Advertisement
ಇದು ಮಂಡ್ಯ ಭಾಗದಲ್ಲಿ ನಡೆದ ನೈಜ ಘಟನೆಯ ಚಿತ್ರ. ಪ್ರೀತಿಯ ಹಿಂದೆ ಬಿದ್ದು ದುಷ್ಟರಿಂದ ದೃಷ್ಟಿ ಕಳಕೊಂಡ ದುರಂತ ಪ್ರೇಮಿಯೊಬ್ಬನ ಕರಾಳ ಕಥೆಯ ಚಿತ್ರಣ ಇಲ್ಲಿದೆ. ಕಾಡುವಂತಹ ಕಥೆ ಇಲ್ಲಿದ್ದರೂ, ಕಾಡುವ ಗುಣ ಚಿತ್ರದಲ್ಲಿಲ್ಲ. ಚಿತ್ರಕಥೆಯಲ್ಲಿ ಬಿಗಿ ಹಿಡಿತವಿಟ್ಟುಕೊಂಡು, ನಿರೂಪಣೆಯಲ್ಲಿ ವೇಗ ಕಾಯ್ದಿರಿಸಿಕೊಂಡಿದ್ದರೆ, ದುರಂತ ಪ್ರೇಮ ಚಿತ್ರ ಬಗ್ಗೆ ಮಮ್ಮಲ ಮರುಗಬಹುದಿತ್ತು. ಆದರೆ, ಅಂತಹ ಪವಾಡ ನಡೆದಿಲ್ಲ ಎಂಬುದೇ ಬೇಸರದ ಸಂಗತಿ.
Related Articles
Advertisement
ನೋಡುಗ, ರಘುವೀರನ ಕಣ್ಣೀರ ಕಥೆ ಎಲ್ಲೆಲ್ಲೋ ಹರಿದಾಡುತ್ತಿದೆ ಅಂದುಕೊಳ್ಳುವ ಹೊತ್ತಿಗೆ “ಒಂದಾನೊಂದು ಊರಲ್ಲೊಂದು ಹಕ್ಕಿ ಇತ್ತು. ಆ ಹಕ್ಕಿ ಮೇಲೆ ಪ್ರಿತಿಯ ಮಳೆ ಸುರಿದೇ ಬಿಡ್ತು…’ ಎಂಬ ಹಾಡು ಪುನಃ ಕಣ್ಣೀರ ಕಥೆ ಕೇಳುವ ನೋಡುವಷ್ಟು ತಾಕತ್ತು ತಂದುಕೊಡುತ್ತದೆ. ಇಷ್ಟು ಹೇಳಿದ ಮೇಲೂ, ಆ ಕಣ್ಣೀರ ಕಥೆ ತಿಳಿದುಕೊಳ್ಳುವ, ನೋಡುವ ಆತುರವಿದ್ದರೆ ಅಭ್ಯಂತರವೇನಿಲ್ಲ.ರಘು (ಹರ್ಷ) ಆಗಷ್ಟೇ ತಂದೆಯನ್ನು ಕಳಕೊಂಡು, ಮನೆಯ ಜವಾಬ್ದಾರಿ ಹೊತ್ತುಕೊಂಡವನು.
ಬಸ್‌ನಲ್ಲಿ ಹೋಗುವಾಗ ಆಕಸ್ಮಿಕವಾಗಿ ಕಣ್ಣಿಗೆ ಬೀಳುವ ಅನಿತಾ (ಧೇನು ಅಚ್ಚಪ್ಪ)ಳ ಮೇಲೆ ಪ್ರೇಮಾಂಕುರವಾಗುತ್ತೆ. ಆಮೇಲೆ ಪ್ರೀತಿಯಾಟ ಹೆಚ್ಚಾಗಿ, ಅದು ಹುಡುಗಿಯವರ ಕಣ್ಣಿಗೂ ಗುರಿಯಾಗಿ, ರಘುನನ್ನು ದೂರ ಮಾಡುವಂತಾಗುತ್ತೆ. ಎರಡು ವರ್ಷಗಳ ಬಳಿಕ ಎಲ್ಲೋ ಇದ್ದುಕೊಂಡು ಬದುಕು ಸವೆಸೋ ರಘು, ಪುನಃ ಅನಿತಾಳನ್ನು ಹುಡುಕಿ ಹೊರಡುತ್ತಾನೆ. ಆಮೇಲೆ ಏನೆಲ್ಲಾ ಆಗಿ ಹೋಗುತ್ತೆ ಅನ್ನೋದೇ ಸಾರಾಂಶ.
ಇಲ್ಲಿ ಅಪ್ಪಟ ಗ್ರಾಮೀಣ ಸಾರುವ ಪ್ರೀತಿ ಇದೆ. ಆ ಪ್ರೀತಿ ಒಂದು ಮಾಡಲು ಹರಸಾಹಸ ಪಡುವ ಆತ್ಮೀಯ ಗೆಳೆಯರ ಬಳಗವಿದೆ, ಒಂದು ಹಂತದಲ್ಲಿ ಗೋಳಾಟ, ನರಳಾಟವೂ ಕೇಳಿಸುತ್ತದೆ. ಎಲ್ಲವೂ ಮುಗಿದ ಬಳಿಕ ಪ್ರೀತಿ ಕಳಕೊಂಡು, ದೃಷ್ಟಿಯನ್ನೂ ಕಳಕೊಂಡ ನೋವಿನ ದನಿಯಷ್ಟೇ ಕಾಡತೊಡಗುತ್ತದೆ. ಹರ್ಷ ಹಳ್ಳಿ ಹೈದನಾಗಿ, ಅಪ್ಪಟ ಪ್ರೇಮಿಯಾಗಿ ಗಮನಸೆಳೆದಿದ್ದಾರೆ. ಹೊಡೆದಾಟಕ್ಕಿಂತ ಅವರ ಬಾಡಿಲಾಂಗ್ವೇಜ್ ತಕ್ಕಮಟ್ಟಿಗೆ ಇಷ್ಟವಾಗುತ್ತದೆ.
ಧೇನು ಅಚ್ಚಪ್ಪ ಅವರ ಪಾತ್ರ ಗಟ್ಟಿಯಾಗಿದೆ. ಆದರೆ, ಅದನ್ನು ನಿರ್ವಹಿಸಲು ಹೆಣಗಾಡಿರುವುದೇ ಸಾಧನೆ ಎನ್ನಬಹುದು. ಉಳಿದಂತೆ ಬರುವ ಪಾತ್ರಗಳು ಸಿಕ್ಕ ಅವಕಾಶಕ್ಕೆ ಮೋಸ ಮಾಡಿಲ್ಲ. ಲಯಕೋಕಿಲ ಸಂಗೀತದಲ್ಲಿ ಒಂದು ಹಾಡು ಬಿಟ್ಟರೆ, ಉಳಿದವುಗಳ ಬಗ್ಗೆ ಹೇಳುವಂತಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನೂ “ಧಮ್’ ಬೇಕಿತ್ತು. ಚಿತ್ರದ ಜೋಡಣೆ ಕೆಲಸದ ಬಗ್ಗೆಯೂ ಹೆಚ್ಚು ಗುಣಗಾನ ಮಾಡುವಂತಿಲ್ಲ. ವಿಜಯ್ ಛಾಯಾಗ್ರಹಣದಲ್ಲಿ “ರಘುವೀರ’ನ ಪ್ರೀತಿಯ ಸಾಹಸಗಳು ಭವ್ಯ ಎನಿಸಿವೆ.
ಚಿತ್ರ: ರಘುವೀರನಿರ್ಮಾಪಕರು: ಧೇನು ಅಚ್ಚಪ್ಪ
ನಿರ್ದೇಶನ: ಸೂರ್ಯಸತೀಶ್
ತಾರಾಗಣ: ಹರ್ಷ, ಧೇನು ಅಚ್ಚಪ್ಪ, ಸ್ವಾಮಿನಾಥನ್, ರೋಬೋ ಗಣೇಶ್, ಮೈತ್ರಿ ಜಗದೀಶ್, ಗಜೇಂದ್ರ, ಅಂಜಲಿ, ಅಪೂರ್ವ ಶ್ರೀ, ಚಿಕ್ಕಹೆಜ್ಜಾಜಿ ಮಹದೇವ್ ಇತರರು. * ವಿಜಯ್ ಭರಮಸಾಗರ