ಉಡುಪಿ: ಯೋಗೀಶ್ವರನಾದ ಶ್ರೀಕೃಷ್ಣನ ಆರಾಧನೆಯಿಂದ ಸರ್ವವೂ ಸಾಧ್ಯವಾಗುತ್ತದೆ ಎಂದು ಪಲಿಮಾರು ಮಠದ 31ನೆ ಯತಿಗಳಾಗಿ ಭಾನುವಾರ ಪಟ್ಟಾಭಿಷಿಕ್ತರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ನುಡಿದರು.
ರಾಜಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಶ್ರೀಕೃಷ್ಣ-ರಾಮದೇವರ ಪೂಜೆಯನ್ನು ಮಾಡಬೇಕೆಂಬ ಇಚ್ಛೆ ನನಗೆ ಇತ್ತು. ಹೃಷಿಕೇಶ ತೀರ್ಥರ ಪರಂಪರೆಯನ್ನು ಅಲಂಕರಿಸುವ ಭಾಗ್ಯ ಗುರುಗಳು ಹಾಗೂ ದೇವರ ಅನುಗ್ರಹದಿಂದ ನನಗೆ ಒದಗಿದೆ’ ಎಂದರು.
ಉತ್ತರಾಧಿಕಾರಿಯಲ್ಲ, ಉತ್ತಮಾಧಿಕಾರಿ: ಪೇಜಾವರ ಶ್ರೀ ವಿಶ್ವೇಶತೀರ್ಥರು ಆಶೀರ್ವಚನ ನೀಡಿ, ನೂತನ ಯತಿಗಳು ಉತ್ತರಾಧಿಕಾರಿಯಾಗಿರದೆ ಉತ್ತಮಾಧಿಕಾರಿಯಾಗುತ್ತಾರೆ. ಮಧ್ವರು ಪ್ರವಚನ ನೀಡುವಾಗ ಶ್ಲೋಕಗಳನ್ನು ಹಾಡಿದ, ಅವರ ಕೃತಿಯನ್ನು ದಾಖಲಿಸಿದ ಪರಂಪರೆಯ ಮೊದಲ ಯತಿ ಶ್ರೀ ಹೃಷಿಕೇಶತೀರ್ಥರು, ಎಲ್ಲರಿಗೂ ಮಂಗಲವಾಗಬೇಕೆಂದು ಮಂಗಲಾಷ್ಟಕವನ್ನು ಬರೆದ ಶ್ರೀ ರಾಜರಾಜೇಶ್ವರ ತೀರ್ಥರು, ಅನೇಕ ಮಠಾಧೀಶರಿಗೆ ಪಾಠ ಹೇಳಿ ರೂಪಿಸಿದ ತಮ್ಮ ಗುರು ಶ್ರೀವಿದ್ಯಾಮಾನ್ಯತೀರ್ಥರು ವಿರಾಜಿಸಿದ ಈ ಪರಂಪರೆಯನ್ನು ನೂತನ ಯತಿಗಳು ಬೆಳಗಲಿ ಎಂದು ಹಾರೈಸಿದರು.
ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು ಆಶೀರ್ವಚನ ನೀಡಿ, ಉಪನಿಷತ್ತು ಮಾತೃದೇವೋ ಭವ’ ಎನ್ನುತ್ತದೆ. ವ್ಯಕ್ತಿಗಳನ್ನು ಹೆತ್ತು, ಹೊತ್ತು ನಿರ್ಮಿಸುವವರು ತಾಯಿ. ಇಂದು ತಾಯಂದಿರ ದಿನ. ಗುರು, ಸನ್ಯಾಸಿಯಾದರೂ ಮಾತೆಗೆ ಮಗನೇ. ಗುರುಗಳು ಸಮಾಜವನ್ನು ನಿರ್ಮಿಸುವವರು.
ನೂತನ ಯತಿಗಳಲ್ಲಿ ಹಿಂದಿನ ಎಲ್ಲ ಯತಿಗಳ ಸನ್ನಿಧಾನವಿದ್ದು, ಉನ್ನತ ಸಮಾಜವನ್ನು ನಿರ್ಮಾಣ ಮಾಡಲಿ ಎಂದು ಹಾರೈಸಿದರು. ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಕಾಣಿಯೂರು, ಅದಮಾರು ಕಿರಿಯ, ಪೇಜಾವರ ಕಿರಿಯ, ಸುಬ್ರಹ್ಮಣ್ಯ, ಭೀಮನಕಟ್ಟೆ, ಸೋದೆ ಮಠಾಧೀಶರು ಉಪಸ್ಥಿತರಿದ್ದರು.
ಅಭಿಜಿನ್ ಮುಹೂರ್ತದಲ್ಲಿ ಪಟ್ಟಾಭಿಷೇಕ: ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಧ್ಯಾಹ್ನ 12.20ಕ್ಕೆ ಅಭಿಜಿನ್ ಮುಹೂರ್ತದಲ್ಲಿ ಮಠದ ಉಪಾಸ್ಯಮೂರ್ತಿ, ಸಾಲಿಗ್ರಾಮಗಳನ್ನು ಹರಿವಾಣದಲ್ಲಿರಿಸಿ, ಶಿರದ ಮೇಲಿಂದ ಅಭಿಷೇಕ ಮಾಡುವ ಮೂಲಕ ನೂತನ ಉತ್ತರಾಧಿಕಾರಿಯನ್ನು ನೇಮಿಸಿದರು. ಇದೇ ವೇಳೆ ವೇದ, ಗೀತೆ, ಭಾಗವತಾದಿಗಳ ಪಾರಾಯಣ ನಡೆಯಿತು. ಮಹಿಳೆಯರು ಲಕ್ಷ್ಮೀ ಶೋಭಾನೆ ಪಠಿಸಿದರು. ರಾಜಾಂಗಣದಲ್ಲಿ ಮಂಗಲಾಷ್ಟಕ ಪಠಿಸಲಾಯಿತು.