Advertisement
ಪ್ರೀತಿ… ವಿಶ್ವವನ್ನೇ ಆವರಿಸಿಕೊಂಡಿದೆ. ಪ್ರೀತಿ ಯೌವನಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರೀತಿ ಅಂದರೆ ಸತ್ಯ, ಸುಂದರ, ಆತ್ಮೀಯ, ನಿಸ್ವಾರ್ಥ, ಅನಂತ, ನಿತ್ಯ, ಹಂಚಿಕೊಳ್ಳುವುದು, ಹುಟ್ಟು ಸಾವನ್ನು ಮೀರಿದ್ದು, ಬೇಕು ಬೇಡಗಳನ್ನು ಮೀರಿದ್ದು… ಇನ್ನೂ ಏನೇನೆಲ್ಲ. ಸಿಂಪಲ್ ಆಗಿ ಹೇಳಬೇಕು ಅಂದರೆ, ಜಗತ್ತಿನಲ್ಲಿ ಕಣ್ಣಿಗೆ ಕಾಣಿಸುತ್ತಿರುವುದು ಮತ್ತು ಕಾಣಿಸದೇ ಇರುವುದೆಲ್ಲ ಪ್ರೀತಿಯ ಪ್ರತಿರೂಪಗಳೇ.
ಇಷ್ಟೊಂದು ಬದಲಾವಣೆಗಳನ್ನು ತರುವ ಈ ಪಂಚೇಂದ್ರಿಯಗಳು ನಿಜವಾಗಿಯೂ ಏನು ಮಾಡುತ್ತವೆ? ಪರಿಪೂರ್ಣ ಪ್ರೇಮಕ್ಕೆ ಅವುಗಳಲ್ಲಿ ಒಂದೊಂದು ಎಷ್ಟು ಮುಖ್ಯ? ಅಥವಾ ಪ್ರೇಮ ಮನಸ್ಸಿಗೆ ಮಾತ್ರ ಸಂಬಂಧಿಸಿದ್ದಾ? ನಿಮಗೆ ಗೊತ್ತಾ, ಪ್ರೀತಿ ಕೇವಲ ಮುಖದಲ್ಲಿ ಹುಟ್ಟಿ ಸಮಾಗಮದಲ್ಲಿ ಮುಗಿಯುವಂಥದ್ದಲ್ಲ. ಅಷ್ಟಕ್ಕೇ ನಿಲ್ಲುವವನು ಪ್ರೇಮಿಯೂ ಅಲ್ಲ. ಎಲ್ಲ ಐದು ಇಂದ್ರಿಯಗಳ ಅಗತ್ಯವನ್ನೂ ಅರ್ಥ ಮಾಡಿಕೊಂಡು, ಪ್ರೇಮದಲ್ಲಿ ಅವುಗಳನ್ನು ತೃಪ್ತಿ ಪಡಿಸುವವನೇ ನಿಜವಾದ ಪ್ರೇಮಿ. ಹಾಗಾದರೆ ಯಾವ ಇಂದ್ರಿಯ ಏನು ಮಾಡುತ್ತದೆ ಮತ್ತು ನಾವು ಅದಕ್ಕೇನು ಮಾಡಬೇಕು ಎಂಬುದನ್ನು ನೋಡೋಣ.
Related Articles
Advertisement
ಚಿ|| ಉದಯಶಂಕರ್ ಹಾಡಿನ ಈ ಸಾಲು ನನ್ನನ್ನು ತುಂಬಾ ಕಾಡುತ್ತದೆ, “”ನೂರು ಮಾತು ಏಕೆ ಒಲವಿಗೆ… ನೋಟ ಒಂದೇ ಸಾಕಾಗಿದೆ…” ಸತ್ಯವಾದ ಮಾತು. ಪ್ರೇಮ ಮೊಳಕೆಯೊಡೆಯಲು ನೂರು ಮಾತುಗಳಿಗಿಂತ ಒಂದು ನೋಟ ಮುಖ್ಯ. ಲವ್ ಅಟ್ ಫಸ್ಟ್ ಸೈಟ್ ಇವತ್ತಿಗೂ ಚಾಲ್ತಿಯಲ್ಲಿರುವುದು ಅದಕ್ಕೇ ಇರಬೇಕು.
ಕಣ್ಣು ಬಹುಮುಖ್ಯ ಇಂದ್ರಿಯ. ಅದರ ಗುಟ್ಟುಗಳನ್ನು ಅರಿತುಕೊಂಡು, ಅದರ ಆಸೆಗಳನ್ನು ಪೂರೈಸುವುದೇ ಒಬ್ಬ ವ್ಯಕ್ತಿ ತನ್ನ ಪ್ರೇಮಿಗಾಗಿ ಮಾಡಬೇಕಾದ ಕೆಲಸ. ಕಣ್ ಹೊಡೆದಷ್ಟು ಸುಲಭವಲ್ಲ ಇದು! ಕಣ್ಣಿನ ಸುಂದರ ಕನಸುಗಳನ್ನು ಅರಿತುಕೊಳ್ಳುವ ಸಾಮರ್ಥ್ಯ ಅವನಲ್ಲಿರಬೇಕು. ಆಗ ಅವನು ಒಂದು ರೂಪಾಯಿಯಲ್ಲಿ 20 ಪೈಸೆಯಷ್ಟು ಪ್ರೇಮಿಯಾಗಬಲ್ಲ. ಹಾಗಾದರೆ ಇನ್ನು 80 ಪೈಸೆ ಎಲ್ಲಿ? ಅವು ಇನ್ನಿತರ ನಾಲ್ಕು ಇಂದ್ರಿಯಗಳಲ್ಲಿವೆ.
ಕಿವಿ: ಎಲ್ಲ ಸಂಬಂಧಗಳಲ್ಲೂ ಬಹಳ ಮುಖ್ಯ ಪಾತ್ರವಹಿಸುತ್ತದೆ. ಕಿವಿಯಲ್ಲಿ ಕೇಳಿದ ಮಾತುಗಳಿಂದಲೇ ಸಂಬಂಧ ಶುರುವಾಗುವುದು ಅಥವಾ ಸಂಬಂಧ ಕಿತ್ತು ಹೋಗುವುದು. ಅದರ ಗುಣವೇ ಕೇಳಿದ ಮಾತುಗಳಿಗೆ ಪ್ರತಿಕ್ರಿಯಿಸುವಂತೆ ಮಾಡುವುದು. ಆದರೆ ಅದು ಪ್ರತಿಕ್ಷಣ ಹಿತ ನುಡಿಗಳಿಗೆ ಎದುರು ನೋಡುತ್ತಿರುತ್ತದೆ. ಒಬ್ಬ ವ್ಯಕ್ತಿಯನ್ನು ನಾನು ನನ್ನ ಪ್ರೇಮಿ ಅಂತ ಸ್ವೀಕರಿಸಬೇಕಾದರೆ ನನ್ನ ಕಿವಿಗಳು ಅದಕ್ಕೆ ಒಪ್ಪಿಗೆ ಸೂಚಿಸಬೇಕು. ಅವನು ನನ್ನೊಂದಿಗೆ ಆಡುವ ಮೊದಲ ಮಾತು. ಹೊಗಳಿಕೆ, ಭರವಸೆ, ನನಗೋಸ್ಕರ ಹಾಡುವ ಪ್ರಣಯ ಗೀತೆ, ಅವನ ಹಾಸ್ಯಪ್ರಜ್ಞೆ, ನಮ್ಮ ಮುಂದಿನ ದಿನಗಳ ಬಗ್ಗೆ ಅವನಿಗಿರುವ ಕಾತುರ, ನನ್ನ ಅಂತರಂಗದಲ್ಲಿರುವ ಆಸೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ನನ್ನಲ್ಲಿ ಅವನ ಬಗ್ಗೆ ಬಯಕೆಗಳನ್ನು ಹುಟ್ಟಿಸುವಂತಹ ಮಾತು, ನಾನು ವಿಶೇಷ ಅನ್ನುವುದನ್ನು ಖಚಿತಪಡಿಸಲೆಂದೇ ನನಗಾಗಿ ನುಡಿದ ಸಾಲುಗಳು, ಮುಂದಿನ ನಮ್ಮ ಸಂಸಾರದ ಕನಸು, ಅವನು ನನ್ನ ಜತೆ ಇಲ್ಲದಿದ್ದಾಗಲೂ ನನ್ನನ್ನು ಕಾಡುವ ಅವನ ಧ್ವನಿ/ಮಾತುಗಳು ಇವೆಲ್ಲ ನನ್ನ ಅಂತರಂಗ ತಲುಪಿ, ನನ್ನಲ್ಲಿ ನಾನೇ ಹಿತವಾದ ಬದಲಾವಣೆಗಳನ್ನು ಅನುಭವಿಸುವುದು ನನ್ನ ಕಿವಿಗಳು ಅವನಾಡುವ ಮಾತುಗಳನ್ನು ಕೇಳಿದಾಗಲೇ. ಎಲ್ಲ ಹುಡುಗಿಯರೂ ತನ್ನ ಪ್ರೇಮಿ ತನ್ನ ಜತೆ ಸುಂದರವಾದ ಮಾತುಗಳನ್ನಾಡಲಿ ಎಂದು ಬಯಸುತ್ತಾರೆ. ಅದನ್ನು ಪ್ರಚೋದಿಸುವುದೇ ಅವಳ ಕಿವಿ. ಯಾವುದೇ ಸಂದರ್ಭದಲ್ಲಾದರೂ ಕರ್ಕಶ ಮಾತುಗಳನ್ನು, ಅಹಿತವಾದದ್ದನ್ನು, ಕೆಟ್ಟ ಪದಗಳನ್ನು ಕೇಳಿದ ತತ್‌ಕ್ಷಣ, ಕಿವಿ ಸಂಬಂಧಗಳನ್ನೇ ತಿರಸ್ಕರಿಸುತ್ತದೆ. ಏಕೆಂದರೆ ಧ್ವನಿಯ ಮೂಲಕ ಪ್ರಸರಿಸುವ ತರಂಗಗಳು ಅವಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ.
ಎಷ್ಟೋ ಹುಡುಗಿಯರು ಹುಡುಗನ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಅವನನ್ನು ಪ್ರೀತಿಸಲು ಶುರುಮಾಡಿರುತ್ತಾರೆ. ಕಿವಿಗೆ ಪ್ರೀತಿಯಲ್ಲಿ ಎಷ್ಟು ಮುಖ್ಯವಾದ ಸ್ಥಾನ ಅನ್ನುವುದನ್ನು ಇದರಿಂದಲೇ ನಾವು ತಿಳಿದುಕೊಳ್ಳಬಹುದು. ಅನೇಕ ಹುಡುಗಿಯರು ತನ್ನ ಪ್ರೇಮಿ ಸರಿಯಾಗಿ ಮಾತುಗಳಿಂದ ಪ್ರತಿಕ್ರಿಯಿಸುತ್ತಲ್ಲವೆಂದೇ ಅವನಿಂದ ದೂರವಾಗುತ್ತಾರೆ. ಒಂದು ಹುಡುಗಿಯನ್ನು ಹೆಣ್ಣಾಗಿ, ಪ್ರೇಮಿಯಾಗಿ ಪರಿವರ್ತಿಸಬೇಕಾದರೆ ಒಬ್ಬ ಹುಡುಗನ ಧ್ವನಿ ಮತ್ತು ಮಾತುಗಳು ಬಹಳ ಮುಖ್ಯ. ಇದು ಹುಡುಗರಿಗೆ ಅರಿವಾಗಬೇಕು. ವಿರುದ್ಧ ಕೋನದಲ್ಲೂ, ಅಂದರೆ ಹುಡುಗಿಯಿಂದ ಹುಡುಗನಿಗೂ ಇದು ಅನ್ವಯಿಸುತ್ತದೆ. ಪ್ರೀತಿ ಮೌನವಾಗಿ ಪ್ರವಹಿಸುತ್ತದೆ ಎಂಬುದು ಅದರ ನೆಲೆಗಟ್ಟಿನಲ್ಲಿ ನಿಜವಾದರೂ ಮಾತಿಲ್ಲದ ಪ್ರೀತಿಯಲ್ಲಿ, ಅರ್ಥಾತ್ ಕಿವಿಯೊಳಗೆ ಹೊಕ್ಕು ಮನದೊಳಗೆ ಮನೆ ಮಾಡದ ಪ್ರೀತಿಯಲ್ಲಿ ಈ ಚಕ್ರ ಪೂರ್ಣಗೊಳ್ಳುವುದಿಲ್ಲ. ಸಂಗಾತಿಯನ್ನು ಮಾತಿನಲ್ಲೇ ತೃಪ್ತಿಪಡಿಸುವ ಕಲೆ ತಿಳಿದಿರುವವರು ತಮ್ಮ ಪ್ರೀತಿಯ ಎರಕಕ್ಕೆ ಶೃಂಗಾರದ ಸಿಂಗಾರ ಮಾಡಿ ಅದನ್ನು ಎತ್ತರದ ಸ್ತರಕ್ಕೆ ಕೊಂಡೊಯ್ಯುತ್ತಾರೆ. ಪ್ರೀತಿಯ ಭಾಷೆಯಲ್ಲಿ ಕಿವಿ ಕಿವಿಯಷ್ಟೇ ಅಲ್ಲ. ಹಾಗಾದರೆ ಅದೇನು ಎಂಬುದನ್ನು ಕಂಡುಕೊಳ್ಳುವುದು ಕಷ್ಟವೂ ಅಲ್ಲ. ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ… ಪ್ರೀತಿಯ ಮಾತುಗಳಿಂದ ಎಲ್ಲ ಜೀವಿಗಳೂ ಸಂತೋಷಪಡುತ್ತವೆ. ಸಂತೋಷಪಡುವ ಕ್ರಿಯೆಯಲ್ಲಿ ಅಡಗಿರುವುದು ಪ್ರೀತಿಯೇ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪ್ರೀತಿಯಲ್ಲಿ ಇನ್ನು ಮೂರು ಇಂದ್ರಿಯಗಳ ಪಾತ್ರ ಏನು ಎನ್ನುವುದನ್ನು ಮುಂದಿನ ವಾರ ನೋಡೋಣ.
ರೂಪಾ ಅಯ್ಯರ್