ಮೈಸೂರು: ನಾನು ಕೆರೆ ಕಟ್ಟಿರುವುದು ನನಗಲ್ಲ ನಿಮ್ಮಂತ ವಿದ್ಯಾರ್ಥಿಗಳಿಗೆ, ಯುವಕರಿಗಾಗಿ. ನಾನು ಸತ್ತ ನಂತರ ಕೆರೆಗಳನ್ನು ನೀವೆಲ್ಲ ಉಳಿಸಿ ಬೆಳಿಸಬೇಕು. ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೆರೆ ಕಟ್ಟುವಂತೆ ನಿಮ್ಮ ಅಪ್ಪ ಅವ್ವನಿಗೆ ಒತ್ತಾಯಿಸಿ ಎಂದು ಕೆರೆಗಳ ನಿರ್ಮಾತೃ ಕಾಮೇಗೌಡ ಮಕ್ಕಳೊಂದಿಗೆ ಭಾವನತ್ಮಾಕವಾಗಿ ಮಾತನಾಡಿದರು.
ಜನ ಚೇತನ್ ಟ್ರಸ್ಟ್, ಸ್ವದೇಶಿ ಜಾಗರಣ ಮಂಚ್ ಸಹಯೋಗದಲ್ಲಿ ನಂಜುಮಳಿಗೆ ಸಮೀಪದ ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “2 ಲಕ್ಷ ಚಮತ್ಕಾರಿ ಬೀಜದ ಚೆಂಡಿನಿಂದ ಬರಡು ಭೂಮಿಯನ್ನು ಹಸಿರು ಮಾಡುವ’ ಕಾರ್ಯಾಗಾರ ಹಾಗೂ ಬೀಜದುಂಡೆ ತಯಾರಿಕೆಗೆ ಚಾಲನೆ ನೀಡಿ ಮಾತನಾಡಿದರು.
ಶಿವನಿಗಿಂತ ವೃಕ್ಷ ದೊಡ್ಡದ್ದು, ವೃಕ್ಷಕ್ಕಿಂತ ಗಂಗಮ್ಮ ದೊಡ್ಡವಳು. ವೃಕ್ಷ-ಗಂಗಮ್ಮನನ್ನು ಉಳಿಸಿಕೊಳ್ಳಬೇಕು. ಇತ್ತೀಚಿಗೆ ಸರಿಯಾಗಿ ಮೋಡ ಕಟ್ಟುತ್ತಿಲ್ಲ. ಮಳೆ ಬೀಳುತ್ತಿಲ್ಲ. ಕೆರೆ ಕಟ್ಟೆಗಳು ಬತ್ತಿ ಹೋಗುತ್ತಿವೆ. ಹೀಗಾಗಿ ಮರ ಗಿಡಗಳನ್ನು ನೆಟ್ಟು ಪೋಷಿಸಬೇಕಿದೆ. ಈ ಮೂಲಕ ಮಳೆಯಾಗುವಂತೆ ಮಾಡಬೇಕು.
ಅದಕ್ಕಾಗಿ ಕೆರೆ, ಕಟ್ಟೆಗಳನ್ನು ಕಟ್ಟಿ ಮರ ಗಿಡಗಳನ್ನು ಬೆಳಸಬೇಕು. ಈ ಜವಾಬ್ದರಿಯನ್ನು ಯುವ ಪಿಳಿಗೆಯೇ ಹೊರಬೇಕು. ಮಕ್ಕಳು ಹಠ ಮಾಡಿ, ಉಪವಾಸ ಮಾಡಿ ಪೋಷಕರು ಕೆರೆ ಕಟ್ಟುವಂತೆ ಪ್ರೇರೇಪಿಸಬೇಕು. ಇಲ್ಲವಾದಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುವಂತೆ ಒತ್ತಾಯಿಸಿ ಎಂದು ಮಕ್ಕಳಿಗೆ ಕರೆಕೊಟ್ಟರು.
ನಾನೊಬ್ಬ ಕೆರೆ ಕಟ್ಟಿದರೆ ಪ್ರಯೋಜನವಿಲ್ಲ. ನೀವೆಲ್ಲ ಒಂದಾಗಬೇಕು. ನಿಮಗೆ ಸ್ಥಳ ಕೊಟ್ಟು ಮುಂದಕ್ಕೆ ಹೋಗುವಷ್ಟು ವಯಸ್ಸಾಗಿದೆ ನನಗೆ. ಆದ್ದರಿಂದ ನೀವೆಲ್ಲಾ ಕೆರೆ-ಕಟ್ಟೆ ಉಳಿವಿಗಾಗಿ ಪಣ ತೊಡಬೇಕು. ಸುಧಾರಣೆಗೆ ರಾಜಕಾರಣಿಗಳನ್ನು ನಂಬಿ ಕೂತರೆ ಪ್ರಯೋಜನವಿಲ್ಲ. ನಮ್ಮಂತೆ ಪ್ರಾಣಿ-ಪಕ್ಷಿಗಳಿಗೂ ನೀರು, ನೆರಳು ಬೇಕು. ಅದಿಲ್ಲದಿದ್ದರೆ ಪಾಪ ಅವು ತಾನೆ ಎಲ್ಲಿಗೆ ಹೋದಾವು ಎಂದರು.
ಜನಚೇತನ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಎನ್.ಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಿರುಗಾವಲಿ, ಕಾಲುವೆಗಳು ಮುಚ್ಚಿ ಹೋಗುತ್ತಿರುವ ಕಾರಣಕ್ಕೆ ನದಿಗಳು ಬತ್ತಿ ಹೋಗುತ್ತಿವೆ. ಇದಕ್ಕೆ ಹುಣಸೂರಿನ ಲಕ್ಷ್ಮಣ ತೀರ್ಥ ನದಿ ತಾಜಾ ಉದಾಹರಣೆ.
ಕಿರುಗಾವಲಿ, ಕಾವಲಿಗಳನ್ನು ಉಳಿಸಿಕೊಳ್ಳುವ ಮೂಲಕ ಉಪ ನದಿಗಳನ್ನು ಕಾಪಾಡಿಕೊಳ್ಳಬೇಕು. ಈ ಮೂಲಕ ನದಿಗಳನ್ನು ರಕ್ಷಣೆ ಮಾಡುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಕಾವೇರಿ ನದಿ ಉಳಿಸಿಕೊಳ್ಳಲು ಅನಿವಾರ್ಯ ಕ್ರಮ ತೆಗದುಕೊಳ್ಳಬೇಕಿದೆ ಎಂದು ತಿಳಿಸಿದರು. ಸ್ವದೇ ಜಾಗರಣ ಮಂಚ್‌ನ ರಾಜ್ಯ ಸಂಯೋಜಕ ಎನ್.ಆರ್.ಮಂಜುನಾಥ್ ಸೇರಿದಂತೆ ಮತ್ತಿತರಿದ್ದರು.