Advertisement

ರಂತಿದೇವ

03:45 AM Apr 06, 2017 | Harsha Rao |

ಭರತನ ವಂಶದಲ್ಲಿ ರಂತಿದೇವ ಎನ್ನುವವನು ಹುಟ್ಟಿದ. ಅಂತಹ ಚಕ್ರವರ್ತಿಯ ವಂಶದಲ್ಲಿ ಹುಟ್ಟಿದರೆ ಕೇಳಬೇಕೆ? ಹುಟ್ಟಿದಂದಿನಿಂದ ಸಂಪತ್ತು. ಆದರೆ ಅವನು ಎಣೆ ಇಲ್ಲದ ದಾನಶೀಲ. ಅಪಾರ ಸಂಪತ್ತನ್ನೆಲ್ಲ ಇತರರಿಗೆ ದಾನ ಮಾಡಿಬಿಟ್ಟ. ಅವರು ಶ್ರೀಮಂತರಾದರು. ಅವನು ಬಡವನಾದ. ಆದರೆ ಅವನಿಗೆ ಹೀಗಾಯಿತೆಂದು ವಿಷಾದವೇನಿರಲಿಲ್ಲ. ಅವನ ಹೆಂಡತಿ ಮತ್ತು ಮಕ್ಕಳೂ ಅದೇ ಸ್ವಭಾವದವರು. 

Advertisement

ಒಮ್ಮೆ ರಂತಿದೇವ ಮತ್ತು ಅವನ ಸಂಸಾರಕ್ಕೆ ನಲವತ್ತೆಂಟು ದಿನಗಳ ಕಾಲ ಏನೂ ಸಿಕ್ಕಲಿಲ್ಲ. ಕುಡಿಯಲು ನೀರು ಸಹ ಸಿಕ್ಕಲಿಲ್ಲ. ನಲವತ್ತೂಂಭತ್ತನೆಯ ದಿನ ಒಂದಿಷ್ಟು ತುಪ್ಪ ಪಾಯಸ , ಗೋದಿಯ ಅನ್ನ, ಸಿಹಿ ನೀರು ಲಭ್ಯವಾದವು. ಅವನು ಸ್ನಾನ ಮಾಡಿ, ಪೂಜೆ ಮುಗಿಸಿ ಹೆಂಡತಿ ಮತ್ತು ಮಕ್ಕಳೊಡನೆ ಊಟಕ್ಕೆ ಕುಳಿತ. ಆ ಹೊತ್ತಿಗೆ ಬ್ರಾಹ್ಮಣನೊಬ್ಬ ಬಂದ. ಆತನ ಊಟವಾಗಿರಲಿಲ್ಲ. ಹಸಿದಿದ್ದ ರಂತಿದೇವನು ಆ ಬ್ರಾಹ್ಮಣನನ್ನು ಆದರದಿಂದ ಬರಮಾಡಿಕೊಂಡು ತನ್ನ ಪಾಲಿನ ಅನ್ನವನ್ನೂ, ಪಾಯಸವನ್ನೂ ಕೊಟ್ಟ. ಅತಿಥಿಯು ಅವನ್ನು ಸೇವಿಸಿ ಸಂತೋಷಪಟ್ಟ. ರಂತಿದೇವನನ್ನು ಹೊಗಳಿ ಆಶೀರ್ವದಿಸಿ ಹೋದ. ರಂತಿದೇವನೂ, ಅವನ ಹೆಂಡತಿ, ಮಕ್ಕಳೂ ಉಳಿದಿದ್ದನ್ನು ಹಂಚಿಕೊಂಡು ಊಟ ಪ್ರಾರಂಭಿಸುವುದರಲ್ಲಿದ್ದರು. ಶೂದ್ರನೊಬ್ಬನು ಬಾಗಿಲಲ್ಲಿ ನಿಂತು “ತಾಯಿ ಹಸಿವಾಗುತ್ತಿದೆ, ಏನಾದರೂ ಕೊಡಿ’ ಎಂದು ಕೂಗಿದ. ಅದ್ದ ಆಹಾರದಲ್ಲಿ ಅರ್ಧವನ್ನು ಅವನಿಗೆ ಕೊಟ್ಟರು. ಇನ್ನೇನು ಊಟ ಮುಂದುವರಿಸಬೇಕು ಎನ್ನುವಷ್ಟರಲ್ಲಿ ಮತ್ತೂಬ್ಬನು ನಾಲ್ಕು ನಾಯಿಗಳನ್ನು ಕಟ್ಟಿಕೊಂಡು ಬಂದ. “ನಾವೆಲ್ಲ ಹಸಿವೆಯಿಂದ ಸಾಯುತ್ತಿದ್ದೇವೆ. ನನಗೂ ನನ್ನ ನಾಯಿಗಳಿಗೂ ಏನಾದರೂ ಆಹಾರ ಕೊಡಿ’ ಎಂದು ಬೇಡಿದ. ಇದ್ದದನ್ನೆಲ್ಲ ಅವನಿಗೆ ಕೊಟ್ಟರು. ಇರುವ ನೀರನ್ನು ಕುಡಿಯಬೇಕು ಎನ್ನುವಷ್ಟರಲ್ಲಿ ಒಬ್ಬ ಹಿಂದುಳಿದ ಪಂಗಡಕ್ಕೆ ಸೇರಿದವನೊಬ್ಬ “ಅಯ್ಯೋ ನೀರಡಿಕೆ. ಪ್ರಾಣ ಹೋಗುತ್ತಿದೆ. ನೀರು ಕೊಡಿ’ ಎಂದು ಅಂಗಲಾಚಿದ. ರಂತಿದೇವನು ಇದ್ದ ನೀರನ್ನೂ ಕೊಟ್ಟು ಕೈ ಮುಗಿದ. ಆತ ನೀರು ಕುಡಿದ.

ಮರುಕ್ಷಣ ಅವನು ಬ್ರಹ್ಮನಾಗಿ ರಂತಿದೇವನ ಮುಂದೆ ನಿಂತ. ನಾಯಿಗಳನ್ನು ಕರೆತಂದಿದ್ದವನು ದತ್ತಾತ್ರೇಯ. ಮೊದಲು ಬಂದ ಬ್ರಾಹ್ಮಣ ಇಂದ್ರ. ಆನಂತರ ಬಂದ ಶೂದ್ರ ಅಗ್ನಿ. ರಂತಿದೇವನೂ, ಅವನು ಹೆಂಡತಿ ಮಕ್ಕಳೂ ಅವರಿಗೆ ಭಕ್ತಿಯಿಂದ ಸಾಷ್ಟಾಂಗವೆರಗಿದರು. ಅವರಿಂದ ಏನನ್ನೂ ಬೇಡಲಿಲ್ಲ. ರಂತಿದೇವನಿಗೆ ಮತ್ತು ಅವನ ಸಂಸಾರದವರಿಗೆ ಮೋಕ್ಷ ದೊರೆಯಿತು.

– (ಪ್ರೊ. ಎಲ್‌. ಎಸ್‌. ಶೇಷಗಿರಿರಾವ್‌ ಅವರ “ಕಿರಿಯರ ಭಾಗವತ’ ಪುಸ್ತಕದಿಂದ)

Advertisement

Udayavani is now on Telegram. Click here to join our channel and stay updated with the latest news.

Next