Advertisement

ಮೋದಿ ಭದ್ರತೆಗೆ ತೆರಳಿದ್ದ ಯೋಧನ ದೇಹದಲ್ಲಿ30ಕ್ಕೂ ಹೆಚ್ಚು ಗ್ರೆನೇಡ್‌ ಚೂರುಗಳು

09:58 AM Jun 12, 2022 | Team Udayavani |

ಕಲಬುರಗಿ: ಹಗಲಿರಳು ದೇಶ ಕಾಯುವ ಮತ್ತು ಪ್ರಧಾನಿ ಮೋದಿ ಅವರ ಏ.24ರ ಜಮ್ಮು-ಕಾಶ್ಮೀರ ಕಾರ್ಯಕ್ರಮದ ಭದ್ರತೆ ಕರ್ತವ್ಯಕ್ಕೆ ನಿಯೋಜನೆಯಾಗಿ ಏ.22ರ ರಾತ್ರಿ ಉಗ್ರರ ಗುಂಡಿಗೆ ಎದೆಯೊಡ್ಡಿ ಗಾಯಗೊಂಡು, ತಿಂಗಳ ಕಾಲ ಕೋಮಾಕ್ಕೆ ತುತ್ತಾಗಿ, ಕೊನೆಗೆ ಸಾವು ಗೆದ್ದು ನೋವಿನಲ್ಲಿರುವ ಸೈನಿಕ ಈಗ ಸರ್ಕಾರದ ಎದುರು ತನಗೆ ಉತ್ತಮ ಚಿಕಿತ್ಸೆ ಕೊಡಿಸಿ ಎಂದು ಮೊರೆ ಇಟ್ಟಿದ್ದಾರೆ.

Advertisement

ಉಗ್ರರ ಎರಡು ಗುಂಡು ದೇಹ ಹೊಕ್ಕರೂ ಉಸಿರು ಚೆಲ್ಲದ ಸೈನಿಕ, ಸೆಂಟ್ರಲ್‌ ಇಂಡಸ್ಟ್ರೀಯಲ್‌ ಸೆಕ್ಯೂರಿಟಿ ಫೋರ್ಸ್‌ನಲ್ಲಿ (ಸಿಐಎಸ್‌ಎಫ್‌)3ನೇ ಆರ್ಮಿ ಬಟಾಲಿಯನ್‌ ಜವಾನ್‌ ಆಳಂದ ತಾಲೂಕಿನ ಹಿರೋಳ್ಳಿ ಗ್ರಾಮದ ಸೈನಿಕ ವಿಠ್ಠಲ ಶಾಂತಪ್ಪ ವಾಡೇದ್‌ ಸಾವಿಗೆ ಬೆನ್ನು ತೋರಿಸಿಲ್ಲ. ಉಗ್ರರಿಗೆ ತಿರುಗಿ ಉತ್ತರ ಕೊಡಬೇಕೆನ್ನುವಾಗಲೇ ಅನತಿ ದೂರದಲ್ಲಿದ್ದ ಗ್ರೆನೇಡ್‌ ಸಿಡಿದು ದೇಹದ ನಾನಾ ಭಾಗಗಳಲ್ಲಿ ಅದರ ಚೂರುಗಳು ಹೊಕ್ಕಿವೆ. ಇದರಿಂದಾಗಿ ಅವರು ತಿಂಗಳ ಕಾಲ ಕೋಮಾಕ್ಕೆ ಒಳಗಾಗಿದ್ದರು ಎನ್ನುವ ಅಂಶವನ್ನು ಸೇನಾ ಆಸ್ಪತ್ರೆ ವೈದ್ಯರು ಖಾತ್ರಿಪಡಿಸಿದ್ದಾರೆ.

ನಮ್ಮೂರಾಗೇ ಉಸಿರು ಚೆಲ್ಲಲ್ಲಿ

ಏ.22ರ ರಾತ್ರಿ ಕರ್ತವ್ಯ ಮುಗಿಸಿ ಬ್ಯಾರೇಗ್‌ ಕಡೆಗೆ ಹೊರಟಾಗ ಏಕಾಏಕಿ ಉಗ್ರರು ವಿಠ್ಠಲ ವಾಡೇದ್‌ ಇದ್ದ ವಾಹನದ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಅವರಿಗೆ ಉತ್ತರ ಕೊಡುವಾಗ ತಂಡದ ಅಧಿಕಾರಿಯೊಬ್ಬರು ಕಣ್ಣೇದುರೇ ಉಸಿರು ಚೆಲ್ಲಿದ್ದಾರೆ. ಎಲ್ಲ ಗಡಿಬಿಡಿಯಲ್ಲಿ ಇವರಿಗೂ ಎರಡು ಗುಂಡು ದೇಹ ಹೊಕ್ಕಿವೆ. ಇದಾದ ಕೆಲವೇ ಕ್ಷಣದಲ್ಲಿ ಅನತಿ ದೂರದಲ್ಲಿ ಸಿಡಿದ ಗ್ರೆನೇಡ್‌ನ‌ ಚೂರುಗಳು ದೇಹ ಹೊಕ್ಕಾಗ ಸಾವು ಎದೆ ತಟ್ಟಿದೆ. ಮುಂದೆ ಒಂದು ತಿಂಗಳು ಕೋಮಾದಲ್ಲಿದ್ದರು. ಅದಾದ ಬಳಿಕ ಅವರಿಗೆ ಪ್ರಜ್ಞೆ ಮರುಕಳಿಸಿ ಯತಾಸ್ಥಿತಿಗೆ ಬಂದಾಗ ವೈದ್ಯರ ಪ್ರಯತ್ನ ಮುಗಿದಿತ್ತು.

ಆಪರೇಷನ್‌ ಮಾಡಿ ಗುಂಡು ಮತ್ತು ಕೆಲವು ಗ್ರೆನೇಡ್‌ ಚೂರುಗಳು ತೆಗೆದಿದ್ದರು. ಆದರೆ, ಬದುಕುಳಿಯುವುದು ಕಷ್ಟ ಎಂದರು. ಆಗ “ಏನೇ ಆಗಲಿ.. ತಮ್ಮ ನಮ್ಮೂರಲ್ಲೇ ಉಸಿರು ಚೆಲ್ಲಲಿ.. ಇದ್ದಷ್ಟು ದಿವಸ ಕಣ್ಣಲ್ಲೇ ಇಟ್ಟು ಕಾಪಾಡಿಕೊಳ್ಳಬೇಕು ಅಂತ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹಿರೋಳ್ಳಿಗೆ ತಂದೀವ್ರಿ, ಏನ್‌ ಮಾಡೋದು.. ಇಲ್ಲಿನ ದವಾಖಾನಿಯೊಳಗ ತಮ್ಮನಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ದೂರದ ದೊಡ್ಡೂರಿನ ದವಾಖಾನೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸೋದು ಕಷ್ಟ. ಇದ್ದ ಹಣದಲ್ಲಿ ಕಳೆದ ಒಂದು ವಾರದಿಂದ ಕಲಬುರಗಿಯ ಇಎಸ್‌ ಎಂ ದವಾಖಾನೆಯಲ್ಲಿ ತೋರಿಸುತ್ತಿದ್ದೇವೆ. ಭರವಸೆ ಇಲ್ಲ, ಆಸರೆ ಇದೆ’ ಎನ್ನುತ್ತಾರೆ ಸಹೋದರ ಕಾಶೀನಾಥ ವಾಡೇದ್‌.

Advertisement

ಇದನ್ನೂ ಓದಿ:ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾಯ್ತು ನಾಪತ್ತೆಯಾಗಿದ್ದ ಹೆಲಿಕಾಪ್ಟರ್! 7 ಮಂದಿ ಸಾವು

ದೇಹದಲ್ಲಿವೇ 30ಕ್ಕೂ ಹೆಚ್ಚು ಗ್ರೆನೇಡ್ಚೂರು

ಈಗಲೂ ವಿಠ್ಠಲ ವಾಡೇದ್‌ ದೇಹದಲ್ಲಿ 30ಕ್ಕೂ ಹೆಚ್ಚು ಗ್ರೆನೇಡ್‌ ಚೂರುಗಳಿವೆ. ಬಹುತೇಕ ಚೂರುಗಳು ಲಂಗ್ಸ್‌ ಸೇರಿವೆ. ಇದರಿಂದಾಗಿ ವಾಡೇದ್‌ ದೇಹ ಸ್ಥಿತಿ ಗಂಭೀರಕ್ಕೆ ತಿರುಗಿದೆ. ಊರಿಗೆ ಬಂದ ಆರಂಭದಲ್ಲಿ ತುಸು ತೊಂದರೆ ಇದ್ದರೂ ಊರವರ, ಜಾತಿಯವರ ಅಭಿಮಾನಕ್ಕೆ ಕಟ್ಟು ಬಿದ್ದು ಸನ್ಮಾನ, ಗೌರವಾದರಗಳು ಹುಡುಕಿ ಬಂದವು. ಈಗ ಆರೋಗ್ಯವೇ ಕೈಕೊಡುತ್ತಿದೆ. ಮನೆಯಲ್ಲಿ ಬಡತನ. ಎರಡು ಎಕರೆ ಜಮೀನು ಇದೆ. ಅಪ್ಪ ಇಲ್ಲ, ಅಕ್ಕನ ಮದುವೆಯಾಗಿದೆ. ತಮ್ಮನ ಮದುವೆ ಇಲ್ಲ. ಹೀಗಾಗಿ ಉತ್ತಮ ಚಿಕಿತ್ಸೆ ಸಿಕ್ಕರೆ ದೇಶಕ್ಕಾಗಿ ಉಗ್ರರ ಗುಂಡಿಗೆ ಎದೆ ಕೊಟ್ಟ ಸೈನಿಕನನ್ನು ಉಳಿಸಿಕೊಳ್ಳುವ ಭಾಗ್ಯ ಕಲಬುರಗಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯಕ್ಕೂ ಸಿಗಲಿ ಎನ್ನುವುದು ಜನರ ಆಶಯ.

ಡಿಸಿ ಗುರುಕರ್‌ ಅಭಯ ಆಳಂದ ತಾಲೂಕಿನ ಹಿರೋಳ್ಳಿ ಗ್ರಾಮದ ಸೈನಿಕ ವಿಠ್ಠಲ ವಾಡೇದ್‌ ಅವರಿಗೆ ನಾವು ಎಲ್ಲ ರೀತಿಯ ವೈದ್ಯಕೀಯ ನೆರವು ನೀಡಲು ತಯಾರಾಗಿದ್ದು, ಶೀಘ್ರವೇ ಔಷಧಗಳ ಪೂರೈಕೆ ಮಾಡಲಾಗುವುದು. ಅಲ್ಲದೇ, ಹತ್ತಿರದ ಸೇನಾ ದವಾಖಾನೆಗಳಿಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಸಾಧ್ಯವಿರುವ ಎಲ್ಲ ಹಂತದ ನೆರವು ನೀಡಲು ಸಿದ್ಧ. ದೇಶಕ್ಕಾಗಿ ಪ್ರಾಣ ಕೊಡುವ ಸೈನಿಕನಿಗೆ ಜಿಲ್ಲಾಡಳಿತ ಅಭಯ ನೀಡದೇ ಇರುತ್ತದೆಯೇ ಎಂದು ಜಿಲ್ಲಾಧಿಕಾರಿ ಯಶವಂತ್‌ ಗುರುಕರ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ನನ್ನ ತಮ್ಮ ದೇಶಕ್ಕಾಗಿ ಜೀವ ಸಮರ್ಪಿಸುವ ಹಂತದಲ್ಲಿದ್ದಾನೆ. ಉಗ್ರರ ಗುಂಡಿಗೆ ಎದೆ ಕೊಟ್ಟು ಪುನರ್ಜನ್ಮ ಪಡೆದಿದ್ದಾನೆ. ಆತನ ದೇಹದಲ್ಲಿ ಗ್ರೆನೇಡ್‌ ಚೂರುಗಳಿವೆ. ಅವುಗಳನ್ನು ಹೊರ ತೆಗೆದು ಶಸ್ತ್ರ ಚಿಕಿತ್ಸೆ ನೀಡಬೇಕಿದೆ. ಇದಕ್ಕಾಗಿ ದೊಡ್ಡ ಮಟ್ಟದ ಹಣದ ಮತ್ತು ವೈದ್ಯಕೀಯ ನೆರವು ಬೇಕು. ಕೂಡಲೇ ನಮ್ಮ ಕುಟುಂಬದ ನೆರವಿಗೆ ಸರ್ಕಾರ ಬಂದರೆ ಕೊನೆಯ ಪಕ್ಷ ನನ್ನ ತಮ್ಮ ಉಳಿದಾನು ಎನ್ನುವ ಭರವಸೆ ಇದೆ. ಕಾಶೀನಾಥ ಶಾಂತಪ್ಪ ವಾಡೇದ್‌, ವಿಠ್ಠಲ ಸಹೋದರ

-ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next