Advertisement

ಬಡ್ತಿ ಮೀಸಲು ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯ

01:14 PM Mar 14, 2017 | Team Udayavani |

ಮೈಸೂರು: ಬಡ್ತಿ ಮೀಸಲಾತಿ ವಿಷಯದಲ್ಲಿ ರಾಜ್ಯಕ್ಕಾಗಿರುವ ಅನ್ಯಾಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುವ ಮೂಲಕ ತನ್ನ ಜವಾಬ್ದಾರಿ ತೋರಬೇಕಿದೆ ಎಂದು ಮಾಜಿ ಸಂಸದ ಎಚ್‌.ವಿಶ್ವನಾಥ್‌ ಹೇಳಿದರು.

Advertisement

ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರಕಾರಿ, ಅರೆ ಸರಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಧಿಕಾರಿಗಳ, ನೌಕರರ ಪರಿಷತ್‌ ಮತ್ತು ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ವೋತ್ಛ ನ್ಯಾಯಾಲಯದ ತೀರ್ಪಿನ ಕುರಿತು ಬಡ್ತಿ ಮೀಸಲಾತಿ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಡಿ.ದೇವರಾಜ ಅರಸು ಅವರ ಕಾಲದಲ್ಲಿ ಮೀಸಲಾತಿಯನ್ನು ನೀಡಲಾಗಿತ್ತು. ಆದರೆ ಇದೀಗ ಮೀಸಲಾತಿ ರಕ್ಷಣೆಗೆ ಯಾರು ಜವಾಬ್ದಾರರು? ಎಂಬ ಬಗ್ಗೆ ಚರ್ಚೆ ಮಾಡಬೇಕಾದ ಸ್ಥಿತಿ ಎದುರಾಗಿದೆ. ಬಡ್ತಿ ಮೀಸಲಾತಿಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಗಂಭೀರವಾದ ಸಮಸ್ಯೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.

ಅಲ್ಲದೆ ತೀರ್ಪಿನ ಹೊಣೆಯನ್ನು ಸರ್ಕಾರವೇ ಹೊರಬೇಕಿದ್ದು, ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ ಎಂದರು. ರಾಜ್ಯ ಸರ್ಕಾರ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಪ್ರಶ್ನಿಸಿ ಕೂಡಲೇ ಮೇಲ್ಮನವಿ ಸಲ್ಲಿಸಬೇಕೆಂದು ಆಗ್ರಹಿಸಬೇಕು. ಮೀಸಲಾತಿ ಕೇವಲ ಎಸ್ಸಿ/ಎಸ್ಟಿಗಳಿಗೆ ಮಾತ್ರವಲ್ಲದೆ, ಹಿಂದುಳಿದ ವರ್ಗಗಳಿಗೆ, ಅಲ್ಪಸಂಖ್ಯಾತರಿಗೂ ಧಕ್ಕಬೇಕಿದೆ.

ಒಂದೊಮ್ಮೆ ಮೀಸಲಾತಿ ನೀಡುವ ಅಧಿಕಾರವನ್ನು ಈ ಅಧಿಕಾರ ಸಚಿವ ಆಂಜನೇಯ ಅವರಿಗೆ ಕೊಟ್ಟರೇ ಮೇಲ್ವರ್ಗದ ಬ್ರಾಹ್ಮಣರಿಗೂ ಕರುಣಿಸಲಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಹಿಂದುಳಿದ ದಲಿತರಿಗೆ ನೀಡಲಾಗಿದೆ. ಆದರೂ ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಶ್ಯಾಮ್‌ಭಟ್‌ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ಯಾವ ಮಾನದಂಡ ಹಾಗೂ ಯಾವ ಗುಣಾತ್ಮಕ ಅಂಶವಿದೆ ಎಂಬುದು ತಿಳಿದಿಲ್ಲವೆಂದು ಕಿಡಿಕಾರಿದರು.

Advertisement

ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಮಾಜಿ ಅಧ್ಯಕ್ಷ ಎಚ್‌.ಹನುಮಂತಪ್ಪ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಏಳಿಗೆಗೆ ಜಾತಿಯೇ ಮುಳುವಾಗಿದ್ದು, ಅವರು ದಲಿತರಾಗಿರದಿದ್ದರೆ ದೇಶದ ಪ್ರಧಾನಿ ಅಥವಾ ರಾಷ್ಟ್ರಧ್ಯಕ್ಷರಾಗುತ್ತಿದ್ದರು. ಮೀಸಲಾತಿ ಜಾರಿಗೆ ಸಂಬಂಧಿಸಿದ ಕಡತಗಳ ಸಂಬಂಧಪಟ್ಟ ಇಲಾಖೆಗೆ ಹೋಗಿ 7 ವರ್ಷಗಳು ಧೂಳು ಹಿಡಿಯುತ್ತಿತ್ತು.

ಆದರೆ ಇದೀಗ 2 ವರ್ಷದ ನಂತರ ರಾಜ್ಯದಲ್ಲಿ ಮೀಸಲಾತಿ ಜಾರಿಯಾಗುತ್ತಿದ್ದರೂ, ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬುದು ಕೇವಲ ಸರ್ಕಾರದ ಯೋಜನೆಗಳಿಗೆ ಮಾತ್ರವೇ ಸೀಮಿತವಾಗಲಿದ್ದು, ಅನುಷ್ಠಾನವಾಗದು ಎಂದು ವಿಷಾದ ವ್ಯಕ್ತಪಡಿಸಿದರು. ಅಲ್ಲದೆ ಪ್ರಸ್ತುತ ಸಂದರ್ಭಗಳಲ್ಲಿ ಬಹುತೇಕ ಕಂಪನಿ ಹಾಗೂ ಕೈಗಾರಿಕೆಗಳು ಬಂಡವಾಳ ಶಾಹಿಗಳ ಕೈಯಲ್ಲಿರುವಾಗ ಸರ್ವರಿಗೂ ಸಮಪಾಲು ನಿರೀಕ್ಷಿಸಲು ಸಾಧ್ಯವಿಲ್ಲ.

ಖಾಸಗಿ ಕ್ಷೇತ್ರಗಳಲ್ಲಿ ಎಂಜಿನಿಯರಿಂಗ್‌ ಮುಗಿಸಿದ ದಲಿತರಿಗೆ ಉದ್ಯೋಗ ಸಿಗುತ್ತಿಲ್ಲ. ಜತೆಗೆ ಕೇಂದ್ರ ಸರ್ಕಾರ ಗ್ರೂಪ್‌ ಡಿ ಹುದ್ದೆಗಳನ್ನು ಖಾಸಗೀಕರಣ ಮಾಡಿ ಈಗಾಗಲೇ ಗುತ್ತಿಗೆಗೆ ನೀಡುತ್ತಿದೆ. ಹೀಗಾಗಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಇದನ್ನು ವಿರೋಧಿಸಬೇಕಿದ್ದು, ಸಂಕಟ ಬಂದಾಗ ಚರ್ಚೆಗಳು ನಡೆದರೆ ಪ್ರಯೋಜನವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಪ್ರಭಾರ ಕುಲಪತಿ ಪೊ›.ದಯಾನಂದ ಮಾನೆ, ಮೈಸೂರು ವಿವಿ ನ್ಯಾಯಶಾಸ್ತ್ರ ವಿಭಾಗ ಪ್ರಾಧ್ಯಾಪಕ ಪೊ›. ಸಿ. ಬಸವರಾಜು, ಪೊ›. ಕೆ.ಎಸ್‌. ಭಗವಾನ್‌, ಪೊ›.ಶಬೀರ್‌ ಮುಸ್ತಾಪ, ಸಿದ್ದಬಸವಯ್ಯ, ಪಾಲಿಕೆ ಮಾಜಿ ಸದಸ್ಯ ಸಿದ್ದಪ್ಪ, ಶಾಂತರಾಜು ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next