ಬೆಂಗಳೂರು: ಕಳೆದ ವರ್ಷ ಮಳೆಗಾಲದಲ್ಲಿ ರಾಜಧಾನಿಯ ಕೆಲ ಪ್ರದೇಶದಲ್ಲಿ ಸಾಕಷ್ಟು ಅನಾಹುತ ಸಂಭವಿಸಿದಾಗ ಮುಖ್ಯಮಂತ್ರಿಗಳ ಸೂಚನೆಯಂತೆ ಬಿಬಿಎಂಪಿ ಶುರು ಮಾಡಿದ ಮಳೆ ನೀರು ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಶೂರತ್ವದಂತಾಗಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ತೆರವು ಕಾರ್ಯ ಸ್ಥಗಿತಗೊಂಡಿರುವ ಎಂಬ ಆರೋಪ ಕೇಳಿಬಂದಿದ್ದು, ಈ ಬಾರಿಯ ಮಳೆಗಾಲದಲ್ಲೂ ಅವಾಂತರ ಉಂಟಾಗುವ ಆತಂಕ ಮೂಡಿದೆ.
ಈ ಬಾರಿಯೂ ಮಳೆಗಾಲದಲ್ಲಿ ಅನಾಹುತ ಸಂಭಾವ್ಯ ಸ್ಥಳಗಳನ್ನು ಅಧಿಕಾರಿಗಳು ಗುರುಸಿ ತಿದ್ದು, 174 ಸ್ಥಳಗಳು ಪ್ರವಾಹ ಭೀತಿ ಎದುರಿ ಸುತ್ತಿವೆ. ಕಳೆದ ವರ್ಷ ಸುರಿದ ಭಾರಿ ಮಳೆಗೆ ಕೋಡಿ ಚಿಕ್ಕನಹಳ್ಳಿ, ಬಿಳೇಕಹಳ್ಳಿ, ಅವನೀ ಶೃಂಗೇರಿ ನಗರ, ಅರಕೆರೆ, ಬಿಟಿಎಂ ಲೇಔಟ್ ಸೇರಿದಂತೆ ಹಲವು ಬಡಾವಣೆಗಳು ಜಲಾವೃತಗೊಂಡು ಜನ ತೊಂದರೆ ಅನುಭವಿಸುವಂತಾಗಿತ್ತು. ಬಳಿಕ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಆರಂ ಭಿಸಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾ ಚರಣೆ ಪ್ರಭಾವಿಗಳ ಒತ್ತಡದಿಂದ ಸ್ಥಗಿತಗೊಂಡಿದೆ ಎನ್ನಲಾಗಿದೆ.
ಹೀಗಾಗಿ ಒತ್ತುವರಿ ತೆರವು ಕಾರ್ಯಾಚರಣೆಯೂ ಅಪೂರ್ಣಗೊಂಡಿದ್ದು, ಪ್ರವಾಹ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಕಾರಣ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಮುಂಗಾರು ಆರಂಭಕ್ಕೆ ಸುಮಾರು 40 ದಿನಗಳಷ್ಟೇ ಬಾಕಿ ಉಳಿದಿದ್ದು, ಅನಾಹು ಸಂಭವಿಸಬಹುದಾದ ಸ್ಥಳಗಳನ್ನು ಪಾಲಿಕೆ ಗುರು ತಿಸಿದೆ. ಆದರೆ, ಪ್ರವಾಹ ನಿಯಂತ್ರಣಕ್ಕೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಆದ್ಯತೆ ನೀಡಿಲ್ಲ.
ಪಾಲಿಕೆ ಗುರುತಿಸಿರುವ ಸ್ಥಳಗಳಲ್ಲಿ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯದಿರುವುದೇ ಪ್ರಮುಖ ಸಮಸ್ಯೆಯಾಗಿದೆ. ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದ್ದು, ಸಾಮಾನ್ಯ ದಿನಗಳ ಲ್ಲೇ ನೀರು ಮೇಲ್ಭಾಗದಲ್ಲಿ ಹರಿಯುತ್ತಿರುತ್ತದೆ. ಮಳೆ ಸುರಿದಾಗ ಪ್ರವಾಹ ಉಂಟಾಗಿ ಕಾಲುವೆ ಅಕ್ಕಪಕ್ಕದ ಪ್ರದೇಶಗಳಿಗೆ ನುಗ್ಗಿ ಅವಾಂತರಗಳು ಸೃಷ್ಟಿಯಾಗುತ್ತವೆ.
ಜತೆಗೆ ಕಾಲುವೆಗಳ ಏಕರೂಪವಾಗಿರದೆ ಹಲವೆಡೆ ಒತ್ತುವರಿಯಾಗಿ ಅಗಲ ಕುಗ್ಗಿರುವುದು ಕೂಡ ಸಮಸ್ಯೆ ಉಲ್ಬಣಿ ಸಲು ಕಾರಣವಾಗಿದೆ ಎಂಬುದನ್ನು ಅಧಿಕಾರಿ ಗಳು ಒಪ್ಪುತ್ತಾರೆ. ಆದರೆ ಒತ್ತುವರಿಯನ್ನು ತೆರವುಗೊಳಿಸುವ ದಿಟ್ಟತನ ಮಾತ್ರ ತೋರುತ್ತಿಲ್ಲ. ಅದಕ್ಕಿಂತ ಮುಖ್ಯವಾಗಿ ಹಿಂದೆಲ್ಲ ರಾಜಕಾಲುವೆಯಿಂದ ಹರಿಯುವ ನೀರು ಕೆರೆಗಳಿಗೆ ಸೇರುತ್ತಿತ್ತು. ಆದರೀಗ, ಕೆರೆಗಳೆಲ್ಲ ಒತ್ತುವರಿಯಾಗಿದ್ದು, ಅಲ್ಲಿಗೆ ನೀರು ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಪ್ರವಾಹ ಉಂಟಾಗಿ ಆಸ್ತಿಪಾಸ್ತಿಗೆ ನಷ್ಟ ಉಂಟಾಗುತ್ತಿದೆ.
ಕೇಂದ್ರ ಭಾಗದಲ್ಲಿ ಪ್ರವಾಹ ಭೀತಿ
ಬಿಬಿಎಂಪಿ ಲೆಕ್ಕ ಹಾಕಿರುವಂತೆ ಬೆಂಗಳೂರಿನಲ್ಲಿ ಒಟ್ಟು 174 ಬಡಾವಣೆಗಳು ಜೋರಾಗಿ ಮಳೆ ಬಂದರೆ ಪ್ರವಾಹ ಉಂಟಾಗಲಿದೆ. ಅದರಲ್ಲಿ ಹೊಸ ಪ್ರದೇಶಗಳಿಗಿಂತ ಪಾಲಿಕೆ ವ್ಯಾಪ್ತಿಯಲ್ಲೇ ಹಲವು ದಶಕದಿಂದಿರುವ ಹಳೆ ಪ್ರದೇಶಗಳಲ್ಲೇ ಮಳೆಬಾಧಿತ ಸ್ಥಳಗಳು ಹೆಚ್ಚಾಗಿರುವುದು ಕಂಡುಬಂದಿದೆ. ಪ್ರಮುಖವಾಗಿ ಪೂರ್ವ ವಲಯದಲ್ಲಿಯೇ 48 ಪ್ರದೇಶವಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯಿದೆ.