ಹುಬ್ಬಳ್ಳಿ: ಕೇಂದ್ರ ಬರ ಅಧ್ಯಯನ ತಂಡ ಭಾನುವಾರ ಹುಬ್ಬಳ್ಳಿ, ನವಲಗುಂದ ಹಾಗೂ ಕುಂದಗೋಳ ತಾಲೂಕಿನ ಕೆಲ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಮಾಹಿತಿ ಪಡೆಯಿತು. ಕೇಂದ್ರ ಗ್ರಾಮೀಣಾಭಿವೃದ್ಧಿ ಅಧೀನ ಕಾರ್ಯದರ್ಶಿ ಎಸ್.ಬಿ.ತಿವಾರಿ, ಕೇಂದ್ರ ಇಂಧನ ಇಲಾಖೆ ಉಪನಿರ್ದೇಶಕ ಕಮಲ್ ಚವ್ಹಾಣ ಹಾಗೂ ಸಲೀಂ ಹೈದರ್ ಅವರನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡ ಹಲವು ಗ್ರಾಮಗಳಿಗೆ ಭೇಟಿ ಪರಿಶೀಲಿಸಿತು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ತಂಡದ ಸದಸ್ಯ ಹಾಗೂ ಕೇಂದ್ರ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸಹಾಯಕ ಸಲಹೆಗಾರ ಸಲೀಂ ಹೈದರ್, ಧಾರವಾಡ ಜಿಲ್ಲೆಯಲ್ಲಿ ಭೀಕರ ಬರ ಸ್ಥಿತಿಯಿದ್ದು, ಈ ಕುರಿತು ಒಂದು ವಾರದಲ್ಲಿ ವರದಿ ನೀಡಲಾಗುವುದು. ನೀರಿನ ಸಮಸ್ಯೆ ಹೆಚ್ಚಾಗಿದೆ. ಬರದ ಸ್ಥಿತಿ ಅವಲೋಕಿಸಿ ತಂಡದ ಮುಖ್ಯಸ್ಥರಿಗೆ ವರದಿ ನೀಡಲಾಗುವುದು ಎಂದರು.
ಅನುದಾನ ಬಳಕೆಗೆ ಸರ್ಕಾರ ವಿಫಲ: ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಕೇಂದ್ರ ಅನುದಾನ ನೀಡುತ್ತಿದ್ದರೂ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅನಗತ್ಯವಾಗಿ ಕೇಂದ್ರದ ಮೇಲೆ ಆರೋಪ ಮಾಡುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಕಳೆದ 10 ವರ್ಷಗಳಲ್ಲಿ ಅತಿ ಹೆಚ್ಚು ಅನುದಾನ ನೀಡಿದ್ದೇ ಸದ್ಯದ ಎನ್‌ಡಿಎ ಸರ್ಕಾರ.
ಅಗತ್ಯ ಬಿದ್ದರೆ ರಾಜ್ಯ ಸರ್ಕಾರ ಖರ್ಚು ಮಾಡಿ ಬರ ಪರಿಹಾರ ಕ್ರಮ ಕೈಗೊಳ್ಳಬಹುದು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 500 ಕೋಟಿ ರೂ. ಖರ್ಚು ಮಾಡದಷ್ಟು ದುಸ್ಥಿತಿಗೆ ತಲುಪಿದೆಯೇ ಎಂಬ ಸಂದೇಹ ಮೂಡುತ್ತಿದೆ ಎಂದರು. ಕೇಂದ್ರ ಸರ್ಕಾರ ಇನ್ನಷ್ಟು ಅನುದಾನ ನೀಡಬಾರದೆಂದೇನಿಲ್ಲ. ಅಗತ್ಯ ಬಿದ್ದರೆ ಇನ್ನಷ್ಟು ಅನುದಾನ ನೀಡುವಂತೆ ಕೇಂದ್ರದ ಕೃಷಿ ಸಚಿವರು ಹಾಗೂ ಗೃಹ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.
ಗ್ರಾಮಗಳಲ್ಲಿ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಸಮರ್ಪಕ ನೀರು ಪೂರೈಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಗೋಶಾಲೆಗಳನ್ನು ತೆರೆದು ದನಕರುಗಳಿಗೆ ಆಶ್ರಯ ನೀಡಬೇಕು. ಗುಣಮಟ್ಟದ ಮೇವು ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶಾಸಕ ಎನ್.ಎಚ್.ಕೋನರೆಡ್ಡಿ ಮಾತನಾಡಿ, 4782 ಕೋಟಿ ರೂ. ಅನುದಾನ ನೀಡಲು ಮನವಿ ಮಾಡಿದರೆ ಕೇಂದ್ರ ಸರ್ಕಾರ 1700 ಕೋಟಿ ರೂ. ನೀಡಲು ಒಪ್ಪಿಗೆ ಸೂಚಿಸಿ, ಕೇವಲ 450 ಕೋಟಿ ರೂ. ಮಾತ್ರ ಅನುದಾನ ನೀಡಿದೆ. ರಾಜ್ಯದ ಜನರು ಸಂಕಷ್ಟದಲ್ಲಿದ್ದು, ಇಲ್ಲಿನ ಸ್ಥಿತಿ-ಗತಿ ಕುರಿತ ವರದಿ ನೀಡಿದ ಕೂಡಲೇ ಕೇಂದ್ರ ಸರ್ಕಾರ ಅಗತ್ಯ ಪ್ರಮಾಣದ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.