Advertisement

ಹೊಟ್ಟೆ ಸೇರಿದ ಕಾಪಿ ಚೀಟಿಯ ಕಥೆ

03:45 AM Jul 04, 2017 | Harsha Rao |

1986 ರಲ್ಲಿ ನಾನು ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಬರೆಯುತ್ತಾ ಇದ್ದೆ.  ಸಾಮಾಜಿಕ ಅಭ್ಯಾಸ ವಿಷಯದ  ಮಹತ್ವದ ಇಸವಿಗಳನ್ನು ಒಂದು ಸಣ್ಣ ಹಾಳೆಯಲ್ಲಿ ಬರೆದುಕೊಂಡಿದ್ದೆ. ಪರೀಕ್ಷೆ ಶುರುವಾಯಿತು. ಯಾರಾದರೂ ಕಾಪಿ ಚೀಟಿ ತಂದಿದ್ದರೆ ಅದನ್ನು ಬಿಸಾಡಿ ಎಂದು ಸೂಪರ್‌ವೈಸರ್‌ ಎಚ್ಚರಿಕೆ ನೀಡಿದ್ದರೂ, ಅದನ್ನು ಯಾರೂ ಪಾಲಿಸಿರಲಿಲ್ಲ. ಆಗಲೇ ನಾನೂ ಕಾಪಿ ಮಾಡಿಯಾಗಿತ್ತು. ಪರೀಕ್ಷೆ ಶುರುವಾಗಿ  ಒಂದು ತಾಸಿನ ನಂತರ ಸ್ಕ್ವಾಡ್‌ ಆಗಮಿಸುತ್ತಿದ್ದಾರೆ. ಯಾರ ಬಳಿ ಕಾಪಿ ಇದೆಯೋ ಬೇಗ ಬಿಸಾಕಿ ಬಿಡಿ…! ಎಂದು ಸೂಪರ್‌ವೈಸರ್‌  ಗಾಬರಿಯಿಂದ ಹೇಳಿದರು. ಆ ಮಾತು ಕೇಳಿದ ತಕ್ಷಣ ಎಲ್ಲರೂ ಅವಸರದಿಂದ  ಕಾಪಿ ಚೇಟಿಯನ್ನು ಕಿಟಕಿಯ ಮುಖಾಂತರ ಬಿಸಾಕಿ ತಮ್ಮ ಆಸನಗಳಲ್ಲಿ ಕುಳಿತ‌ರು. 

Advertisement

ನಾನು ಮಾತ್ರ ಎಲ್ಲವನ್ನೂ ಅಚ್ಚರಿಯಿಂದ ನೋಡುತ್ತಿದ್ದೆನೇ ಹೊರತು ನನ್ನ ಬಳಿ ಇರುವ ಕಾಪಿ ಚೀಟಿಯನ್ನು ಎಸೆಯುವ ಧೈರ್ಯ ಮಾಡಲಿಲ್ಲ.  ಕಿಟಕಿಯೂ ಸಹ ನನ್ನಿಂದ ದೂರವೇ ಇತ್ತು. ನನ್ನ ಬಳಿಯಿರುವ ಕಾಪಿ ಚೀಟಿ ಸ್ಕ್ವಾಡ್‌ಗೆ ಸಿಕ್ಕರೆ ಮೂರು ವರ್ಷ ಡಿಬಾರ್‌! ಬಂಧುಬಳಗದವರಿಂದ ಅವಮಾನ, ನಿಂದೆಯನ್ನು ಎದುರಿಸಬೇಕಾಗುತ್ತದೆ ಎಂಬ ಚಿಂತೆ ಆ ಕ್ಷಣ ನನ್ನನ್ನು ಕಾಡತೊಡಗಿತು. ಸೂಪರ್‌ವೈಸರ್‌ ಹೇಳಿದ್ದು ಸತ್ಯವೇ ಆಗಿತ್ತು. ಕೂಡಲೇ ನಮ್ಮ ಹಾಲ್‌ಗೆ ಸ್ಕ್ವಾಡ್‌ ಆಗಮಿಸಿಬಿಟ್ಟರು! ನನ್ನೆದೆಯು ಡವಡವ ಹೊಡೆದುಕೊಳ್ಳಲಾರಂಭಿಸಿತು. ಸ್ಕ್ವಾಡ್‌ ಪ್ರತಿಯೊಬ್ಬರನ್ನು ನಿಲ್ಲಿಸಿ ತಪಾಸಿಸತೊಡಗಿದರು. ಇನ್ನೇನು ನನ್ನ ಸರದಿಯು ಬಂದು ಬಿಡುತ್ತದೆ ಎಂದುಕೊಳ್ಳುತ್ತಿರುವಾಗಲೆ, ಮಿಂಚಿನಂತೆ ಉಪಾಯವು ಹೊಳೆಯಿತು!

ತಕ್ಷಣ  ಕಾಪಿ ಚೀಟಿಯನ್ನು ನುಂಗಿ ನಿಡಿದಾದ ನಿಟ್ಟುಸಿರು ಬಿಟ್ಟಾಗ ಸ್ಕ್ವಾಡ್‌ ನನ್ನನ್ನು ತಪಾಸಿಸತೊಡಗಿದರು. ನನ್ನ ಅದೃಷ್ಟ ಚೆನ್ನಾಗಿತ್ತು. ನಾನು  ಕಾಪಿ ಚೀಟಿ ನುಂಗಿದ್ದು ಸ್ಕ್ವಾಡ್‌ಗೆ ಗೊತ್ತಾಗಲಿಲ್ಲ. ದಯವಿಟ್ಟು ಯಾರೂ ನನ್ನಂತೆ ಮಾಡಲು ಹೋಗಬೇಡಿ. ಏಕೆಂದರೆ ಕಾಪಿ ಚೀಟಿ, ದೊಡ್ಡದಾಗಿದ್ದರೆ ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡು ಉಸಿರು ಕಟ್ಟುವ ಸಂಭವ ಉಂಟು. 

– ರಾಜಕುಮಾರ ಬಿ.ವಗ್ಯಾನವರ, ಬಾಗಲಕೋಟೆ

Advertisement

Udayavani is now on Telegram. Click here to join our channel and stay updated with the latest news.

Next