Advertisement

Harmanpreet Singh: ಹಾರ್ಮೋನಿಯಂ ಹುಚ್ಚಿದ್ದ ಹಳ್ಳಿಯ ಹುಡುಗ ಇದೀಗ ಹಾಕಿ ಸೂಪರ್‌ ಸ್ಟಾರ್‌

06:11 PM Sep 19, 2024 | ಕೀರ್ತನ್ ಶೆಟ್ಟಿ ಬೋಳ |

ಅಮೃತಸರದ ಜಂದಿಯಾಲದ ಆ ಬಾಲಕನಿಗೆ ಹಾಡುವುದೆಂದರೆ ಅಚ್ಚುಮೆಚ್ಚು. ಊರಿನ ಮಕ್ಕಳೆಲ್ಲಾ ಹಾಕಿ ಸ್ಟಿಕ್‌ ಹಿಡಿದು ಆಡುತ್ತಿದ್ದರೆ ಈತನಿಗೆ ಹಾರ್ಮೋನಿಯಂ ಹುಚ್ಚು. ತನ್ನ ಮಗ ದೊಡ್ಡವನಾದ ಮೇಲೆ ದೊಡ್ಡ ಸಿಂಗರ್‌ ಆಗುತ್ತಾನೆ ಎಂದುಕೊಂಡಿದ್ದರು ಸರಬ್ಜಿತ್‌ ಸಿಂಗ್.‌ ಆದರೆ ಆ ಮಣ್ಣಿನ ಗುಣವೋ ಏನೋ, ಅಂದು ಹಾರ್ಮೋನಿಯಂಗಾಗಿ ತಂದೆಯ ಬಳಿ ಹಠ ಹಿಡಿದಿದ್ದ ಹುಡುಗ ಇದೀಗ ಭಾರತದ ಹಾಕಿ ಸೂಪರ್‌ ಸ್ಟಾರ್. ‌ಅವರೇ, ಅದೆಷ್ಟೋ ಹುಡುಗರಿಗೆ ಹಾಕಿ ಸ್ಟಿಕ್‌ ಹಿಡಿಯಲು ಪ್ರೇರೇಪಣೆಯಾಗುತ್ತಿರುವ ಭಾರತ ಹಾಕಿ ತಂಡದ ನಾಯಕ, ಡ್ರ್ಯಾಗ್‌ಫ್ಲಿಕ್‌ (Drag Flick) ಸೂಪರ್‌ಸ್ಟಾರ್‌ ಹರ್ಮನ್‌ಪ್ರೀತ್‌ ಸಿಂಗ್.‌

Advertisement

ಧ್ಯಾನ್ ಚಂದ್‌, ಬಲಬೀರ್‌ ಸಿಂಗ್‌ ಜೂನಿಯರ್‌ ಬಿಟ್ಟರೆ ಹಾಕಿಯಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಭಾರತೀಯ ದಾಖಲೆ ಹೊಂದಿದ್ದಾರೆ ಹರ್ಮನ್ (Harmanpreet Singh).‌ ಇದುವರೆಗೆ ಹರ್ಮನ್‌ ಬಾರಿಸಿರುವ ಗೋಲುಗಳ ಸಂಖ್ಯೆ 205.

ಸಂಗೀತ ಪ್ರೀತಿಯ ಬಾಲ್ಯ

ಮೊದಲೇ ಹೇಳಿದಂತೆ ಬಾಲ್ಯದಲ್ಲಿ ಹರ್ಮನ್‌ ಗೆ ಸಂಗೀತವೆಂದರೆ ಪಂಚಪ್ರಾಣ. ಸಿಖ್ ಧರ್ಮದ ಆರನೇ ಗುರು ಗುರುಹರಗೋಬಿಂದ್ ಸಿಂಗ್ ಅವರ ಪುತ್ರ ಬಾಬಾ ಗುರುದಿಟ್ಟಾ ಅವರ ನೆನಪಿಗಾಗಿ ನಡೆದ ವಾರ್ಷಿಕ ಗ್ರಾಮ ಉತ್ಸವದಲ್ಲಿ ಬಾಲಕ ಹರ್ಮನ್‌ ಹಾಕಿ ಸ್ಟಿಕ್ ಬದಲಿಗೆ ಹಾರ್ಮೋನಿಯಂ ಖರೀದಿಸಿ ಕೊಡಿ ಎಂದು ಕೇಳಿದ್ದ ಎಂದು ನೆನಪಿಸಿಕೊಳ್ಳುತ್ತಾರೆ ತಂದೆ ಸರಬ್ಜೀತ್ ಸಿಂಗ್.

Advertisement

ಸಣ್ಣವನಿದ್ದಾಗ ಅವನಿಗೆ ಹಾಡುವುದು ಬಿಟ್ಟು ಬೇರೆ ಏನೂ ಬೇಡವಿತ್ತು. ಜಾತ್ರೆ- ಉತ್ಸವಗಳಿಗೆ ಹೋದಾಗೆಲ್ಲಾ ಹಾರ್ಮೋನಿಯಂ ಬೇಕು ಎಂದು ಹಠ ಮಾಡುತ್ತಿದ್ದ. ತಂದೆ ಒಮ್ಮೆ ಖರೀದಿಸಿಕೊಟ್ಟ ಬಳಿಕ ಅವನು ಅದರ ಜತೆಯೇ ಕಾಲ ಕಳೆಯುತ್ತಿದ್ದ. ಶಾಲೆಯಲ್ಲಿ ಒಮ್ಮೆ ಕೋಚ್‌ ಆತನನ್ನು ಹಾಕಿ ತಂಡಕ್ಕೆ ಸೇರಿಸಿಕೊಂಡಾಗ ಹರ್ಮನ್‌ ಗೆ ಕ್ರೀಡೆಯ ಮೇಲೆ ಒಲವು ಬೆಳೆಯಿತು. ಮುಂದೆ ತನ್ನ ಬಲಿಷ್ಠ ಡ್ರ್ಯಾಗ್‌ಫ್ಲಿಕ್‌ಗಳ ಮೂಲಕ ಗೋಲು ಕೀಪರ್‌ಗಳನ್ನು ತನ್ನ ಹಾಡಿಗೆ ಕುಣಿಸುವಷ್ಟು ಬೆಳೆದಿದ್ದು ಇತಿಹಾಸ.

ನಮ್ಮ ಊರಿನಲ್ಲಿ ಯುವಕರು ಗ್ರಾಮದ ಮೈದಾನದಲ್ಲಿ ಹಾಕಿ ಆಡುತ್ತಾರೆ. ಕೆಲವು ದಿನಗಳಲ್ಲಿ ನಾನು ಗದ್ದೆಯಲ್ಲಿ ತಂದೆ ಸಹಾಯ ಮಾಡಿ ಬಳಿಕ ಸ್ನೇಹಿತರೊಂದಿಗೆ ಆಡುತ್ತಿದ್ದೆ ಎಂದು ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಹರ್ಮನ್.‌

ನಿಧಾನವಾಗಿ ಹಾಕಿಯಲ್ಲಿ ಆಸಕ್ತಿ ಬೆಳೆಸಿಕೊಂಡ ಹರ್ಮನ್ ಬಳಿಕ ಜಲಂದರ್ ನ ಕೆಲವು ಅಕಾಡೆಮಿಗಳಲ್ಲಿ ಟ್ರಯಲ್ಸ್‌ ಗಾಗಿ ಹೋಗುತ್ತಿದ್ದರು. ಲುಧಿಯಾನದ ಮಾಲ್ವಾ ಅಕಾಡೆಮಿಯಲ್ಲಿ ತರಬೇತುದಾರ ಯದ್ವಿಂದರ್ ಸಿಂಗ್ ಅವರಿಂದ ಆರಂಭದಲ್ಲಿ ಫುಲ್-ಬ್ಯಾಕ್ ಆಗಿ ತರಬೇತಿ ಪಡೆದ ಹರ್ಮನ್, 2010 ರಲ್ಲಿ ತರಬೇತುದಾರರಾದ ಅವತಾರ್ ಸಿಂಗ್ ಮತ್ತು ಗುರುದೇವ್ ಸಿಂಗ್ ಅವರಡಿಯಲ್ಲಿ ಸುರ್ಜಿತ್ ಸಿಂಗ್ ಅಕಾಡೆಮಿಗೆ ಸೇರುತ್ತಾರೆ.

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ 1975 ರ ವಿಶ್ವಕಪ್ ವಿಜೇತ ಭಾರತೀಯ ಹಾಕಿ ತಂಡದ ಸದಸ್ಯರಾದ ಫುಲ್ ಬ್ಯಾಕ್ ಸುರ್ಜಿತ್ ಸಿಂಗ್ ಬಗ್ಗೆ ಕಥೆಗಳನ್ನು ಯುವ ಹರ್ಮನ್‌ಪ್ರೀತ್ ಆಗಾಗ್ಗೆ ಕೇಳುತ್ತಿದ್ದ ಹರ್ಮನ್‌ ಅವರ ಅಕಾಡೆಮಿಯಲ್ಲಿ ಸೇರಿಕೊಂಡರು. ಅವರ ಉತ್ತಮ ಮೈಕಟ್ಟು ಕಂಡ ಕೋಚ್‌ ಗಳು ಡ್ರ್ಯಾಗ್ ಫ್ಲಿಕ್‌ ತರಬೇತಿ ನೀಡಲು ಆರಂಭಿಸಿದರು.

“ಹರ್ಮನ್‌ ನಮ್ಮಲ್ಲಿ ಸೇರಿದಾಗ ಆತನ ಮೈಕಟ್ಟು ಕಂಡು ಸಂತಸವಾಗಿತ್ತು. ಹಳ್ಳಿಯಿಂದ ಬಂದ ಹುಡುಗರು ಆ ರೀತಿಯ ಮೈಕಟ್ಟು ಹೊಂದಿರುತ್ತಾರೆ. ಫುಲ್‌ ಬ್ಯಾಕ್‌ ಆಗಿ (ಹಾಕಿಯಲ್ಲಿ ರಕ್ಷಣಾತ್ಮಕ ಆಟಗಾರ) ತನ್ನ ಮೈಕಟ್ಟನ್ನು ಹೇಗೆ ಬಳಸಬೇಕೆಂದು ಆ ವಯಸ್ಸಿನಲ್ಲಿಯೇ ಹರ್ಮನ್‌ ಗೆ ತಿಳಿದಿತ್ತು. ನಾವು ಆತನನ್ನು ಬಲ ಮತ್ತು ಎಡ ಫುಲ್‌ ಬ್ಯಾಕ್‌ ಆಗಿ ಆಡಿಸಿದೆವು” ಎನ್ನುತ್ತಾರೆ ಕೋಚ್‌ ಅವತಾರ್‌ ಸಿಂಗ್.‌

ಅಕಾಡೆಮಿಯಲ್ಲಿ ಅದಾಗಲೇ‌ ವರುಣ್‌ ಕುಮಾರ್‌ ಮತ್ತು ಗಗನ್‌ ದೀಪ್ ಡ್ರ್ಯಾಗ್‌ಫ್ಲಿಕರ್‌ ಗಳಾಗಿದ್ದರು. ಆರಂಭದಲ್ಲಿ ಒಂದು ತಿಂಗಳ ಕಾಲ ಹರ್ಮನ್‌ ರನ್ನು ಕೋಚ್‌ ಗಳು ಕಸರತ್ತು ಮಾಡಿಸಿದ್ದರು. ಆರಂಭದಲ್ಲಿ ಹರ್ಮನ್‌ ಮತ್ತು ಇತರ ಟ್ರೈನಿಗಳು ಬಾಲನ್ನು ತಡೆಯುವುದನ್ನು ಕಲಿತಿದ್ದರು. ಆತನ ಮಣಿಕಟ್ಟುಗಳು ಗಟ್ಟಿಯಾಗಿದ್ದವು. ಇದು ವೇಗದಲ್ಲಿ ಚೆಂಡು ಬಾರಿಸಲು ಸಹಾಯ ಮಾಡುತ್ತಿದ್ದವು. ಆರಂಭದಲ್ಲಿ ಪ್ರತಿ ಸೆಶನ್‌ ಗೆ 30-40 ಬಾಲ್‌ ಹೊಡೆಯುತ್ತಿದ್ದ, ಬಳಿಕ ಅದು 50-60ರವರೆಗೆ ಹೋಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಅವತಾರ್‌ ಸಿಂಗ್.‌

2014ರಲ್ಲಿ ಜೂನಿಯರ್‌ ಇಂಡಿಯಾ ತಂಡಕ್ಕೆ ಪದಾರ್ಪಣೆ ಮಾಡಿದ ಹರ್ಮನ್‌ ಪ್ರೀತ್‌, ಸುಲ್ತಾನ್‌ ಆಫ್‌ ಜೋಹರ್‌ ಕಪ್‌ ನಲ್ಲಿ 9 ಗೋಲು ಬಾರಿಸಿ ಗಮನ ಸೆಳೆದರು. 2015ರ ಜೂನಿಯರ್‌ ಏಷ್ಯಾ ಕಪ್‌ ನಲ್ಲಿ 14 ಗೋಲು ಬಾರಿಸಿದರು. 2016ರ ರಿಯೋ ಒಲಿಂಪಿಕ್ಸ್‌ ಗಾಗಿ ಭಾರತ ತಂಡಕ್ಕೆ ಸೇರಿದ ಹರ್ಮನ್‌ ಒಲಿಂಪಿಕ್ಸ್‌ ನಲ್ಲಿ ಭಾರತದ ಡ್ರ್ಯಾಗ್‌ ಫ್ಲಿಕರ್‌ ಆಗಿದ್ದರು. ಅದೇ ವರ್ಷ ಚೊಚ್ಚಲ ವಿಶ್ವಕಪ್‌ ಆಡಿದ ಹರ್ಮನ್‌ ಅದರಲ್ಲಿ ಮೂರು ಗೋಲು ಗಳಿಸಿದ್ದರು.

ಹೀಗೆ ಬೆಳೆದ ಹರ್ಮನ್‌ 2022ರಲ್ಲಿ ಭಾರತ ಗಳಿಸಿದ ಒಟ್ಟು 91 ಗೋಲುಗಳಲ್ಲಿ 38 ಗೋಲುಗಳನ್ನು ಹರ್ಮನ್‌ ಒಬ್ಬರೇ ಗಳಿಸಿದ್ದರು. ಇದೇ ವೇಳೆ ನಾಯಕತ್ವ ಗುಣವನ್ನೂ ಅವರು ಬೆಳೆಸಿಕೊಂಡಿದ್ದರು. “ಮನ್‌ ಪ್ರೀತ್‌ ಮತ್ತು ಮಂದೀಪ್‌ ಜೊತೆಗೆ ಆಟದ ತಂತ್ರಗಾರಿಕೆ ಬಗ್ಗೆ ಹರ್ಮನ್‌ ಚರ್ಚೆ ಮಾಡುತ್ತಿದ್ದ. ಅದು ಆತನಲ್ಲಿ ನಾಯಕತ್ವ ಬೆಳವಣಿಗೆಗೆ ಕಾರಣವಾಯಿತು” ಎನ್ನುತ್ತಾರೆ ಮಾಜಿ ಗೋಲ್‌ ಕೀಪರ್‌ ಬಲ್ಜಿತ್‌ ಸಿಂಗ್‌ ದಧ್ವಾಲ್.‌

2024ರ ಪ್ಯಾರಿಸ್‌ ಒಲಿಂಪಿಕ್ಸ್‌ ವೇಳೆ ಹರ್ಮನ್‌ ಪ್ರೀತ್‌ ಸಿಂಗ್‌ ಅವರನ್ನು ಭಾರತ ಹಾಕಿ ತಂಡದ ನಾಯಕರನ್ನಾಗಿ ನೇಮಿಸಲಾಯಿತು. ಒಲಿಂಪಿಕ್ಸ್‌ ನಲ್ಲಿ ಕಂಚಿನ ಪದಕ ಮತ್ತು ಇತ್ತೀಚೆಗೆ ನಡೆದ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮೊದಲ ಸ್ಥಾನ ಪಡೆಯುವಲ್ಲಿ ಹರ್ಮನ್‌ ಪ್ರಮುಖ ಪಾತ್ರ ವಹಿಸಿದ್ದಾರೆ. ಇತ್ತೀಚೆಗಷ್ಟೇ ವೈಯಕ್ತಿಕ ಗೋಲು ಗಳಿಕೆಯಲ್ಲಿ ದ್ವಿಶತಕದ ಗಡಿ ದಾಟಿದ್ದಾರೆ.

*ಕೀರ್ತನ್‌ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next