ಬೋರಾಪುರ ಎಂಬ ಊರಲ್ಲಿ ಯಾರೆಲ್ಲಾ ಇದ್ದಾರೆ, ಅಲ್ಲಿ ಏನೆಲ್ಲಾ ನಡೆಯುತ್ತೆ ಎಂಬುದಕ್ಕೆ ಈ ವಾರ ಉತ್ತರ ಸಿಗಲಿದೆ. ಅಂದರೆ, ಈ ವಾರ “ಡೇಸ್ ಆಫ್ ಬೋರಾಪುರ’ ಚಿತ್ರ ಬಿಡುಗಡೆಯಾಗುತ್ತಿದೆ. ಅಲ್ಲಿಗೆ ಆ ಊರೊಳಗಿನ ವಿಷಯ ಆಚೆ ಬರಲಿದೆ. ಅಂದಹಾಗೆ, ಇದೊಂದು ಹಳ್ಳಿ ಸೊಗಡಿನ ಸಿನಿಮಾ. ಈ ಚಿತ್ರದಲ್ಲಿ ಅನಿತಾಭಟ್ ಅವರನ್ನು ಹೊರತುಪಡಿಸಿದರೆ ಬಹುತೇಕರು ಹೊಸಬರು.
ಇಲ್ಲೊಂದು ಕುತೂಹಲವಿದೆ. ಅದೊಂದು ರೀತಿ ಥ್ರಿಲ್ಲರ್ ಅಂಶಗಳನ್ನೊಳಗೊಂಡಿದೆ. ಇನ್ನು, ಇಲ್ಲಿ ಹಾಸ್ಯಕ್ಕೂ ಕೊರತೆ ಇಲ್ಲ. ಒಟ್ಟಾರೆ, ಒಂದು ಹಳ್ಳಿಯಲ್ಲಿ ಕಾಣಸಿಗುವ ಪಾತ್ರಗಳು ಹೇಗೆ ವರ್ತಿಸುತ್ತವೆ, ಎಷ್ಟೆಲ್ಲಾ ಸಮಸ್ಯೆಗೆ ಸಿಲುಕಿಕೊಳ್ಳುತ್ತವೆ ಎಂಬುದನ್ನು ಹಾಸ್ಯದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು. ಇನ್ನು, ಚಿತ್ರಕ್ಕೆ ಸೂರ್ಯ ಸಿದ್ಧಾಂತ್ ನಾಯಕ.
ಈಗಾಗಲೇ ಚಿತ್ರದ ಟ್ರೇಲರ್ ಮತ್ತು ಹಾಡುಗಳಿಗೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿ, ಅವರಿಗೆ ಚಿತ್ರದ ಮೇಲೂ ವಿಶ್ವಾಸ ಮೂಡಿದೆಯಂತೆ. ಅವರಿಲ್ಲಿ ವಿದ್ಯಾವಂತ ಹುಡುಗನಾಗಿ ನಟಿಸಿದ್ದಾರಂತೆ. ಇಡೀ ಹಳ್ಳಿಗೆ ಅವರೊಬ್ಬರೇ ಓದಿರುವ ಬುದ್ಧಿವಂತ. ಆ ಹಳ್ಳಿಯಲ್ಲಿ ಒಂದು ಘಟನೆ ನಡೆಯುತ್ತೆ. ಆಮೇಲೆ ಎಷ್ಟೊಂದು ಸಮಸ್ಯೆ ಎದುರಾಗುತ್ತೆ. ಅದರಿಂದ ಹೇಗೆ ಹೊರಬರುತ್ತಾರೆ ಎಂಬುದನ್ನು ಇಲ್ಲಿ ಚೆನ್ನಾಗಿ ತೋರಿಸಲಾಗಿದೆ ಎನ್ನುತ್ತಾರೆ ಸೂರ್ಯ ಸಿದ್ಧಾಂತ್.
ಪ್ರಶಾಂತ್ ಈ ಚಿತ್ರದ ಮತ್ತೂಬ್ಬ ನಾಯಕ. ಅವರಿಲ್ಲಿ ಸೂರ್ಯ ಸಿದ್ಧಾಂತ್ ಮಾಡುವ ಕೆಲಸಗಳಿಗೆಲ್ಲ ಕಲ್ಲು ಹಾಕುವ ಪಾತ್ರ ನಿರ್ವಹಿಸಿದ್ದಾರಂತೆ. ಅನಿತಾ ಭಟ್, ಇಲ್ಲಿ ನಾಟಕದ ಕಲಾವಿದೆಯಾಗಿ ನಟಿಸಿದ್ದಾರಂತೆ. ಅಮಿತಾ ರಂಗನಾಥ್ ಆ ಹಳ್ಳಿಯಲ್ಲಿ ಓದಿರುವ ವಿದ್ಯಾವಂತೆಯಾಗಿದ್ದು ವಿಶೇಷ ಪಾತ್ರ ಮಾಡಿದ್ದಾರಂತೆ. ಇನ್ನು, ಪ್ರಕೃತಿ ಇಲ್ಲಿ ಪ್ರೀತಿಸಿದ ಹುಡುಗನನ್ನು ಮದುವೆಯಾಗದೆ ಬೇರೊಬ್ಬನಿಗೆ ಸಂಗಾತಿಯಾಗುವ ಪಾತ್ರ ಮಾಡಿದ್ದಾರಂತೆ.
ಚಿತ್ರದಲ್ಲಿ ದಿನೇಶ್ ಮಂಗಳೂರು, ಸುಚೇಂದ್ರ ಪ್ರಸಾದ್, ತೆಲುಗು ನಟ ಷಫಿ ಇತರರು ನಟಿಸಿದ್ದಾರೆ. ಚಿತ್ರದ ಒಂದು ಹಾಡಿಗೆ ಜಗ್ಗೇಶ್ ಧ್ವನಿ ನೀಡಿರುವುದು ವಿಶೇಷ. ಮಧು ಬಸವರಾಜು ಮತ್ತು ಅಜಿತ್ ಕುಮಾರ್ ಗದ್ದಿ ನಿರ್ಮಾಣ ಮಾಡಿದ್ದಾರೆ. ಅಂದು ನಿರ್ದೇಶಕ ಎನ್. ಆದಿತ್ಯ ಕುಣಿಗಲ್ ಬಂದಿರಲಿಲ್ಲ. ಕಾರಣಕ್ಕೆ ಯಾರಿಂದಲೂ ಉತ್ತರ ಬರಲಿಲ್ಲ. ವಿವೇಕ್ ಚಕ್ರವರ್ತಿ ಸಂಗೀತವಿದೆ. ಮಂಡ್ಯ ಮನು ಸಂಭಾಷಣೆ ಬರೆದಿದ್ದಾರೆ. ಶರವಣನ್ ಛಾಯಾಗ್ರಹಣವಿದೆ.