ಸುಬ್ರಹ್ಮಣ್ಯ : ಸಂವೇದನಶೀಲ ಬರಹಗಳಿಂದ ಸಾಹಿತ್ಯದ ಉಳಿವು ಸಾಧ್ಯ ಎಂದು ಪ್ರಸಿದ್ಧ ಸಾಹಿತಿ, ಗೀತೆ ರಚನೆಗಾರ ಜಯಂತ ಕಾಯ್ಕಿಣಿ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯದ ಕೊಳಂಬೆ ಪುಟ್ಟಣ್ಣ ಗೌಡ ವೇದಿಕೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ಸಂಜೆ ‘ಸಾಹಿತ್ಯದ ಪ್ರೇರಣೆಗಳು’ ಕುರಿತು ಅವರು ಮಾತನಾಡಿದರು.
ಸಾಹಿತ್ಯಕ್ಕೆ ಪ್ರೇರಣೆ ಸಿಗುವುದು ಕಾಲ್ಪನಿಕ ವಿಚಾರಧಾರೆಗಳಿಂದ ಅಲ್ಲ. ಸೂಕ್ಷ್ಮತೆ ಅರಿತು ಆಳವಾದ ಚಿಂತನ ಲಹರಿಗಳಿಂದ ಸಾಹಿತ್ಯದ ಬೇರುಗಳು ಗಟ್ಟಿಯಾಗುವವು. ಆಧುನಿಕ ತಂತ್ರಜ್ಞಾನಗಳ ಸಾಂಗತ್ಯದಿಂದ ಸಾಹಿತ್ಯಿಕ ಕ್ಷೇತ್ರ ಬಡವಾಗುವ ಆತಂಕವಿದೆ. ಸಾಮಾಜಿಕ ಜಾಲತಾಣದಲ್ಲಿ ಯುವಜನತೆ ಹೆಚ್ಚಿನ ಸಮಯ ವ್ಯರ್ಥ ಮಾಡುತ್ತಿದೆ. ಜಾಲತಾಣದಲ್ಲಿ ಹರಿಯಬಿಟ್ಟ ಸಂದೇಶಗಳನ್ನು ನೂರಾರು ಮಂದಿಗೆ ಕಳುಹಿಸಿ ಪುಗಸಟ್ಟೆ ಕಾಲಹರಣ ಮಾಡುತ್ತಾರೆ. ಇದರಿಂದ ಜೀವನದ ನೈಜ ಮೌಲ್ಯ ಅಧಃಪತನಗೊಳ್ಳುತ್ತಿದೆ. ಇದು ಸಾಧನೆಯೂ ಅಲ್ಲ. ಆತ್ಮಸಾಕ್ಷಿಯಾಗಿ ಕೃತಿಯಲ್ಲಿ ತೊಡಗಬೇಕು. ನೈಜ ಜೀವನದಲ್ಲಿ ಅಂತಹ ಗುಣ ಬೆಳೆಸಿಕೊಂಡು ಸಾಮಾಜಿಕ ಕಳಕಳಿ ಮೆರೆಯಬೇಕು ಎಂದರು.
ಸಾಹಿತ್ಯ, ಕಲೆ, ನಾಟಕ, ರಂಗಕಲೆ ಉಳಿವಿಗೆ ಪ್ರಯತ್ನ ಅಗತ್ಯ. ಸಿನೆಮಾ ಸಾಹಿತ್ಯದಲ್ಲೂ ಸಾಕಷ್ಟು ಪರಿಣಾಮಕಾರಿ ಕೃತಿಗಳು ರಚನೆಯಾಗಿವೆ. ಸಾಹಿತ್ಯ ಕ್ಷೇತ್ರ ಬಡವಾಗದಂತೆ ನೋಡಿಕೊಳ್ಳುವ ಕೆಲಸ ಸಾಹಿತ್ಯ ಸಮ್ಮೇಳನ ಮೂಲಕ ನಡೆಯಬೇಕು ಎಂದು ಕಾಯ್ಕಿಣಿ ಅಭಿಪ್ರಾಯಪಟ್ಟರು.
ವಿಶ್ರಾಂತ ಪ್ರಾಚಾರ್ಯ ಅಬ್ರಹಾಂ ವರ್ಗೀಸ್, ಮಣಿಕ್ಕಾರ ಗೋಪಾಲಕೃಷ್ಣ ಶಾನುಭೋಗ, 22ನೇ ಸಾಹಿತ್ಯ ಸಮ್ಮೇಳಾನಧ್ಯಕ್ಷೆ ಎ.ಪಿ. ಮಾಲತಿ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಉಪಸ್ಥಿತರಿದ್ದರು. ಶಶಿಧರ ಪಳಂಗಾಯ ಸ್ವಾಗತಿಸಿ, ಭರತ್ ನೆಕ್ರಾಜೆ ವಂದಿಸಿದರು. ಶಶಿಧರ ಎಂ.ಜೆ. ನಿರೂಪಿಸಿದರು.
ಬಾಲಕೃಷ್ಣ ಭೀಮಗುಳಿ