Advertisement

ಟಾಂಜಾನಿಯಾದ ಕತೆ: ಮೊಲದ ಮನೆ

06:00 AM Jul 22, 2018 | |

ಕಾಡಿನ ಪೊದೆಯೊಂದರಲ್ಲಿ ಒಂದು ಮೊಲದ ಸಂಸಾರ ವಾಸವಾಗಿತ್ತು. ಮೊಲದ ಹೆಂಡತಿ ಪದೇ ಪದೇ, “”ನಾವು ಇನ್ನೂ ಕೂಡ ಪೊದೆಯಲ್ಲಿಯೇ ವಾಸವಾಗಿದ್ದರೆ ಕ್ಷೇಮವಿಲ್ಲ. ನಮಗೆ ಮಕ್ಕಳಾಗಿವೆ. ಮಕ್ಕಳನ್ನು ಪೊದೆಯಲ್ಲಿಯೇ ಬಿಟ್ಟು ಆಹಾರ ತರಲು ಹೋದರೆ ಚಿರತೆಯೋ ನರಿಯೋ ಬಂದು ಕಬಳಿಸಿಕೊಂಡು ಹೋಗುತ್ತವೆ. ಸುರಕ್ಷಿತವಾದ ಒಂದು ಮನೆ ಕಟ್ಟಬೇಕು. ಇಲ್ಲವಾದರೆ ನಾನು ನಿನ್ನನ್ನು ತೊರೆದು ಮಕ್ಕಳೊಂದಿಗೆ ಯಾವುದಾದರೂ ಅಪಾಯವಿಲ್ಲದ ಜಾಗವನ್ನು ಸೇರಿಕೊಳ್ಳುತ್ತೇನೆ” ಎಂದು ಒತ್ತಾಯಿಸುತ್ತಲೇ ಇತ್ತು. ಹೆಂಡತಿಯ ಒತ್ತಾಯಕ್ಕೆ ಮಣಿದು ಗಂಡು ಮೊಲ ಮನೆ ಕಟ್ಟಲು ನಿರ್ಧರಿಸಿತು. ಕುಡಿಯುವ ನೀರು ಮತ್ತು ಧಾರಾಳವಾಗಿ ಹಸಿರು ಸಿಗುವ ಸ್ಥಳವನ್ನು ಹುಡುಕಿ ಕಂಡು ಹಿಡಿಯಿತು. ಅಲ್ಲಿ ಒಂದು ಕಡೆ ಮನೆ ಕಟ್ಟಲು ಬೇಕಾಗುವ ಕಲ್ಲುಗಳು ಮತ್ತು ತೊಲೆಗಳನ್ನು ಯಾರೋ ರಾಸಿ ಹಾಕಿರುವುದು ಕಾಣಿಸಿತು.

Advertisement

    “”ಒಳ್ಳೆಯದೇ ಆಯಿತಲ್ಲ, ನನ್ನ ಮನೆಗೆ ಬೇಕಾಗುವ ವಸ್ತುಗಳನ್ನು ಯಾರೋ ಕೊಡುಗೆಯಾಗಿ ಕೊಟ್ಟಿದ್ದಾರೆ” ಎಂದು ಹೇಳಿಕೊಳ್ಳುತ್ತ ಮೊಲ ತಾನೂ ಆ ರಾಶಿಗೆ ತೊಲೆ ಮತ್ತು ಕಲ್ಲುಗಳನ್ನು ಸೇರಿಸಿ ಮರಳಿ ಬಂದಿತು. ಅಲ್ಲಿ ವಸ್ತುಗಳನ್ನು ತಂದಿಟ್ಟದ್ದು ಒಂದು ಚಿರತೆ. ಅದೂ ಮನೆ ಕಟ್ಟಲು ಸಿದ್ಧತೆ ಮಾಡಿಕೊಂಡಿತ್ತು. ಮರುದಿನ ಚಿರತೆ ಹೋಗಿ ಆರ್ಧ ಪಾಲು ಗೋಡೆ ಕಟ್ಟಿ ಬಂದಿತು. ಬಳಿಕ ಮೊಲ ಹೋಯಿತು. “”ಪರವಾಗಿಲ್ವೇ, ಯಾರೋ ಅರ್ಧ ಗೋಡೆ ಕಟ್ಟಿ ಉಪಕಾರ ಮಾಡಿದ್ದಾರೆ. ಉಳಿದ ಅರ್ಧವನ್ನು ನಾನು ಕಟ್ಟಿ ಮುಗಿಸುತ್ತೇನೆ” ಎನ್ನುತ್ತ ಗೋಡೆಯ ಕೆಲಸವನ್ನು ಪೂರ್ಣಗೊಳಿಸಿತು.

    ಮಾರನೆಯ ದಿನ ಮೊಲ ಹೋಗುವಾಗ ಚಿರತೆ ಅರ್ಧ ಪಾಲು ಛಾವಣಿ ಕಟ್ಟಿ ಹೋಗಿತ್ತು. ಮೊಲ ನೋಡಿ ಖುಷಿಪಟ್ಟಿತು. “”ಪುಣ್ಯಾತ್ಮರು, ಛಾವಣಿಯ ಕೆಲಸದಲ್ಲಿಯೂ ನನಗೆ ಸಹಾಯ ಮಾಡಿದ್ದಾರೆ” ಎನ್ನುತ್ತ ಉಳಿದ ಕೆಲಸವನ್ನು ಪೂರ್ತಿ ಮಾಡಿ ಮುಗಿಸಿತು. ಹೆಂಡತಿಯನ್ನೂ ಮಕ್ಕಳನ್ನೂ ಕರೆದುಕೊಂಡು ಬಂದು ಗೃಹಪ್ರವೇಶ ಮಾಡಿತು. ರಾತ್ರೆ ಎಲ್ಲರೂ ಮಲಗಿರುವಾಗ ಮನೆಯ ಒಂದು ಭಾಗದಲ್ಲಿ ಏನೋ ಕರ್ಕಶ ಸದ್ದು ಕೇಳಿಸಿತು. ಹೆಣ್ಣು ಮೊಲ ಹೋಗಿ ಏನೆಂದು ಪರೀಕ್ಷಿಸಿದಾಗ ಅದಕ್ಕೆ ಒಂದು ಕ್ಷಣ ಉಸಿರೇ ನಿಂತುಹೋಯಿತು. ಚಿರತೆ ಕೂಡ ಮೊಲದ ಹಾಗೆಯೇ ಅದು ತನ್ನ ಮನೆ ಎಂದುಕೊಳ್ಳುತ್ತ ಮನೆಯ ಆ ಭಾಗದಲ್ಲಿ ವಾಸಿಸಲು ಆರಂಭಿಸಿತ್ತು. ಅದರ ಗೊರಕೆಯ ಸದ್ದು ಹೆಣ್ಣು ಮೊಲಕ್ಕೆ ಕೇಳಿಸಿತ್ತು.

    ಹೆಣ್ಣು ಮೊಲ ಓಡಿಬಂದು ಗಂಡನನ್ನು ಕರೆಯಿತು. “”ಎಂತಹ ಅನಾಹುತವಾಗಿದೆ ನೋಡಿದೆಯಾ? ನಾವು ಮನೆ ಕಟ್ಟು ಜಾಗಕ್ಕೆ ಸಲಕರಣೆಗಳನ್ನು ತಂದು ಹಾಕಿದ್ದು ಒಂದು ಚಿರತೆ! ಅದು ನಮಗೆ ಉಪಕಾರ ಮಾಡುವ ಭಾವದಿಂದ ಅಲ್ಲ, ಅದೂ ತನಗೊಂದು ಮನೆ ಬೇಕೆಂದು ಹೀಗೆ ಮಾಡಿದೆ. ಇನ್ನೂ ಇಲ್ಲಿದ್ದರೆ ನಮಗೆ ಉಳಿಗಾಲವಿದೆಯೇ? ಎಲ್ಲಾದರೂ ಪರಾರಿಯಾಗಿ ಜೀವ ಉಳಿಸಿಕೊಳ್ಳೋಣ” ಎಂದು ಆತುರವಾಗಿ ಹೇಳಿತು.

    ಗಂಡು ಮೊಲ ಹೆಂಡತಿಯನ್ನು ಸಮಾಧಾನಪಡಿಸಿತು. “”ಗಡಿಬಿಡಿ ಮಾಡಬೇಡ. ಇದ್ದಕ್ಕಿದ್ದಂತೆ ಹೊರಟುಹೋದರೆ ಇನ್ನೊಂದು ಮನೆ ಕಟ್ಟಲು ಅಷ್ಟು ಸುಲಭವಾಗಿ ಆಗುತ್ತದೆಯೇ? ಇಲ್ಲಿ ಕುಡಿಯಲು ಒಳ್ಳೆಯ ನೀರಿದೆ. ಯಾವಾಗಲೂ ಗೆಡ್ಡೆ, ಗೆಣಸುಗಳು, ಹಸುರೆಲೆಗಳು ಸಮೃದ್ಧವಾಗಿ ದೊರೆಯುತ್ತವೆ. ಓಡಿಹೋಗುವ ಬದಲು ಬುದ್ಧಿವಂತಿಕೆಯಿಂದ ನಮ್ಮ ಹಗೆಯನ್ನು ಇಲ್ಲಿಂದ ಓಡಿಸಿಬಿಡೋಣ. ನೀನು ನನಗೆ ಸ್ವಲ್ಪ$ ಸಹಕರಿಸಿದರೆ ಸಾಕು” ಎಂದು ಧೈರ್ಯ ಹೇಳಿ ಏನು ಮಾಡಬೇಕೆಂಬುದನ್ನು ಗುಟ್ಟಾಗಿ ಕಿವಿಯಲ್ಲಿ ಹೇಳಿತು.

Advertisement

    ಬೆಳಗಾಯಿತು. ಹೆಣ್ಣು ಮೊಲ ಮಕ್ಕಳನ್ನು ಒಂದು ಡಬ್ಬದೊಳಗೆ ಹಾಕಿ, ಜೋರಾಗಿ ಚಿವುಟಿತು. ನೋವು ತಾಳಲಾಗದೆ ಮಕ್ಕಳು ದೊಡ್ಡ ದನಿಯಿಂದ ಅಳತೊಡಗಿದವು. ಡಬ್ಬದೊಳಗಿಂದ ಹೊರಡುವ ದನಿ ಅರ್ಧ ಅರಣ್ಯಕ್ಕೆ ಕೇಳಿಸುವಷ್ಟು ದೊಡ್ಡದಾಗಿತ್ತು. ಅದರಿಂದ ನಿದ್ರಿಸುತ್ತಿದ್ದ ಚಿರತೆಗೆ ಎಚ್ಚರವಾಯಿತು. ತನ್ನ ಮನೆಯೊಳಗಿಂದ ಇಂತಹ ಧ್ವನಿ ಯಾಕೆ ಬರುತ್ತಿದೆ ಎಂದು ವಿಸ್ಮಯಗೊಂಡಿತು. ಆಗ ಗಂಡು ಮೊಲ ಒಂದು ಡಬ್ಬದೊಳಗೆ ಕುಳಿತು, “”ಏನೇ, ಮಕ್ಕಳು ಯಾಕೆ ಅಳುತ್ತಿವೆ?” ಎಂದು ಕೇಳಿತು. “”ನಿಮ್ಮ ಮಕ್ಕಳ ಹಟ ನೋಡಿದಿರಾ? ಅವಕ್ಕೆ ಆನೆಯ ಕರುಳು ತಿನ್ನಬೇಕಂತೆ” ಎಂದಿತು ಹೆಣ್ಣು ಮೊಲ. “”ಆನೆಯ ಕರುಳು ಬೇಕಂತೆಯಾ? ಇರಲಿ ಬಿಡು, ಈ ದಿವಸ ಬೇಟೆಗೆ ಹೋಗಿ ಒಂದು ದೊಡ್ಡ ಆನೆಯನ್ನೇ ಹೊಡೆದು ಹಾಕಿ ಕರುಳನ್ನು ಬಗೆದು ತಂದುಕೊಡುತ್ತೇನೆ” ಎಂದು ಸಮಾಧಾನಪಡಿಸಿತು ಗಂಡು ಮೊಲ.

    ಈ ಮಾತು ಕೇಳಿ ಯಾವುದೋ ಬಲಶಾಲಿ ಜೀವಿ ತನ್ನ ಮನೆಯೊಳಗಿದೆ ಎಂದುಕೊಂಡು ಚಿರತೆಗೆ ಭಯವಾಯಿತು. ಉಸಿರು ಬಿಗಿಹಿಡಿದು ಆ ದಿನ ಮನೆಯ ಒಳಗೆಯೇ ಕುಳಿತಿತು. ಬೇಟೆಯಾಡಲು ಹೊರಗೆ ಬರಲಿಲ್ಲ. ಮರುದಿನ ಬೆಳಗಾಗುವ ಹೊತ್ತಿಗೆ ಮತ್ತೆ ಡಬ್ಬದೊಳಗಿಂದ ಮರಿ ಮೊಲಗಳ ಕೂಗು ಕೇಳಿಸಿತು. ಚಿರತೆಗೆ ಗಂಟಲಿನ ಪಸೆ ಆರಿಹೋಯಿತು. ಗಂಡುಮೊಲ, “”ಮಕ್ಕಳು ಅಳುವುದು ಯಾಕೆ” ಎಂದು ವಿಚಾರಿಸಿತು. ಹೆಣ್ಣುಮೊಲ, “”ನಿನ್ನೆ ಹೊಟ್ಟೆ ತುಂಬ ಆನೆಯ ಕರುಳು ತಿಂದದ್ದು ಸಾಕಾಗಲಿಲ್ಲ ಅನಿಸುತ್ತದೆ. ಇವತ್ತು ಚಿರತೆಯ ಕರುಳು ಬೇಕು ಅಂತ ಹಟ ಹಿಡಿದು ಅಳುತ್ತಿವೆ” ಎಂದಿತು. “”ಚಿರತೆ ತಾನೆ? ಇಲ್ಲೇ ಎಲ್ಲೋ ಚಿರತೆಯ ಮೈಯ ವಾಸನೆ ಬರುತ್ತ ಇದೆ. ಹುಡುಕಿ ಕೊಂದು ಕರುಳನ್ನು ತಂದುಕೊಡುತ್ತೇನೆ” ಎಂದು ಗಂಡುಮೊಲ ಕೂಗಿತು.

    ಈ ಮಾತು ಕೇಳಿದ ಚಿರತೆ ಬದುಕುವ ಭರವಸೆಯನ್ನೇ ಕಳೆದುಕೊಂಡಿತು. ಆನೆಯನ್ನು ಕೊಂದ ಭಯಂಕರ ಪ್ರಾಣಿಗೆ ತನ್ನನ್ನು ಕೊಲ್ಲುವುದು ಏನೂ ಕಷ್ಟವಿಲ್ಲ. ಇಲ್ಲಿಂದ ದೂರ ಓಡಿಹೋಗಿ ಜೀವ ಉಳಿಸಿಕೊಳ್ಳಬೇಕು ಎಂದುಕೊಳ್ಳುತ್ತ ಮನೆಯಿಂದ ಸದ್ದಿಲ್ಲದೆ ಹೊರಟಿತು. ಸ್ವಲ್ಪ$ ಮುಂದೆ ಹೋಗುವಾಗ ಒಂದು ಬಬೂನ್‌ ಎದುರಾಯಿತು. “”ಏನಣ್ಣ, ಹೊಸ ಮನೆ ಕಟ್ಟಿದೆಯಂತೆ, ಗೃಹಪ್ರವೇಶಕ್ಕೆ ನಮ್ಮನ್ನೆಲ್ಲ ಕರೆದು ಔತಣ ನೀಡಬೇಕೋ ಬೇಡವೋ? ಎಂತಹ ಕಂಜೂಷಿ ನೀನು!” ಎಂದು ಆಕ್ಷೇಪಿಸಿತು. “”ಔತಣವಂತೆ ಔತಣ! ನನಗೀಗ ಜೀವ ಹೋಗುವ ಪರಿಸ್ಥಿತಿ ಬಂದಿದೆ. ಯಾವುದೋ ಜೀವಿ ನನ್ನ ಮನೆಯೊಳಗೆ ವಾಸವಾಗಿದೆ. ದಿನಕ್ಕೊಂದು ಪ್ರಾಣಿಯನ್ನು ಕೊಂದು ಅದರ ಕರುಳನ್ನು ಮಕ್ಕಳಿಗೆ ಕೊಡುತ್ತ ಇದೆ. ಇವತ್ತು ನನ್ನ ಸರದಿ ಅನಿಸುತ್ತಿದೆ. ಹಾಗಾಗಿ ಜೀವ ಉಳಿದರೆ ಸಾಕು ಎಂದು ಓಡುತ್ತಿದ್ದೇನೆ” ಎಂದಿತು ಚಿರತೆ.

    ಬಬೂನ್‌ ಈ ಮಾತನ್ನು ನಂಬಲಿಲ್ಲ. “”ಏಕೋ ನನಗೆ ಅನುಮಾನದ ವಾಸನೆ ಹೊಡೆಯುತ್ತ ಇದೆ. ಆನೆಯನ್ನು, ಚಿರತೆಯನ್ನು ಕೊಲ್ಲುವ ಹೊಸ ಪ್ರಾಣಿಯಾದರೂ ಯಾವುದು? ಬಾ, ನಿನ್ನ ಮನೆಗೆ ಹೋಗಿ ನೋಡಿಯೇ ಬಿಡೋಣ” ಎಂದು ಹೇಳಿತು. ಚಿರತೆ ಅದರ ಜೊತೆಗೆ ಬರಲು ಒಪ್ಪಲಿಲ್ಲ. “”ನನಗೆ ಆ ಪ್ರಾಣಿಯ ಧ್ವನಿ ಕೇಳಿಯೇ ಭಯವಾಗಿದೆ. ಇನ್ನು ಅದನ್ನು ನೋಡಿದರೆ ಹಿಂದೆ ಬರಲು ಕಾಲುಗಳೇ ಏಳಲಿಕ್ಕಿಲ್ಲ. ನಿನ್ನ ಬಾಲಕ್ಕೆ ನನ್ನ ಬಾಲವನ್ನು ಗಂಟು ಹಾಕಬೇಕು. ಪ್ರಾಣಿ ಅಸಾಮಾನ್ಯವಾದುದೆಂದು ತೋರಿದರೆ ನನ್ನನ್ನು ಎಳೆದುಕೊಂಡು ಬರಬೇಕು” ಎಂದು ಷರತ್ತು ಹಾಕಿತು. ಬಬೂನ್‌ ಅದಕ್ಕೆ ಒಪ್ಪಿತು. ಅವು ಬಾಲ ಗಂಟು ಹಾಕಿಕೊಂಡು ಮನೆಯ ಬಳಿಗೆ ಹೋದುವು.

    ಮನೆಯೊಳಗಿದ್ದ ಮೊಲ ಬರುತ್ತಿರುವ ಜೋಡಿಯನ್ನು ನೋಡಿತು. ಡಬ್ಬದೊಳಗೆ ಕುಳಿತು, “”ಭಲಾ ಚಿರತೆ, ನಿನಗೆ ಜೀವದಾನ ಮಾಡಲು ಬಬೂನ್‌ ತಂದುಕೊಡುವುದಾಗಿ ಹೇಳಿದ್ದೆಯಲ್ಲವೆ? ಹೇಳಿದ ಮಾತಿನಂತೆಯೇ ತಂದುಕೊಟ್ಟಿದ್ದೀ. ಈಗ ಅದನ್ನು ಕೊಲ್ಲುತ್ತೇನೆ” ಎಂದು ಕೂಗಿತು. ಈ ಕೂಗು ಕೇಳಿದ ಕೂಡಲೇ ಬಬೂನ್‌ ತನ್ನನ್ನು ಚಿರತೆ ಇಲ್ಲಿಗೆ ಮೋಸದಿಂದ ಹೀಗೆ ಕರೆತಂದಿದೆಯೆಂದು ಭಾವಿಸಿತು. ಸರ್ವ ಶಕ್ತಿಯನ್ನೂ ಉಪಯೋಗಿಸಿ ಚಿರತೆಯನ್ನು ಎಳೆದುಕೊಂಡೇ ದಾರಿ ಸಿಕ್ಕಿದತ್ತ ಓಡಿಹೋಯಿತು. ಸುರಕ್ಷಿತವಾದ ಜಾಗ ತಲುಪಿ ಹಿಂತಿರುಗಿ ನೋಡಿದಾಗ ಚಿರತೆ ಸತ್ತೇ ಹೋಗಿತ್ತು. ಮೊಲ ತನ್ನ ಸಂಸಾರದೊಂದಿಗೆ ಸುಖವಾಗಿ ಹೊಸ ಮನೆಯಲ್ಲಿ ಜೀವನ ನಡೆಸಿತು.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next