60ಕ್ಕೂ ಹೆಚ್ಚು ಕೇಸ್‌ಗಳು ಅವನ ಮೇಲಿರುತ್ತದೆ. 300ಕ್ಕೂ ಹೆಚ್ಚು ಕೋಟಿಯನ್ನು ಅವನು ಕದ್ದಿರುತ್ತಾನೆ. ಸರಿ, ಹೇಗೋ ಅರೆಸ್ಟ್ ಆಗಿ ಜೈಲಿಗೆ ಸೇರುತ್ತಾನೆ. ಅವನನ್ನು ನ್ಯಾಯಾಲಯದಲ್ಲೂ ನಿಲ್ಲಿಸಲಾಗುತ್ತದೆ. ಆದರೆ, ಯಾವೊಂದು ಕೇಸ್ ಸಹ ನಿಲ್ಲುವುದಿಲ್ಲ. ಕಾರಣ ಅವನು ಕದ್ದಿದ್ದು ಬ್ಲಾಕ್ ಮನಿಯನ್ನ. ಅಷ್ಟೊಂದು ಹಣ ತಮ್ಮದು ಎಂದು ಒಪ್ಪಿಕೊಂಡರೆ, ತೆರಿಗೆ ಕಟ್ಟಬೇಕಾಗುತ್ತದೆ. ಹಾಗಾಗಿ ಎಲ್ಲರೂ ಕೇಸ್ ಹಿಂಪಡೆಯುವುದಕ್ಕೆ ಪ್ರಾರಂಭಿಸುತ್ತಾರೆ. ಅಲ್ಲಿಗೆ ಅವನು ಆ ಎಲ್ಲಾ ಕೇಸ್‌ಗಳಿಂದ ಖುಲಾಸೆಯಾಗುತ್ತಾನೆ. ಹಾಗಾದರೆ ಮುಂದೆ?
ಸಾಮಾನ್ಯವಾಗಿ ಪ್ರತಿ ವಿಮರ್ಶೆಯಲ್ಲಿ ಒಂದು ಪ್ರಶ್ನೆಯನ್ನಿಟ್ಟು, ಉತ್ತರಕ್ಕಾಗಿ ಚಿತ್ರ ನೋಡಿ ಎಂದು ಹೇಳಲಾಗುತ್ತದೆ. ಆದರೆ, “ಮಿಸ್ಟರ್ ಚೀಟರ್ ರಾಮಾಚಾರಿ’ ಚಿತದ ವಿಷಯದಲ್ಲಿ ಹಾಗೆ ಹೇಳುವುದಕ್ಕೆ ಆಗುವುದಿಲ್ಲ. ಏಕೆಂದರೆ, ಚಿತ್ರ ನೋಡಿದರೂ ಬಹುಶಃ ಏನಾಯಿತು ಅಥವಾ ಮುಂದೇನಾಗಬಹುದು ಎಂದು ಹೇಳುವುದಕ್ಕೆ ಸಾಧ್ಯವಾಗಿಲ್ಲ. ಹಾಗಂತ ಒಂದು ಟ್ರಿಕ್ಕಿ ಚಿತ್ರಕಥೆ ಹೆಣೆದಿದ್ದಾರೆ ನಿರ್ದೇಶಕರು ಎಂದು ಅವರ ಬೆನ್ನು ತಟ್ಟುವುದು ಕಷ್ಟ. ಏಕೆಂದರೆ, ಇಲ್ಲಿ ಟ್ರಿಕ್ಕಿಗಿಂಥ ಗೊಂದಲಗಳೇ ಹೆಚ್ಚು.
ಚಿತ್ರದ ಹೆಸರು ಕೇಳಿದರೆ, ಇದೊಬ್ಬ ಚೀಟರ್‌ನ ಕಥೆ ಇರಬಹುದು ಎಂದನಿಸದು. ಆದರೆ, ಚಿತ್ರದ ಟೈಟಲ್ ಕಾರ್ಡ್ ನೋಡಿದರೆ, ಮಹಿಳೆಯರು ಅನಾದಿ ಕಾಲದಿಂದ ಎದುರಿಸುತ್ತಿರುವ ಸಮಸ್ಯೆಗಳ ಕುರಿತಾದ ಚಿತ್ರ ಎಂದನಿಸುತ್ತದೆ. ಚಿತ್ರ ಶುರುವಾದ ಮೇಲೆ ಇದೊಬ್ಬ ಅನಾಥ ಹುಡುಗನ ಕಥೆ ಎಂಬುದು ಗೊತ್ತಾಗುತ್ತದೆ. ಸ್ವಲ್ಪ ಮುಂದುವರೆದ ನಂತರ ಅಪನಗದೀಕರಣವಾದ ನಂತರ ಶುರುವಾದ ಬ್ಲಾಕ್ ಮನಿಯನ್ನು ಬಿಳಿಯಾಗಿ ಪರಿವರ್ತಿಸುವ ದಂಧೆಯ ಕುರಿತಾಗಿದ್ದು ಎಂದನಿಸುತ್ತದೆ.
ಈ ಮಧ್ಯೆ ಅಜ್ಜಿಯೊಬ್ಬಳು ಮಕ್ಕಳಿಗೆ ಕಥೆ ಹೇಳುತ್ತಾಳೆ, ನಿರ್ದೇಶಕನೊಬ್ಬ ತನ್ನ ತಂಡದ ಜೊತೆಗೆ ಕುಳಿತು ಒಂದು ಕಥೆ ಹೆಣೆಯುತ್ತಾನೆ. ಇನ್ನು ಚಿತ್ರ ಬೆಳೆಯುತ್ತಾ ಹೋದಂತೆ, ಇನ್ನೆಲ್ಲಿಗೋ ಹೋಗಿ ಮುಟ್ಟುತ್ತದೆ. ಬಹುಶಃ ಇಷ್ಟೆಲ್ಲಾ ವಿಷಯಗಳ ಪೈಕಿ ಒಂದು ವಿಷಯವನ್ನು ಸರಿಯಾಗಿ ಹೇಳುವ ಪ್ರಯತ್ನ ಮಾಡಿದ್ದರೆ ಬಹಳ ಚೆನ್ನಾಗಿರುತಿತ್ತು. ಅದರಲ್ಲೂ ಅಪನಗದೀಕರಣದ ವೇಳೆ ನೋಟು ಬದಲಿಯಾದ ಸಾಕಷ್ಟು ಸುದ್ದಿಯಾಗಿತ್ತು. ಆ ಮೋಸಗಾರರಿಗೆ ಮೋಸ ಮಾಡುವಂತ “ಮಿಸ್ಟರ್ ಚೀಟರ್ ರಾಮಾಚಾರಿ’ಯ ಕುರಿತಾಗಿ ಕಥೆ ಹೇಳಿದ್ದರೆ ಸಾಕಾಗುತಿತ್ತು.
ಆದರೆ, ನಿರ್ದೇಶಕರು ಹಲವು ವಿಷಯಗಳನ್ನು ಏಕಕಾಲಕ್ಕೆ ತೆಗೆದುಕೊಳ್ಳುತ್ತಾರೆ. ಜೊತೆಗೆ ಉಪೇಂದ್ರರಿಂದ ಸಾಕಷ್ಟು ಪ್ರಭಾವಿತರಾದಂತೆ (ಚಿತ್ರದಲ್ಲಿ ಉಪೇಂದ್ರ ಅವರನ್ನು ತೋರಿಸುವುದರ ಜೊತೆಗೆ, ಅವರ ನಿರೂಪಣಾ ಶೈಲಿಯೂ ಕಾಣುತ್ತದೆ) ಕಾಣುತ್ತಾರೆ. ಇದೆಲ್ಲದರಿಂದ ಇದು ಕಥೆಯೋ, ಕಲ್ಪನೆಯೋ, ವಾಸ್ತವವೋ ಯಾವುದೂ ಸಹ ಸ್ಪಷ್ಟವಾಗುವುದಿಲ್ಲ. ಬಹುಶಃ ನಿಮ್ಮ ಬುದ್ಧಿವಂತಿಕೆಯ ಲೆವೆಲ್ ಸ್ವಲ್ಪ ಜಾಸ್ತಿ ಇದ್ದರೆ ಚಿತ್ರ ಖುಷಿಕೊಡಬಹುದು.
ಸಾಮಾನ್ಯರಿಗೆ ಅತ್ತ ಮನರಂಜನೆಯೂ ಅಲ್ಲದೆ, ಇತ್ತ ವಿಭಿನ್ನವೂ ಆಗದೆ ಈ ವರ್ಷದಲ್ಲಿ ಬಿಡುಗಡೆಯಾದ ಚಿತ್ರಗಳ ಪಟ್ಟಿಗೆ ಇನ್ನೊಂದು ಹೊಸದಾಗಿ ಸೇರಿದಂತಾಗುತ್ತದೆ ಅಷ್ಟೇ. ಈ ಚಿತ್ರದಲ್ಲಿ ಕ್ಯಾಪ್ಟನ್ ಚೌಧರಿ ಬಿಟ್ಟರೆ ಮಿಕ್ಕಂತೆ ಎಲ್ಲರೂ ಹೊಸಬರೇ. ಅದರಲ್ಲೂ ರಾಯಚೂರಿನ ಪ್ರತಿಭೆಗಳೇ ಜಾಸ್ತಿ. ಇನ್ನು ಚಿತ್ರದ ಚಿತ್ರೀಕರಣವೂ ಅಲ್ಲೇ ಸುತ್ತಮುತ್ತ ನಡೆದಿದೆ. ಒಂದಿಷ್ಟು ಹೊಸ ಲೊಕೇಶನ್‌ಗಳನ್ನು ಬಿಟ್ಟರೆ, ಮಿಕ್ಕಂತೆ ಗಮನಾರ್ಹವಾದ್ದೇನೂ ಕಾಣುವುದಿಲ್ಲ.
ರಾಮಾಚಾರಿ ಚಿತ್ರದ ಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿ, ಚಿತ್ರದ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಆ ಪೈಕಿ ಯಾವುದಕ್ಕೆ ಹೆಚ್ಚು ಅಂಕ ಕೊಡಬಹುದು ಎಂದು ಎಷ್ಟು ಒದ್ದಾಡಿದರೂ ಉತ್ತರ ಸಿಗುವುದಿಲ್ಲ. ತಾಂತ್ರಿಕ ವಿಷಯಗಳು ಸಹ ಹೆಚ್ಚಾಗಿ ಗಮನಸೆಳೆಯುವುದಿಲ್ಲ. ಹಾಗಾದರೆ, ಚಿತ್ರದ ವಿಶೇಷತೆಯೇನು ಎಂದರೆ, ಗಾಂಧಿನಗರದಿಂದ ನೂರಾರು ಕಿಲೋಮೀಟರ್ ದೂರದಲ್ಲಿರುವ ರಾಯಚೂರಿನ ಪ್ರತಿಭೆಗಳು, ಇಲ್ಲಿಗೆ ಬಂದು ತಾವೂ ಒಂದು ಪ್ರಯತ್ನ ಮಾಡಿದ್ದೀವಿ ಎಂದು ಹೇಳಿಕೊಳ್ಳುವುದಕ್ಕೆ ಈ ಚಿತ್ರವನ್ನು ತೋರಿಸಬಹುದು.
ಚಿತ್ರ: ಮಿಸ್ಟರ್ ಚೀಟರ್ ರಾಮಾಚಾರಿ
ನಿರ್ಮಾಣ: ಪ್ರವೀಣ ರವೀಂದ್ರ ಕುಲಕರ್ಣಿ
ನಿರ್ದೇಶನ: ರಾಮಾಚಾರಿ
ತಾರಾಗಣ: ರಾಮಾಚಾರಿ, ಶಾಲಿನಿ, ಮೇಘನ, ರಾಶಿ ಮೇಘನ, ಕ್ಯಾಪ್ಟನ್ ಚೌಧರಿ ಮುಂತಾದವರು
* ಚೇತನ್ ನಾಡಿಗೇರ್