Advertisement
ಐದು ವರ್ಷದ ಹಿಂದೆ ನಗರದ ಬೀರಮಲೆಯಲ್ಲಿ ಸ್ಥಾಪಿಸಲಾಗಿರುವ ಸಾಲು ಮರ ತಿಮ್ಮಕ್ಕ ಟ್ರೀ ಪಾರ್ಕ್‌ನ ಸ್ಥಿತಿ ಹೇಗಿದೆ ಎಂದು ಉದಯವಾಣಿ ಸುದಿನ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಕಂಡು ಬಂದ ದೃಶ್ಯ ಇದು. ಬೆಟ್ಟದ ತುತ್ತತುದಿಯಲ್ಲಿ ಇರುವ, ಪುತ್ತೂರಿಗೆ ಮುಕುಟಪ್ರಾಯದಂತಿರಬೇಕಿದ್ದ ವೃಕ್ಷೋದ್ಯಾನದ ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಂತಾಗಿದೆ. ಶುಲ್ಕ ಸಂಗ್ರಹ ಬಿಟ್ಟರೆ ಅರಣ್ಯ ಇಲಾಖೆ ಈ ಕಡೆಗೆ ತಿರುಗಿಯೂ ನೋಡಿದಂತಿಲ್ಲ.
ವೃಕ್ಷೋದ್ಯಾನದಲ್ಲಿ ಮಕ್ಕಳು ಮತ್ತು ಹಿರಿಯರ ಮನೋರಂಜನೆಗಾಗಿ ಹಲವು ವ್ಯವಸ್ಥೆಗಳಿವೆ. ಜೋಕಾಲಿ, ಜಾರುಬಂಡಿ, ನೆಟ್‌ವಾಕ್, ರೋಪ್ ವೇ, ಕಾರಂಜಿ, ಪುಟ್ಟದಾದ ತಾವರೆಕೊಳ, ಯೋಗ ಕುಟೀರ, ಪರಿಸರ ಕಾಳಜಿ ಸಂಬಂಧ ಸಮಾಲೋಚಿಸಲು ಸಭಾಗೃಹ, ಮಾಹಿತಿನ ಸಂವಹನ ಕೇಂದ್ರ, ಶೌಚಾಲಯ, ನೀರಿನ ಸೌಲಭ್ಯ ಇವೆ. ಆದರೆ, ಇವು ಯಾವುದೂ ನಿರೀಕ್ಷಿತ ರೀತಿಯಲ್ಲಿ ಸದ್ಭಳಕೆ ಆಗದಂತ ವಾತಾವರಣ ಇಲ್ಲಿದೆ. ಅತ್ಯಾಕರ್ಷಕ ರೀತಿಯಲ್ಲಿ ಇರುವ ಪ್ರವೇಶ ದ್ವಾರವನ್ನು ನಂಬಿ ಒಳಗೆ ಹೋದರೆ ಯಾವುದೂ ಆಸಕ್ತಿ ಕೆರಳಿಸುವಂತೆ ಕಾಣುತ್ತಿಲ್ಲ, ಎಲ್ಲವೂ ನಿರ್ಜೀವ ಮತ್ತು ನಿರ್ಜನ.
Related Articles
ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳುವ ಎಲ್ಲ ಅವಕಾಶಗಳಿರುವ ಬೀರಮಲೆ ಗುಡ್ಡ ಅಪಖ್ಯಾತಿಯಿಂದಲೇ ಹೆಚ್ಚು ಸುದ್ದಿಯಾದದ್ದು. ಸೂಕ್ತ ಭದ್ರತೆ, ರಕ್ಷಣಾ ಬೇಲಿ, ಕಣ್ಗಾವಲು ಇಲ್ಲದ ಕಾರಣ ಈ ಪರಿಸರವನ್ನು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಂಡದ್ದೆ ಹೆಚ್ಚು. ಅದೇ ಪರಿಸರದಲ್ಲಿರುವ ವೃಕ್ಷೋದ್ಯಾನದ ಬಗ್ಗೆ ಇಲಾಖೆ ನಿರ್ಲಕ್ಷ್ಯ ವಹಿಸಿ ಬೀರಮಲೆ ಗುಡ್ಡದ ಸಾಲಿಗೆ ಇದು ಸೇರುವ ಸಾಧ್ಯತೆ ಇದೆ. ಸಾಲುಮರ ತಿಮ್ಮಕ್ಕನಂತಹ ಅಪ್ಪಟ ಪರಿಸರ ಪ್ರೇಮಿಯ ಹೆಸರಿನಲ್ಲಿ ಈ ವೃಕ್ಷೋದ್ಯಾನ ಇದ್ದು ಅವರ ಹೆಸರಿಗೆ ಅಗೌರವ ಆಗದಂತೆ ನಿರ್ವಹಣೆ ಇಲಾಖೆಯು ಪಾರ್ಕ್ ಅನ್ನು ಕಾಯಬೇಕು ಅನ್ನುವುದು ಪ್ರವಾಸಿಗರ ನೇರ ಮಾತು.
Advertisement
- 2016 ರಲ್ಲಿ ಅಂದಿನ ರಾಜ್ಯ ಸರಕಾರ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಅರಣ್ಯ ಇಲಾಖೆಯ ಮೂಲಕ ಅಲ್ಲಲ್ಲಿ ಟ್ರೀ ಪಾರ್ಕ್ ಸ್ಥಾಪನೆಗೆ ಮುಂದಾಯಿತು.
- ಬೀರಮಲೆ ಗುಡ್ಡದಲ್ಲಿ 16 ಎಕರೆ ಗುರುತಿಸಿ ಸುಮಾರು 60.50 ಲಕ್ಷ ರೂ.ವೆಚ್ಚದಲ್ಲಿ ವೃಕ್ಷೋದ್ಯಾನ ನಿರ್ಮಾಣಕ್ಕೆ ಮುಂದಡಿ ಇಟ್ಟಿತ್ತು.
- 2017-18ರಲ್ಲಿ 41.50 ಲಕ್ಷ ರೂ. ಹಾಗೂ 2018-19ನೇ ಸಾಲಿನಲ್ಲಿ 19 ಲಕ್ಷ ರೂ. ಸೇರಿ ಒಟ್ಟು 60.50 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಿತು. 2019ರ ಅ.10 ರಂದು ಲೋಕಾರ್ಪಣೆಗೊಂಡಿತು.
ಪರಿಸರದ ಮಧ್ಯೆ ನಡೆದಾಡುವವರಿಗಾಗಿ ಇಲ್ಲಿ ವಾಕಿಂಗ್ ಪಾಥ್ ಇದೆ. ಆದರೆ ನಿರ್ವಹಣೆ ಇಲ್ಲದೆ ಪಾಳು ಬಿದ್ದಂತಿದೆ. ನಡೆದಾಡುವ ಸ್ಥಳದಲ್ಲಿ ನೀರು ಹರಿದು ಅಲ್ಲಲ್ಲಿ ಹೊಂಡ ಸೃಷ್ಟಿಯಾಗಿದೆ. ಗಿಡಗಂಟಿಗಳು ತುಂಬಿವೆ. ಮುಖ್ಯವಾಗಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಕೊಂಡಿಯಾಗಿ ನಿರ್ಮಿಸಿದ ವಾಕಿಂಗ್ ಪಾಥ್‌ನಲ್ಲಿ ಅರ್ಧ ದಾರಿಯಲ್ಲೇ ನಡಿಗೆ ನಿಲ್ಲಿಸಬೇಕು. ಏಕೆಂದರೆ ಕೆಲ ಸಮಯಗಳ ಹಿಂದೆ ಬಿದ್ದ ಮರ ಸಂಪರ್ಕ ದಾರಿಯನ್ನು ಬಂದ್ ಮಾಡಿದೆ.
ಇಲ್ಲಿ 3,000 ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿತ್ತು. ಆದರೆ, ಈಗ ಈ ಜಾಗದಲ್ಲಿ ಗಿಡ ಗಂಟಿಗಳು ಆವರಿಸಿ ಮೂಲ ಗಿಡವೇ ಕಣ್ಮರೆಯಾಗಿದೆ. ಕಸ ಕಡ್ಡಿಗಳನ್ನು ತೆರವು ಮಾಡಿಲ್ಲ. ಹೀಗಾಗಿ ವೃಕ್ಷೋದ್ಯಾನದ ಒಳಗೆ ಹೊಕ್ಕರೆ ಪಾರ್ಕ್ ಅನ್ನುವ ಕಲ್ಪನೆ ಬರುತ್ತಿಲ್ಲ. ದುರ್ಬಳಕೆ ಆಗುತ್ತಿದೆ ಸುಖಾಸೀನ
ಕಾಡಿನ ಮಧ್ಯೆ ಅಲ್ಲಲ್ಲಿ ಸುಖಾಸೀನಗಳನ್ನು ಅಳವಡಿಸಲಾಗಿದೆ. ಇಲ್ಲಿ ಸಿಸಿಟಿವಿ ಇದೆ ಎಂಬ ನಾಮಫಲಕವಿದ್ದರೂ ಅದು ಪಡ್ಡೆಗಳು, ಜೋಡಿಗಳ ಕಾಲಹರಣಕ್ಕೆ ದುರ್ಬಳಕೆ ಆಗುತ್ತಿದೆ. ಮಕ್ಕಳಿಗೆ ಪ್ರಕೃತಿ ತೋರಿಸೋಣ ಎಂದು ಯಾರಾದರೂ ಕರೆದುಕೊಂಡು ಬಂದರೆ ಇಲ್ಲಿ ಕಣ್ಣಿಗೆ ಕಾಣಿಸುವುದು ಇಂಥ ವಿಕೃತಿಗಳೇ.
ನಗರದ ಬೈಪಾಸ್ ರಸ್ತೆಯಲ್ಲಿ ಕವಲೊಡೆದು ಸಾಗಿರುವ ರಸ್ತೆಯಲ್ಲಿ ಬೀರಮಲೆ ಗುಡ್ಡಕ್ಕ ತಲುಪಬೇಕು. ವೃಕ್ಷೋದ್ಯಾನದ ಪ್ರವೇಶ ದೂರದಿಂದ ಕೂಗಳತೆಯ ಹತ್ತಿರದ ಸಂಪರ್ಕ ರಸ್ತೆಯಲ್ಲಿ ಹೊಂಡ ಸೃಷ್ಟಿಯಾಗಿ ವರ್ಷಗಳೇ ಕಳೆದಿದ್ದು ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುತ್ತಿದೆ. ನಡೆದುಕೊಂಡು ಬೆಟ್ಟಕ್ಕೆ ಬರುವವರಿಗೆ ಕೆಸರಿನ ಅಭಿಷೇಕವಾದರೆ, ವಾಹನದಲ್ಲಿ ಬಂದರೆ ವಾಹನ ಪೂರ್ತಿ ಕೆಸರು ಮೆತ್ತಿಕೊಳ್ಳುತ್ತಿದೆ. ಪ್ರವೇಶವೇನೂ ಉಚಿತ ಅಲ್ಲ
ಅಂದ ಹಾಗೆ ವೃಕ್ಷೋದ್ಯಾನಕ್ಕೆ ಪ್ರವೇಶ ಎಲ್ಲರಿಗೂ ಉಚಿತ ಅಲ್ಲ. 5ರಿಂದ 14 ವರ್ಷದೊಳಗಿನ ಮಕ್ಕಳಿಗೆ 5 ರೂ., 14 ವರ್ಷದಿಂದ ಮೇಲಿನವರಿಗೆ 10 ರೂ. ಪಾವತಿಸಬೇಕು. ಸ್ಟಿಲ್ ಕೆಮರಾಕ್ಕೆ 10 ರೂ., ವಿಡಿಯೋ ಕೆಮರಾಕ್ಕೆ 25 ರೂ., ಸ್ಟ್ಯಾಂಡ್ ಕೆಮರಾ 100 ರೂ., ಪೋಟೋ ಶೂಟ್‌ಗೆ 300 ರೂ. ಕೊಡಬೇಕು. ಬೆಳಗ್ಗೆ 8.30 ರಿಂದ ಸಂಜೆ 7 ಗಂಟೆ ತನಕ ವೀಕ್ಷಣೆಗೆ ಸಮಯ ನಿಗದಿಪಡಿಸಲಾಗಿದೆ. -ಕಿರಣ್ ಪ್ರಸಾದ್ ಕುಂಡಡ್ಕ