ತೀರ್ಥಹಳ್ಳಿ: ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ, ಪ್ರಾಯೋಗಿಕವಾಗಿ ತೋರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಮನದಟ್ಟು ಮಾಡಲು ಸಾಧ್ಯ ಎಂಬ ಆಶಯದೊಂದಿಗೆ ಪಟ್ಟಣದ ಚಿಟ್ಟೆಬೈಲಿನ ಪ್ರಜ್ಞಾಭಾರತಿ ಶಾಲಾ ವಿದ್ಯಾರ್ಥಿಗಳಿಗೆ ಕುರುವಳ್ಳಿಯ ಪುರುಷೋತ್ತಮ ಪ್ರತಿಷ್ಠಾನದ ಆವರಣದ ಜಮೀನಿನ ಗದ್ದೆಯಲ್ಲಿ ಭತ್ತದ ನಾಟಿ ಮಾಡಿಸುವ ಮೂಲಕ ಕೃಷಿ ಶಿಕ್ಷಣವನ್ನು ನೀಡಲಾಯಿತು. ವಿದ್ಯಾರ್ಥಿಗಳು ಗದ್ದೆಗಿಳಿದು ಭತ್ತದ ನಾಟಿ ಮಾಡಿ ಸಂತಸಪಟ್ಟರು.
ಶಾಲೆಗಳಲ್ಲಿ ಸಾಮಾನ್ಯವಾಗಿ ಆಟ – ಪಾಠದ ಜತೆಗೆ ಕೆಲ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯ. ಆದರೆ, ತೀರ್ಥಹಳ್ಳಿ ತಾಲೂಕಿನ ಶಾಲೆಯೊಂದರಲ್ಲಿ ಮಕ್ಕಳನ್ನು ಗದ್ದೆಗೆ ಇಳಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸುವ ಮೂಲಕ ವಿಭಿನ್ನವಾಗಿ ಕೃಷಿ ಚಟುವಟಿಕೆ ಬಗ್ಗೆ ಪಾಠ ಮಾಡಲಾಗಿದೆ. ನಾಲ್ಕು ಗೋಡೆಗಳ ಮಧ್ಯೆ ಪಾಠ ಕೇಳುತ್ತಾ ತಲ್ಲೀನರಾಗುತ್ತಿದ್ದ, ಪ್ರಜ್ಞಾಭಾರತಿ ಶಾಲಾ ಮಕ್ಕಳಿಗೆ ಗದ್ದೆ ಎಂದರೆ ಏನು? ಬೇಸಾಯ ಎಂದರೆ ಹೇಗೆ? ನಾಟಿ ಹೇಗೆ ಮಾಡಬೇಕು ಎಂದೆಲ್ಲ ಮಾಹಿತಿ ನೀಡುತ್ತಾ ಮಕ್ಕಳನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಲಾಗಿತ್ತು. ಮಕ್ಕಳು ಮಳೆಯನ್ನು ಲೆಕ್ಕಿಸದೆ ಉತ್ಸುಕತೆಯಲ್ಲಿ ಪಾಲ್ಗೊಂಡು ಗದ್ದೆಯಲ್ಲಿ ನಾಟಿ ಮಾಡುವುದು ಎಲ್ಲರ ಗಮನ ಸೆಳೆಯಿತು.
ಈ ಬಗ್ಗೆ ಪ್ರಜ್ಞಾ ಭಾರತಿ ಶಾಲೆಯ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಲೋಹಿತಾಶ್ವ ಮಾತನಾಡಿ, ಪ್ರಜ್ಞಾಭಾರತಿ ಶಿಕ್ಷಣ ಸಂಸ್ಥೆ ಈಗಾಗಲೇ ಐದು ವರ್ಷದಿಂದ “ಅನ್ನದ ಅರಿವು” ಎಂಬ ಕಾರ್ಯಕ್ರಮ ವನ್ನು ಮಾಡಿಕೊಂಡು ಬರುತ್ತಿದೆ. ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ನೈತಿಕ ಮೌಲ್ಯವನ್ನು ಹೇಳಿಕೊಡುತ್ತಿದ್ದೇವೆ. ಇಂದಿನ ಮಕ್ಕಳಿಗೆ ಗದ್ದೆ ಎಂದರೆ ಏನು ಎನ್ನುವುದು ತಿಳಿದಿಲ್ಲ.
ಹೊಟೇಲುಗಳಿಗೆ ಅಥವಾ ಮದುವೆ ಮನೆ ಹಾಗೂ ಇತರ ಸಮಾರಂಭಗಳಿಗೆ ಹೋದ ವೇಳೆ ಅರ್ಧ ಊಟ ಮಾಡಿ ಅರ್ಧ ಅಲ್ಲೇ ಬಿಟ್ಟು ಬರುತ್ತಿದ್ದಾರೆ. ಅವರಿಗೆ ಅನ್ನದ ಮೌಲ್ಯ ತಿಳಿದಿಲ್ಲ. ನಾವು ಊಟ ಮಾಡುವ ಅಕ್ಕಿಯನ್ನು ಹೇಗೆ ಕಷ್ಟಪಟ್ಟು ಮಾಡುತ್ತಾರೆ ಎನ್ನುವ ಪರಿಜ್ಞಾನವಿಲ್ಲ.
ಹೊರಗೆ ಅನ್ನದಂತೆ ಕಂಡರೂ ವಿಷದ ರೀತಿ ಈಗಿನ ಆಹಾರದ ಪರಿಸ್ಥಿತಿ ಆಗಿದೆ. ಮಕ್ಕಳಿಗೆ ಸಾವಯವ ಕೃಷಿ ಬಗ್ಗೆ ತಿಳಿಸಲು ಮಕ್ಕಳಿಗೆ ಪಾಠದಲ್ಲಿ ಕೃಷಿ ಚಟುವಟಿಕೆಯ ಕುರಿತು ಮೌಖಿಕವಾಗಿ ಹೇಳುವುದಕ್ಕಿಂತ ಪ್ರಾಯೋಗಿಕವಾಗಿ ತೋರ್ಪಡಿಸಿದರೆ ವಿದ್ಯಾರ್ಥಿಗಳು ವಾಸ್ತವತೆ ಅರಿಯಲು ಸಾಧ್ಯವಾಗುತ್ತದೆ ಎಂದರು.