ಹುಣಸಗಿ: ಜೀವನದಲ್ಲಿ ಮಾಡುವುದು ಏನೆಂದು ರಾಮಾಯಣ ತಿಳಿಸಿದರೆ, ಹೇಗೇ ಬದುಕು ನಡೆಸಬೇಕು ಎಂದು ಭಗವದ್ಗೀತೆ ತಿಳಿಸುತ್ತದೆ. ಹೀಗಾಗಿ ಭಗವದ್ಗೀತೆಯಲ್ಲಿ ಬದುಕಿನ ಶೈಲಿ ಹಡಗಿದೆ ಎಂದು ಗೀತಾ ಉಪನ್ಯಾಸಕ ಮನೋಹರರಾವ್ ದ್ಯಾಮನಾಳ ಹೇಳಿದರು.
ಕಾಮನಟಗಿ ಗ್ರಾಮದ ಯಾಜ್ಞವಲ್ಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಗೀತಾ ಪಠಣ ಮಾಡಬೇಕು. ಇದು ಜೀವನದ ಅನೇಕ ಕ್ಲಿಷ್ಟಕರ ಪ್ರಸಂಗಗಳಲ್ಲಿ ಆತ್ಮವಿಶ್ವಾಸ, ಏಕಾಗ್ರತೆ ಹಾಗೂ ಸ್ಥಿತಪ್ರಜ್ಞೆ ತಂದು ಕೊಡುವುದು. ಅಂತಹ ಸಾಧಕರು ನಾವಾಗಬೇಕು ಎಂದರು.
ಬಲಶಟ್ಟಿಹಾಳದ ಬಸವಲಿಮಗ ಮಠದ ಸಿದ್ದಲಿಂಗಯ್ಯ ಶಾಸ್ತ್ರಿಗಳು ಮಾತನಾಡಿ, ಗೀತೆ ಮನುಷ್ಯರಲ್ಲಿ ಆತ್ಮಬಲ ತರುತ್ತದೆ. ಕೌರವರು ಯುದ್ಧದಲ್ಲಿ ಲಕ್ಷಾಂತರ ಸೈನಿಕರು, ಶೌರ್ಯರರನ್ನು ಆಯ್ಕೆ ಮಾಡಿಕೊಂಡರೆ ಪಾಂಡವರು ನಮಗೆ ಶ್ರೀಕೃಷ್ಣ ಒಬ್ಬನೇ ಸಾಕು ಎಂದಿದ್ದರು. ಹಾಗಾಗಿ ಅನೇಕ ಧಾರ್ಮಿಕ ಚಟುವಟಿಕೆ ನಿರಂತರ ಮುನ್ನಡೆಸುತ್ತ, ಸಾಮಾಜಿಕ ಬದ್ಧತೆ ವಿಪ್ರರು ತೋರಿದ್ದಾರೆ ಎಂದರು.
ನಿವೃತ್ತ ಉಪನ್ಯಾಸಕ ಭೀಮನಗೌಡ ಗುಳಬಾಳ, ದೇವರಾಜ ಕುಲಕರ್ಣಿ ಮಾತನಾಡಿದರು. ಹನುಮಂತ ಆಚಾರ್ಯ ನೇತೃತ್ವದಲ್ಲಿ ಗೀತಾ ಪಾರಾಯಣ ನಡೆಯಿತು. ವಾಸುದೇವ ಕುಲಕರ್ಣಿ ಶ್ಲೋಕ ಪಠಣ ಮಾಡಿದರು.
ಇದಕ್ಕೂ ಮುಂಚೆ ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೂ ಬೃಹತ್ ಭಗವದ್ಗೀತೆ ಅಭಿಯಾನ ಜಾಥಾ ನಡೆಯಿತು. ಡಾ| ಗೋವಿಂದರಾವ್ ಜಹಗೀರದಾರ ಅಧ್ಯಕ್ಷತೆ ವಹಿಸಿದ್ದರು. ಹುಣಸಗಿ, ರಾಜನಕೋಳೂರು, ಕೂಡಲಗಿ, ದ್ಯಾಮನಾಳ, ನಾರಾಯಣಪುರ, ಕೋಡೆಕಲ್, ಕಲ್ಲದೇವನಹಳ್ಳಿ, ಕನ್ನಳ್ಳಿ ವಿವಿಧ ಗ್ರಾಮದ ಗೀತಾ ಸಾಧಕರು ಇದ್ದರು.