Advertisement

ನಿಧಿ ಆಸೆಗೆ ವಿಗ್ರಹ ಕಿತ್ತರು

04:36 PM Apr 12, 2018 | Team Udayavani |

ಆನಂದಪುರ: ಸಮೀಪದ ಮಲಂದೂರಿನಲ್ಲಿ ಚಂಪಕ ಸರಸ್ಸು ಎಂಬ ಐತಿಹಾಸಿಕ ಕೊಳದ ಮಧ್ಯದಲ್ಲಿ ನಂದಿ ವಿಗ್ರಹವನ್ನು ಒಳಗೊಂಡ ದೇವರ ಗುಡಿಯಿದೆ. 3-4 ದಿನಗಳ ಹಿಂದೆ ನಿಧಿಯಾಸೆಗೆ ವಾಮಾಚಾರ ನಡೆಸಿ ದೇವರ ಪಾಣಿಪೀಠ ಮತ್ತು ವಿಗ್ರಹ ಕಿತ್ತು ಭಗ್ನಗೊಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಗುಡಿಯ ಸುತ್ತ ಬಿಳಿಯ ದಾರ ಬಳಸಿ ದಿಗ್ಬಂಧನ ಮಾಡಿದ, ಅರಿಶಿನ, ಕುಂಕುಮ, ನಿಂಬು, ಕಲಶ, ಹರಿವಾಣ, ಹೂವು ಇತ್ಯಾದಿ ಬಳಸಿ ವಾಮಾಚಾರ ಮಾಡಿದ ಕುರುಹು ಕಂಡು ಬರುತ್ತಿದೆ. ದೇವರ ಗುಡಿಯ ಒಳಭಾಗದಲ್ಲಿ ವಿಗ್ರಹ ಕಿತ್ತು, ಚಪ್ಪಡಿ ಹಾಸಿನ ಕಲ್ಲು ಅಗೆದು ತೆಗೆದು ಗುಂಡಿ ಮಾಡಿದ ನಿಧಿಗಾಗಿ ಶೋಧ ನಡೆಸಿದ ಕುರುಹುಗಳು ಕಂಡು ಬರುತ್ತಿವೆ. ಈ ದೇವರ ಗುಡಿಯಿಂದ ಹೊರಗೆ ಅಂದರೆ ಕೊಳದ ಮುಂಭಾಗದಲ್ಲಿ ಶಿವ ದೇವಾಲಯವಿದ್ದು 15-20 ವರ್ಷಗಳ ಹಿಂದೆ ಅಲ್ಲಿಯೂ ಸಹ ವಿಗ್ರಹ ಕಿತ್ತು ದೂರಕ್ಕೆ ಎಸೆದು ಪಾಣಿಪೀಠ ಕಿತ್ತ ಘಟನೆ ನಡೆದಿತ್ತು.

ಅಲ್ಲದೆ ಈ ಚಂಪಕ ಸರಸ್ಸಿನ ದಡದ ಸುತ್ತ ಆಗಾಗ ವಾಮಾಚಾರದ ಪೂಜೆ ನಡೆಸಿ ನೆಲ ಅಗೆದು ನಿಧಿಗಾಗಿ ತಡಕಾಡಿದ ಘಟನೆ ನಡೆದಿತ್ತು. ಆದರೆ ಈ ವರೆಗೂ ಸಹ ಕೊಳದ ಮಧ್ಯದ ಗುಡಿಯಲ್ಲಿ ನಿಧಿಚೋರರ ಕರಾಮತ್ತು ನಡೆದಿರಲಿಲ್ಲ. ಕಳೆದ ಗುರುವಾರ ಅಥವಾ ಶುಕ್ರವಾರ ರಾತ್ರಿ ಈ ಕಾರ್ಯ ನಡೆದಿರಬಹುದೆಂದು ಸ್ಥಳೀಯರ ಅನಿಸಿಕೆಯಾಗಿದೆ.

ಕೆಳದಿ ಅರಸ ವೆಂಕಟಪ್ಪ ನಾಯಕನ ಕಾಲದಲ್ಲಿ (ಕ್ರಿ.ಶ.ಸುಮಾರು 1750)ಆನಂದಪುರದಲ್ಲಿ ಕೋಟೆ ಪುನರುಜ್ಜೀವನ ಗೊಂಡಿತ್ತು. ಇಕ್ಕೇರಿ ರಾಜಧಾನಿಯಿಂದ ನಗರ ಸಂಸ್ಥಾನದ ಬಿದನೂರು ಕೋಟೆಗೆ ಹೋಗುವ ಮಾರ್ಗದಲ್ಲಿ ರಾಜ ವೆಂಕಟಪ್ಪ ನಾಯಕ ಈ ಕೋಟೆಗೆ ಬಂದು ತಂಗುತ್ತಿದ್ದನಂತೆ. ರಾಜನಿಗೆ ಚಂಪಕ ಎಂಬ ಹೆಸರಿನ ವೇಶ್ಯೆ ಆಪ್ತಳಾಗಿದ್ದು ಅವಳ ಜೊತೆ ವಿಹರಿಸಲು ಈ ಕೊಳ ವಿಸ್ತಾರಗೊಳಿಸಿ ಅಭಿವೃದ್ಧಿಪಡಿಸಿ ಪುನರ್‌ ನಿರ್ಮಿಸಿದ್ದ. ಅದಕ್ಕಾಗಿ ಈ ಕೊಳಕ್ಕೆ ಚಂಪಕ ಸರಸ್ಸು ಎಂಬ ಹೆಸರು ಬಂದಿದೆ ಎಂಬ ದಂತಕಥೆಯಿದೆ. ಇದೊಂದು ಐತಿಹಾಸಿಕ ಸ್ಮಾರಕವಾಗಿದ್ದು ನಿಧಿ ಚೋರರಿಂದ ಆಗಾಗ ಭಗ್ನಗೊಳ್ಳುತ್ತಿರುವುದು ಆತಂಕದ ವಿಷಯವಾಗಿದೆ. ಈ ಸ್ಮಾರಕದ ರಕ್ಷಣೆಗೆ ಸರ್ಕಾರ ಸೂಕ್ತ ಭದ್ರತೆ ವ್ಯವಸ್ಥೆ ಕಲ್ಪಿಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next