Advertisement
ನನ್ನ ಬಾಲ್ಯದಲ್ಲಿ ಹಳ್ಳಿ ಮನೆಗಳು ಒಂದು ಮ್ಯೂಸಿಯಂ ಇದ್ದ ಹಾಗೆ. ಬಹುಪಾಲು ಪರಿಕರಗಳು ಆ ಮನೆಯ ಮಾಡಿಗೆ ಜೋತು ಬೀಳುತ್ತಿದ್ದವು. ನೊಗ, ನೇಗಿಲು, ಬೀಜ, ಕತ್ತಿ, ಮುಟ್ಟಾಳೆ, ಹಲಗೆ, ಕೊಟ್ಟು – ಪಿಕ್ಕಾಸು ಇನ್ನೂ ಏನೇನೋ. ಮನೆಗೋ – ಚಾವಡಿಗೋ ಒಂದು ಸುತ್ತು ಬಂದರೆ ಇಡೀ ಕೃಷಿಜಗತ್ತು ಅನಾವರಣಗೊಳ್ಳುತ್ತಿತ್ತು. ಎಲ್ಲವೂ ಆ ಮನೆ-ನೆಲದಲ್ಲಿ ಬದುಕುವವರ ಜೀವಭಾಗಗಳೇ.
Related Articles
“ಗುಬ್ಬಚ್ಚಿ ಕೊರತೆಯನ್ನು ಮೊಬೈಲ್ ತರಂಗಗಳಿಗೆ ಆರೋಪಿಸಿದ ವಿಜ್ಞಾನದ ಬಗ್ಗೆ ನನಗೆ ಅನುಮಾನವಿತ್ತು. ಶುದ್ಧ ಸುಳ್ಳು, ನಮ್ಮೂರಿನಲ್ಲಿ ಮೊಬೈಲ್ ಟವರ್ ಮೇಲೆಯೇ ಗುಬ್ಬಚ್ಚಿ ಗೂಡು ಕಟ್ಟಿದೆ. ಅವುಗಳ ಸಾವಿಗೆ ಟವರ್-ವಿಜ್ಞಾನ ಕಾರಣವಲ್ಲ. ಕೃಷಿನಾಶ, ಮುಖ್ಯವಾಗಿ ಹೊಲ-ಗದ್ದೆ, ಧಾನ್ಯ-ಕಿರುಧಾನ್ಯಗಳ ನಾಶವೇ ಹೊರತು ಬೇರೇನೂ ಅಲ್ಲ ‘ ಎನ್ನುವ ಆರ್.ಜಿ. ತಿಮ್ಮಾಪುರ ಧಾರವಾಡದವರು. ತಮ್ಮ ಮನೆಯಲ್ಲೇ ಗುಬ್ಬಚ್ಚಿ ಜೋಡಿಗಳನ್ನು ಇಟ್ಟುಕೊಂಡು ಮೊಟ್ಟೆ ಇಡಿಸಿ ಮರಿ ಮಾಡಿಸಿ ಈವರೆಗೆ ನಲ್ವತ್ತಕ್ಕಿಂತಲೂ ಹೆಚ್ಚು ಬಾರಿ ಆ ಮರಿಗಳನ್ನು ಬೇಕಾದವರಿಗೆ, ನಿಸರ್ಗಕ್ಕೆ ಮರು ಸಮೀಕರಣಗೊಳಿಸಿದವರು. ಕಳೆದ ಮೂರು-ನಾಲ್ಕು ದಶಕಗಳಲ್ಲಿ ಗುಬ್ಬಚ್ಚಿ ಸಂತತಿಯ ಪುನರುತ್ಥಾನಕ್ಕೆ ಪಕ್ಷಿ- ಪರಿಸರ ಕ್ಷೇಮವಾಗಿ ಅವರು ಮಾಡುತ್ತಿರುವ ಕಾರ್ಯ ಅದ್ಭುತ.
Advertisement
ತಮ್ಮ ಮನೆಯನ್ನೇ ಗುಬ್ಬಚ್ಚಿಗಳಿಗೆ ಬಿಟ್ಟುಕೊಟ್ಟ ತಿಮ್ಮಾಪುರರದು ಬರೀ ಅದೊಂದೇ ಅಲ್ಲ, ಬಾನಾಡಿಗಳ ಬಗ್ಗೆ ಮೂಡಿಸಿದ ಜಾಗೃತಿ, ಮಾಡಿರುವ ಅಧ್ಯಯನ ಕಡಿಮೆಯಲ್ಲ. ಸುದೀರ್ಘ ಕಾಲ ಶಿಕ್ಷಕರಾಗಿದ್ದ ಕಾರಣ ಒಂದು ವಿದ್ಯಾರ್ಥಿ ಪಡೆಯನ್ನೇ ಇದಕ್ಕಾಗಿ ಸಿದ್ಧಗೊಳಿಸಿದ್ದಾರೆ. ಅವರು ಬಹುಕಾಲ ಹಿಡಕಲ್ ಡ್ಯಾಂ ಪಕ್ಕನೇ ಶಾಲಾ ಮೇಸ್ಟ್ರರಾಗಿದ್ದ ಕಾರಣ ಅಲ್ಲಿದ್ದ ದ್ವೀಪಗಳಿಗೆ ಬೇರೆ ದೇಶಗಳಿಂದ ಬರುತ್ತಿದ್ದ ಪಕ್ಷಿಗಳನ್ನು ಅವುಗಳ ಜೀವನ ಕ್ರಮಗಳನ್ನು ಗಮನಿಸುತ್ತಿದ್ದರು. ಸಲೀಂ ಆಲಿಯವರ ಪುಸ್ತಕ ಓದಿ ಸ್ಥಳೀಯ ಪಕ್ಷಿ ಪ್ರೇಮಿ ಡಾ| ಜೆ.ಪಿ. ಉತ್ತಂಗಿಯವರ ಸಹಾಯದಿಂದ ಚಳಿಗಾಲದ ವಲಸೆ ಹಕ್ಕಿಗಳ ಬಗ್ಗೆ ಅವರು ಅಧ್ಯಯನ ಮಾಡಿದ್ದೂ ಇದೆ. ದಕ್ಷಿಣ ಆಫ್ರಿಕಾ, ಯುರೋಪಿನ ಅನೇಕ ಪಕ್ಷಿಗಳು ಚಳಿಗಾಲದಲ್ಲಿ ಹಿಡಕಲ್ ಡ್ಯಾಂಗೆ ನೂರಾರು ಸಂಖ್ಯೆಯಲ್ಲಿ ಪ್ರತಿವರ್ಷ ವಲಸೆ ಬರುತ್ತಿದ್ದವು. ಈ ಸಂದರ್ಭದಲ್ಲಿ ಇವರ ಕುತೂಹಲಕ್ಕೆ ಮೈಸೂರಿನ ಮ್ಯಾನ್ ಸಂಸ್ಥೆ ನೇರವಾದದ್ದೂ ಇದೆ.
ಡ್ಯಾಂ ನೀರಿನ ಹಿನ್ನೀರಿನಲ್ಲಿ ಮುಳುಗಡೆಯಿಂದ ಸೃಷ್ಟಿಯಾದ ಪುಟ್ಟಪುಟ್ಟ ದ್ವೀಪಗಳಲ್ಲಿದ್ದ ಹಕ್ಕಿಗಳನ್ನು ಅವುಗಳ ಮರಿ-ಮೊಟ್ಟೆಗಳನ್ನು ಸ್ಥಳೀಯ ಬೀಡಾಡಿ ನಾಯಿ, ನರಿಗಳು, ಅಟ್ಟಾಡಿಸಿ, ಹುಡುಕಿ ಹುಡುಕಿ ತಿನ್ನುವಾಗ ತಡೆಯಲಾಗುತ್ತಿರಲಿಲ್ಲ. ಅದೇ ದಾರಿಯಲ್ಲಿ ಶಾಲೆಗೆ ಹೋಗುತ್ತಿದ್ದ ಈ ಇಂಗ್ಲಿಶ್ ಮೇಷ್ಟ್ರು ಪಕ್ಷಿಬೇಟೆಯನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದರು. ತಮ್ಮ ವಿದ್ಯಾರ್ಥಿಗಳನ್ನೇ ಆಯ್ದು ನಾಲ್ಕು ನಾಲ್ಕು ಮಕ್ಕಳ ಮೂರು ಟೀಮ್ ಮಾಡಿ ರಾತ್ರಿ ಹಗಲು ಕಾವಲು ಹಾಕಿದರು. ವಲಸೆ ಹಕ್ಕಿಗಳು ಬಂದು ವಾಪಸು ಹೋಗುವವರಗೆ ಈ ಪಕ್ಷಿಪಡೆ ನಿರಂತರ ನಿಗಾ ಇಟ್ಟು ದೇಶೀ-ವಿದೇಶೀ ಹಕ್ಕಿಗಳಿಗೆ ರಕ್ಷಣೆ ನೀಡಿತು. “”ಒಂದು ಸಲ ಪಕ್ಷಿಗಳ ಮೇಲೆ ಮನುಷ್ಯ ಮನಸ್ಸು ಕೇಂದ್ರೀಕೃತಗೊಂಡರೆ ಮುಂದೆ ಅವುಗಳ ರಕ್ಷಣೆ, ಜಾಗೃತಿ ಅನಿವಾರ್ಯವಾಗುತ್ತದೆ. ಕಾರಣ ಅವುಗಳ ಸಾವನ್ನು ನೋಡಲಾಗುವುದಿಲ್ಲ” ಎನ್ನುತ್ತಾರೆ ತಿಮ್ಮಾಪುರ.
ಪಕ್ಷಿಗಳು ವಲಸೆ ಬಂದು ಕೂತ ದ್ವೀಪ, ನಡುಗಡ್ಡೆಯ ಸುತ್ತ ಕ್ಯಾಸೆಟ್ ರೀಲುಗಳನ್ನು ಕಟ್ಟುವುದು, ರಾತ್ರಿ ಬೆಂಕಿ ಹಾಕುವುದು ಇತ್ಯಾದಿಗಳನ್ನು ಮಾಡುತ್ತ¤ ನಾಯಿನರಿಗಳಂಥ ಹಿಂಸೃಕಗಳಿಂದ ಪಕ್ಷಿಗಳನ್ನು ಕಾಪಾಡುವಲ್ಲಿ ಭಾಗಿಗಳಾದ ವಿದ್ಯಾರ್ಥಿ ದಳದಲ್ಲಿ ಕುರುಬರ ಮಕ್ಕಳೇ ಹೆಚ್ಚು. ಸುಮಾರು ನಲ್ವತ್ತು ದಿನ ಅಂದರೆ ಏಪ್ರಿಲ್ ಹತ್ತರಿಂದ ಮೇ 20ರವರೆಗೆ ಸ್ಥಳೀಯ ಕುರುಬರ ಮಕ್ಕಳು ಪಕ್ಷಿ ರಕ್ಷಣೆಯನ್ನು ಮೇಸ್ಟ್ರ ಅಣತಿಯಂತೆ ಮಾಡಿ ತೃಪ್ತರಾಗುತ್ತಿದ್ದರು. ಬರೀ ದೂರದೇಶದ ವಲಸೆ ಹಕ್ಕಿಗಳನ್ನಷ್ಟೇ ಅಲ್ಲ, ಸ್ಥಳೀಯ ರೈತರು ವಿಷವಿಟ್ಟು ಸಾಯಿಸುವ ನವಿಲು, ಬುಲ್‌ಬುಲ್‌ಗಳನ್ನು ಕಾಪಾಡುವ ಜವಾಬ್ದಾರಿಯೂ ಇವರಿಗಿತ್ತು. ಆ ಭಾಗದಲ್ಲಿ ಗೀಜಗಗಳಿಗೂ ಮನುಷ್ಯನಿಂದ ತೊಂದರೆಯಿತ್ತು. ಎಷ್ಟೋ ನವಿಲು, ಬುಲ್‌ಬುಲ್‌ಗಳನ್ನು ರಾತ್ರಿಯಿಡೀ ಉಪಚರಿಸಿ, ಔಷಧಿ ಹಚ್ಚಿ ಬೆಳಿಗ್ಗೆ ಕಾಡಿಗೆ ಬಿಟ್ಟದ್ದು ಇದೆ. ಈ ವಿದ್ಯಾರ್ಥಿ ಪಡೆಯಲ್ಲಿ ಬಹಳಷ್ಟು ಮಂದಿ ಮುಂದೆ ಪಕ್ಷಿಪ್ರೇಮಿಯಾಗಿ, ತಜ್ಞರಾಗಿ ಬದಲಾದುದು, ಊರು ಬಿಟ್ಟರೂ ಮೇಷ್ಟ್ರು ಕಲಿಸಿದ ಪಕ್ಷಿಪಾಠವನ್ನು ಮರೆಯದೆ ಮುಂದುವರಿಸಿದವರೂ ಇದ್ದಾರೆ. ಇದೇ ಗುಂಪಿನಲ್ಲಿ ಪಳಗಿದ ನಿರಂಜನ ಮುಂದೆ ಶಾಲಾ-ಕಾಲೇಜುಗಳಿಗೆ ಹೋಗಿ ಸುಮಾರು ಇನ್ನೂರಕ್ಕಿಂತಲೂ ಹೆಚ್ಚು ಕಡೆ ಬಾನಾಡಿ ಬದುಕು ಬಗ್ಗೆ ಸ್ಲೆ„ಡ್‌ಶೋ ಮಾಡಿದ್ದಾರೆ. ಹೈಸ್ಕೂಲ್-ಪ್ರೈಮರಿಗಳಲ್ಲಿ ತಿಮ್ಮಾಪುರರಂಥ ಮೇಷ್ಟ್ರುಗಳಿದ್ದರೆ ಅಂಥ ಶಾಲೆ-ಊರುಗಳಿಂದ ಸಹಜವಾಗಿಯೇ ಗುರುರೂಪಿ ಶಿಷ್ಯರು ಹುಟ್ಟಿಯೇ ಹುಟ್ಟುತ್ತಾರೆ!
ಸಾವಿರ ವರ್ಷಗಳ ಹೊರಗೆಇರಲಿ, ಮತ್ತೆ ಗುಬ್ಬಿ ಕಡೆ ಬರೋಣ. ನಾವಿಂದು ಮುಟ್ಟಿರುವ ನವನಾಗರಿಕತೆಯ ಆಚೆ ಗುಬ್ಬಿಯ ಚರಿತ್ರೆಯನ್ನು ತಿಮ್ಮಾಪುರ ಸುಮಾರು ಎಂಟು ಸಾವಿರ ವರ್ಷ ಹಿಂದಕ್ಕೆ ಒಯ್ಯುತ್ತಾರೆ. ಕೃಷಿಯ ಆರಂಭ, ವಲಸೆ ತಪ್ಪಿ ಕೃಷಿಯಲ್ಲಿ ಸುಸ್ಥಿರತೆ, ಮನುಷ್ಯ ಕೃಷಿಯ ಆವಾರದಲ್ಲೇ ಗುಡಿಸಲು ಕಟ್ಟಿಕೊಂಡದ್ದು, ಮಣ್ಣಿನಗೋಡೆ, ಹುಲ್ಲಿನ ಮಾಡು, ಅದೇ ಹುಲ್ಲಿನ ಧಾನ್ಯ ಆಹಾರವಾಗಿ ಮತ್ತೆ ಅದೇ ಹುಲ್ಲು ಮನೆಯ ಛಾವಣಿಗೆ ಮನುಷ್ಯ ಬಳಸಿಕೊಂಡದ್ದು, ಅದೇ ಹುಲ್ಲಿನಿಂದ ಧಾನ್ಯ-ಆಹಾರ ಮತ್ತು ಅದೇ ಹುಲ್ಲುಕಡ್ಡಿಯಿಂದ ಗುಬ್ಬಚ್ಚಿ ಕೂಡ ಮನುಷ್ಯ ಆಸರೆಯೊಳಗಡೆಯೇ ಗೂಡು ಕಟ್ಟಿಕೊಂಡದ್ದು ಒಂದಕ್ಕೊಂದು ಕೊಂಡುಕೊಳ್ಳುವಂತಹದು. ನಾಲ್ಕೈದು ದಶಕಗಳ ಗುಬ್ಬಿ ಸಂಬಂಧದಿಂದ ತಿಮ್ಮಾಪುರ್ ಈಗ ಅವುಗಳ ಚೊಚ್ಚಲ ಹೆರಿಗೆಯಿಂದ ಹಿಡಿದು ಅವುಗಳ ಪರಸ್ಪರ ಆಚರಿಸುವ ಅಸ್ಪೃಶ್ಯತೆಯವರೆಗೆ ವಿವರಿಸಬಲ್ಲರು. ಈಗಿನದು ನವನಾಗರಿಕತೆ. ಹಳ್ಳಿಚಿತ್ರಗಳು ಬದಲಾಗಿವೆ. ಮಣ್ಣಿನ ಗೋಡೆ, ಹುಲ್ಲು-ಸೋಗೆಯ ಮನೆಗಳಿಲ್ಲ. ಮನೆಯೆದುರು ಗದ್ದೆ, ಹೊಲ-ಬಯಲುಗಳಿಲ್ಲ. ಅಂಗಳದಲ್ಲಿ ಧಾನ್ಯ-ಹುಲ್ಲಿನ ರಾಶಿಯಲ್ಲ. ಎಲ್ಲವೂ ಸಿಮೆಂಟುಗೂಡುಗಳು. ಕಾಂಕ್ರೀಟ್ ಕಾಡುಗಳು, ಗುಬ್ಬಚ್ಚಿ ಕುಡಿಯುವ, ಸ್ನಾನ ಮಾಡುವ ಬಚ್ಚಲು ಮನೆಯ ನೀರಿಗೆ ಶ್ಯಾಂಪೂ – ಸಾಬೂನು ಸೇರಿದೆ. ಕಿರುಧಾನ್ಯಗಳಿಲ್ಲ. ಶುದ್ಧ ನೀರಿಲ್ಲ. ಗೂಡು ಕಟ್ಟಲು ಬಿದಿರುಜಂತಿಗಳಿಲ್ಲ. ಪ್ರೀತಿ, ಕಾಳಜಿ ಇದ್ದರೆ ಕೆಲವೊಮ್ಮೆ ಇಂಥ ಚಿತ್ರಗಳು ಬದಲಾಗುವುದಿಲ್ಲ. ಎಲ್ಲಿಂದಲೋ ಕಾಳು ತಂದು, ಕಾಂಕ್ರೀಟ್ ಮನೆಯಲ್ಲೇ ಕೃತಕಗೂಡು ಕೂರಿಸಿ ಗುಬ್ಬಚ್ಚಿಗಳನ್ನು ಬದುಕಿಸಬಹುದು, ಅವುಗಳ ಸಂತತಿ ಮುಂದುವರಿಯಬಹುದು ಎಂಬುದಕ್ಕೆ ತಿಮ್ಮಾಪುರ್ ಮನೆಯೇ ಸಾಕ್ಷಿ. ಇವರ ಮನೆಯಲ್ಲಿ ಏಳೆಂಟು ಗೂಡುಗಳಿವೆ. ಗುಬ್ಬಿ ಸಂಗಾತಿಗಳು ಹುಡುಕಿಕೊಂಡು ಬರುತ್ತವೆ. ಮೊಟ್ಟೆಯಿಡುತ್ತವೆ. ಮರಿ ಮಾಡುತ್ತವೆ. ಬೇಕಾದಾಗ ಎತ್ತಲೋ ಹೋಗುತ್ತವೆ. ಮತ್ತೆ ಮತ್ತೆ ಬರುತ್ತವೆ. ಅವುಗಳ ಮನಸ್ಸಿನಲ್ಲಿ ತಿಮ್ಮಾಪುರ ವಿಳಾಸ ಗಟ್ಟಿಯಾಗಿ ಅಚ್ಚಾಗಿದೆ. ಈ ಮನೆಯೊಳಗಡೆ ಅವುಗಳಿಗೆ ಮನುಷ್ಟ ಸೃಷ್ಟಿಸಿದ ಬೆಚ್ಚನೆಯ ಸುಖವಿದೆ. ಶುದ್ಧ ನೀರಿದೆ. ಕಾಳು ಇದೆ. ಎಲ್ಲದರಕ್ಕಿಂತ ಹೆಚ್ಚಾಗಿ ಪ್ರೀತಿಯಿದೆ. ಈಗ ಮೂರು ಜೋಡಿಗಳು ಸಂಸಾರ ಮಾಡುತ್ತಿವೆ. ಇದೇ ಕಾಳಜಿ,ಗುಬ್ಬಿ ಪ್ರೀತಿ ಇವರ ಮಗಳ ಮನೆಗೂ ಮುಂದುವರಿದಿದೆ. ‘ಗುಬ್ಬಿ ನಾಶ ಆಗಿದೆ ಎಂಬುದು ಸರಿಯಲ್ಲ. ದೂರ ಗೆಳೆಯರೊಬ್ಬರಿಗೆ ಗುಬ್ಬಿಗೂಡು ಮಾಡಿಕೊಟ್ಟೆ. ಅಲ್ಲಿ ಗೂಡು ಜೋಡಿಸಿ ಬರೀ ಒಂದು ಗಂಟೆಯೊಳಗಡೆ ಗುಬ್ಬಿ ಬಂತು. ನಮ್ಮೂರ ಮಠದಲ್ಲಿ ಎಂಟು ಗೂಡುಗಳಿವೆ. ಅಲ್ಲೂ ಗುಬ್ಬಿ ಸಂಸಾರವಿದೆ’ ಎನ್ನುವ ತಿಮ್ಮಾಪುರರ ಮಗನ ಮದುವೆ ದಿನ ಮೂರುಗೂಡುಗಳನ್ನು ಹಂಚಿದ್ದಾರೆ. ಸಂಶೋಧಕ, ದಿವಂಗತ ಎಂ.ಎಂ. ಕುಲಬುರ್ಗಿ ಕೂಡ ಇವರಿಂದ ಗುಬ್ಬಿಗೂಡು ಒಯ್ದಿದ್ದರು. ಎಲ್.ಎಲ್. ಕುಲಕರ್ಣಿ ಎಂಬವರು ತಿಮ್ಮಾಪುರ ಕೈಯಿಂದ ನೂರುಗೂಡು ಮಾಡಿಸಿ ಹಂಚಿದರು. ಸ್ಥಳೀಯ ಶಾಸಕರೂ ಎರಡು ಗೂಡು ಒಯ್ದಿದ್ದಾರೆ. ಹೀಗೆ ತಿಮ್ಮಾಪುರರಿಂದ ಗುಬ್ಬಿಕ್ರಾಂತಿ ಒಂದು ಚಳುವಳಿಯಾಗಿ ಮುಂದುವರಿದಿದೆ. ಯಾವುದೇ ಕಾರ್ಯಕ್ರಮ ಮುಖಾಮುಖೀ ಇರಲಿ ತಿಮ್ಮಾಪುರ್ ಅಲ್ಲಿ ಗುಬ್ಬಿಪಾಠ ಮಾಡಿಯೇ ಮಾಡುತ್ತಾರೆ. ಈವರೆಗೆ 44 ಬಾರಿ ಮರಿ ಮಾಡಿಸಿ ಸುಮಾರು 80ಕ್ಕಿಂತಲೂ ಹೆಚ್ಚು ಮರಿಗಳನ್ನು ಪ್ರಕೃತಿಗೆ ಬಿಟ್ಟು ಊರೊಳಗೆ ಗುಬ್ಬಿ ತುಂಬಿಸಿದ ತಿಮ್ಮಾಪುರರ ಹಕ್ಕಿಕಥೆ ಬೇರೆಯವರಿಗೂ ಮಾದರಿಯಾಗಲಿ. ನರೇಂದ್ರ ರೈ ದೇರ್ಲ