ಉಡುಪಿ: ಕಡು ಬಡತನದಿಂದಾಗಿ ಹದಿಹರೆಯದ ಪ್ರಾಯದಲ್ಲಿಯೇ ಕೂಲಿ ಕೆಲಸಕ್ಕೆ ಹೋಗಿದ್ದಾಗ ಒಂದು ರಾತ್ರಿ ಒಬ್ಟಾತ
ಕಣ್ಣು ಹಾಕಿದ. ತಪ್ಪಿಸಿಕೊಂಡು ಹಗಲು ಕಂಡರು. ಸಾಯೋಣ ವೆಂದುಕೊಂಡರೂ ನಿರ್ಧಾರ ಬದಲಿಸಿ ಬದುಕಿದರು. ಸಮಾಜಕ್ಕೆ ಮಾದರಿಯಾಗಿ ಸಾಧಿಸಿ ತೋರಿಸಿ ದರು. ಇದು ಸಾಲು ಮರದ ತಿಮ್ಮಕ್ಕನ ಯಶೋಗಾಥೆ.
ಬೀಯಿಂಗ್ ಸೋಶಿಯಲ್ ತಂಡದ ವತಿಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜು. 22ರಂದು ನಡೆದ “ಹೆಜ್ಜೆಗುರುತು’ ಕಾರ್ಯ ಕ್ರಮದಲ್ಲಿ ಸಾಲು ಮರದ ತಿಮ್ಮಕ್ಕ ಅವರ ಜೀವನದ ಮಜಲುಗಳನ್ನು ಅವರ ದತ್ತು ಪುತ್ರ ಉಮೇಶ್ ಬಿಚ್ಚಿಟ್ಟರು.
19ನೇ ವಯಸ್ಸಿನಲ್ಲಿ ಮದುವೆ ಯಾದರು. ಮಕ್ಕಳಾಗಲು 20-25 ವರ್ಷ ಕಾದರು. ಮಕ್ಕಳಾಗದ ಕೊರಗಿನಲ್ಲಿಯೂ ಜೀವನ ಬೇಡವೆಂದುಕೊಂಡಿದ್ದರು. ಆದರೆ ದೃಢ ನಿರ್ಧಾರ ಕೈಗೊಂಡರು. 1948ನೇ ಇಸವಿಯಲ್ಲಿ ಗಿಡಗಳನ್ನು ಮಕ್ಕಳೆಂದು ಭಾವಿಸಿ ನೆಡತೊಡಗಿದರು. ಅಂದಿನಿಂದ ಇಂದಿನವರೆಗೂ ಗಿಡ ನೆಡುತ್ತಾರೆ. ಪೋಷಿಸುತ್ತಾರೆ. 106 ವಯಸ್ಸಾದರೂ, ಪರಿಸರ ಸಂರಕ್ಷಣೆಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ. ಆದರೆ ಸರಕಾರ ಇನ್ನೂ ಸೂಕ್ತವಾಗಿ ಗುರುತಿಸಿಲ್ಲ ಎಂದು ಉಮೇಶ್ ತಿಳಿಸಿದರು.
ಸಾಲು ಮರದ ತಿಮ್ಮಕ್ಕ ಅವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿ ಯುವ ಕಾಂಗ್ರೆಸ್ ಮುಖಂಡ ಪಿ. ಅಮೃತ್ ಶೆಣೈ ಮಾತನಾಡಿದರು. ಎಂಜಿಎಂ ಕಾಲೇಜು ಪ್ರಾಂಶುಪಾಲೆ ಕುಸುಮಾ ಕಾಮತ್, ತ್ರಿಶಾ ಕ್ಲಾಸಸ್‌ನ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ಅವರು ಕಾರ್ಯಕ್ರಮ ನಿರೂಪಿಸಿದರು.