ಮಾನಿನಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವುದು ಕೂದಲು ಮತ್ತು ಅದಕ್ಕೆ ಮಾಡುವ ಅಲಂಕಾರ. ಹಾಗಾಗಿಯೇ ಹುಡುಗಿಯರು ಕೇಶಾಲಂಕಾರದ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುತ್ತಾರೆ. ಬೇಸಿಗೆಯಲ್ಲಂತೂ ತುರುಬಿಗಿಂತ ಬೇರೆ ಯಾವ ಸ್ಟೈಲೂ ಕಂಫರ್ಟ್ ಅನ್ನಿಸದು. ಸಿಂಪಲ್ ತುರುಬಿಗೆ ವಿಶಿಷ್ಟ ಮೆರುಗು ನೀಡುವ ಪಿನ್ ಒಂದಿದೆ. ಅದು ಸೇಫ್ಟಿ ಪಿನ್ ಅಲ್ಲ, ಖೋಪಾ ಪಿನ್.
ಉದ್ದ ಕೂದಲಿರುವ ಮಹಿಳೆಯರು ಜಡೆ, ಜುಟ್ಟು ಹಾಕಿ, ಹಾಕಿ ಬೇಜಾರಾದಾಗ ತುರುಬು ಕಟ್ಟಿಕೊಳ್ಳುತ್ತಾರೆ. ಬೇಸಿಗೆಯ ಧಗೆಯಿಂದ ಕೂದಲನ್ನು ರಕ್ಷಿಸಿಕೊಳ್ಳಲೂ ತುರುಬೇ ಬೆಸ್ಟ್. ಆದರೆ, ತುರುಬು ಕಟ್ಟಿಕೊಂಡು ಆಫೀಸ್‌ಗೆ, ಕಾಲೇಜಿಗೆ ಹೋಗೋಕಾಗುತ್ತಾ? ಅದು ತುಂಬಾ ಬೋರಿಂಗ್ ಅನ್ನಿಸೋದಿಲ್ವಾ? ಎಂಬುದು ಹಲವರ ತಕರಾರು. ಆದರೆ, ಸರಳವಾದ ತುರುಬಿಗೂ ಟ್ವಿಸ್ಟ್ ನೀಡಿ ಅದರ ಮೆರಗು ಹೆಚ್ಚಿಸಬಹುದು. ಅದಕ್ಕಾಗಿಯೇ ಇದೆ ಒಂದು ವಿಶೇಷ ಹೇರ್ ಆ್ಯಕ್ಸೆಸರಿ!
ಏನಿದು ಖೋಪಾ ಪಿನ್?: ಹೇರ್ ಆ್ಯಕ್ಸೆಸರೀಸ್ ಎಂದಾಗಲೆಲ್ಲ ಕೇವಲ ಹೇರ್ ಕ್ಲಿಪ್, ಹೇರ್ ಬ್ಯಾಂಡ್ ಅಥವಾ ರಿಬ್ಬನ್‌ಗಳು ನೆನಪಿಗೆ ಬರುತ್ತವೆ. ಹಾಗೇ ತುರುಬಿಗಾಗಿ ಇರುವ ಆ್ಯಕ್ಸೆಸರಿ ಎಂದರೆ ಅದು ಖೋಪಾ ಪಿನ್. ಈ ಪಿನ್ ಅನ್ನು ತಲೆಕೂದಲನ್ನು ಭದ್ರವಾಗಿ ಇರಿಸುವುದಕ್ಕಿಂತ ಹೆಚ್ಚಾಗಿ ತುರುಬಿನ ಅಲಂಕಾರಕ್ಕಾಗಿಯೇ ಬಳಸಲಾಗುತ್ತದೆ. ತುರುಬು ಕಟ್ಟಿಕೊಂಡ ಬಳಿಕ, ತುರುಬಿನ ಮಧ್ಯ ಭಾಗದಲ್ಲಿ ಈ ಖೋಪಾ ಪಿನ್‌ಅನ್ನು ನೆಟ್ಟರೆ, ತುರುಬಿನ ಅಂದವೇ ಬೇರೆ!
ಪಿನ್‌ಗೆ ಗರಿ “ನವಿಲುಗರಿ’: ಹೆಚ್ಚಾಗಿ ಚಿನ್ನ ಅಥವಾ ಲೋಹದಿಂದ ತಯಾರಿಸಿ, ಗೋಲ್ಡ್ ಪಾಲಿಷ್ ನೀಡಿದ ಪಿನ್‌ಗಳನ್ನು ಮಹಿಳೆಯರು ಮದುವೆ, ಪೂಜೆ, ಹಬ್ಬ ಮತ್ತು ಇತರ ಸಮಾರಂಭಗಳಲ್ಲಿ ಧರಿಸುತ್ತಾರೆ. ಆದರೀಗ ಈ ಖೋಪಾ ಪಿನ್‌ಗಳೂ ಮೇಕ್ ಓವರ್ ಪಡೆದಿವೆ. ಇವುಗಳಲ್ಲಿ ಮುತ್ತು, ವಜ್ರ, ರತ್ನ ಮತ್ತು ಇತರ ಹೊಳೆಯುವ ವಸ್ತುಗಳಿಗೆ ಹೋಲುವಂಥ ಕಲ್ಲುಗಳನ್ನು ಬಳಸಲಾಗುತ್ತದೆ. ಅಲ್ಲದೆ, ಇವು ನವಿಲು, ನವಿಲು ಗರಿ, ಹಂಸ, ತಾವರೆ, ಸೂರ್ಯ, ಸೂರ್ಯಕಾಂತಿ, ಚಂದ್ರ, ನಕ್ಷತ್ರಗಳಂಥ ಆಕಾರ ಮತ್ತು ಆಕೃತಿಗಳಲ್ಲೂ ಲಭ್ಯ. ಮಾರುಕಟ್ಟೆಯಲ್ಲಿ ಈ ಪಿನ್‌ನ ಬೆಲೆ 300 ರೂಪಾಯಿಯಿಂದ ಆರಂಭವಾಗುತ್ತದೆ. ಕೆಲಸ ಮತ್ತು ಕೌಶಲ್ಯದ ಮೇಲೆ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.
ಪಿನ್‌ನ ಇತಿಹಾಸ: ಈ ಖೋಪಾ ಪಿನ್ ನಿನ್ನೆ ಮೊನ್ನೆ ಚಾಲ್ತಿಗೆ ಬಂದಿದ್ದಲ್ಲ. ಅದೆಷ್ಟೋ ವರ್ಷಗಳಿಂದ ಕೇಶಾಲಂಕಾರಕ್ಕಾಗಿ ಈ ಪಿನ್ ಬಳಸುತ್ತ ಬಂದಿದ್ದೇವೆ. ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲೂ ಮದುವೆಯಲ್ಲಿ ಮದುಮಗಳು ಇದನ್ನು ತೊಡುತ್ತಾಳೆ. ಈ ಸಾಂಪ್ರದಾಯಿಕ ಹೇರ್ ಆ್ಯಕ್ಸೆಸರಿ, ಹೊಸ ವಿನ್ಯಾಸದಲ್ಲಿ ಮತ್ತೆ ಮಾರುಕಟ್ಟೆಗೆ ಲಗ್ಗೆ ಹಾಕಿದೆ. ಚಿನ್ನದಿಂದ ಮಾಡಿರುವ ಕಾರಣ, ಇವು ಎಲ್ಲ ಇಂಡಿಯನ್ ಉಡುಪಿನ ಜೊತೆ ಚೆನ್ನಾಗಿಯೇ ಒಪ್ಪುತ್ತದೆ. ಇತರೆ ಆಭರಣಗಳ ಜೊತೆ ಧರಿಸಲೂ ಹೇಳಿ ಮಾಡಿಸಿದಂತಿದೆ.
ಮುಡಿಯ ಸೂರ್ಯ: ಇವುಗಳಲ್ಲಿ ಮಣಿಗಳು, ದಾರ, ಕಿವಿಯೋಲೆ ಜೊತೆ ಸಿಕ್ಕಿಸಿಕೊಳ್ಳುವಂಥ ಸರಪಳಿಗಳು ಮತ್ತು ಗೆಜ್ಜೆಗಳೂ ಲಭ್ಯ ಇವೆ. ಹಾಗಾಗಿ ಕಾಲ್ಗೆಜ್ಜೆ ಮತ್ತು ಬಳೆಗಳಷ್ಟೇ ಅಲ್ಲ, ಮುಡಿಯಲ್ಲಿ ಮೂಡಿದ ಸೂರ್ಯನೂ ಸದ್ದು ಮಾಡಬಲ್ಲ. ಚಿನ್ನದ ವ್ಯಾಪಾರಿಗಳ ಬಳಿ ಹೇಳಿ ನಮಗೆ ಬೇಕಾದ ವಿನ್ಯಾಸದಲ್ಲಿ ಮಾಡಿಸಿಕೊಳ್ಳಬಹುದು. ಕಸ್ಟಮೈಸ್ಡ್ ಡಿಸೈನ್‌ಗಳು ಆನ್‌ಲೈನ್‌ನಲ್ಲಿ ಲಭ್ಯ. ಸರ – ಕಿವಿಯೋಲೆಗೆ ಹೋಲುವಂಥ, ಸೀರೆಯ ಜರಿಯಲ್ಲಿರುವ ವಿನ್ಯಾಸಕ್ಕೆ ಹೋಲುವಂಥ ಅಥವಾ ಕೈಗೆ ಹಾಕಿಕೊಂಡ ಮದರಂಗಿಗೆ ಹೋಲುವಂಥ ಖೋಪಾ ಪಿನ್‌ಗಳನ್ನು ತೊಡಬಹುದು.
ಟ್ರೆಂಡಿ, ಸ್ಟೈಲಿಶ್: ವಿಶೇಷ ಕೇಶಾಲಂಕಾರ ಮಾಡಿಕೊಳ್ಳಲು ಸಮಯದ ಅಭಾವ ಇದ್ದರೆ, ಗಡಿಬಿಡಿಯಲ್ಲಿ ಈ ಖೋಪಾ ಪಿನ್ ನೆರವಿಗೆ ಬರುತ್ತ ದೆ. ಕೇಶ ವಿನ್ಯಾಸ ಸರಳವಾಗಿದ್ದರೂ ಎಲ್ಲರ ಗಮನ ಸೆಳೆಯಬಲ್ಲ ಖೋಪಾ ಪಿನ್, ನೀವು ಉಟ್ಟ ಉಡುಪಿನ ಸೊಬಗನ್ನೂ ಹೆಚ್ಚಿಸುತ್ತದೆ. ಎಲ್ಲಕ್ಕಿಂತ ದೊಡ್ಡ ಲಾಭ ಏನೆಂದರೆ, ನೀವು ಟ್ರೆಂಡಿ ಮತ್ತು ಸ್ಟೈಲಿಶ್ ಆಗಿ ಕಾಣಬಹುದು. ಏಕೆಂದರೆ ಈ ಪಿನ್, ಅತ್ತ ಸಾಂಪ್ರದಾಯಿಕವೂ ಹೌದು, ಇತ್ತ ಆಧುನಿಕವೂ ಹೌದು!
* ಅದಿತಿ ಮಾನಸ ಟಿ.ಎಸ್.