Advertisement

ರಸ್ತೆ ದತ್ತು ಯೋಜನೆಯಿಂದ ಬೀದಿಗಳು ಸ್ವಚ್ಛ

12:49 AM Dec 12, 2019 | Lakshmi GovindaRaj |

ಬೆಂಗಳೂರು: ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬಿಬಿಎಂಪಿಯ ಅಡಾಫ್ಟ್‌- ಎ ಸ್ಟ್ರೀಟ್‌ (ರಸ್ತೆ ದತ್ತು ಪಡೆದುಕೊಳ್ಳುವ)ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಇಲ್ಲಿಯವರೆಗೆ ಈ ಯೋಜನೆಯಡಿ 50ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.

Advertisement

ಈ ಯೋಜನೆಯು ಸಾರ್ವಜನಿಕರು ಮತ್ತು ಬಿಬಿಎಂಪಿ ಸಹಭಾಗಿತ್ವದಲ್ಲಿ ರಸ್ತೆಗಳ ಸ್ವಚ್ಛತಾ ಕಾರ್ಯಕ್ರಮಗಳು ನಡೆಯುತ್ತಿವೆ. ಇಂಡಿಯಾ ರೇಸಿಂಗ್‌ ಟ್ರಸ್ಟ್‌ ಮತ್ತು ಪ್ರಸ್ಟೇಜ್‌ ಗ್ರೂಪ್‌ ಸಂಸ್ಥೆಗಳು ಬಿಬಿಎಂಪಿಯಿಂದ ರಸ್ತೆ ದತ್ತು ಪಡೆದುಕೊಂಡಿದ್ದು, ಇಲ್ಲಿಯವರೆಗೆ 13 ರಸ್ತೆಗಳನ್ನು ದತ್ತು ನೀಡಲಾಗಿದೆ.

ಇಂಡಿಯಾ ರೇಸಿಂಗ್‌ ಟ್ರಸ್ಟ್‌ ನಗರದ ಮದ್ಯಭಾಗದಲ್ಲಿ ಪ್ರಮುಖ ಹತ್ತು ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹೆಚ್ಚುವರಿ ಪಾಳಿಗೆ ಒಂದು ತಂಡವನ್ನು ನಿಯೋಜನೆ ಮಾಡಿದ್ದು, ಮಧ್ಯಾಹ್ನದ ನಗರವನ್ನು ಸ್ವಚ್ಛವಾಗಿ ಇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಬಿಬಿಎಂಪಿಯ ಪೌರಕಾರ್ಮಿಕರು ಕೆಲಸ ಮಧ್ಯಹ್ನಕ್ಕೆ ಮುಗಿಯುವುದರಿಂದ ಮಧ್ಯಾಹ್ನದ ನಂತರ ನಗರದ ರಸ್ತೆಗಳಲ್ಲಿ ತ್ಯಾಜ್ಯ ಎಸೆಯಲಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಈ ಸಂಸ್ಥೆ ಬಿಬಿಎಂಪಿಗೆ ನೆರವಾಗುತ್ತಿದೆ.

ರಸ್ತೆ ದತ್ತು ಪಡೆದುಕೊಂಡ ಸಂಸ್ಥೆಗಳು ರಸ್ತೆ ಬದಿಗಳಲ್ಲಿ ಬ್ಲಾಕ್‌ಸ್ಪಾಟ್‌ ನಿರ್ಮಾಣವಾಗದ ರೀತಿಯಲ್ಲಿ, ರಸ್ತೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು, ತ್ಯಾಜ್ಯ ಡಬ್ಬಿಗಳನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಿವೆ. ಅಲ್ಲದೆ, ರಸ್ತೆ ಬದಿಯ ಗೋಡೆಗಳಿಗೆ ಬಣ್ಣ ಬಳಿದು ಸೌಂದರ್ಯ ವರ್ಧನಾ ಕಾರ್ಯ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳ ವಾತಾವರಣ ಬದಲಾಗಿದೆ.

ಈಗಾಗಲೇ ಎರಡು ಪ್ರಮುಖ ಸಂಸ್ಥೆಗಳು 13 ಪ್ರಮುಖ ರಸ್ತೆಗಳನ್ನು ದತ್ತು ಪಡೆದುಕೊಂಡಿದ್ದು, ರಸ್ತೆ ದತ್ತು ಪಡೆದುಕೊಳ್ಳಲು ಆರ್‌.ಎಂ.ಜೆಡ್‌ನ‌ ಬಿಲ್ಡ್‌ರ್, ಉಜೀವನ ಬ್ಯಾಂಕ್‌ ಸೇರಿದಂತೆ ಹಲವು ಸಂಸ್ಥೆಗಳು ಮುಂದೆ ಬಂದಿವೆ. ಆದರೆ, ಇನ್ನು ರಸ್ತೆ ದತ್ತು ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಅಂತಿಮವಾಗಿಲ್ಲ. ಬಿಬಿಎಂಪಿಯ ಅಧಿಕಾರಿಗಳು ರಸ್ತೆ ದತ್ತು ಪಡೆದುಕೊಳ್ಳುವ ಕಂಪನಿಯ ಜತೆಗೆ ನಿರಾಪೇಕ್ಷಣಾ ಪತ್ರ (ಎನ್‌ಒಸಿ) ಮಾಡಿಕೊಂಡು ರಸ್ತೆ ದತ್ತು ನೀಡುತ್ತಿದ್ದಾರೆ. ರಸ್ತೆ ದತ್ತು ಅರ್ಜಿಗಳಲ್ಲಿ ರಸ್ತೆ ಸ್ವಚ್ಛತೆ ಮತ್ತು ದುರಸ್ತಿಗೆ ಸಂಬಂಧಿಸಿ ಪ್ರಮುಖವಾಗಿ ಎರಡು ವಿಭಾಗಗಳಲ್ಲಿ ಅರ್ಜಿಗಳು ಬರುತ್ತಿವೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕೊಳೆಗೇರಿ ಪ್ರದೇಶಗಳನ್ನು ದತ್ತುಪಡೆದುಕೊಳ್ಳದ ಸಂಸ್ಥೆಗಳು: ಇಲ್ಲಿಯವರೆಗೆ ಹಲವು ಸಂಸ್ಥೆಗಳು ರಸ್ತೆದತ್ತು ಪಡೆದುಕೊಳ್ಳಲು ಮುಂದೆ ಬಂದಿದೆಯಾದರೂ, ಇಲ್ಲಿಯವರೆಗೆ ಕೊಳೆಗೇರಿ ಪ್ರದೇಶದ ರಸ್ತೆಗಳನ್ನು ಸಂಘ, ಸಂಸ್ಥೆಗಳನ್ನು ದತ್ತು ಪಡೆದುಕೊಂಡಿಲ್ಲ. ಉಳಿದ ರಸ್ತೆಗಳಿಗೆ ಹೋಲಿಸಿದರೆ, ಸ್ಲಂ ಭಾಗಗಳಲ್ಲಿನ ರಸ್ತೆಗಳನ್ನು ದತ್ತು ಪಡೆದುಕೊಳ್ಳುವ ಅವಶ್ಯಕತೆ ಹೆಚ್ಚಿದೆ.

ಸ್ವಚ್ಛತಾ ಶನಿವಾರ ಆಂದೋಲದಿಂದ ವಾರ್ಡ್‌ ಸ್ವಚ್ಛ: ಪ್ರತಿ ಶನಿವಾರವೂ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿನ ಒಂದು ವಾರ್ಡ್‌ನಲ್ಲಿ ಸಂಪೂರ್ಣ ಸ್ವಚ್ಛತಾ ಆಂದೋಲನವನ್ನು ಬಿಬಿಎಂಪಿ ಹಮ್ಮಿಕೊಳ್ಳುತ್ತಿದ್ದು, ಆ ವಾರ್ಡ್‌ನಲ್ಲಿನ ರಸ್ತೆಗಳಲ್ಲಿ ಬಿದ್ದಿರುವ ಕಟ್ಟಡ ತ್ಯಾಜ್ಯ, ಬ್ಲಾಕ್‌ ಸ್ಪಾಟ್‌ಗಳ ತೆರವು, ಒಳಚರಂಡಿ ಸ್ವಚ್ಛತೆ, ಪಾದಚಾರಿ ಮಾರ್ಗ ಒತ್ತುವರಿ ತೆರವು ಸೇರಿದಂತೆ ವಾರ್ಡ್‌ಗಳಲ್ಲಿ ಸಂಪೂರ್ಣ ಸ್ವಚ್ಛತೆ ಕಾಪಾಡಿಕೊಳ್ಳಲಾಗುತ್ತಿದೆ. ಕಳೆದ ಮೂರು ತಿಂಗಳ ಹಿಂದೆ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರು ಈ ಸ್ವಚ್ಛತಾ ಶನಿವಾರ ಯೋಜನೆಯನ್ನು ಜಾರಿಗೊಳಿಸಿದ್ದರು.

ಬ್ಲಾಕ್‌ ಸ್ಪಾಟ್‌ಗಳ ಸಂಖ್ಯೆ ಇಳಿಕೆ: ಅಡಾಫ್ಟ್‌-ಎ ಸ್ಟ್ರೀಟ್‌ ಯೋಜನೆಯಡಿ ನಗರದ ಪ್ರಮುಖ ರಸ್ತೆಗಳನ್ನು ದತ್ತು ಪಡೆದುಕೊಂಡಿರುವ ಇಂಡಿಯಾ ರೇಸಿಂಗ್‌ ಟ್ರಸ್ಟ್‌ ಸಂಸ್ಥೆಯು ಈ ರಸ್ತೆಗಳಲ್ಲಿ ಬ್ಲಾಕ್‌ ಸ್ಪಾಟ್‌ಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. “ನಗರದಲ್ಲಿ ಮಧ್ಯಾಹ್ನದ ನಂತರ ರಸ್ತೆಗಳಲ್ಲಿ ತ್ಯಾಜ್ಯ ಪ್ರಮಾಣ ಹೆಚ್ಚಾಗುತ್ತಿದೆ ಎನ್ನುತ್ತಾರೆ ಇಂಡಿಯಾ ರೇಸಿಂಗ್‌ ಟ್ರಸ್ಟ್‌ ಸದಸ್ಯರಾದ ಅರುಣ್‌. ಈ ನಿಟ್ಟಿನಲ್ಲಿ ಹತ್ತು ರಸ್ತೆಗಳಲ್ಲಿ ಕಸದ ಡಬ್ಬಿಗಳನ್ನು ಸರಿಪಡಿಸಲಾಗಿದೆ. ಅಲ್ಲದೆ, ಬ್ಲಾಕ್‌ ಸ್ಪಾಟ್‌ ಸೃಷ್ಟಿಸುವವರ ಪೋಟೋಗಳನ್ನು ಮಾರ್ಷಲ್‌ಗ‌ಳಿಗೆ ರವಾನಿಸಲಾಗುತ್ತಿದ್ದು, ಅವರು ದಂಡ ವಿಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಲಾಕ್‌ ಸ್ಪಾಟ್‌ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ವಿವರಿಸಿದರು.

ರಸ್ತೆ ದತ್ತು ಪಡೆದ ಸಂಸ್ಥೆಗಳ ಕೆಲಸವೇನು?: ರಸ್ತೆ ದತ್ತು ಪಡೆದ ಸಂಸ್ಥೆ ರಸ್ತೆಗಳನ್ನು ಸ್ವಚ್ಛತೆ ಕಾಪಾಡಿಕೊಳ್ಳಲು ಬಿಬಿಎಂಪಿಯೂ ಸಿಬ್ಬಂದಿ ಸೇವೆ ನೀಡುತ್ತಿದೆ. ರಸ್ತೆ ದತ್ತು ಪಡೆದ ಸಂಸ್ಥೆಯು ಮುಖ್ಯವಾಗಿ ರಸ್ತೆಯ ತ್ಯಾಜ್ಯವಿಲೇವಾರಿ ಮಾಡುವುದರ ಜತೆಗೆ ರಸ್ತೆ ಸcಚ್ಛತೆ, ಕಸದ ತೊಟ್ಟಿ, ಸಾರ್ವಜನಿಕರು ಕುಳಿತುಕೊಳ್ಳುವುದಕ್ಕೆ ಆಸನದ ವ್ಯವಸ್ಥೆ, ಪಾದಚಾರಿ ಮಾರ್ಗದ ಅಡೆತಡೆ ಸರಿಪಡಿಸುವುದು. ಪಾಲಿಕೆಗೆ ಮಾಹಿತಿ ನೀಡಿ ಬೀದಿ ದೀಪ ರಿಪೇರಿ ಮಾಡಿಸುವುದು ಹಾಗೂ ಆಯಾ ರಸ್ತೆಗಳ ಸಸಿಗಳ ನಿರ್ವಹಣೆ ಮತ್ತು ಸಂರಕ್ಷಣೆ ಮಾಡಬೇಕಾಗುತ್ತದೆ.

ದತ್ತು ಪಡೆಯಲು ಆಸಕ್ತರು ಅರ್ಜಿ ಭರ್ತಿ ಮಾಡಿ adoptastreetbbmp@gmail.comಗೆ ಕಳುಹಿಸಬಹುದು.

ಪ್ರತಿ ಶನಿವಾರ ವಲಯವಾರು ಒಂದು ವಾರ್ಡ್‌ನಲ್ಲಿನ ಸಮಸ್ಯೆಗಳನ್ನು ಮೊದಲೇ ಪಟ್ಟಿ ಮಾಡಿಕೊಂಡು ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ. ಸ್ವಚ್ಛತಾ ಕಾರ್ಯದಲ್ಲಿ ಆರೋಗ್ಯಾಧಿಕಾರಿಗಳು, ಘನತ್ಯಾಜ್ಯ ನಿರ್ವಹಣೆ ತಂಡ ಹಾಗೂ ಎಂಜಿನಿಯರ್‌ಗಳ ತಂಡಗಳ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
-ಬಿ.ಎಚ್‌. ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

ಬಿಬಿಎಂಪಿ ದತ್ತು ಪಡೆಯಲು ಬರುವುವ ಸಂಘ, ಸಂಸ್ಥೆಗಳಿಗೆ ಕೊಳೆಗೇರಿ ಪ್ರದೇಶಗಳನ್ನು ದತ್ತು ಪಡೆದುಕೊಳ್ಳುವಂತೆ ಉತ್ತೇಜನ ನೀಡಲಾಗುವುದು.
-ರಂದೀಪ್‌, ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)

Advertisement

Udayavani is now on Telegram. Click here to join our channel and stay updated with the latest news.

Next