“ನೀವು ಕರೆಮಾಡಿದ ಚಂದದಾರರು ಬಿಝಿಯಾಗಿದ್ದಾರೆ’ – ಹೀಗೊಂದು ಶೀರ್ಷಿಕೆಯ ಸಿನಿಮಾ ಈಗಾಗಲೇ ಸೆಟ್ಟೇರಿದೆ. ಈಗ ಆ ಶೀರ್ಷಿಕೆಯನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡ ಮತ್ತೂಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿಯೇಬಿಟ್ಟಿದೆ. ಅದು “ನೀವು
ಕರೆಮಾಡಿದ ಚಂದದಾರರು’. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು.
ಟ್ರೇಲರ್ ಬಿಡುಗಡೆಗೆ ಅತಿಥಿಯಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಬಂದಿದ್ದರು. ಚಿತ್ರದ ನಿರ್ಮಾಪಕರ ಸಿನಿಮಾ ಪ್ರೀತಿ, ಹೀರೋನಾ ನೋಡದೆಯೇ ಸಿನಿಮಾ ಮುಗಿಸಿದ ರೀತಿಯ ಬಗ್ಗೆ ಮಾತನಾಡುತ್ತಾ ಚಿತ್ರಕ್ಕೆ ಶುಭಕೋರಿದರು. ಅಂದಹಾಗೆ, ಮೋನಿಶ್ ಈ ಚಿತ್ರದ ನಿರ್ದೇಶಕ. ಸನತ್ ಕುಮಾರ್ ನಿರ್ಮಾಪಕರು. ನಿರ್ಮಾಪಕರು ಕಥೆ ಹಾಗೂ ನಿರ್ದೇಶಕರ ಮೇಲೆ ಸಂಪೂರ್ಣ ನಂಬಿಕೆಯಿಂದ ಸಿನಿಮಾ ಮಾಡಲು ಒಪ್ಪಿದರಂತೆ. ಚಿತ್ರದ ಹೀರೋ ಯಾರೂ ಎಂದು ಕೇಳದೇ ಸಿನಿಮಾ ಮಾಡಿದ ಅವರಿಗೆ, ತಮ್ಮ ಚಿತ್ರದ ಹೀರೋ ಪರಿಚಯವಾಗಿದ್ದು ಕೂಡಾ ಟ್ರೇಲರ್ ರಿಲೀಸ್ ದಿನವಂತೆ. ಇನ್ನು, ಒಂದೇ ಬಗೆಯ ಶೀರ್ಷಿಕೆ ಇಟ್ಟ ಬಗ್ಗೆ ಮಾತನಾಡಿದ ಅವರು, “ನಮ್ಮ ಕಥೆಗೂ ಆ ಚಿತ್ರದ ಕಥೆಗೂ ಸಂಬಂಧವಿಲ್ಲ. ಆರಂಭದಲ್ಲಿ ನಾಟ್ ರಿಚಬಲ್, ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಎಂಬ ಟೈಟಲ್ ಇಡಲು ಯೋಚಿಸಿದೆವು. ಆದರೆ, ಅಂತಿಮವಾಗಿ “ನೀವು ಕರೆಮಾಡಿದ ಚಂದದಾರರು’ ಎಂದಿಟ್ಟಿದೇವೆ. ಚಂದದಾರರು ಏನಾಗಿದ್ದಾರೆಂಬುದನ್ನು ಹೇಗೆ ಬೇಕಾದರೂ ಯೋಚಿಸಬಹುದು’ ಎಂದು ಸಿನಿಮಾ ಬಗ್ಗೆ
ಹೇಳಿದರು.
ಚಿತ್ರದ ನಾಯಕ ದಿಲೀಪ್ ರಾಜ್ ಈ ಸಿನಿಮಾ ಮಾಡಲು ಕಾರಣ ಮೋನಿಶ್. ಏಕೆಂದರೆ, ಮೋನಿಶ್ ಬೇರಾರೂ ಅಲ್ಲ, ದಿಲೀಪ್ ರಾಜ್ ಅವರ ಅಕ್ಕನ ಮಗ. “ಮೋನಿಶ್ ನನ್ನ ಅಕ್ಕನ ಮಗ. 20 ವರ್ಷಗಳ ಹಿಂದೆ ನಾನು ಸಿನಿಮಾ ರಂಗಕ್ಕೆ ಬರುವಾಗ ಸಹಜವಾಗಿಯೇ ಮನೆಯಲ್ಲಿ ಬೇಡ ಎಂದಿದ್ದರು. ಈಗ ಮೋನಿಶ್ ಬಂದಿದ್ದಾನೆ. ಆತ ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ಕಿರುತೆರೆಯಲ್ಲಿ ಕೆಲಸ ಮಾಡಿದ ಅನುಭವ ಕೂಡಾ ಆತನಿಗಿದೆ’ ಎಂಬುದು ದಿಲೀಪ್ ರಾಜ್ ಮಾತು. ಚಿತ್ರದಲ್ಲಿ ಶಿಲ್ಪಾ ಮಂಜುನಾಥ್ ನಾಯಕಿ. ಹೊಸ ನಿರ್ದೇಶಕರ ಸಿನಿಮಾ ಎಂದಾಗ ಶಿಲ್ಪಾಗೆ ಮೊದಲು ಭಯವಾಯಿತಂತೆ. ಏಕೆಂದರೆ, ಈ ಹಿಂದಿನ ಸಿನಿಮಾವೊಂದರಲ್ಲಿ ಅವರಿಗೆ ಕೆಟ್ಟ ಅನುಭವವಾಯಿತಂತೆ. ಆದರೆ, ಮೋನಿಶ್ ತುಂಬಾ ಪ್ರತಿಭೆಯುಳ್ಳವರಾಗಿದ್ದು, ಸಿನಿಮಾವನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆಂಬುದು ಶಿಲ್ಪಾ ಮಾತು. ಇಲ್ಲಿ ಅವರು ಬಡ ಕುಟುಂಬದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಚಿತ್ರಕ್ಕೆ ಕೇಶವ ಚಂದ್ರ ಅವರ ಕಥೆಯಿದೆ. ಸಮಾಜದಲ್ಲಿ ನಡೆಯುತ್ತಿರುವ ಅಂಶಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆಯಂತೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎಂಬುದು ನಿರ್ದೇಶಕ ಮೋನಿಶ್ ಮಾತು. ಚಿತ್ರಕ್ಕೆ ಅದಿಲ್ ನದಾಫ್ ಸಂಗೀತ, ಶ್ರೀನಿವಾಸ್ ಛಾಯಾಗ್ರಹಣವಿದೆ.