Advertisement
ರಾಜ್ಯದ ಯುವಜನತೆಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಗತ್ಯವಾದ ಕೌಶಲ್ಯ ತರಬೇತಿ ನೀಡುವ ಕೇಂದ್ರಗಳನ್ನು ಆರಂಭಿಸುವ ಸಂಬಂಧ ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್ವೇರ್ ಕಂಪನಿ ಹಾಗೂ ಡಿಸೈನ್‌ಟೆಕ್ ಸಿಸ್ಟಮ್ ಲಿಮಿಟೆಡ್‌ನೊಂದಿಗೆ ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಂಡಿತು.
Related Articles
Advertisement
ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಪ್ರತಿ ವರ್ಷ ಶಿಕ್ಷಣ ಮುಗಿಸಿ 11ಲಕ್ಷಕ್ಕೂ ಹೆಚ್ಚು ಮಂದಿ ಯುವಜನತೆ ಉದ್ಯೋಗ ಬಯಸುತ್ತಾರೆ. ಅವರು ಜಾಗತಿಕ ಮಟ್ಟದಲ್ಲೂ ಸ್ಪರ್ಧಿಸಲು ಅಗತ್ಯವಾದ ಕೌಶಲ್ಯ ಹಾಗೂ ತಾಂತ್ರಿಕ ತರಬೇತಿಯನ್ನು ಉಚಿತವಾಗಿ ನೀಡಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಸೀಮೆನ್ಸ್ ಕಂಪೆನಿಯೊಂದಿಗೆ ರಾಜ್ಯ ಸರ್ಕಾರ ಮೂರು ವರ್ಷದ ಅವಧಿಗೆ ಒಡಂಬಡಿಕೆ ಮಾಡಿಕೊಂಡಿದೆ. ಪ್ರತಿ ವರ್ಷ 25,000ದಿಂದ 30,000 ಅಭ್ಯರ್ಥಿಗಳಿಗೆ ತರಬೇತಿ ನೀಡಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ತಾಂತ್ರಿಕ ತರಬೇತಿಗಾಗಿ ಈಗಾಗಲೇ ಆರು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ (ಜಿಟಿಟಿಸಿ) ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ಗದಗ್, ಸೀಮೆನ್ಸ್ ಇಂಡ್ರಸ್ಟಿ ಸಾಫ್ಟ್ವೇರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುಮನ್ ಬೋಸ್ ಹಾಗೂ ಡಿಸೈನ್‌ಟೆಕ್ ಸಿಸ್ಟಮ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಖಾನ್ವೇಲ್ಕರ್ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ಇತರರು ಉಪಸ್ಥಿತರಿದ್ದರು.
ಅತ್ಯುನ್ನತ ಕೇಂದ್ರದ ಉಪಯುಕ್ತತೆ: ಕೈಗಾರಿಕೆಗಳು ಬಯಸುವ ಉತ್ಕೃಷ್ಠ ಕೌಶಲ್ಯಾಭಿವೃದ್ಧಿ ತಾಂತ್ರಿಕ ತರಬೇತಿಯ ಪಠ್ಯಕ್ರಮ. ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ತರಬೇತಿ. ಕೇಂದ್ರದಲ್ಲಿ ಪಡೆದ ತರಬೇತಿಯು ಉದ್ಯೋಗ ಪಡೆಯಲು ಸಹಕಾರಿ. ಸ್ಥಳೀಯವಾಗಿ ಮಾತ್ರವಲ್ಲದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಉದ್ಯೋಗ ಪಡೆಯಲು ಅನುಕೂಲವಾಗಲಿದೆ ಎಂಬುದು ಇಲಾಖೆಯ ನಿರೀಕ್ಷೆ.