ಮೈಸೂರು: ಕಬ್ಬಿನ ಎಸ್‌ಎಪಿ ಬೆಲೆ ನಿಗದಿಪಡಿಸಲು ಕೂಡಲೇ ಕಬ್ಬು ನಿಯಂತ್ರಣ ಮಂಡಳಿ ಸಭೆ ಕರೆಯುವಂತೆ ಮಂಗಳವಾರ ನಡೆದ ರೈತ ಮುಖಂಡರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ನಗರದ ಗನ್‌ಹೌಸ್ ಬಳಿಯಿರುವ ಕುವೆಂಪು ಉದ್ಯಾನವನದಲ್ಲಿ ಸಭೆ ನಡೆಸಿದ ರೈತ ಮುಖಂಡರು, 2016-17ನೇ ಸಾಲಿನ ಕಬ್ಬಿಗೆ ಎಸ್‌ಎಪಿ ದರ ನಿಗದಿಪಡಿಸಿ, ರೈತರಿಗೆ ಅಂತಿಮ ಕಂತಿನ ಬಾಕಿ ಹಣ ಕೊಡಿಸುವಂತೆ ಮಂಡಳಿ ಅಧ್ಯಕ್ಷರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲು ನಿರ್ಧರಿಸಲಾಯಿತು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಗುಜರಾತ್‌ನ 14 ಸಹಕಾರಿ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ನಾಲ್ಕು ಸಾವಿರ ರೂ.ಗಳಿಗೂ ಹೆಚ್ಚು ಹಣ ನೀಡಿದ್ದಾರೆ. ಆದರೆ, ರಾಜ್ಯದ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2500 ರೂ. ಗಳನ್ನು ಮಾತ್ರ ನೀಡಿ ಕೈತೊಳೆದುಕೊಂಡಿವೆ. ರಾಜ್ಯ ಸರ್ಕಾರ ಕೂಡ ಈ ವಿಚಾರದಲ್ಲಿ ಕಣ್ಮುಚ್ಚಿ ಕುಳಿತಿರುವುದು ಬರಗಾಲದಿಂದ ಕಂಗೆಟ್ಟಿರುವ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಯವರು ಬರಗಾಲದ ಹಿನ್ನೆಲೆ ಬ್ಯಾಂಕುಗಳು ಸಾಲ ವಸೂಲಿ ಮಾಡದಂತೆ ಕೇವಲ ಹೇಳಿಕೆ ನೀಡುತ್ತಿರುವುದರಿಂದ ಪ್ರಯೋಜನ ವಾಗುವುದಿಲ್ಲ. ಬದಲಿಗೆ ರಾಜ್ಯಮಟ್ಟದ ಬ್ಯಾಂಕರುಗಳ ಸಮನ್ವಯ ಸಮಿತಿ ಸಭೆ ಕರೆದು ಲಿಖೀತ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಸಮಸ್ಯೆಯಿಂದ ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಬೆಳೆಗಳು ಒಣಗುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅರಮನೆಯ ವಿದ್ಯುತ್ ದೀಪಾಲಂಕಾರದ ಅವಧಿ ಹೆಚ್ಚಿಸಿರುವುದು ಜನದ್ರೋಹಿ ತೀರ್ಮಾನ ಎಂದು ಸಭೆ ಖಂಡಿಸಿತು.
ರೈತರು ಹಣ್ಣು-ತರಕಾರಿ ಬೆಳೆಗಳನ್ನು ಯಾವುದೇ ಕಮೀಷನ್ ಇಲ್ಲದೆ ಸರಬರಾಜು ಮಾಡಲು ಮುಂದೆ ಬರುವ ರೈತರಿಂದ ರೈತಮಿತ್ರ ಫಾರ್ಮರ್ ಕಂಪನಿ ಖರೀದಿಸಲು ಮುಂದಾಗಿದೆ. ಅದಕ್ಕಾಗಿ ಹಣ್ಣು-ತರಕಾರಿ ಬೆಳೆಯುವ ರೈತರ ಸಂಘಟನೆ ಮಾಡುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮುಖಂಡರಾದ ಕಿರಗಸೂರು ಶಂಕರ್, ಬರಡನಪುರ ನಾಗರಾಜ್, ಸಿ.ಕೆ.ರವೀಂದ್ರ, ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಸೇರಿದಂತೆ ಹಲವಾರು ರೈತರು ಸಭೆಯಲ್ಲಿ ಭಾಗವಹಿಸಿದ್ದರು.