Advertisement

ಗುಂಡಿಮುಚ್ಚದ ಅಧಿಕಾರಿಗಳಿಗೆ ಬಿಬಿಎಂಪಿಯಿಂದ ಅಮಾನತು ಬಿಸಿ

11:35 AM Nov 08, 2017 | |

ಬೆಂಗಳೂರು: ನಿಗದಿತ ಗಡುವಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚದ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿರುವ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌, ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. 

Advertisement

ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಮೇಲಧಿಕಾರಿಗಳ ಆದೇಶ ಉಲ್ಲಂ ಸುವ ಮೂಲಕ ಬೇಜವಾಬ್ದಾರಿತನ ತೋರಿಸಿದ್ದು, ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಮಂಗಳವಾರ ಆಯುಕ್ತರು ಆದೇಶ ಹೊರಡಿಸಿದ್ದಾರೆ. 

ಸಿ.ವಿ. ರಾಮನ್‌ನಗರದ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಅಮೃತ್‌ಕುಮಾರ್‌ ಸಾಲುಂಕಿ, ಶಿವಾಜಿನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೈಫ‌ುದ್ದೀನ್‌ ಮತ್ತು ಸರ್ವಜ್ಞನಗರ ಉಪವಿಭಾಗದ ಸಹಾಯಕ ಮಲ್ಲಿನಾಥ ಮಲ್ಕಾಪುರ ಅಮಾನತುಗೊಂಡಿದ್ದಾರೆ. 

ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮೇಯರ್‌ ಹಲವು ಬಾರಿ ವಲಯವಾರು ಪ್ರಗತಿ ಪರಿಶೀಲನೆ ನಡೆಸಿ, ಗುಂಡಿ ಮುಚ್ಚಲು ಅ. 31ರ ಗಡುವು ನೀಡಿದ್ದರು. ಇದಾದ ನಂತರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನ. 6ರ ಗಡುವು ನೀಡಲಾಗಿತ್ತು.

ಆದಾಗ್ಯೂ ಸಮರ್ಪಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚದಿರುವುದು ಮಂಗಳವಾರ ನಡೆಸಿದ ತಪಾಸಣೆ ವೇಳೆ ಕಂಡುಬಂದಿದ್ದು, ಇದು ಮೇಲಧಿಕಾರಿಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಸರ್ಕಾರಿ ನೌಕರರ (ನಡತೆ) ನಿಯಮಾವಳಿ ನಿಯಮ 3 (3)ರ ಉಲ್ಲಂಘನೆ ಅಡಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ಮೂವರೂ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. 

Advertisement

ಬರಲಿದೆ “ಪಾಟ್‌ಹೋಲ್‌ ರಿಪೋರ್ಟರ್‌’!
ನಗರದ ಬಹುತೇಕ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಆದಾಗ್ಯೂ ಗುಂಡಿಗಳು ಕಂಡುಬಂದರೆ, ಸ್ವತಃ ಸಾರ್ವಜನಿಕರೇ ಫೋಟೋ ಸೆರೆಹಿಡಿದು ಪಾಲಿಕೆ ಗಮನಕ್ಕೆ ತರಬಹುದು. ಇದಕ್ಕಾಗಿ ಸ್ವತಃ ಬಿಬಿಎಂಪಿ “ಪಾಟ್‌ಹೋಲ್‌ ರಿಪೋರ್ಟರ್‌ ಆ್ಯಪ್‌’ ಅಭಿವೃದ್ಧಿಪಡಿಸಿದೆ.  

ಸಾರ್ವಜನಿಕರು ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು, ಯಾವುದೇ ರಸ್ತೆಗುಂಡಿಗಳು ಕಂಡುಬಂದರೆ ತಕ್ಷಣ ಫೋಟೋ ತೆಗೆದು, ಅದನ್ನು ಆ್ಯಪ್‌ಗೆ ಅಪ್‌ಲೋಡ್‌ ಮಾಡಬಹುದು. ಅದು ಆಯಾ ಸಂಬಂಧಪಟ್ಟ ಸಹಾಯಕ ಎಂಜಿನಿಯರ್‌, ಕಾರ್ಯನಿರ್ವಾಹಕ ಎಂಜಿನಿಯರ್‌,

ಸೂಪರಿಟೆಂಡೆಂಟ್‌ ಎಂಜಿನಿಯರ್‌, ಮುಖ್ಯ ಎಂಜಿನಿಯರ್‌ ಹಾಗೂ ಆಯುಕ್ತರಿಗೆ ರವಾನೆಯಾಗುತ್ತದೆ. ಅಪ್‌ಲೋಡ್‌ ಮಾಡಿದ 48 ಗಂಟೆಗಳಲ್ಲಿ ಆ ರಸ್ತೆ ಗುಂಡಿಗಳನ್ನು ಮುಚ್ಚಲಾಗುವುದು. ಈ ಆ್ಯಪ್‌ ಅನ್ನು ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಎನ್‌. ಮಂಜುನಾಥ ಪ್ರಸಾದ್‌ “ಉದಯವಾಣಿ’ಗೆ ತಿಳಿಸಿದರು.   

ತಪಾಸಣೆ ನಿರಂತರ
ಇದಲ್ಲದೆ, ಅಧಿಕಾರಿಗಳ ಪ್ರಕಾರ ನಗರದಲ್ಲಿ ಯಾವುದೇ ರಸ್ತೆಗುಂಡಿಗಳಿಲ್ಲ. ಈಗ ಕಂಡುಬರುತ್ತಿರುವ ಗುಂಡಿಗಳು ಹೊಸದಾಗಿ ಆಗಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಈಗಾಗಲೇ ಮೂವರು ಅಧಿಕಾರಿಗಳನ್ನು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಮುಂದಿನ ಎರಡು-ಮೂರು ದಿನಗಳು ತಪಾಸಣೆ ಮುಂದುವರಿಯಲಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದರು.

ಪಾಲಿಕೆ ವೈಫ‌ಲ್ಯ ಹೈಕೋರ್ಟ್‌ ಗರಂ ನೋಟಿಸ್‌ ಜಾರಿ
ಬೆಂಗಳೂರು:
ನಗರದಲ್ಲಿ ಪರಿಣಾಮಕಾರಿಯಾಗಿ ರಸ್ತೆಗುಂಡಿ ಮುಚ್ಚುವಂತೆ ನಿರ್ದೇಶಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ಗೆ ಹೈಕೋರ್ಟ್‌ ತುರ್ತುನೋಟಿಸ್‌ ಜಾರಿಗೊಳಿಸಿದೆ.

ಈ ಕುರಿತು ಡವ್‌ ಡ್ರೈವ್‌ ವಿತೌಟ್‌ ಬರ್ಡ್ಸ್‌ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಚ್‌.ಜಿ ರಮೇಶ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್‌ ದಿನೇಶ್‌ಕುಮಾರ್‌ ಅವರಿದ್ದ ವಿಭಾಗೀಯ ಪೀಠ, ಪಾಲಿಕೆ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಿ ನ.22ಕ್ಕೆ ವಿಚಾರಣೆ ಮುಂದೂಡಿತು.

ಕಳೆದ ಮೂರು ತಿಂಗಳಲ್ಲಿ ನಗರದಲ್ಲಿ ಸುರಿದ ಮಳೆಯಿಂದಾಗಿ ಸಾವಿರಾರು ಗುಂಡಿಗಳು ಬಿದ್ದಿವೆ. ಆದರೂ, ಪಾಲಿಕೆ ಗುಂಡಿಮುಚ್ಚುವಲ್ಲಿ ವಿಫ‌ಲವಾಗಿದೆ.ಮುಖ್ಯಮಂತ್ರಿಗಳ 15ದಿನಗಳಲ್ಲಿ ಗುಂಡಿಮುಚ್ಚಲು ಆದೇಶವನ್ನೂ ಪಾಲಿಸುವಲ್ಲಿ ವಿಫ‌ಲವಾಗಿದೆ.

ಸದ್ಯ ಗುಂಡಿಮುಚ್ಚುವ ಕಾರ್ಯ ಕೂಡ ಅವೈಜ್ಞಾನಿಕವಾಗಿ ನಡೆಸುತ್ತಿದೆ. ಅಲ್ಲದೆ ನಗರದಲ್ಲಿ ಸಂಚರಿಸುವ ವಾಹನಗಳಿಗೆ ವೇಗನಿಯಂತ್ರಕಗಳನ್ನು ಕಡ್ಡಾಯಗೊಳಿಸಿಲ್ಲ. ಹೀಗಾಗಿ ಗುಂಡಿಗಳು ಹೆಚ್ಚಾಗಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next