Advertisement

ಮನಸು ಕದ್ದವಳು ಕನಸಿಗೂ ಬಂದೋಳು ಅದೆಲ್ಲಿ ಹೋಗ್ಬಿಟ್ಟೆ?

06:00 AM Nov 13, 2018 | |

ಕಳೆದ ಒಂದು ವಾರದಿಂದ ನೀನು ಬಟ್ಟೆ ಅಂಗಡಿಯಲ್ಲಿ ಕಾಣಿಸುತ್ತಿಲ್ಲ. ನಿನಗೇನಾಯ್ತು ಎಂದು ತಿಳಿಯದೆ ಒದ್ದಾಡುತ್ತಿದ್ದೇನೆ. ಮೊನ್ನೆ ಯಾವುದಕ್ಕೂ ಇರಲಿ ಎಂದು ಓನರ್‌ ಅನ್ನೇ ನೇರವಾಗಿಯೇ ಕೇಳಿದರೆ, ಅವಳು ರಜೆ ಮೇಲಿದ್ದಾಳೆ. ವಿಷಯ ಗೊತ್ತಿಲ್ಲ ಎಂದರು. ಅವತ್ತಿನಿಂದ ನನ್ನ ಟೆನನ್‌ ಮತ್ತಷ್ಟು ಜಾಸ್ತಿಯಾಗಿದೆ. 

Advertisement

ಹಾಯ್‌ ಸಹಜಾ,
ಬಹಳ ದಿನಗಳಿಂದ ನೀನು ಅಂಗಡಿಯಲ್ಲಿ ಕಾಣಿಸಿಕೊಳ್ಳದೇ ಇರುವುದನ್ನು ತಿಳಿದು ತಡೆಯಲಾಗದೆ ಈ ಪತ್ರ ಬರೆಯುತ್ತಿದ್ದೇನೆ. ನೀನೆಲ್ಲೇ ಇದ್ದರೂ ಇದು ನಿನ್ನನ್ನು ತಲುಪುತ್ತದೆ ಎನ್ನುವ ವಿಶ್ವಾಸ ನನ್ನದು. ನಿಂಗೊತ್ತಾ? ಈಗ ನೀನು ಕೆಲಸ ಮಾಡುತ್ತಿರುವ ಬಟ್ಟೆ ಅಂಗಡಿ ಇದೆಯಲ್ಲಾ, ಸಣ್ಣವನಿದ್ದಾಗಿನಿಂದಲೂ ಅದೇ ಅಂಗಡಿಗೆ ನಾನು ಬಟ್ಟೆ ಕೊಳ್ಳಲಿಕ್ಕೆ ಬರುತ್ತಿದ್ದುದು. ನಾನು ಪ್ರತಿ ಸಲ ಬಂದಾಗಲೂ, ನಿಮ್ಮ ಓನರ್‌ ಸಣ್ಣಗೊಂದು ನಗು ಬೀರಿ, “ನಿಮ್ಮನ್ನು ಈಗ ನೋಡಿದ್ರೂ ಅದೇ ನೆನಪಾಗುತ್ತೆ’ ಅಂತಾರೆ. ಆಗ ನೀನು ನನ್ನೆಡೆಗೆ ಓರೆನೋಟ ಬೀರಿ, ಹುಬ್ಬೇರಿಸಿ, ಏನು ಅಂತ ಪ್ರಶ್ನಿಸುತ್ತಿದ್ದೆ. ನಾನು ಆಕಡೆ ಹೇಳಲಾಗದೆ, ಈ ಕಡೆ ಬಿಡಲಾಗದೆ ನಾಚಿಕೆಯಿಂದ ತಲೆ ತಗ್ಗಿಸುತ್ತಿದ್ದೆ. 

 ಅದೇನಂತ ಇವತ್ತು ಹೇಳ್ತೀನಿ ಕೇಳು. ನಾನಾಗ ನಾಲ್ಕನೇ ಕ್ಲಾಸ್‌ನಲ್ಲಿದ್ದೆನಂತೆ. ಅಪ್ಪನ ಬಳಿ ಹೊಸ ಪ್ಯಾಂಟು ಕೊಡಿಸೆಂದು ಹಠ ಹಿಡಿದು, ದೊಣ್ಣನಾಗಿಯೇ ಅಂಗಡಿಗೆ ಬಂದಿದ್ದೆನಂತೆ. ಕೊನೆಗೆ, ಹೊಸ ಪ್ಯಾಂಟು ಖರೀದಿಸಿ, ಅದನ್ನು ಹಾಕಿಕೊಂಡೇ ಅಲ್ಲಿಂದ ವಾಪಸಾಗಿದ್ದಂತೆ. ಸತ್ಯ ಹೇಳ್ತೀನಿ, ನನಗಂತೂ ಇದು ನೆನಪಿಲ್ಲ. ಆದರೆ, ನಿಮ್ಮ ಓನರ್‌ ಮಾತ್ರ ಇದನ್ನು ನೆನಪಿಸಿಕೊಂಡು ನಗುತ್ತಿರುತ್ತಾರೆ. ಮೊದಲೆಲ್ಲಾ ನನಗೇನೂ ಅನ್ನಿಸುತ್ತಿರಲಿಲ್ಲ. ನಾನೂ ಅವರ ಜೊತೆಗೆ ಸೇರಿ ನಗುತ್ತಿದ್ದೆ. ಆದರೆ, ಈಗ ನಿನ್ನೆದುರು ಅವರು ಹಾಗೆ ನಕ್ಕಾಗಲೆಲ್ಲಾ ನಖಶಿಖಾಂತ ಕೋಪ ಬರುತ್ತದೆ. ಇನ್ನೊಮ್ಮೆ ಅಂಗಡಿ ಕಡೆ ತಲೆ ಹಾಕಬಾರದು ಅನ್ನಿಸುತ್ತದೆ. ಆದರೂ ನಿನ್ನ ಮುಖ ನೋಡಬೇಕು ಅನ್ನಿಸಿದಾಗೆಲ್ಲ, ನಿಮ್ಮ ಓನರ್‌ನ ಮಾತುಗಳೆಲ್ಲ ಕೇಳಿಸಲೇ ಇಲ್ಲ ಅಂದುಕೊಂಡು ಬಂದೇ ಬಿಡುತ್ತೇನೆ ಮತ್ತೆ ಮತ್ತೆ.. 

ಆರು ತಿಂಗಳ ಹಿಂದೆ ನೀನು ಅಂಗಡಿಗೆ ಸೇರಿದ್ದು. ಜೀನ್ಸ್‌ ಖರೀದಿಗೆಂದು ನಿಮ್ಮಲ್ಲಿ ಬಂದಿದ್ದೆ. ಏನು ಬೇಕು ಎಂದು ನೀನು ಕೇಳಿದಾಗಲೇ ಅದೆಂಥದೋ ರೋಮಾಂಚನ. ನೀನು ಪ್ಯಾಂಟುಗಳನ್ನು ತೋರಿಸುತ್ತಾ ಮಾತಾಡುತ್ತಿದ್ದರೆ, ನಾನು ನಿನ್ನನ್ನೇ ನೋಡುತ್ತಾ ನಿಂತಿದ್ದೆ. ಬೇಕು ಬೇಕಂತಲೇ, ನೀನು ತೋರಿಸಿದ್ದನ್ನೆಲ್ಲ ನಿರಾಕರಿಸಿದ್ದೆ. ಆ ಮಧ್ಯೆ ಇಬ್ಬರ ದೃಷ್ಟಿ ಸೇರಿದಾಗ, ನನಗರಿವಿಲ್ಲದೆ ಕಂಪಿಸಿ ನಾಚಿ ನೀರಾಗಿದ್ದೆ. ನೀನೂ ಮಾತನಾಡಲು ತಡವರಿಸಿದ್ದೆ..ಅಲ್ವಾ? ಆವತ್ತೇ ನಿನ್ನ ಬಗೆಗೊಂದು ಆಸಕ್ತಿ ಹುಟ್ಟಿಬಿಟ್ಟಿತ್ತು. “ನೀವೇ ಒಂದು ಜೀನ್ಸ್‌ ಸೆಲೆಕ್ಟ್ ಮಾಡಿ, ನಿಮ್ಮಿಷ್ಟವೇ ನನ್ನಿಷ್ಟ’ ಎಂದುಬಿಟ್ಟಿದ್ದೆ. ಆ ಮಾತು ನಿನಗೆಷ್ಟು ಅರ್ಥ ಆಯಿತೋ ಗೊತ್ತಿಲ್ಲ. ನೀನು ಕೊಟ್ಟ ಗಾಢ ನೀಲಿ ಬಣ್ಣದ ಪ್ಯಾಂಟನ್ನು ಮನೆಗೆ ತಂದು, ಕನ್ನಡಿಯೆದುರು ಹಿಡಿದು ನಿನ್ನ ನಗುವನ್ನೇ ನೆನಪಿಸಿಕೊಂಡಿದ್ದು ಅದೆಷ್ಟು ಸಲವೋ? ಅವತ್ತಿನಿಂದ ಅನವಶ್ಯಕವಾಗಿ ನಾನು ಬಟ್ಟೆ ಅಂಗಡಿ ಕಡೆ ಸುಳಿಯಲಾರಂಭಿಸಿದ್ದೆ. ಮೊದ ಮೊದಲು ಶರ್ಟ್‌, ಪ್ಯಾಂಟ್‌, ಸ್ವೆಟರ್‌ ಅಂತೆಲ್ಲಾ ಖರೀದಿ ಮಾಡಿ, ಹಣ ಖಾಲಿಯಾಗುತ್ತಿದೆ ಎನಿಸಿದಾಗ ಕಚೀìಫ್ ಕೊಡಿ ಎಂದು ಬರುತ್ತಿದ್ದೆ. ಕೊನೆಕೊನೆಗೆ ನಾನು ಬಂದಾಗೆಲ್ಲಾ, ನೀನು “ಕರ್ಚಿಫ್ ಬೇಕಿತ್ತಾ?’ ಅಂತ ಕೇಳಲು ಶುರು ಮಾಡಿದ್ದೆ. 

ಸತ್ಯ ಹೇಳು ಸಹಜಾ, ನಾನು ಬರುತ್ತಿದ್ದು ನಿನಗಾಗಿ ಎನ್ನುವುದು ನಿನಗೂ ಗೊತ್ತಿತ್ತು ಅಲ್ವಾ? ಅದೊಂದು ದಿನ ಬಟ್ಟೆ ಪ್ಯಾಕ್‌ ಮಾಡಿ ಕೊಡುವಾಗ ನಿನ್ನ ಕೈ, ನನ್ನ ಕೈಬೆರಳುಗಳನ್ನು ಆಕಸ್ಮತ್ತಾಗಿ ಸ್ಪರ್ಶಿಸಿದ್ದಾಗ, ನಾನು ಇನ್ನಿಲ್ಲದ ರೋಮಾಂಚನ ಅನುಭವಿಸಿದ್ದೆ. ಮನೆಗೆ ಬಂದು ನನ್ನ ಬೆರಳುಗಳನ್ನು ಎಷ್ಟು ಸಲ ಮುಟ್ಟಿ ನೋಡಿಕೊಂಡೆ ಗೊತ್ತಾ? ನಿಮ್ಮ ಓನರ್‌ ಅಲ್ಲೇ ಇರುವುದರಿಂದ, ಇಬ್ಬರ ನಡುವೆ ಮಾತಿಗೆ ಅವಕಾಶವೇ ಇರಲಿಲ್ಲ. ನೀನು ದೂರದ ಕುಂದಾಪುರದಿಂದ ಬರುತ್ತೀಯ ಎನ್ನುವುದನ್ನು ಬಿಟ್ಟರೆ ಬೇರೇನೂ ನನಗೆ ಗೊತ್ತಿಲ್ಲ. 

Advertisement

ದಿನಾ ಕೆಲಸ ಮುಗಿಸಿ ಬರುವಾಗ, ನಿಮ್ಮ ಅಂಗಡಿಯ ಕಡೆ ಕಣ್ಣು ಹಾಯಿಸುತ್ತಿದ್ದೆ. ನೀನು ನನಗಾಗೇ ಕಾದಿರುವಳಂತೆ ಒಂದು ನಗುವನ್ನು ಚೆಲ್ಲಿಬಿಡುತ್ತಿದ್ದೆ. ಅದೇಕೋ ಗೊತ್ತಿಲ್ಲ, ನಿನ್ನನ್ನು ತುಂಬಾ ಹಚ್ಚಿಕೊಂಡುಬಿಟ್ಟಿದ್ದೇನೆ. ಇಂದಲ್ಲ ನಾಳೆ ನಿನ್ನ ಬಳಿ ಮಾತಾಡುತ್ತೇನೆ, ಪ್ರೀತಿ ಹಂಚಿಕೊಳ್ಳುತ್ತೇನೆ, ನಿನ್ನನ್ನೇ ಮದುವೆಯಾಗುತ್ತೇನೆ ಅಂತ ಕೂಡ ಕನಸು ಕಾಣುತ್ತಿದ್ದೇನೆ.  

ಆದರೆ, ಕಳೆದ ಒಂದು ವಾರದಿಂದ ನೀನು ಬಟ್ಟೆ ಅಂಗಡಿಯಲ್ಲಿ ಕಾಣಿಸುತ್ತಿಲ್ಲ. ನಿನಗೇನಾಯ್ತು ಎಂದು ತಿಳಿಯದೆ ಒದ್ದಾಡುತ್ತಿದ್ದೇನೆ. ಮೊನ್ನೆ ಯಾವುದಕ್ಕೂ ಇರಲಿ ಎಂದು ಓನರ್‌ ಅನ್ನೇ ನೇರವಾಗಿಯೇ ಕೇಳಿದರೆ, ಅವಳು ರಜೆ ಮೇಲಿದ್ದಾಳೆ. ವಿಷಯ ಗೊತ್ತಿಲ್ಲ ಎಂದರು. ಅವತ್ತಿನಿಂದ ನನ್ನ ಟೆನನ್‌ ಮತ್ತಷ್ಟು ಜಾಸ್ತಿಯಾಗಿದೆ. ನಿನ್ನೆ ರಾತ್ರಿ, ನಿಂಗೆ ಮದುವೆ ಆದಹಾಗೆ ಕನಸು ಕೂಡ ಬಿದ್ದಿತ್ತು. ಅದಾದ ಬಳಿಕ ಹುಚ್ಚು ಹಿಡಿದ ಹಾಗಾಗಿದೆ. ದಯವಿಟ್ಟು ಅಂಗಡಿಗೆ ಮರಳಿ ಬಾ. ನಿನಗಾಗಿ ಕಾಯುತ್ತಿದ್ದೇನೆ. 

ಇತಿ ನಿನ್ನ ನಗುವಿನ ಕಾಯಂ ಗ್ರಾಹಕ 
ನರೇಂದ್ರ ಎಸ್‌ ಗಂಗೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next