisement

ಈ ಹೋಟೆಲ್‌ ಬೆಳಿಗ್ಗೆ 5-30 ರಿಂದ ಸಂಜೆ 7-30 ರವರೆಗೆ ತೆರೆದಿರುತ್ತದೆ. ಬುಧವಾರ ರಜಾ ದಿನವಾಗಿರುತ್ತದೆ. ಕನಕಪುರದ ಗಾಂಧಿ ಎಂದೇ ಹೆಸರಾಗಿದ್ದ ಎಸ್‌.ಕರಿಯಪ್ಪನವರು ತಮ್ಮ ರೂರಲ್‌ ಕಾಲೇಜಿಗೆ ವಾಸು ಹೋಟೆಲ್‌ನಿಂದ ತಿಂಡಿ ತರಿಸಿಕೊಳ್ಳುತ್ತಿದ್ದರೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ರಾಮಚಂದ್ರ ಉಪಾಧ್ಯ ಅವರು, ಹಳೆಯ   ದಿನಗಳನ್ನು ಮೆಲುಕು ಹಾಕುತ್ತಾರೆ.

ಚಿತ್ರೀಕರಣದ ನಿಮಿತ್ತ ಅಂದೊಮ್ಮೆ ಕನಕಪುರಕ್ಕೆ ಆಗಮಿಸಿದ್ದ ತೆಲುಗಿನ ಪ್ರಖ್ಯಾತ ನಟ ಅಕ್ಕಿನೇನಿ ನಾಗೇಶ್ವರ ರಾವ್‌ ಅವರು ಕೂಡ ವಾಸು ಹೋಟೆಲ್‌ಗೆ ಭೇಟಿ ನೀಡಿ ಅಲ್ಲಿಯ ತಿಂಡಿ ತಿನಿಸುಗಳನ್ನು ಸವಿದುದ್ದುಂಟು. ಅದೇ ರೀತಿ ಖ್ಯಾತ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌, ರಾಜಕಾರಣಿಗಳಾದ ಡಿ.ಕೆ. ಶಿವಕುಮಾರ್‌, ಪಿ.ಜಿ.ಆರ್‌.ಸಿಂಧ್ಯಾ ಮುಂತಾದ ಗಣ್ಯರು ವಾಸು ಹೋಟೆಲಿನ ರುಚಿಗೆ ಮಾರು ಹೋದವರೇ. 

ಅಂದಹಾಗೆ, ಇವತ್ತಿನ ಫಾಸ್ಟ್‌ ಫ‌ುಡ್‌ ಜಮಾನದಲ್ಲೂ ವಾಸು ಹೋಟೆಲ್‌ ಇನ್ನೂ ಜನಮಾನಸದಲ್ಲಿ ಉಳಿದಿರುವುದರ ಹಿಂದೆ ಅಲ್ಲಿಯ ರುಚಿ, ಶುಚಿ, ಗುಣಮಟ್ಟ ಹಾಗೂ ವೃತ್ತಿಪರತೆ ಎದ್ದುಕಾಣುತ್ತಿದೆ.  

ಸೌದೆ ಒಲೆಯ ದೋಸೆ…
ವಾಸು ಹೋಟೆಲಿನಲ್ಲಿ ಈಗಲೂ ಸೌದೆ ಒಲೆಯಿಂದಲೇ ತಿಂಡಿಗಳನ್ನು ತಯಾರಿಸಲಾಗುತ್ತದೆ. ಇಲ್ಲಿನ ಮಸಾಲೆ ದೋಸೆಯ ರುಚಿ ಹೆಚ್ಚಲು ಸೌದೆ ಒಲೆಯೂ ಕಾರಣವಿರಬಹುದು ಎನ್ನುತ್ತಾರೆ ಗ್ರಾಹಕರು. ಕನಕಪುರದ ಸುತ್ತಮುತ್ತ ಇರುವ ಸಂಗ, ಮೇಕೆದಾಟು, ಚುಂಚಿ ಫಾಲ್ಸ್‌, ಮುತ್ತತ್ತಿ, ಭೀಮೇಶ್ವರಿ, ಗೋವಿನಕಲ್ಲು ಬೆಟ್ಟ, ಹಾರೋಬೆಲೆ ಡ್ಯಾಂ, ಚೀಲಂದವಾಡಿ ಶಿವಾಲ್ದಪ್ಪನ ಬೆಟ್ಟ ಮುಂತಾದ ಸ್ಥಳಗಳಿಗೆ ಭೇಟಿ ನೀಡಲೆಂದು ಕನಕಪುರಕ್ಕೆ ಬರುವ ಪ್ರವಾಸಿಗರಲ್ಲಿ ಹಲವು ವಾಸು ಹೋಟೆಲ್‌ನಲ್ಲಿ ಮಸಾಲೆ ದೋಸೆ ತಿಂದರೇ ತಮ್ಮ ಪ್ರವಾಸ ಪರಿಪೂರ್ಣವಾಗೋದು ಎಂದು ಹೇಳವುದೂ ಇದೆ. 

* ಹೃದಯಶಿವ
ಮಾಹಿತಿಗೆ: 9845069752

Advertisement

Udayavani is now on Telegram. Click here to join our channel and stay updated with the latest news.

Next