Advertisement
ಒಂದು ಸಲ ರಾಜನ ಮಡದಿ ಒಂಟೆಯ ಮೇಲೆ ಕುಳಿತುಕೊಂಡು ತನ್ನ ತವರುಮನೆಗೆ ಹೋಗಿದ್ದಳು. ಮರಳಿ ಬರುವಾಗ ಬಿಸಿಲು ಸುಡುತ್ತಿತ್ತು. ಹಸಿವೆಯೂ ಆಗುತ್ತಿತ್ತು. ಬಾಯಾರಿಕೆಯಿಂದ ಕಂಗಾಲಾಗಿದ್ದ ಅವಳು ಏನಾದರೂ ಸಿಗುವುದೋ ಎಂದು ಅತ್ತಿತ್ತ ನೋಡಿದಳು. ಆಗ ಒಂದು ಪಾಮ್ ಮರದಿಂದ ಒಂದೊಂದಾಗಿ ಬೀಳುತ್ತಿರುವ ಹಣ್ಣುಗಳನ್ನು ಗಮನಿಸಿದಳು. ಅದನ್ನಾದರೂ ತಿನ್ನುವುದೆಂದು ನಿರ್ಧರಿಸಿ ಮರದ ಕೆಳಗೆ ಹೋಗಿ ಒಂದೆರಡು ಹಣ್ಣುಗಳನ್ನು ಆಯ್ದುಕೊಂಡು ತಿಂದುಬಿಟ್ಟಳು.
Related Articles
Advertisement
ರಾಜನು ಯೋಚಿಸಿದ. ಒಂದು ದಿನ ನಗಾರಿಯನ್ನು ಆಮೆಗೆ ಕೊಟ್ಟರೆ ಹಾನಿಯೇನೂ ಇಲ್ಲ ಅನಿಸಿತು. ಅದಕ್ಕೆ ಸಮ್ಮತಿಸಿದ. “”ನಗಾರಿಯನ್ನು ಕೊಡುತ್ತೇನೆ. ಆದರೆ ಅದರಿಂದ ಒಂದು ಸಲ ಮಾತ್ರ ಆಹಾರ, ಪಾನೀಯಗಳನ್ನು ಬೇಕಾದಷ್ಟು ತರಿಸಬೇಕು. ಎರಡನೆಯ ಸಲ ಬಾರಿಸಿದರೆ ಅದರ ಕೋಲು ಮುರಿಯುತ್ತದೆ. ನಗಾರಿ ನಿರುಪಯುಕ್ತವಾಗುತ್ತದೆ. ಇದನ್ನು ಸೇವಕರ ಮೂಲಕ ನಿನ್ನ ಮನೆಗೆ ಕಳುಹಿಸುತ್ತೇನೆ, ಮನದಣಿಯೆ ನಿನ್ನ ಸಂಸಾರದವರೊಂದಿಗೆ ಮೃಷ್ಟಾನ್ನಗಳನ್ನು ಸೇವಿಸು. ನಾಳೆ ನನ್ನ ಸೇವಕರು ನಿನ್ನಲ್ಲಿಗೆ ಬಂದಾಗ ನಗಾರಿಯನ್ನು ಜೋಪಾನವಾಗಿ ಹಿಂತಿರುಗಿಸು” ಎಂದು ಹೇಳಿದ. ಈ ಮಾತಿಗೆ ಆಮೆ ಸಮ್ಮತಿಸಿತು.
ಆಮೆಯ ಮನೆಗೆ ರಾಜನ ಸೇವಕರು ನಗಾರಿ ತಂದುಕೊಟ್ಟರು. ಆಮೆ ಅದನ್ನು ಬಾರಿಸಿ ಹೆಂಡತಿ, ಮಕ್ಕಳಿಗೆ ಇಷ್ಟವಾಗುವ ಖಾದ್ಯಗಳನ್ನು, ಪಾನೀಯಗಳನ್ನು ತರಿಸಿತು. ಎಲ್ಲರೂ ಹೊಟ್ಟೆ ಬಿರಿಯುವಷ್ಟು ತಿಂದರು. ರಾತ್ರೆಯಾದಾಗ ಆಮೆಗೆ ಒಂದು ಯೋಚನೆ ಬಂದಿತು. ನಾಳೆ ನಗಾರಿಯನ್ನು ಕೊಂಡುಹೋಗಲು ರಾಜನ ಸೇವಕರು ಬರುತ್ತಾರೆ. ಇಷ್ಟು ಅನುಕೂಲವಿರುವ ನಗಾರಿಯನ್ನು ರಾಜನಿಗೆ ಖಂಡಿತ ಕೊಡಬಾರದು ಎಂದು ನಿರ್ಧರಿಸಿ ಒಂದು ಉಪಾಯ ಮಾಡಿತು.
ಆಮೆಯು ಕಾಡಿನಲ್ಲಿರುವ ಎಲ್ಲ ಹುಲಿ, ಚಿರತೆ, ಕರಡಿ ಮುಂತಾದ ಸಮಸ್ತ ಪ್ರಾಣಿಗಳಿಗೂ ಆಮಂತ್ರಣ ಕಳುಹಿಸಿ, “”ನಾಳೆ ಬೆಳಗ್ಗೆ ನನ್ನ ಮನೆಯಲ್ಲಿ ಒಂದು ಔತಣ ಕೂಟವಿದೆ. ನೀವು ತಪ್ಪದೆ ಬರಬೇಕು. ನಿಮಗೆಲ್ಲರಿಗೂ ಯಾವ ತಿಂಡಿ ಇಷ್ಟವೋ ಅದನ್ನು ಹೊಟ್ಟೆ ತುಂಬ ತಿನ್ನಬೇಕು” ಎಂದು ಕೇಳಿಕೊಂಡಿತು. ಬೆಳಗಾದಾಗ ಪ್ರಾಣಿಗಳೆಲ್ಲವೂ ಅದರ ಮನೆಗೆ ಆಗಮಿಸಿದವು. ನಗಾರಿಗೆ ಬಾರಿಸಿ ಆಮೆ ಬೇಕಾದುದನ್ನೆಲ್ಲ ತರಿಸಿತು. ಎಲ್ಲವೂ ತಿನ್ನುತ್ತಿರುವಾಗ ನಗಾರಿಯನ್ನು ಒಯ್ಯಲು ರಾಜನ ಸೇವಕರು ಬಂದರು. ಆದರೆ ಅಲ್ಲಿ ಸೇರಿದ ಹುಲಿ, ಸಿಂಹ ಮುಂತಾದ ಮೃಗಗಳನ್ನು ಕಂಡ ಕೂಡಲೇ ಭಯಭೀತರಾಗಿ ಒಂದೇ ಓಟಕ್ಕೆ ಅರಮನೆಯ ದಾರಿ ಹಿಡಿದರು. ರಾಜನ ಬಳಿ, “”ಅದು ಸಾಮಾನ್ಯವಾದ ಆಮೆ ಅಲ್ಲ. ಅದಕ್ಕೆ ದೊಡ್ಡ ದೊಡ್ಡ ಮೃಗಗಳೆಲ್ಲವೂ ಗೆಳೆಯರು. ಇನ್ನೊಮ್ಮೆ ಅಲ್ಲಿಗೆ ಹೋಗಲು ನಮ್ಮಿಂದ ಸಾಧ್ಯವಿಲ್ಲ” ಎಂದು ಹೇಳಿದರು. ರಾಜನು ಕೂಡ ವಿಧಿಯಿಲ್ಲದೆ ನಗಾರಿಯ ಆಸೆಯನ್ನು ತೊರೆದುಬಿಟ್ಟ.
ತನ್ನ ಉಪಾಯ ಫಲಿಸಿತೆಂದು ಆಮೆಗೂ ಸಂತೋಷವಾಯಿತು. ಪ್ರಾಣಿಗಳೊಂದಿಗೆ, “”ಪ್ರತೀ ದಿನ ನೀವೆಲ್ಲರೂ ಬಂದು ಹೀಗೆಯೇ ಸುಗ್ರಾಸ ಭೋಜನವನ್ನು ಉಂಡು ಹೋಗಬೇಕು. ಆದರೆ ನನಗೆ ಶತ್ರುಗಳು ಯಾರಾದರೂ ಕಾಟ ಕೊಟ್ಟರೆ ನನ್ನ ರಕ್ಷಣೆಗೆ ನಿಲ್ಲಬೇಕು” ಎಂದು ಕೋರಿಕೊಂಡಿತು. ಅವು, “”ನಿನ್ನಂಥ ಧರ್ಮಿಷ್ಠನನ್ನು ಕೈಬಿಡುವುದುಂಟೆ? ದಿನವೂ ನಿನ್ನಲ್ಲಿಗೆ ಬಂದು ಊಟ ಮಾಡುತ್ತೇವೆ. ನಿನ್ನ ಕೂದಲು ಕೊಂಕದಂತೆ ಕಾಪಾಡುತ್ತೇವೆ” ಎಂದು ಭರವಸೆ ನೀಡಿದವು.
ಆದರೂ ರಾಜನ ಮೇಲೆ ಆಮೆಗೆ ನಂಬಿಕೆಯಿರಲಿಲ್ಲ. ಏನಾದರೊಂದು ತಂತ್ರ ಹೂಡಿ ಮತ್ತೆ ನಗಾರಿಯನ್ನು ಪಡೆಯಲು ಅವನು ಬರಬಹುದು. ಆಗ ಅವನ ಕಣ್ಣಿಗೆ ಅದು ಬೀಳದಂತೆ ಎಲ್ಲಾದರೂ ರಹಸ್ಯವಾಗಿ ಇಡಬೇಕು. ಎಂದು ನಿರ್ಧರಿಸಿ ಕಾಡಿಗೆ ತೆಗೆದುಕೊಂಡು ಹೋಗಿ ಒಂದು ಮುಳ್ಳುಮರದ ಪೊಟರೆಯೊಳಗೆ ನಗಾರಿಯನ್ನು ರಹಸ್ಯವಾಗಿ ಇರಿಸಿ ಬಂದಿತು. ತನ್ನ ಹೆಂಡತಿ ಮಕ್ಕಳಿಗೂ ಅದು ಎಲ್ಲಿದೆಯೆಂದು ಹೇಳಲಿಲ್ಲ. ದಿನವೂ ಬೆಳಗ್ಗೆ ಗುಟ್ಟಾಗಿ ತಾನೊಬ್ಬನೇ ಅಲ್ಲಿಗೆ ಹೋಗಿ ನಗಾರಿಯನ್ನು ಬಾರಿಸುತ್ತಿತ್ತು. ಆಹಾರ ಪದಾರ್ಥಗಳನ್ನು ತರಿಸಿ ಪ್ರಾಣಿಗಳಿಗೆ ಬಡಿಸಿ, ತಾನೂ ತಿನ್ನುತ್ತಿತ್ತು.
ಒಂದು ದಿನ ಆಮೆ ನಗಾರಿಗೆ ಬಾರಿಸಿ ಬಹು ರುಚಿಕರವಾದ ದ್ರಾಕ್ಷಾರಸವನ್ನು ತರಿಸಿತು. ಆಮೆಯ ಮಗನಿಗೆ ಅದನ್ನು ಎಷ್ಟು ಕುಡಿದರೂ ತೃಪ್ತಿಯಾಗಲಿಲ್ಲ. ಇನ್ನೂ ಕುಡಿಯಬೇಕು ಎನಿಸಿತು. ಪಾನೀಯದ ಪಾತ್ರೆ ಖಾಲಿಯಾಗಿತ್ತು. ಮತ್ತೆ ದ್ರಾಕ್ಷಾರಸವನ್ನು ತರಿಸಿ ಕೊಡಲು ಹಟ ಹಿಡಿಯಿತು. ಆದರೆ ಎರಡನೆಯ ಸಲ ನಗಾರಿಗೆ ಬಾರಿಸಿ ಪಾನೀಯ ತರಿಸಲು ಆಮೆ ಒಪ್ಪಲಿಲ್ಲ. ಆಗ ಆಮೆಯ ಮಗ ಹೇಗಾದರೂ ಮಾಡಿ ಈ ನಗಾರಿಯಿರುವ ಸ್ಥಳವನ್ನು ತಿಳಿದುಕೊಳ್ಳಬೇಕು. ತನಗೆ ಬೇಕಾದಾಗ ಬಯಸಿದ ಆಹಾರವನ್ನು ತರಿಸಿ ತಿನ್ನಬೇಕು ಎಂದು ಯೋಚಿಸಿತು. ಮರುದಿನ ಆಮೆ ನಗಾರಿಯ ಬಳಿಗೆ ಹೋಗುವಾಗ ಒಂದು ಚೀಲದಲ್ಲಿ ಬೂದಿ ತುಂಬಿಸಿ ಆಮೆಗೆ ತಿಳಿಯದಂತೆ ಅದರ ಬಾಲಕ್ಕೆ ಕಟ್ಟಿತು. ಚೀಲಕ್ಕೊಂದು ರಂಧ್ರ ಮಾಡಿತು. ಆಮೆ ಹೋಗುವಾಗ ದಾರಿಯುದ್ದಕ್ಕೂ ಬೂದಿ ಸೋರಿತು. ಇದರಿಂದ ಆಮೆಯ ಮಗನಿಗೆ ನಗಾರಿಯಿರುವ ಮರದ ಬಳಿಗೆ ಸುಲಭವಾಗಿ ಹೋಗುವುದು ಸಾಧ್ಯವಾಯಿತು.
ಒಮ್ಮೆ ಆಹಾರ ತರಿಸಿದ ಮೇಲೆ ಮತ್ತೆ ನಗಾರಿಗೆ ಬಾರಿಸಬಾರದೆಂಬುದು ಆಮೆಯ ಮಗನಿಗೆ ಗೊತ್ತಿರಲಿಲ್ಲ. ಅದು ತಂದೆಗೆ ತಿಳಿಯದಂತೆ ಮರದ ಪೊಟರೆಯಿಂದ ನಗಾರಿಯನ್ನು ತೆಗೆದು ಬಾರಿಸಿತು. ಆಗ ಅದರ ಕೋಲು ಮುರಿಯಿತು. ನಗಾರಿ ತನ್ನ ಮಹಿಮೆ ಕಳೆದುಕೊಂಡಿತು. ಮರುದಿನ ಆಮೆ ನಗಾರಿಯ ಬಳಿಗೆ ಬಂದಾಗ ಅದಕ್ಕೆ ವಿಷಯ ತಿಳಿಯಿತು. ಈ ದಿನ ಭೋಜನಕ್ಕೆ ಪ್ರಾಣಿಗಳು ಬಂದರೆ ಆಹಾರ ಕೊಡಲು ಸಾಧ್ಯವಿಲ್ಲ. ಅದರಿಂದ ಕೋಪಗೊಂಡು ಅವು ತನ್ನನ್ನು ಕೊಲ್ಲಬಹುದು ಎಂದು ಹೆದರಿ ಮುಳ್ಳಿನ ಮರದ ಅಡಿಯಲ್ಲೇ ಹೆಂಡತಿ ಮಕ್ಕಳೊಂದಿಗೆ ಮನೆ ಮಾಡಿಕೊಂಡಿತು.
ಪ. ರಾಮಕೃಷ್ಣ ಶಾಸ್ತ್ರಿ