ದಾವಣಗೆರೆ: ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಸೋಮವಾರ ನಗರದ ವಿವಿಧೆಡೆ ಬೀದಿ ನಾಟಕದ ಮೂಲಕ ಹೆಲ್ಮೆಟ್ ಬಳಕೆ ಜಾಗೃತಿ ಮೂಡಿಸಿದರು.
ವಿದ್ಯಾರ್ಥಿಗಳು ರಾಂ ಆ್ಯಂಡ್ ಕೋ ವೃತ್ತ, ಅಂಬೇಡ್ಕರ್ ವೃತ್ತ, ವಿದ್ಯಾನಗರ, ಜಯದೇವ ವೃತ್ತ, ಅಶೋಕ ಚಿತ್ರಮಂದಿರ, ಪೂಜಾ ಇಂಟರ್ ನ್ಯಾಷನಲ್ ಹೋಟೆಲ್, ಕಾಳಿಕಾದೇವಿ ರಸ್ತೆಯಲ್ಲಿ ಬೀದಿ ನಾಟಕದ ಮೂಲಕ ಹೆಲ್ಮೆಟ್ ಬಳಕೆ ಅಗತ್ಯತೆ ಮತ್ತು ಉಪಯೋಗದ ಬಗ್ಗೆ ಜಾಗೃತಿ ಮೂಡಿಸಿದರು.
ಬೇಕೆ ಬೇಕು ಹೆಲ್ಮೆಟ್ ಬೇಕು… ಕಡ್ಡಾಯವಾಗಿ ಹೆಲ್ಮೆಟ್ ಬಳಸಿ, ಅಮೂಲ್ಯ ಜೀವ ಉಳಿಸಿ… ಉಪ್ಪು ತಿಂದವನು ನೀರು ಕುಡಿಯಲೇಬೇಕು… ಗಾಡಿ ಹತ್ತಿದವನು ಹೆಲ್ಮೆಟ್ ಧರಿಸಲೇಬೇಕು… ಹೆಲ್ಮೆಟ್ ಇಲ್ಲದ ಪ್ರಯಾಣ ಸಾವಿಗೆ ಆಹ್ವಾನ… ಹೆಲ್ಮೆಟ್ ಬಳಸಿ ದಂಡ ಕಟ್ಟುವುದ ನಿಲ್ಲಿಸಿ… ಎಂಬಿತ್ಯಾದಿ ಘೋಷಣೆ ಕೂಗಿದರು.
ಎಲ್ಲ ಕಡೆ ಬೀದಿನಾಟಕದ ಜೊತೆಗೆ ಭಿತ್ತಿಪತ್ರ ಪ್ರದರ್ಶನ, ಕರಪತ್ರ ವಿತರಿಸಲಾಯಿತು. ಹೆಲ್ಮೆಟ್ ಹಾಕಿಕೊಂಡು ವಾಹನ ಸವಾರಿ ಮಾಡುತ್ತಿದ್ದವರಿಗೆ ಗುಲಾಬಿ ನೀಡುವ ಮೂಲಕ ಧನ್ಯವಾದ ತಿಳಿಸಿದ ವಿದ್ಯಾರ್ಥಿಗಳು, ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಬಳಕೆಯ ಅನಿವಾರ್ಯತೆ ಬಗ್ಗೆ ಮಾಹಿತಿ ನೀಡಿ, ಕಡ್ಡಾಯವಾಹಿ ಹೆಲ್ಮೆಟ್ ಧರಿಸುವಂತೆ ಮನವಿ ಮಾಡಿದರು.
ವಿವಿಧ ಭಾಗದಲ್ಲಿ ಬೀದಿನಾಟಕ ಪ್ರರ್ದಶನದ ನಂತರ ಮಹಾತ್ಮಗಾಂಧಿ ವೃತ್ತದಲ್ಲಿ ಜಮಾವಣೆಗೊಂಡ ವಿದ್ಯಾರ್ಥಿಗಳು ನಗರದ ವಿವಿಧ ಭಾಗದಲ್ಲಿ ಪಥ ಸಂಚಲನ ನಡೆಸಿದರು. ಸರ್ವೋತ್ಛ ನ್ಯಾಯಾಲಯದ ಆದೇಶದನ್ವಯ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ.
ದಾವಣಗೆರೆಯಲ್ಲಿ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ವಿನಾಯತಿ ನೀಡಲಾಗಿತ್ತು. ಈಚೆಗೆ ಹೆಲ್ಮೆಟ್ ಧಾರಣೆ ಕಡ್ಡಾಯಗೊಳಿಸಿರುವ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುವ ಜೊತೆಗೆ ದಂಡ ವಸೂಲಿ ಸಹ ಮಾಡುತ್ತಿದೆ.