Advertisement

28ಕ್ಕೆ ಬಲಿಜ ಸಮಾಜ ರಾಜ್ಯಮಟ್ಟದ ಸಮಾವೇಶ

01:21 PM May 23, 2017 | |

ದಾವಣಗೆರೆ: ಬಲಿಜ ಸಮಾಜಕ್ಕೆ ಪುನಾಃ ಪ್ರವರ್ಗ-2 ಎ ಮೀಸಲಾತಿ ಒದಗಿಸುವುದು ಒಳಗೊಂಡಂತೆ ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಮೇ. 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಬೃಹತ್‌ ಬಲಿಜ ಸಮ್ಮೇಳನದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸರ್ಕಾರಕ್ಕೆ ಸಮಾಜದ ಶಕ್ತಿ ತೋರಿಸಬೇಕು ಎಂದು ಸಂಸದ, ಕರ್ನಾಟಕ ಬಲಿಜ ಮಹಾಸಭಾದ ರಾಜ್ಯ ಅಧ್ಯಕ್ಷ ಪಿ.ಸಿ. ಮೋಹನ್‌ ಮನವಿ ಮಾಡಿದ್ದಾರೆ. 

Advertisement

ರಾಜ್ಯ ಮಟ್ಟದ ಬೃಹತ್‌ ಬಲಿಜ ಸಮ್ಮೇಳನದ ಹಿನ್ನೆಲೆಯಲ್ಲಿ ಸೋಮವಾರ ಬಲಿಜ ವಿದ್ಯಾರ್ಥಿ ನಿಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಂದಿನ ಸಮ್ಮೇಳನದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವರು. ದಾವಣಗೆರೆ ಜಿಲ್ಲೆಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದರು.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರದಲ್ಲಿ ಹಿಂದುಳಿದಿರುವುದ ಮನಗಂಡು ಬಲಿಜ ಸಮಾಜಕ್ಕೆ ಪ್ರವರ್ಗ-2ಎ ಮೀಸಲಾತಿ ಕಲ್ಪಿಸಲಾಗಿತ್ತು. 2014ರ ನಂತರ ಏಕಾಏಕಿ ಪ್ರವರ್ಗ-2ಎ ಮೀಸಲಾತಿ ಪಟ್ಟಿಯಿಂದ ಕೈ ಬಿಡಲಾಗಿದೆ. ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಸಿಎಂ ಆಗಿದ್ದಾಗ ಸಮಾಜವನ್ನ ಪ್ರವರ್ಗ-2ಎ ಮೀಸಲಾತಿ ಪಟ್ಟಿಗೆ ಸೇರಿಸಲು ಆದೇಶಿಸಿದ್ದರು. 

ಆದರೆ, ಈವರೆಗೆ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಬೆಂಗಳೂರು ಸಮ್ಮೇಳನದ ಮೂಲಕ ಸಮಾಜಕ್ಕೆ ಮತ್ತೆ ಪ್ರವರ್ಗ-2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು. ಬಲಿಜ ಸಮಾಜದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ 25 ದಿನಗಳ ಹಿಂದೆಯಷ್ಟೇ ಕರ್ನಾಟಕ ಬಲಿಜ ಮಹಾಸಭಾ ಅಸ್ತಿತ್ವಕ್ಕೆ ಬಂದಿದೆ.

ಮಹಾಸಭಾದಲ್ಲಿ ಪ್ರತಿ ಜಿಲ್ಲೆಯವರೆಗೂ ಸೂಕ್ತ ಪ್ರಾತಿನಿಧ್ಯ, ಸ್ಥಾನಮಾನ ನೀಡಲಾಗುವುದು. ಸಮಾಜದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ನೀಡಲಾಗುವ ಅತ್ಯಮೂಲ್ಯ ಸಲಹೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು. ರಾಜಕೀಯ ಕ್ಷೇತ್ರದಲ್ಲಿ ಬಲಿಜ ಸಮಾಜಕ್ಕೆ ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲ.

Advertisement

ಅನೇಕ ಕಡೆ ಕಡಿಮೆ ಸಂಖ್ಯೆಯಲ್ಲಿ ಸಮಾಜ ಬಾಂಧವರು ಇರುವ ಹಿನ್ನೆಲೆಯಲ್ಲಿ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತಿ, ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿ ಪ್ರತಿನಿಧಿಗಳು ಇಲ್ಲದಂತಾಗಿದೆ. ಬಲಿಜ ಸಮಾಜಕ್ಕೆ ರಾಜಕೀಯವಾಗಿ ಸೂಕ್ತ ಸ್ಥಾನಮಾನ, ಪ್ರಾತಿನಿಧ್ಯ ದೊರೆಯುವಂತಾಗಬೇಕಾದಲ್ಲಿ ರಾಜಕೀಯ ಮೀಸಲಾತಿ ಅತ್ಯಗತ್ಯ. 

ಸರ್ಕಾರ ಬಲಿಜ ಸಮಾಜಕ್ಕೆ ರಾಜಕೀಯದ ಜೊತೆಗೆ ಉದ್ಯೋಗ ಕ್ಷೇತ್ರದಲ್ಲೂ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ಬಲಿಜ ಸಮಾಜಕ್ಕೆ ಸೇರಿದ ಐಎಎಸ್‌, ಐಪಿಎಸ್‌, ಕೆಎಎಸ್‌ ಅಧಿಕಾರಿಗಳ ಸಂಖ್ಯೆ ತೀರಾ ಕಡಿಮೆ. ಯಾರು ಐಎಎಸ್‌, ಐಪಿಎಸ್‌, ಕೆಎಎಸ್‌ ಮಾಡಲು ಇಚ್ಚಿಸುತ್ತಾರೋ

-ಅಂತಹವರನ್ನು ದತ್ತು ತೆಗೆದುಕೊಂಡು ಐಎಎಸ್‌, ಐಪಿಎಸ್‌, ಕೆಎಎಸ್‌ಗೆ ಉಚಿತ ಕೋಚಿಂಗ್‌ ಕೊಡಿಸುವ ಜೊತೆಗೆ ಪರೀಕ್ಷೆ ಬರೆದು, ಅಧಿಕಾರಿಯಾಗುವರೆಗೆ ಎಲ್ಲ ರೀತಿಯ ನೆರವು, ಸಹಕಾರ ನೀಡಲು ಕರ್ನಾಟಕ ಬಲಿಜ ಮಹಾಸಭಾ ನಿರ್ಧರಿಸಿದೆ. ಐಎಎಸ್‌, ಐಪಿಎಸ್‌, ಕೆಎಎಸ್‌ ಅಧಿಕಾರಿಗಳಾದವರು ದೇಶ, ರಾಜ್ಯದ ಸೇವೆ ಮಾಡುವ ಜೊತೆಗೆ  ಹುಟ್ಟಿದ ಸಮಾಜದ ಅಭಿವೃದ್ಧಿಗೆ ಶ್ರಮಿಸಲಿ ಎಂಬುದು ಸಮಾಜ ಬಾಂಧವರ ಆಶಯ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಅಭ್ಯಾಸ ಮಾಡಲಿಕ್ಕೆ ಬರುವಂತಹ ಹೊರ ಜಿಲ್ಲೆಯವರಿಗೆ ಈಗಿರುವ ವಿದ್ಯಾರ್ಥಿ ನಿಲಯದಲ್ಲಿ ಹೆಚ್ಚಿನ ಪ್ರವೇಶ ನೀಡಲಿಕ್ಕೆ ಆಗುತ್ತಿಲ್ಲ. ಹಾಗಾಗಿ ಸುಸಜ್ಜಿತ ಕಟ್ಟಡವನ್ನು ಬಾಡಿಗೆಗೆ ತೆಗೆದುಕೊಂಡು ಅಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು. ಸಮಾಜದವರು ಉತ್ತಮ ವಿದ್ಯಾರ್ಥಿಗಳಾಗಿ ಹೊರ ಹೊಮ್ಮಬೇಕು.

ಸಮಾಜದ ಸೇವೆ ಮಾಡಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಭೀಮಣ್ಣ ತಹಶೀಲ್ದಾರ್‌ ಮಾತನಾಡಿ, ಜಿಲ್ಲೆಯ ಸಮಾಜ ಬಾಂಧವರು ಮೇ. 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಬೃಹತ್‌ ಬಲಿಜ ಸಮ್ಮೇಳನದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು. 

ಕರ್ನಾಟಕ ಬಲಿಜ ಮಹಾಸಭಾದ ರಾಜ್ಯ ಸಂಚಾಲಕಿ ಪ್ರಮೀಳಾನಾಯ್ಡು, ಪ್ರಧಾನ ಕಾರ್ಯದರ್ಶಿ ರಾಮಲಿಂಗಪ್ಪ, ಶಂಕರಪ್ಪ, ಬಾಲಾಜಿ, ಶ್ರೀನಿವಾಸ್‌, ದಿನೇಶ್‌ಬಾಬು, ಶಂಕರಪ್ಪ, ಎನ್‌.ಬಿ. ಶಿವಕುಮಾರ್‌, ರಘುನಾಯ್ಡು, ವೈ.ಸಿ. ತಿಪ್ಪೇಸ್ವಾಮಿ ಇತರರು ಇದ್ದರು. ಗದಿಗೇಶ್‌ ಕೆ. ಶಿರಸಿ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next