“ಹೆಬ್ಬೆಟ್ ರಾಮಕ್ಕ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇಂದು ಚಿತ್ರ ತೆರೆಕಾಣುತ್ತಿದೆ. ನಂಜುಂಡೇಗೌಡ ನಿರ್ದೇಶನದ ಈ ಚಿತ್ರದಲ್ಲಿ ತಾರಾ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಂಜುಂಡೇಗೌಡರು, “ಚಿತ್ರಕ್ಕೆ ಪ್ರಶಸ್ತಿ ಬಂದಿರೋದು ಖುಷಿ ತಂದಿದೆ. ಇನ್ನು ಹಲವು ವಿಭಾಗಗಳಲ್ಲಿ ಚಿತ್ರ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇತ್ತು’ ಎಂದರು.
ಇನ್ನು ಚಿತ್ರ ಬಿಡುಗಡೆಯಾಗುತ್ತಿರುವ ಬಗ್ಗೆ ಖುಷಿ ಹಂಚಿಕೊಳ್ಳುವ ಅವರು, “ನಾನು ಯಾವತ್ತೂ ಸಮಾಜಮುಖೀ ಯೋಚನೆ ಮಾಡುತ್ತೇನೆ. ನಾವು ಮಾಡುವ ಸಿನಿಮಾ ಜನರಿಗೆ ತಲುಪಬೇಕು. ಕೇವಲ ಪ್ರಶಸ್ತಿಗಷ್ಟೇ ಸೀಮಿತವಾಗಬಾರದು. ಆ ನಿಟ್ಟಿನಲ್ಲೇ ನಾನು ನಡೆದುಕೊಂಡು ಬಂದಿದ್ದೇನೆ. ಅದರಂತೆ ಈಗ “ಹೆಬ್ಬೆಟ್ ರಾಮಕ್ಕ’ ಬಿಡುಗಡೆಯಾಗುತ್ತಿದೆ. ಮೈಸೂರು ಟಾಕೀಸ್ ಮೂಲಕ ಜಾಕ್ ಮಂಜು ಅವರು ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ’ ಎಂದರು.
ಚಿತ್ರದಲ್ಲಿನ ತಾರಾ ಅವರ ನಟನೆ, ಎಸ್.ಜಿ. ಸಿದ್ಧರಾಮಯ್ಯನವರ ಸಂಭಾಷಣೆಯ ಬಗ್ಗೆಯೂ ಮಾತನಾಡಿದರು. ಚಿತ್ರದಲ್ಲಿ ನಟಿಸಿದ ತಾರಾ ಅವರಿಗೆ ಒಳ್ಳೆಯ ಪಾತ್ರ ಸಿಕ್ಕ ಖುಷಿ ಇದೆ. ಈ ಚಿತ್ರ ಬಿಡುಗಡೆಯಾದ ನಂತರ ಅವರನ್ನು ಎಲ್ಲರೂ “ಹೆಬ್ಬೆಟ್ ರಾಮಕ್ಕ’ ಎಂದೇ ಕರೆಯುತ್ತಾರೆಂಬ ನಂಬಿಕೆ ಇದೆ. ಅಷ್ಟೊಂದು ಸೂಕ್ಷ್ಮ ಹಾಗೂ ಸಮಾಜದಲ್ಲಿ ಕಾಣಸಿಗುವಂತಹ ಪಾತ್ರವಂತೆ.
ಚಿತ್ರಕ್ಕೆ ಸಂಭಾಷಣೆ ಬರೆದ ಎಸ್.ಜಿ. ಸಿದ್ದರಾಮಯ್ಯ ಅವರಿಗೆ ನಂಜುಂಡೇಗೌಡರು ಮಾಡಿಕೊಂಡು ಪೂರ್ವತಯಾರಿ ಖುಷಿಕೊಟ್ಟಿತಂತೆ. “ಈ ಚಿತ್ರ ನೋಡಿದಾಗ ಅಲ್ಲಿ ನಂಜುಂಡೇಗೌಡರ ಪರಿಶ್ರಮ ಎದ್ದು ಕಾಣುತ್ತದೆ. ಗ್ರಾಮೀಣ ಜಗತ್ತಿನ ಅನಕ್ಷರಸ್ಥ ಮಹಿಳೆಯನ್ನು ಈ ಚಿತ್ರದಲ್ಲಿ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ನಿರೂಪಣೆಯೂ ತುಂಬಾ ಸೊಗಸಾಗಿದೆ. ಚಿತ್ರದ ಸಂಭಾಷಣೆ ಕೇಳಿದಾಗ ಪಾತ್ರಗಳೇ ಸೃಷ್ಟಿಸಿದ ಸಂಭಾಷಣೆಯಂತೆ ಕಾಣುತ್ತದೆ’ ಎಂದು ಚಿತ್ರದ ಬಗ್ಗೆ ಮಾತನಾಡಿದರು.
ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ. “ಚಿತ್ರದ ಸಾಹಿತ್ಯ ಕೇಳಿಯೇ ನಾನು ಥ್ರಿಲ್ ಆಗಿ, ಈ ಚಿತ್ರಕ್ಕೆ ಸಂಗೀತ ನೀಡಲೇಬೇಕೆಂದು ನಿರ್ಧರಿಸಿದೆ. ಈ ಚಿತ್ರದಲ್ಲೊಂದು ಒಳ್ಳೆಯ ಸಂದೇಶವೂ ಇದೆ’ ಎಂದರು. ಚಿತ್ರದಲ್ಲಿ ನಟಿಸಿರುವ ಹನುಮಂತೇಗೌಡ ಅವರು ಕೂಡಾ ಮಾತನಾಡಿದರು. ಚಿತ್ರವನ್ನು ಪುಟ್ಟರಾಜು ನಿರ್ಮಿಸಿದ್ದು, ಒಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ ಎಂದರು.