Advertisement

Rain Effects: ಮತ್ತಾವು ಮರದ ಸೇತುವೆ: 12 ತಾಸಿನೊಳಗೆ ಸ್ಥಳೀಯ ನಿವಾಸಿಗಳಿಂದ ಮರು ಸ್ಥಾಪನೆ

01:45 AM Oct 09, 2024 | Team Udayavani |

ಕಾರ್ಕಳ/ಹೆಬ್ರಿ: ರವಿವಾರ ಹೆಬ್ರಿ ಭಾಗದಲ್ಲಿ ಸಂಭವಿಸಿದ ಮೇಘಸ್ಫೋಟ ಮಳೆಯಿಂದಾಗಿ ಉಂಟಾದ ಪ್ರವಾಹಕ್ಕೆ ಮತ್ತಾವು ಭಾಗಕ್ಕೆ ತೆರಳುವ ಮರದ ಸೇತುವೆ ಕೊಚ್ಚಿಕೊಂಡು ಹೋಗಿದೆ. ಸ್ಥಳೀಯ ನಿವಾಸಿಗರು ಸೇರಿ ಮಳೆಗಾಲದ ಆರಂಭದಲ್ಲಿ ನಿರ್ಮಿಸಿದ ತಾತ್ಕಾಲಿಕ ಸೇತುವೆ ನೆರೆ ಪಾಲಾದುದರಿಂದ ಎರಡು ಭಾಗಕ್ಕೆ ಓಡಾಟ ಸಾಧ್ಯವಾಗದ ಸಂಕಷ್ಟಕ್ಕೆ ಸಿಲುಕಿ ಓಡಾಟಕ್ಕೆ ತೊಂದರೆಯಾಗುತ್ತಿರುವುದನ್ನು ಮನಗಂಡ ಅಲ್ಲಿನ ಮೂಲನಿವಾಸಿಗಳೆಲ್ಲ ಸೇರಿ ಮತ್ತೆ ಮರದ ಸೇತುವೆ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

Advertisement

ಘಟನೆ ನಡೆದ ಮರುದಿನ ಬೆಳಗ್ಗೆ ಕಾಡಿನಿಂದ ಹಗ್ಗ ತಂದು, ಇನ್ನಿತರ ಸಾಮಗ್ರಿ ಸಂಗ್ರಹಿಸಿ ಸಿದ್ಧಪಡಿಸಿಕೊಂಡು ಅಡಿಕೆ ಮರ ಬಳಸಿ ಹಿಂದಿನ ಮಾದರಿಯಲ್ಲಿ ಮರದ ಸೇತುವೆ ನಿರ್ಮಿಸಿಕೊಂಡಿದ್ದಾರೆ.

ಸೇತುವೆ ಕೊಚ್ಚಿ ಹೋದ ಅರ್ಧ ದಿನದಲ್ಲಿ ಹೊಸದಾದ ತಾತ್ಕಾಲಿಕ ಸೇತುವೆ ಮರು ಸ್ಥಾಪನೆಗೊಂಡಿದೆ. ಹಳಿ ತಪ್ಪಿದ ಇಲ್ಲಿನ ಜನರ ಬದುಕು ಅರೆ ಕ್ಷಣದಲ್ಲಿ ಮರು ಜೋಡಣೆಯಾಗಿ ಹೊರ ಜಗತ್ತಿನ ಜತೆಗೆ ಸಂಪರ್ಕಕ್ಕೆ ತೆರೆದುಕೊಂಡಿದೆ.

ಮತ್ತಾವಿನಲ್ಲಿ 10 ರಿಂದ 13 ಕುಟುಂಬಗಳು ಮಲೆಕುಡಿಯ ಮೂಲ ನಿವಾಸಿಗಳು ವಾಸವಾಗಿವೆ. ಮತ್ತಾವಿಗೆ ತೆರಳಬೇಕಿದ್ದರೆ ಸೇತುವೆ ದಾಟಬೇಕು. ದಶಕಗಳಿಂದಲೂ ತಾತ್ಕಾಲಿಕ ಸೇತುವೆಯೇ ಬಳಕೆಯಲ್ಲಿದೆ. ಪ್ರತಿ ವರ್ಷ ಮಳೆ ಬಂದಾಗ ಸ್ಥಳೀಯ ನಿವಾಸಿಗಳೆಲ್ಲರೂ ಸೇರಿ ತಾತ್ಕಾಲಿಕ ಮರದ ಸೇತುವೆ ನಿರ್ಮಿಸಿಕೊಂಡು ಓಡಾಟ ನಡೆಸುತ್ತಿರುತ್ತಾರೆ. ಇಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಸೇರಿ 50ರಿಂದ 60ರಷ್ಟು ಮಂದಿ ಇದೇ ಅಪಾಯಕಾರಿ ಸೇತುವೆ ಬಳಸಿ ನಿತ್ಯ ಶಾಲೆಗೆ, ಕಂಪೆನಿ ಕೆಲಸಕ್ಕೆ ತೆರಳುತ್ತಿದ್ದಾರೆ.

ಅಪರೂಪಕ್ಕೊಮ್ಮೆ ಸಂತೆಗೆ
ಮರದ ಸೇತುವೆ ಕೈಕೊಟ್ಟರೆ ದೈನಂದಿನ ದಿನಸಿ ಸಾಮಾಗ್ರಿಗಾಗಿ 5ಕಿ. ಮೀ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿ ಬರಬೇಕು.ಆಸ್ಪತ್ರೆ ಕಾಣಬೇಕಾದರೆ 20 ಕಿಮೀ ದೂರದ ಹೆಬ್ರಿ ಹೋಗಬೇಕು ದೊಡ್ಡ ಮಟ್ಟಿನ ಆಸ್ಪತ್ರೆಗೋಸ್ಕರ 50 ಕಿಮೀ ದೂರದ ಉಡುಪಿಗೆ ತಲುಪಬೇಕು. ಇಲ್ಲಿನ ಗರ್ಭಿಣಿ ಸ್ತ್ರೀಯರು, ವಯೋವೃದ್ಧರನ್ನು ಮಣ್ಣಿನ ರಸ್ತೆಯಲ್ಲಿ ಹೊತ್ತುಕೊಂಡು ಅರ್ಧ ದಾರಿವರೆಗೆ ಕರೆತಂದು ಅಲ್ಲಿಂದ ಆಟೋ ಮೂಲಕ ಸಾಗಬೇಕು. ಹೆಬ್ರಿ ಸಂತೆಗೆಅಪರೂಪಕ್ಕೊಮ್ಮೆ ಬಂದು ತಿಂಗಳಿಗಾಗುವಷ್ಟು ದಿನಸಿ ಕೊಂಡೊಯ್ಯುತ್ತಾರೆ.

Advertisement

ಹಣ ಬಿಡುಗಡೆಯೆಂಬ ಕಟ್ಟುಕಥೆೆ
ಸೇತುವೆಯಿಲ್ಲದೆ ಯಾವೊಂದು ಕೆಲಗಳು ಇಲ್ಲಿಯವರಿಂದ ಸಾಧ್ಯವಾಗುವುದಿಲ್ಲ. ದಿನಸಿ, ಬೆಳೆದ ಫ‌ಸಲುಗಳನ್ನೆಲ್ಲ ಹೊತ್ತೆ ಸಾಗಿಸಬೇಕು. ಮಕ್ಕಳನ್ನು ಬೆಳಗ್ಗೆ 7 ಗಂಟೆಗೆ ಸೇತುವೆ ಹತ್ತಿರ ಕರೆದೊಯ್ಯು ನಿತ್ಯ ಶಾಲೆಗೆ ಬಿಡುವುದು, ಸಂಜೆ ಮತ್ತೆ ಕರೆ ತರುವುದು ನಮ್ಮ ನಿತ್ಯದ ಕೆಲಸವಾಗಿದೆ. ನಮ್ಮ ಆಯುಷ್ಯ ಇದರಲ್ಲೆ ಅರ್ಧ ಮುಗಿದು ಹೋಗುತ್ತಿದೆ. ಚುನಾವಣೆ ಬಹಿಷ್ಕಾರ, ಮನವಿ ಎಲ್ಲವೂ ಮಾಡಿ ಆಯಿತು. ಸೇತುವೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದೆ ಎಂದು ಹೇಳುತ್ತಾರೆ. ಹಿಂದಿನಿಂದಲೂ ಅದನ್ನೆ ಹೇಳುತ್ತಾ ಬಂದಿದ್ದಾರೆ. ರಸ್ತೆ ವಿಸ್ತರಣೆಗೆ ಅಭಯಾರಣ್ಯ ಅಡ್ಡಿ ಎನ್ನುತ್ತಾ ನಮ್ಮನ್ನು ಸತಾಯಿಸುತ್ತಿದ್ದಾರೆ. ಇನ್ನು ಅಂಚೆ ಪತ್ರಗಳು ಬಂದಲ್ಲಿ ಅದು ಮರದಲ್ಲೆ ನೇತುಹಾಕಿದ ಬಾಕ್ಸ್‌ಗಳಲ್ಲೆ ಮಳೆಗಾಳಿಗೆ ಬಿದ್ದಿರುತ್ತವೆ ಎನ್ನುತ್ತಾರೆ ಅಲ್ಲಿನ ನಿವಾಸಿಗಳು. ಇತ್ತೀಚೆಗಷ್ಟೆ ಮತ್ತೂಮ್ಮೆ ಅಂದಾಜು ಪಟ್ಟಿಸಿ ಸಿದ್ಧಪಡಿಸಲು ಅಧಿಕಾರಿಗಳು ಬಂದು ಹೋಗಿದ್ದಾರೆ ಎಂದರು ಗ್ರಾ.ಪಂ ಸದಸ್ಯರೊಬ್ಬರು.

ನನಸಾಗದ ಕನಸು
ಹರಿಯುವ ಹೊಳೆಗೆ ಶಾಶ್ವತ ಸೇತುವೆ ಬೇಕೆನ್ನುವ ಕನಸು ಇನ್ನೂ ನನಸಾಗಿಲ್ಲ. ಮಳೆಗಾಲದಲ್ಲಿ ಕಬ್ಬಿನಾಲೆ ಗ್ರಾಮದ ಮಲೆಕುಡಿಯ ಜನರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಮತ್ತಾವು ನದಿಗೆ ಸೇತುವೆ ನಿರ್ಮಾಣದ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ಹಲವಾರು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಗಮನ ಹರಿಸಿ ಸಮಸ್ಯೆ ಬಗೆಹರಿಸಿ ಎಂದು ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ತಿಳಿಸಿದ್ದಾರೆ.

ಮಕ್ಕಳಿಗೆ ವಿಶೇಷ ತರಗತಿ ತಪ್ಪಿಸದಿರಲು ನಿರ್ಮಾಣ
ನಮ್ಮಲ್ಲಿಂದ ಶಾಲೆಗೆ ಹೋಗುವ ಮಕ್ಕಳಿದ್ದಾರೆ. ಮೊನ್ನೆ ಸುರಿದ ಮಳೆಗೆ ನೆರೆ ಬಂದು ಮರದ ಸೇತುವೆ ಕೊಚ್ಚಿ ಹೋಗಿತ್ತು. ಮಕ್ಕಳಿಗೆ ದಸರಾ ರಜೆ ಇದ್ದರೂ ಎಸ್ಸೆಸೆಲ್ಸಿ ಮಕ್ಕಳಿಗೆ ವಿಶೇಷ ತರಬೇತಿ ಇರುತ್ತದೆ. ಮಕ್ಕಳಿಗೆ ಮರುದಿನ ಸೋಮವಾರ ಶಾಲೆಗೆ ಹೋಗಲೇ ಬೇಕಿತ್ತು. ಅದಕ್ಕೆ ತುರ್ತಾಗಿ ನಮ್ಮ ಇಲ್ಲಿನ ಮನೆಯವರೆಲ್ಲ ಸೇರಿ ತುರ್ತಾಗಿ ಮರದ ಸೇತುವೆ ನಿರ್ಮಿಸಿಕೊಂಡಿದ್ದೇವೆ. ಶಾಶ್ವತವಾಗಿ ಸೇತುವೆ ನಿರ್ಮಾಣವಾದರೆ ನಮ್ಮ ಸಮಸ್ಯೆಗೆ ಮುಕ್ತಿ ಸಿಗುತಿತ್ತು.
-ವಸಂತಿ, ಮೂಲನಿವಾಸಿ ಮಹಿಳೆ ಮತ್ತಾವು

Advertisement

Udayavani is now on Telegram. Click here to join our channel and stay updated with the latest news.

Next