ಬಹುತೇಕರಿಗೆ ಸೂಟ್ ಧರಿಸುವುದು ಎಂದರೆ ಅದೇನೊ ಖುಷಿ. ಇಂಥ ಸೂಟಿಗೆ ಅದರದೇ ಆದ ವಿಶೇಷತೆ ಇದೆ. ಮದುವೆ, ಮೀಟಿಂಗ್ ಮುಂತಾದ ಕಡೆ ಸೂಟ್ ಧರಿಸಿದರೆ, ಅದಕ್ಕೊಂದು ವಿಶೇಷ ಕಳೆ. ಎಷ್ಟೋ ಮದುವೆಗಳಲ್ಲಿ ಸೂಟು-ಬೂಟು ಕೊಡಲಿಲ್ಲ ಎಂಬ ಕಾರಣಕ್ಕೆ ಅವು ನಿಂತು ಹೋಗಿದ್ದೂ ಇದೆ. ಈಗ ಇದೇ ಸೂಟ್ ಕುರಿತಾಗಿಯೇ “ದಿ ಸೂಟ್’ ಎಂಬ ಹೆಸರಿನಲ್ಲಿ ಸಿನಿಮಾವೊಂದು ನಿರ್ಮಾಣವಾಗಿ ತೆರೆಗೆ ಬರುವ ಸಿದ್ದತೆಯಲ್ಲಿದೆ.
ತನ್ನದೇ ಆದ ಗತ್ತು ಇರುವ ಸೂಟ್ ಬಗ್ಗೆಯೇ ನಮ್ಮ ಸಿನಿಮಾದ ಕಥೆಯಿದೆ. ನಮ್ಮ ಚಿತ್ರದಲ್ಲಿ ನಾವು ಧರಿಸುವ ಸೂಟೇ ಪ್ರಮುಖ ಪಾತ್ರಧಾರಿ. ಹಾಗಾಗಿ ಸಿನಿಮಾಕ್ಕೆ “ದಿ ಸೂಟ್’ ಎಂದು ಹೆಸರಿಟ್ಟಿದ್ದೇವೆ ಎಂಬುದು ಚಿತ್ರತಂಡದ ಮಾತು.
ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿರುವ “ದಿ ಸೂಟ್’ ಸಿನಿಮಾದ ಪೋಸ್ಟರ್, ಇತ್ತೀಚೆಗೆ ಹೊರಬಂದಿದೆ. ಚಿತ್ರ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್, ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ನಿರ್ಮಾಪಕ ನಾಗೇಶ್ ಕುಮಾರ್ ಮೊದಲಾದವರು “ದಿ ಸೂಟ್’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಹಿಂದೆ ಕಾಶಿನಾಥ್ ಅವರ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಎಸ್. ಭಗತ್ ರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ದಿ ಸೂಟ್’ ಸಿನಿಮಾದಲ್ಲಿ ಧಾನ್ವಿ, ಸುಜಯ್ ಆರ್ಯ. ಕಮಲ್, ಮಂಜು ನಾಥ್ ಪಾಟೀಲ್, ಭೀಷ್ಮ ರಾಮಯ್ಯ, ದೀಪ್ತಿ ಕಾಪ್ಸೆ, ಗಡ್ಡ ವಿಜಿ, ಉಮೇಶ್ ಬಣಕಾರ್, ಶ್ರೀಧರ್, ಜೋಸೆಫ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಾಲತಿ ಬಿ. ರಾಮಸ್ವಾಮಿ ಈ ಸಿನಿಮಾ ನಿರ್ಮಿಸುತ್ತಿದ್ದು, ಆರು ಹಾಡುಗಳಿಗೆ ಕಿರಣ್ ಶಂಕರ್ ಸಂಗೀತ ನೀಡಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಸುರೇಶ್ ಡಿ. ಹೆಚ್ ಸಂಕಲನವಿದೆ.