ಒಂದೂರಿನಲ್ಲಿ ಒಬ್ಬ ಬೆಸ್ತ ವಾಸಿಸುತ್ತಿದ್ದ. ಮೀನುಗಾರಿಕೆ ಮಾಡಿ ಬಂದ ಹಣದಿಂದ ಬದುಕು ಸಾಗಿಸುತ್ತಿದ್ದ. ಒಂದು ದಿನ ಎಂದಿನಂತೆ ಸಮುದ್ರಕ್ಕೆ ಹೋಗಿ ಮೀನಿಗಾಗಿ ಬಲೆ ಬೀಸಿದ. ಎಷ್ಟು ಪ್ರಯತ್ನಿಸಿದರೂ ಒಂದೇ ಒಂದು ಮೀನೂ ಬೆಸ್ತನಿಗೆ ಸಿಗಲಿಲ್ಲ. ಅವನಿಗೆ ಚಿಂತೆಯಾಗತೊಡಗಿತು. “ಇಂದು ಮೀನು ಸಿಗದಿದ್ದರೆ ನನಗೆ ಮತ್ತು ಕುಟುಂಬದ ಹೊಟ್ಟೆಗೆ ತಣ್ಣೀರ ಬಟ್ಟೆಯೇ ಗತಿ’ ಎಂದು ಅಂದುಕೊಳ್ಳುತ್ತಾ ಮತ್ತೆ ಬಲೆ ಬೀಸಿದ. ಆಗಲೂ ಮೀನು ಸಿಗಲಿಲ್ಲ. ಹಲವು ಬಾರಿ ಪ್ರಯತ್ನಿಸಿದರೂ ಬೆಸ್ತನ ಪರಿಶ್ರಮವೆಲ್ಲ ವ್ಯರ್ಥವಾಯಿತು.
ಎಲ್ಲ ಭರವಸೆಯನ್ನೂ ಕಳೆದುಕೊಂಡರೂ ಕೊನೆಯ ಬಾರಿ ಆತ ಬಲೆ ಬೀಸಿ ನೋಡಿದ. ಒಂದೆರಡು ನಿಮಿಷ ಕಳೆದು, ಬಲೆಯನ್ನು ಎಳೆಯತೊಡಗಿದಾಗ, ಅದು ಭಾರವೆನಿಸಿತು. ಬೆಸ್ತನ ಮುಖ ಅರಳಿತು. ಅಬ್ಟಾ, ಕೊನೆಗೂ ನನಗೆ ಒಂದು ಹೊತ್ತಿನ ಊಟಕ್ಕೆ ಸಮಸ್ಯೆಯಾಗಲಿಲ್ಲ. ಭಾರೀ ಮೀನೊಂದು ಬಲೆಗೆ ಬಿದ್ದಂತಿದೆ ಎಂದು ಮನಸ್ಸಿನಲ್ಲೇ ಖುಷಿಪಡುತ್ತಾ ಬಲೆಯನ್ನು ಹೊರತೆಗೆದು ನೋಡುತ್ತಾನೆ- ಅಯ್ಯೋ, ಮೀನೇ ಇಲ್ಲ. ಬದಲಿಗೆ, ಬಲೆಯಲ್ಲಿ ಒಂದು ಹಳೆಯ ಪಿಂಗಾಣಿ¬ಯ ಜಾಡಿಯೊಂದು ಕಾಣುತ್ತಿದೆ. ಅದರ ಮೇಲೆ ಸುಂದರವಾಗಿ ಅಲಂಕರಿಸಿದ ಮುಚ್ಚಳ. ಆದದ್ದಾಗಲಿ, ಒಳಗೆ ಏನಿದೆ ಎಂದು ನೋಡೇ ಬಿಡೋಣ ಎಂದು ಮನಸ್ಸಲ್ಲೇ ಅಂದುಕೊಳ್ಳುತ್ತಾ, ಬೆಸ್ತನು ಆ ಜಾಡಿಯ ಮುಚ್ಚಳ ತೆರೆಯುತ್ತಾನೆ.
ಮುಚ್ಚಳ ತೆರೆಯುತ್ತಿದ್ದಂತೆ, ರಾಕ್ಷಸನೊಬ್ಬ ಗಹಗಹಿಸಿ ನಗುತ್ತಾ ಜಾಡಿಯಿಂದ ಹೊರಬರುತ್ತಾನೆ. ಜಾಡಿಯೊಳಗಿದ್ದ ರಾಕ್ಷಸ ಕ್ಷಣಮಾತ್ರದಲ್ಲಿ ಬೃಹದಾಕಾರ ತಾಳುತ್ತಾನೆ. ನಂತರ, ಬೆಸ್ತನನ್ನು ನೋಡಿ, “ಹಹØಹಾØ… ನನಗೆ ಜಾಡಿಯೊಳಗೆ ಕುಳಿತು ಬಹಳ ಹಸಿವಾಗಿದೆ. ನನಗೆ ಕೂಡಲೇ ಊಟ ಬೇಕು. ಇಲ್ಲದಿದ್ದರೆ ಈಗಲೇ ನಿನ್ನನ್ನು ತಿಂದುಬಿಡುತ್ತೇನೆ,’ ಎನ್ನುತ್ತಾನೆ. ರಾಕ್ಷಸನನ್ನು ನೋಡಿ ನಡುಗುತ್ತಾ ಬೆಸ್ತನು, “ಅಯ್ನಾ, ನಾನೊಬ್ಬ ಬಡವ. ನಾನು ನಿನಗೆ ಏನೂ ಮಾಡುವುದಿಲ್ಲ. ದಯವಿಟ್ಟು ನನ್ನನ್ನು ಕೊಲ್ಲಬೇಡ, ಬಿಟ್ಟುಬಿಡು,’ ಎಂದು ಗೋಗರೆಯುತ್ತಾನೆ. ಆದರೆ, ರಾಕ್ಷಸ ಅದಕ್ಕೆ ಒಪ್ಪುವುದಿಲ್ಲ. ಬೇಗ ಹತ್ತಿರ ಬಾ, ನನಗೆ ಹಸಿವು ತಡೆಯಲಾಗುತ್ತಿಲ್ಲ ಎಂದು ಬೊಬ್ಬಿಡುತ್ತಾನೆ ರಾಕ್ಷಸ.
ಏನು ಮಾಡಬೇಕೆಂದು ಯೋಚಿಸುತ್ತಿರುವಾಗಲೇ ಬೆಸ್ತನಿಗೆ ಒಂದು ಉಪಾಯ ಹೊಳೆಯುತ್ತದೆ. ದೇವರನ್ನು ಮನದಲ್ಲೇ ನೆನೆಯುತ್ತಾ, ರಾಕ್ಷಸನ ಬಳಿ ಹೇಳುತ್ತಾನೆ- “ಸರಿ, ನಾನು ನಿನಗೆ ಆಹಾರವಾಗಲು ಸಿದ್ಧನಿದ್ದೇನೆ. ಆದರೆ, ಅದಕ್ಕೂ ಮೊದಲು ನನ್ನ ಒಂದೇ ಒಂದು ಪ್ರಶ್ನೆಗೆ ನೀನು ಉತ್ತರಿಸಬೇಕು.’
ರಾಕ್ಷಸ ಕೋಪದಿಂದ, “ಆಯ್ತು, ಬೇಗನೆ ಪ್ರಶ್ನೆ ಕೇಳು. ನನಗೆ ಹೆಚ್ಚು ಸಮಯ ಕಾಯಲಾಗದು’ ಎನ್ನುತ್ತಾನೆ. ಅದಕ್ಕೆ ಬೆಸ್ತ, “ಅಲ್ಲಾ, ನೀನೋ ಇಷ್ಟೊಂದು ದೊಡ್ಡ ಗಾತ್ರವಿದ್ದೀಯ. ಆದರೆ, ಅಷ್ಟು ಚಿಕ್ಕ ಜಾಡಿಯೊಳಗೆ ನೀನು ಸೇರಿದ್ದಾದರೂ ಹೇಗೆ? ಇದೇ ನನ್ನ ಪ್ರಶ್ನೆ’ ಎನ್ನುತ್ತಾನೆ.
ಅದಕ್ಕೆ ರಾಕ್ಷಸ, “ಇದೇನಾ ನಿನ್ನ ಪ್ರಶ್ನೆ. ನಾನು ಇಷ್ಟೊಂದು ಬೃಹತ್ ಗಾತ್ರದವನಾಗಿದ್ದರೂ, ಅತ್ಯಂತ ಚಿಕ್ಕದಾಗುವ ಸಾಮರ್ಥ್ಯ ನನ್ನಲ್ಲಿದೆ’ ಎನ್ನುತ್ತಾನೆ. ಆಗ ಬೆಸ್ತ, “ಏನು? ನಿನಗೆ ಅತಿ ಚಿಕ್ಕವನಾಗಿ ಜಾಡಿಯೊಳಗೆ ಕುಳಿತುಕೊಳ್ಳುವಷ್ಟು ಶಕ್ತಿ ಇದೆಯಾ? ನಾನಿದನ್ನು ನಂಬಲಾರೆ’ ಎನ್ನುತ್ತಾನೆ. ಇದರಿಂದ ರಾಕ್ಷಸನಿಗೆ ಇರುಸುಮುರುಸಾಗುತ್ತದೆ. “ನಿನಗೆ ನನ್ನ ಮಾತಿನ ಮೇಲೆ ನಂಬಿಕೆ ಇಲ್ಲದಿದ್ದರೆ, ಇದೋ ನೀನೇ ನೋಡು. ನಾನೀಗ ಪುಟ್ಟ ಗಾತ್ರಕ್ಕೆ ತಿರುಗಿ ಈ ಜಾಡಿಯೊಳಗೆ ಹೇಗೆ ಸೇರಿಕೊಳ್ಳುತ್ತೇನೆ ನೋಡು’ ಎಂದು ಹೇಳುತ್ತಾ ಪುಟಾಣಿ ಗಾತ್ರಕ್ಕೆ ತಿರುಗಿ ಜಾಡಿಯೊಳಗೆ ಹೋಗಿ ಕುಳಿತುಕೊಳ್ಳುತ್ತಾನೆ. ಇದೇ ಸರಿಯಾದ ಸಮಯ ಎಂದುಕೊಳ್ಳುತ್ತಾ ಬೆಸ್ತನು, ಒಂದು ಕ್ಷಣವೂ ವ್ಯರ್ಥ ಮಾಡದೇ ರಾಕ್ಷಸ ಜಾಡಿಯೊಳಗೆ ಇರುವಂತೆಯೇ ಜಾಡಿಯ ಮುಚ್ಚಳ ಹಾಕಿ, ಮತ್ತೆ ಸಮುದ್ರಕ್ಕೆ ಎಸೆಯುತ್ತಾನೆ. ಹೀಗೆ, ತನ್ನ ಬುದ್ಧಿವಂತಿಕೆಯಿಂದ ಬೆಸ್ತನು ಅಪಾಯದಿಂದ ಪಾರಾಗುತ್ತಾನೆ.
ಹಲೀಮತ್ ಸ ಅದಿಯ