ಅಪ್ಪನ ಮೌಲ್ಯ ತಿಳಿಯುವ ಮೊದಲೇ ಕಣ್ಮರೆಯಾಗಿದ್ದರು ನನ್ನ ಅಪ್ಪ. ತಂದೆಯ ಪ್ರೀತಿ ಹೇಗೆ ಇರಬಹುದು ಎಂಬುದರ ಕುರಿತು ಸರಿಯಾದ ತಿಳುವಳಿಕೆ ನನಗಿಲ್ಲ. ಆದರೆ ಅವರ ಜತೆಗಿನ ಕೆಲವು ಸಂದರ್ಭಗಳು ಮಾತ್ರ ನೆನಪಿನಂಗಳದಲ್ಲಿ ಸದಾ ಜೀವಂತವಾಗಿವೆ.
ಅಪ್ಪ ಎಂದರೆ ಎಲ್ಲರಿಗೂ ಧೈರ್ಯ ಆಸರೆ ನೀಡುವ ವ್ಯಕ್ತಿತ್ವ. ನನ್ನ ಜೀವನದಲ್ಲಿ ಇದುವರೆಗೂ ಸದಾ ಆಸರೆಯಾದ ನನ್ನ ಅಪ್ಪ ದೈಹಿಕವಾಗಿ ನನ್ನ ಜತೆ ಇಲ್ಲದಿದ್ದರೂ ಸದಾ ಆಸರೆಯಾಗಿ ನನ್ನ ಜೀವನದಲ್ಲಿ ಇದ್ದಾರೆ ಎಂಬುದು ನನ್ನ ನಂಬಿಕೆ ಅದು ನಿಜ ಕೂಡ.
ನನ್ನ ತಂದೆ ತುಂಬಾ ದೂರ ಆಲೋಚನೆವುಳ್ಳ ಮನುಷ್ಯ ತಾನು ಒಂದು ವೇಳೆ ಇಲ್ಲದಿದ್ದರೂ ಕುಟುಂಬದವರಿಗೆ ತೊಂದರೆ ಆಗಬಾರದು ಎಂಬ ಯೋಚನೆ ಹೊಂದಿದ ವ್ಯಕ್ತಿತ್ವ ಅವರದು. ಇದುವರೆಗೂ ಅವರು ಹಾಕಿಕೊಟ್ಟ ಭದ್ರ ಬುನಾದಿಯಲ್ಲಿಯೇ ಬೆಳೆದು ಬಂದಿದ್ದು ಕಿಂಚಿತ್ತೂ ತೊಂದರೆ ಆಗದ ರೀತಿಯಲ್ಲಿ ನನ್ನ ಜೀವನ ರೂಪಿಸಿ ಕೊಟ್ಟಿದ್ದಾರೆ.
ಅವರು ಕಣ್ಮರೆಯಾಗಿ 17 ವರ್ಷಗಳಾದರೂ ಜನ ಅವರನ್ನು ಇನ್ನೂ ಮರೆಯಲಾಗದ ವ್ಯಕ್ತಿತ್ವ ಅವರದು. ನನ್ನ ಜೀವನದಲ್ಲಿ ಏನಾದರು ತೊಂದರೆಗಳು ಎದುರಾದಾಗ ಅವರ ಹೆಸರು ಹೇಳಿದರೆ ಸಾಕು ಕಷ್ಟಗಳು ನಿವಾರಣೆ ಆಗುವ ಸಂದರ್ಭಗಳನ್ನು ನಾನು ಬಹಳಷ್ಟು ಬಾರಿ ಕಂಡಿದ್ದೇನೆ. ಹಲವು ಬಾರಿ ಅವರಿಂದ ಸಹಾಯ ಪಡೆದ ವ್ಯಕ್ತಿಗಳು ಈಗಲೂ ಸಹ ಅವರನ್ನು ನೆನಪಿನಲ್ಲಿಟ್ಟಕೊಂಡು ನನ್ನ ಬಳಿ ಅವರ ನೆನಪುಗಳನ್ನು ಹಂಚಿಕೊಂಡ ಸಂದರ್ಭಗಳು ಕೂಡ ಉಂಟು. ಅದಲ್ಲದೆ ಅವರ ಸ್ನೇಹಿತರು ಸಹ ನನ್ನ ಕಷ್ಟಕರ ಸಂದರ್ಭಗಳಲ್ಲಿ ಸಹಾಯ ಮಾಡಲು ಬರುವರು.
ಅಪ್ಪ ನನ್ನ ಜೀವನದಲ್ಲಿ ಈ ರೀತಿಯಾಗಿ ಕೊಡುಗೆಗಳನ್ನು ನೀಡಿದ್ದು, ಅವರಿಗೆ ಪ್ರತಿಫಲವಾಗಿ ನಾನು ಯಾವ ರೀತಿಯ ಕೊಡುಗೆ ನೀಡಿದ್ದೇನೆ ಎಂಬುದು ಸದಾ ನನಗೆ ಕಾಡುವ ಪ್ರಶ್ನೆ. ದಿನನಿತ್ಯವೂ ಅಪ್ಪನ ಋಣ ಹೇಗೆ ತೀರಿಸಲಿ ಎಂಬ ಗೊಂದಲದಲ್ಲಿಯೇ ಜೀವನ ಸಾಗುತ್ತಿದೆ. ಆದರೆ ಅಪ್ಪನ ಆಸರೆಯೂ ನನ್ನ ಕನಸುಗಳಿಗೆ ಸದಾ ಜೀವತುಂಬುತ್ತದೆ.
ಅಪ್ಪ ಆಗಸದಲ್ಲಿರುವ ನಕ್ಷತ್ರ ನೀನು..
ಭೂಮಿಯಲ್ಲಿ ಸರಿಸಾಟಿಯಿಲ್ಲದ ಜೀವ ನೀನು..
ನಿನ್ನ ಋಣ ಹೇಗೆ ತೀರಿಸಲಿ ನಾನು….
-ಮಡು ಮೂಲಿಮನೆ