Advertisement

ಬಡತನದಲ್ಲಿ ಉದಯಿಸಿದ ಪ್ರತಿಭೆ

04:02 PM May 04, 2019 | Team Udayavani |

ಯಲಬುರ್ಗಾ: ಈತ ಯಾವುದೇ ವಿಶೇಷ ತರಬೇತಿ ಪಡೆದಿಲ್ಲ. ಹೇಳಿಕೊಳ್ಳುವಂತಹ ಸೌಲಭ್ಯಗಳು ಸಹ ಇಲ್ಲ. ಮನೆಯಲ್ಲಿ ಬಡತನ, ತಂದೆ-ತಾಯಿ ಇಬ್ಬರು ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಾರೆ. ಬಡತನ ಮೆಟ್ಟಿ ನಿಂತು ವಿದ್ಯಾರ್ಥಿಯೊಬ್ಬ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿನಲ್ಲಿಯೇ ದಾಖಲೆಯ ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾನೆ.

Advertisement

ಹೌದು. ಬಡ ಕುಟುಂಬದಲ್ಲಿ ಜನಿಸಿದ ವಿದ್ಯಾರ್ಥಿಯೊಬ್ಬ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 97.76‌ಷ್ಟು ಅಂಕ ಪಡೆಯುವ ಮೂಲಕ ಅಪ್ರತಿಮೆ ಸಾಧನೆ ಮಾಡಿದ್ದಾನೆ. ತಾಲೂಕಿನ ಹಿರೇವಂಕಲಕುಂಟಾ ಸರಕಾರಿ ಪಪೂ ಕಾಲೇಜು ಪ್ರೌಢಶಾಲೆಯ ವಿದ್ಯಾರ್ಥಿ ಉದಯ್‌ ಸಿಂಧೋಗಿ ಈ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿ. ಉಪ್ಪಲದಿನ್ನಿ ಈ ವಿದ್ಯಾರ್ಥಿಯ ಊರು. ಈತನ ಪಾಲಕರು ದುಡಿಮೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಜಮೀನು ಇಲ್ಲ.

ಗ್ರಾಮದ ಬಡ ಕುಟುಂಬದ ಈ ವಿದ್ಯಾರ್ಥಿ 1ನೇ ತರಗತಿಯಿಂದ 5ನೇ ತರಗತಿವರಗೆ ಉಪ್ಪಲದಿನ್ನಿ ಗ್ರಾಮದಲ್ಲಿ. ನಂತರ 6ರಿಂದ 10ನೇ ತರಗತಿವರೆಗೆ ಇದೇ ಶಾಲೆಯಲ್ಲಿ ಅಭ್ಯಾಸ ಮಾಡಿದ್ದು, ತಾಲೂಕಿನಲ್ಲಿಯೇ ಅತಿ ಹೆಚ್ಚು ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾನೆ. ತಂದೆ, ತಾಯಿಯ ಬಯಕೆ, ಗುರುಗಳ ಮಾರ್ಗದರ್ಶ ಮತ್ತು ತನ್ನ ಶ್ರಮದಿಂದ ಹೆಚ್ಚಿನ ಅಂಕಗಳನ್ನು ಪಡೆಯಲು ಸಾಧ್ಯವಾಗಿದೆ. ಪಿಯುಸಿಯಲ್ಲಿ ಸೈನ್ಸ್‌ ಮಾಡಿ, ಮುಂದೆ ವೈದ್ಯನಾಗಬೇಕೆನ್ನುವ ಕನಸು ಕಂಡಿದ್ದಾನೆ. ಹಿರೇವಂಕಲಕುಂಟಾ ಬಿಸಿಎಂ ವಸತಿ ನಿಲಯದಲ್ಲಿ ಅಭ್ಯಾಸ ಮಾಡುತ್ತಿದ್ದ. ರಜಾ ದಿನಗಳಲ್ಲಿ ಊರಿಗೆ ಹೋಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಆ ಹಣವನ್ನು ತನ್ನ ವಿದ್ಯಾಭ್ಯಾಸಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದ.

ಉದಯ್‌ ವಿದ್ಯಾರ್ಥಿಯು ಒಂದು ದಿನವೂ ಶಾಲೆಗೆ ಗೈರು ಹಾಜರಾಗುತ್ತಿರಲಿಲ್ಲ. ಶಾಲೆಗೆ ಪ್ರತಿನಿತ್ಯ ಸರಿಯಾದ ಸಮಯಕ್ಕೆ ಶಾಲೆಗೆ ಬರುತ್ತಿದ್ದ ಅಷ್ಟೇ ಅಲ್ಲದೇ ಶಾಲಾ ಶಿಕ್ಷಕರು ಬರುವ ಪೂರ್ವ ಶಾಲಾ ಮೈದಾನದಲ್ಲಿ ಹಾಜರಾಗುತ್ತಿದ್ದ. ಕಿತ್ತು ತಿನ್ನುವ ಬಡತನ ಹಾಗೂ ಆರ್ಥಿಕ ಸಮಸ್ಯೆ ನಡುವೆಯೇ 611 ಅಂಕಗಳಿಸುವ ಮೂಲಕ ತಾಲೂಕಿಗೆ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳು, ಸಮಾಜ, ವಿಜ್ಞಾನಕ್ಕೆ 100 ಅಂಕ ಪಡೆದಿದ್ದಾನೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next