Advertisement

ಕನ್ನಡಿಗರನ್ನು ನಿರಾಶೆಗೊಳಿಸಿದ ರಾಜ್ಯ ಭಾಷಾ ಅಲ್ಪಸಂಖ್ಯಾಕ ಸಮಿತಿ ಸಭೆ

07:45 AM Aug 05, 2017 | |

ಕಾಸರಗೋಡು: ಭಾಷಾ ಅಲ್ಪಸಂಖ್ಯಾಕ ಸಂಘಟನೆಗಳ  ಒಬ್ಬ ಪ್ರತಿನಿಧಿಯನ್ನೂ ಆಹ್ವಾನಿಸದೆ ರಾಜ್ಯ ಭಾಷಾ ಅಲ್ಪಸಂಖ್ಯಾಕ ಸಮಿತಿಯ ಸಭೆಯನ್ನು ನಡೆಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕಾಸರಗೋಡು ಕನ್ನಡಿಗರ ಹತ್ತು ಹಲವು ಜ್ವಲಂತ ಸಮಸ್ಯೆಗಳಲ್ಲಿ ಒಂದನ್ನು ಕೂಡ ನಿವಾರಿಸದೆ ಮಲಯಾಳ ಕಡ್ಡಾಯಕ್ಕೆ ಸಮಿತಿಯ ಅಂಗೀಕಾರ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಈ ಮೊದಲು ಜರಗುತ್ತಿದ್ದ  ರಾಜ್ಯ ಭಾಷಾ ಅಲ್ಪಸಂಖ್ಯಾಕ ಸಮಿತಿ ಸಭೆಗಳಿಗೆ ಕಾಸರಗೋಡು ಕನ್ನಡ ಸಂಘಟನೆಗಳ ಪ್ರತಿನಿಧಿಯಾಗಿ ಕರ್ನಾಟಕ ಸಮಿತಿಯ ಅಧ್ಯಕ್ಷರಿಗೆ ಆಹ್ವಾನವಿರುತ್ತಿತ್ತು. ಕರ್ನಾಟಕ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಕೆ.ಎಂ. ಬಳ್ಳಕ್ಕುರಾಯರು ಹಿಂದಿನ ಅಲ್ಪಸಂಖ್ಯಾಕ ಸಮಿತಿ ಸಭೆಗಳಲ್ಲೂ ಭಾಗವಹಿಸಿದ್ದರು. ಆದರೆ ಈ ಬಾರಿ ಅವರ ಗಮನಕ್ಕೆ ಬಾರದೆ ಸಭೆ ನಡೆದಿದೆ. ತಮಿಳು ಸಂಘಟನೆಗಳ ಪ್ರತಿನಿಧಿಗಳನ್ನೂ ಆಹ್ವಾನಿಸಿರಲಿಲ್ಲ. 

ಮಲಯಾಳ ಕಡ್ಡಾಯ ತೀರ್ಮಾನಕ್ಕೆ ಭಾಷಾ ಅಲ್ಪಸಂಖ್ಯಾಕರ ಕಡು ವಿರೋಧವನ್ನು  ಮನಗಂಡಿರುವ ಸರಕಾರ ಅವರ ಜತೆ ತಾರ್ಕಿಕ ಸಂವಾದ ನಡೆಸಲಾಗದೆ ಭಾಷಾ ಅಲ್ಪಸಂಖ್ಯಾಕ ಸಂಘಟನೆಗಳ ಪ್ರತಿನಿಧಿಗಳನ್ನು ಆಹ್ವಾನಿ ಸದೆ ರಾಜ್ಯ ಸಮಿತಿಯ ಸಭೆಯನ್ನು ನಡೆಸುವ ಮೂಲಕ ಪಲಾಯನ ವಾದಿ ಧೋರಣೆಯನ್ನು   ಮೆರೆದಿದೆ.  ಮಲಯಾಳ ಕಡ್ಡಾಯಕ್ಕೆ ಹೇಗಾದರೂ ಅಂಗೀಕಾರ ಪಡೆಯುವ ಉದ್ದೇಶದಿಂದ ಹಾಗೂ ಭಾಷಾ ಅಲ್ಪಸಂಖ್ಯಾಕ ಸಮಿತಿಯೇ ಮಲಯಾಳ ಕಡ್ಡಾಯ ವನ್ನು ಬೆಂಬಲಿಸಿದೆ ಎಂದು ಉಚ್ಚ ನ್ಯಾಯಾಲಯ ದೆದುರು ಬಿಂಬಿಸ ಲೋಸುಗ  ಈ ಸಭೆಯನ್ನು ಕರೆಯಲಾಗಿತ್ತೇ ಎಂದು ಕನ್ನಡಿಗರು ಅನುಮಾನಪಡುವಂತಾಗಿದೆ.

ಕಾಸರಗೋಡಿನ ಪ್ರತಿನಿಧಿಯಾಗಿ ಶಾಸಕ ಎನ್‌.ಎ. ನೆಲ್ಲಿಕುನ್ನು ಅವರು ಸಭೆಯಲ್ಲಿ ಭಾಗವಹಿಸಿದ್ದರಾದರೂ ಅವರು ಏನು ಮಾತನಾಡಿದರು? ಕನ್ನಡಿಗರ ವಾದವನ್ನು ಸಭೆಯಲ್ಲಿ ಮಂಡಿಸಿ ದರೆ? ಅವರ ವಾದಕ್ಕೆ ಅಂಗೀಕಾರ ದೊರೆಯಲಿಲ್ಲವೆ ಎಂಬುದು ಸ್ಪಷ್ಟವಿಲ್ಲ. ಮಲಯಾಳ ಕಡ್ಡಾಯವನ್ನು ವಿರೋಧಿಸುತ್ತಿರುವ ತಮಿಳು ಕನ್ನಡ ಸಂಘಟನೆಗಳ ಜತೆ ಮಾತುಕತೆ ನಡೆಸದೆ ಅವರನ್ನು ಆಹ್ವಾನಿಸದೆ ನೆಪಮಾತ್ರಕ್ಕೆ ಅಲ್ಪಸಂಖ್ಯಾಕ ಸಮಿತಿ ಸಭೆ ನಡೆಸಿರುವ ಹುನ್ನಾರವೇನು ಎಂದು ಜನರು ಸಂಶಯಪಡುತ್ತಿದ್ದಾರೆ

ಮೊನ್ನೆ ನಡೆದ ಭಾಷಾ ಅಲ್ಪಸಂಖ್ಯಾಕ ಸಮಿತಿಯ ಸಭೆಯ ಮಾಹಿತಿ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.  ಈ ಶೈಕ್ಷಣಿಕ ವರ್ಷದಿಂದಲೇ ಮಲ ಯಾಳ ಕಡ್ಡಾಯಮಾಡುವುದಾಗಿ ತಿಳಿದುಬಂದಿದೆ. ಮಲಯಾಳವನ್ನು ಹೆಚ್ಚುವರಿಯಾಗಿ ಕಲಿಯಬೇಕಾಗಿರುವ ಕನ್ನಡ – ತಮಿಳು ಕಂದಮ್ಮಗಳ ಶೈಕ್ಷಣಿಕ ಹೊರೆಯ ಬಗ್ಗೆ ಸಭೆಯಲ್ಲಿ ಯಾರೂ ತಲೆಕೆಡಿಸಿಕೊಂಡಂತಿಲ್ಲ. ಮಲಯಾಳ ವನ್ನು ಕಡ್ಡಾಯಗೊಳಿಸಿದರೆ ಭಾಷಾ ಅಲ್ಪಸಂಖ್ಯಾಕರ  ಪರ ಸರಕಾರಿ ಆದೇಶಗಳು ತಾವಾಗಿಯೇ ಅಪ್ರಸ್ತುತವಾಗುತ್ತದಲ್ಲವೆ ಎಂಬ ಆತಂಕಕ್ಕೂ ಪರಿಹಾರವಿಲ್ಲ. ಮಲಯಾಳ ಕಡ್ಡಾಯ ಕಲಿಕೆಯಿಂದ ಭಾಷಾ ಅಲ್ಪಸಂಖ್ಯಾಕರ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದು ಎಂಬ ಹುಸಿ ಭರವಸೆಯನ್ನು ಮಾತ್ರ ನೀಡಲಾಗಿದೆ. ಭಾಷಾ ಅಲ್ಪ ಸಂಖ್ಯಾಕರ ಹಕ್ಕುಗಳಿಗೆ ನಿರಂತರ ಧಕ್ಕೆಯಾಗುತ್ತಿರುವುದನ್ನು ಹಾಗೂ ಭಾಷಾ ಅಲ್ಪಸಂಖ್ಯಾಕ ಪರ ಸರಕಾರಿ ಆದೇಶಗಳ ಅನುಷ್ಠಾನವಾಗದೆ ರಾಜಾರೋಷ ಉಲ್ಲಂಘನೆ ಯಾಗುತ್ತಿರುವುದನ್ನು ತಡೆ ಗಟ್ಟುವ ಯಾವ ಕ್ರಮಗಳನ್ನೂ ಘೋಷಿಸಲಾಗಿಲ್ಲ.

Advertisement

ಮುದುಡಿದ ಶಿಫಾರಸು
ಹಿಂದಿನ ಸರಕಾರ ನೇಮಿಸಿದ ಡಾ| ಪ್ರಭಾ ಕರನ್‌ ಆಯೋಗ ಭಾಷಾ ಅಲ್ಪ ಸಂಖ್ಯಾಕರ ಬಾಹುಳ್ಯವಿರುವ  ಪ್ರದೇಶ ಗಳಲ್ಲಿ ಸರಕಾರಿ ಉದ್ಯೋಗಿಗಳಾಗಿ ಆಯಾ ಭಾಷೆ ಬಲ್ಲವರನ್ನೇ ನೇಮಿಸ ಬೇಕೆಂದು ಶಿಫಾರಸು ಮಾಡಿತ್ತು. ಅದರ ಪ್ರಕಾರ ಸಾಕಷ್ಟು ಸಂಖ್ಯೆಯ ಕನ್ನಡಬಲ್ಲ ಹುದ್ದೆ ಗಳನ್ನು ಸೃಷ್ಟಿಸಬೇಕಿತ್ತು  ಹಾಗೂ ಅಗತ್ಯದ ಕನ್ನಡ ಬಲ್ಲ ಹುದ್ದೆಗಳನ್ನು ಪಿ.ಎಸ್‌.ಸಿ.ಗೆ ವರದಿ ಮಾಡ ಬೇಕೆಂಬ ಹಿಂದಿನ ಸರಕಾರಿ ಆದೇಶ ಗಳನ್ನು ಹಾಗೂ ಸುತ್ತೋಲೆಗಳನ್ನು ಪಾಲಿಸಬೇಕಿತ್ತು. ಆದರೆ ಈಗ ಕನ್ನಡ ಪ್ರದೇಶದ ಪಂಚಾಯತ್‌, ಗ್ರಾಮ ಕಚೇರಿ, ಕೃಷಿ ಭವನ ಮೊದಲಾದ ಸರಕಾರಿ ಕಚೇರಿಗಳಲ್ಲಿ ಕನ್ನಡಬಲ್ಲ ನೌಕರರನ್ನು ಹುಡುಕಿದರೂ ಕಾಣಸಿಗುವುದಿಲ್ಲ. ಈ ಸರಕಾರವೂ ಸ್ಥಳೀಯ ಭಾಷೆ ಬಲ್ಲವರನ್ನು ನೇಮಿಸುವ ಮಾತಾಡುತ್ತಿದೆ.

ಕನ್ನಡಬಲ್ಲ ಹುದ್ದೆಗಳನ್ನು ಪ್ರತ್ಯೇಕಿಸಿ ಕನಿಷ್ಠ ಹತ್ತನೇ ತರಗತಿವರೆಗೆ  ಕನ್ನಡ  ಕಲಿತ ಅಭ್ಯರ್ಥಿ ಗಳನ್ನು ನೇಮಿಸುವುದಕ್ಕೆ ಬದಲಾಗಿ ತೆಂಕಣದ ನೌಕರರಿಗೆ ಕನ್ನಡ ತರಬೇತಿ ನೀಡುವ ನಾಟಕವಾಡಿ ಕನ್ನಡ ಬಾರದ ವರನ್ನೇ ನೇಮಿಸಲಾಗುತ್ತಿದೆ. ಕನ್ನಡ ಪ್ರದೇಶಗಳಲ್ಲಿ ಶಾಲೆಗಳಲ್ಲಿ ಸರಿಯಾಗಿ ಕನ್ನಡ ಕಲಿತವರನ್ನೇ ಉದ್ಯೋಗಿಗಳಾಗಿ ನೇಮಿಸಿ ಕನ್ನಡದಲ್ಲೂ ಮಾಹಿತಿಗಳನ್ನು ಒದಗಿಸಿ ಕನ್ನಡಿಗರಿಗೆ ಮಾತೃಭಾಷೆಯಲ್ಲಿ ವ್ಯವಹರಿಸಲು ಅನುವುಮಾಡಿಕೊಡದ ಸರಕಾರ  ಭಾಷಾ ಅಲ್ಪಸಂಖ್ಯಾಕರ ಹಕ್ಕು ಗಳನ್ನು ಸಂರಕ್ಷಿಸ ಲಾಗುತ್ತಿದೆ ಸಮಸ್ಯೆಗಳ ಅಧ್ಯಯನಕ್ಕೆ ಹೊಸ ಸಮಿತಿಯನ್ನು ರಚಿಸಲಾಗುತ್ತದೆ ಎನ್ನುವುದನ್ನು ಕೇಳಿ ಜನರು ಅಳಬೇಕೋ ನಗಬೇಕೋ ಎಂದು ತಿಳಿಯದಾಗಿದ್ದಾರೆ.

ತಮಿಳು ಭಾಷಾ ಅಲ್ಪಸಂಖ್ಯಾಕರಿಗೆ ಜಾತಿ ಪ್ರಮಾಣಪತ್ರ ನೀಡುವಲ್ಲಿ ಉಂಟಾಗುತ್ತಿರುವ ತೊಂದರೆಯನ್ನು ನಿವಾರಿ ಸುವ ಆಶ್ವಾಸನೆ ಮೂಡಿಬಂದಿದೆ. ಆದರೆ ಕನ್ನಡ ಭಾಷಾ ಅಲ್ಪಸಂಖ್ಯಾಕರಾದ ಕೊಂಕಣಿ ಕ್ರಿಶ್ಚಿಯನ್ನರ ಮೀಸಲಾತಿ ಬೇಡಿಕೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. 

ಶಿಕ್ಷಣ ಪಡೆಯಲು ನಿತ್ಯ ಕರ್ನಾಟಕಕ್ಕೆ ಹೋಗಿ ಬರುತ್ತಿರುವ ವಿದ್ಯಾರ್ಥಿಗಳಿಗೆ   ಬಸ್ಸುಗಳಲ್ಲಿ   ರಿಯಾಯಿತಿ  ದರದ ಸೌಕರ್ಯ ನೀಡಬೇಕಾಗಿ ರುವುದು ಸರಿಯೇ. ಆದರೆ ಕಾಸರಗೋಡಿನಲ್ಲೇ ಮಾತೃ ಭಾಷೆಯಲ್ಲಿ ಉನ್ನತ ಶಿಕ್ಷಣಕ್ಕೆ ಸೌಕರ್ಯ ಏರ್ಪಡಿಸಿದರೆ ಕರ್ನಾಟಕಕ್ಕೆ ಪ್ರಯಾಣಬೆಳೆಸುವ ಅಗತ್ಯವಿರುತ್ತಿತ್ತೇ?

ಪಿ.ಎಸ್‌.ಸಿ ಪ್ರಶ್ನೆಪತ್ರಿಕೆಗಳ ಸೂಚನೆಗಳನ್ನು ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳನ್ನು ಕನ್ನಡದಲ್ಲೂ ಒದಗಿಸಬೇಕೆಂಬುದು ಕನ್ನಡಿಗರ ದೀರ್ಘ‌ಕಾಲದ ಬೇಡಿಕೆಯಾಗಿತ್ತು. ಆದರೆ ಅದನ್ನೆಲ್ಲ ಇಂಗ್ಲಿಷ್‌ನಲ್ಲಿ ನೀಡುವುದಾಗಿ ಭರವಸೆ ನೀಡಿ ಪಿ.ಎಸ್‌.ಸಿ ಅಧ್ಯಕ್ಷರು ಕೈತೊಳೆದುಕೊಂಡಿದ್ದಾರೆ. ಭಾಷಾ ಅಲ್ಪಸಂಖ್ಯಾಕರ ವಿಚಾರಕ್ಕೆ ಬಂದಾಗ ಇವರಿಗೆಲ್ಲ ಅಸ್ಪೃಶ್ಯವಾದ ಇಂಗ್ಲೀಷ್‌ ಕೂಡ ಸಹ್ಯ. ಆದರೆ ಕನ್ನಡದ ಬಳಕೆ ಮಾತ್ರ ಕೂಡದು!

ಅಧಿಕೃತ  ಬೋಧನಾ   ಮಾಧ್ಯಮ   ಇಂಗ್ಲಿಷ್‌ ಆಗಿದ್ದರೂ ಕಾಸರಗೋಡಿನ ಪದವಿ ಪೂರ್ವ ಶಾಲೆಗಳಲ್ಲಿ ಭಾಷಾ ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ ಮಲಯಾಳದಲ್ಲಿ ಕಲಿಸಲಾಗುತ್ತಿದೆ. ಪ್ರಾಥಮಿಕ- ಪ್ರೌಢಶಾಲೆಗಳಲ್ಲೂ ಅಷ್ಟೆ, ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ತಿಳಿದ ಶಿಕ್ಷಕರನ್ನೇ ನೇಮಿಸುವ ಯಾವ ಇಚ್ಛಾ ಶಕ್ತಿಯೂ ಸರಕಾರಕ್ಕಿಲ್ಲ. ಇಂತಹ ಸರಕಾರ ಪರೀಕ್ಷೆಗಳಲ್ಲಿ ಉತ್ತರವನ್ನು ತಮಿಳು ಅಥವಾ ಕನ್ನಡದಲ್ಲೂ ಬರೆಯಬಹುದು ಎನ್ನುತ್ತದೆ. ಎಲ್ಲ ವಿಷಯಗಳನ್ನೂ ಮಲಯಾಳದಲ್ಲಿ ಕಲಿತು ಉತ್ತರವನ್ನು ಮಾತ್ರ ಕನ್ನಡದಲ್ಲಿ ಬರೆಯುವುದೆಂತು?  ಕರ್ನಾಟಕ ಸರಕಾರ ಪ್ರತಿತಿಂಗಳೂ ಉದಾರವಾಗಿ ನೀಡುವ ಎರಡೂವರೆಸಾವಿರ ರೂ. ವಿದ್ಯಾರ್ಥಿವೇತನದ ಪ್ರಯೋಜನ ಹೆಚ್ಚಿನ ಬಡ ವಿದ್ಯಾರ್ಥಿಗಳಿಗೆ ಲಭಿಸಲೋಸುಗ ಮಂಜೇಶ್ವರ ರಾಷ್ಟ್ರಕವಿ ಗೋವಿಂದ ಪೈ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ  ಅಧ್ಯಯನಕೇಂದ್ರದ ಸ್ಥಾಪನೆ ಎಂದೋ ಆಗಬೇಕಿತ್ತು. ಇದಕ್ಕೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ತಡೆಯೊಡ್ಡುತ್ತಿವೆ.  ಅದು ಬಿಟ್ಟು ಕನ್ನಡಿಗರ ಅನುಕೂಲಕ್ಕಾಗಿ ಕಾಸರಗೋಡಿನಲ್ಲಿ ಕನಿಷ್ಠಪಕ್ಷ ಒಂದು ಮುದ್ರಣಾಲಯವನ್ನು ಸ್ಥಾಪಿಸಲೂ ಸರಕಾರ ಮನಸ್ಸುಮಾಡುತ್ತಿಲ್ಲ ಎಂಬುದು ವಿಷಾದನೀಯ.

ಅಂತೂ ಇಂತೂ ಕುಂತಿ ಮಕ್ಕಳಿಗೆ ವನವಾಸ ಎಂಬಂತೆ ಕೇರಳದಲ್ಲಿ ಯಾರು ಅಧಿಕಾರಕ್ಕೆ ಬಂದರೂ ಕಾಸರಗೋಡಿನ ಕನ್ನಡಿಗರಿಗೆ ಮಾತ್ರ ರಾಗಿಬೀಸುವುದು ತಪ್ಪದು. ಕೇರಳದ ರಾಜಕಾರಣಿಗಳಿಗೆ ಮಲಯಾಳದ ಮಸಾಲೆ ಅರೆಯಲು ಕಾಸರಗೋಡಿನ ಕನ್ನಡಿಗರನ್ನು ಕೇಳುವ ಅಗತ್ಯವಿದೆಯೆ?

ಮಂಜೇಶ್ವರದ ಬೇಡಿಕೆ ಪ್ರಸ್ತಾಪಿಸುವವರೇ ಇಲ್ಲ!   
ಕಳೆದ ಭಾಷಾ ಅಲ್ಪಸಂಖ್ಯಾಕ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಕೆ.ಎಂ. ಬಳ್ಳಕ್ಕುರಾಯರು ನೂತನ ಮಂಜೇಶ್ವರ ತಾಲೂಕಿಗೂ ಕನ್ನಡ ಭಾಷಾ ಅಲ್ಪಸಂಖ್ಯಾಕ ಪ್ರದೇಶವೆಂಬ ಸ್ಥಾನಮಾನವನ್ನು ನೀಡಿ ಅಧಿಕೃತ ಆದೇಶ ಹೊರಡಿಸಬೇಕೆಂದು ಪ್ರಸ್ತಾಪಿಸಿದ್ದರು. ಆ ಬೇಡಿಕೆಯನ್ನು ಮುಖ್ಯಮಂತ್ರಿಯವರೇ ಅಂಗೀಕರಿಸಿದ್ದರೂ ಸಭೆಯ ನಡಾವಳಿಯ ಪುಸ್ತಕದಲ್ಲಿ ದಾಖಲಾಗದೆ ಕೈಗೆ  ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿತ್ತು. ಈ ಬಾರಿ ಬಳ್ಳಕ್ಕುರಾಯರನ್ನು ಆಹ್ವಾನಿಸದ ಕಾರಣ ಮಂಜೇಶ್ವರದ ಬೇಡಿಕೆಯನ್ನು ಪ್ರಸ್ತಾಪಿಸಲು ಯಾವ ಪ್ರತಿನಿಧಿಯೂ ಇರಲಿಲ್ಲ! ಕನ್ನಡ ಸಂಘಟನೆಗಳ ಪ್ರತಿನಿಧಿಯನ್ನು ಆಹ್ವಾನಿಸದೆ ಭಾಷಾ ಅಲ್ಪಸಂಖ್ಯಾಕ ಸಮಿತಿ ಸಭೆಯನ್ನು ನಡೆಸಿರುವುದು ಖಂಡನಾರ್ಹವೆಂಬುದರಲ್ಲಿ ಎರಡುಮಾತಿಲ್ಲ.

ಇದೇ ರೀತಿ ಗೋವಿಂದ ಪೈ ಕಾಲೇಜಿನಲ್ಲಿ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಆಧೀನದಲ್ಲಿ ಕನ್ನಡ ಎಂ.ಎ ತರಗತಿಗಳು ಪ್ರಾರಂಭವಾದರೆ ಎಷ್ಟೋ ಮಂದಿ ಸ್ಥಳೀಯ ಬಡ ವಿದ್ಯಾರ್ಥಿಗಳಿಗೆ ಕರ್ನಾಟಕ ಸರಕಾರ ನೀಡುವ ಸಹಾಯಧನದ ಪ್ರಯೋಜನ ಪಡೆದು ಸ್ನಾತಕೋತ್ತರ ಪದವಿ ಪಡೆಯಲು ಅವಕಾಶವಾಗುತ್ತದೆ. ಮಂಜೇಶ್ವರ ಶಾಸಕರಾದ ಪಿ.ಬಿ. ಅಬ್ದುಲ್‌ ರಜಾಕರು ಇನ್ನಾದರೂ ದೊಡ್ಡ ಮನಸ್ಸುಮಾಡಿ ಪ್ರಯತ್ನಪಟ್ಟರೆ ಇವೆರಡು ನ್ಯಾಯೋಚಿತ ಬೇಡಿಕೆಗಳೂ ಕೈಗೂಡಬಹುದು.

ಸಮಿತಿ ರಚಿಸಿ ನಿರ್ಲಕ್ಷಿಸಿದರೆ ಏನು ಫಲ?
ಭಾಷಾ ಅಲ್ಪಸಂಖ್ಯಾಕರ ಸಮಸ್ಯೆಗಳ ಅಧ್ಯಯನ ಕ್ಕಾಗಿ ವಿಶೇಷ ಸಮಿತಿಯನ್ನು ರಚಿಸಲಿರುವುದು ಸ್ವಾಹತಾರ್ಹ. ಆದರೆ ಸಮಿತಿಯನ್ನು ರಚಿಸಿದರೆ ಮಾತ್ರ ಸಾಕೆ? ಅದರ ತೀರ್ಮಾನಗಳನ್ನು ಅನುಷ್ಠಾನಗೊಳಿಸುವ ಬದ್ಧತೆಯನ್ನು ತೋರಬೇಡವೆ ಎಂಬುದು ಜನರ ಪ್ರಶ್ನೆ.   ಒಂದು  ಸರಕಾರ ಸಮಿತಿಯನ್ನು ರಚಿಸಿ ಅದರ ವರದಿ ಪ್ರಕಟವಾಗುವಾಗ ಇನ್ನೊಂದು ಸರಕಾರ ಬಂದಿರುತ್ತದೆ. ಆಗ ಹಿಂದಿನ ಸರಕಾರ ರಚಿಸಿದ ಸಮಿತಿಯ ವರದಿ ಮೂಲೆಗುಂಪಾಗುತ್ತದೆ. ಜನರಿಗೆ ಅದರ ಪ್ರಯೋಜನ ದೊರೆಯುವುದೇ ಇಲ್ಲ.

ಕಳೆದ ಸರಕಾರ ಕಾಸರಗೋಡಿನ ಅಭಿವೃದ್ಧಿಯ ಅಧ್ಯಯನಕ್ಕಾಗಿ ರಚಿಸಿದ ಡಾ.ಪ್ರಭಾಕರನ್‌ ಆಯೋಗದ ವರದಿಯಲ್ಲಿ ಅದೆಷ್ಟೋ ಕನ್ನಡಪರ ಶಿಪಾರಸ್ಸುಗಳಿದ್ದರೂ ಸರಕಾರಿ ಕಾಲೇಜಿಗೆ ಯಕ್ಷಗಾನ ಕೇಂದ್ರ ಮಂಜೂರಾದ್ದನ್ನು ಬಿಟ್ಟರೆ ಉಳಿದ ಶಿಪಾರಸ್ಸುಗಳು ಅನುಷ್ಠಾನಗೊಂಡಿಲ್ಲ. ಕಾಸರಗೋಡಿನಲ್ಲಿ ಕನ್ನಡಬಲ್ಲ ಉದ್ಯೋಗಿಗಳನ್ನೇ ನೇಮಿಸಬೇಕು, ಎಲ್ಲ ಮಾಹಿತಿ, ಅರ್ಜಿನಮೂನೆ ಮೊದಲಾದವನ್ನು ಕನ್ನಡದಲ್ಲೂ ಒದಗಿಸಬೇಕು ಮುಂತಾದ  ಸರಕಾರಿ ಆದೇಶಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕೆಂದು ಸಮಿತಿಯ ವರದಿಯಲ್ಲಿ ಸೂಚಿಸಲಾಗಿದ್ದರೂ ಕನ್ನಡಿಗರ ಗೋಳು ಮುಂದುವರಿ ಯುತ್ತಿದೆಯೇ ಹೊರತು ಪರಿಹಾರವಾಗಿಲ್ಲ.

ಕಳ್ಳಿಗೆ, ಕುಣಿಕುಳ್ಳಾಯ ಮೊದಲಾದವರು ಹೋರಾಡಿ ಪಡೆದ ಹಲವಾರು ಕನ್ನಡಪರ ಸರಕಾರಿ ಆದೇಶಗಳು ಸರಿಯಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಆಡಳಿತಭಾಷೆಯಾಗಿ ಮಲಯಾಳಕ್ಕೆ ಸಮಾನವಾಗಿ ಕನ್ನಡವನ್ನೂ ಬಳಸಬೇಕು. ಮಲಯಾಳ ಬಲವಂತ ಹೇರಿಕೆಯನ್ನು ಕೊನೆಗೊಳಿಸಬೇಕು. ಇಷ್ಟು ಮಾಡಿದರೂ ಅದು ಈ ಸರಕಾರ ಕನ್ನಡಿಗರಿಗೆ ಮಾಡುವ ಮಹದುಪಕಾರವಾಗುತ್ತದೆ.

ಭಾಷಾ ಅಲ್ಪಸಂಖ್ಯಾಕರ ಹಕ್ಕುಗಳ ಸ್ಪಷ್ಟ ಉಲ್ಲಂಘನೆ
ಪ್ರಸ್ತುತ ಭಾಷಾ ಅಲ್ಪಸಂಖ್ಯಾಕರಿಗೆ   ಸರಕಾರದೊಂದಿಗೆ ಅವರ ಮಾತೃ ಭಾಷೆಯಲ್ಲಿ ವ್ಯವಹರಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಅರ್ಜಿ ನಮೂನೆ, ಮಾಹಿತಿ, ಪ್ರಕಟನೆಗಳನ್ನು ಮಲಯಾಳ ದಲ್ಲಿ ಮಾತ್ರ ಒದಗಿಸಲಾಗುತ್ತಿದೆ. ಕನ್ನಡದಲ್ಲಿ ಅರ್ಜಿ ನೀಡಿದರೆ ಸ್ವೀಕರಿಸುತ್ತಿಲ್ಲ, ಮಲಯಾಳದಲ್ಲಿ ಮಾತ್ರ ಉತ್ತರ ದೊರೆಯುತ್ತಿದೆ. ಸಾರ್ವಜನಿಕ ಕಚೇರಿಗಳ ನಾಮಫಲಕ, ಬಸ್ಸುಗಳ ಸ್ಥಳನಾಮಸೂಚಕ ಫಲಕ, ರಸ್ತೆ ಪಕ್ಕದ ಸೂಚನಾ ಫಲಕಗಳಲ್ಲೂ ಕನ್ನಡ ಮರೆಯಾಗುತ್ತಿದೆ. ಅಂಗನವಾಡಿಗಳಲ್ಲಿ ಪುಟ್ಟ ಹಸುಳೆಗಳಿಗೂ ಮಾತೃಭಾಷೆ ಕಲಿಸದೆ ಮಲಯಾಳವನ್ನು ಮಾತ್ರ ಕಲಿಸುತ್ತಾರೆ.  ಇಂತಹ ಸಮಸ್ಯೆಗಳು ಹಲವು ವರ್ಷಗಳಿಂದ ಹೊತ್ತಿ ಉರಿಯುತ್ತಿದ್ದರೂ ಯಾವುದೇ ಪರಿಹಾರ ಕಂಡುಕೊಳ್ಳಲಾಗಿಲ್ಲ. ಹಾಡುಹಗಲೇ  ಭಾಷಾ ಅಲ್ಪಸಂಖ್ಯಾಕರ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದರೂ ಯಾವ ಕ್ರಮವನ್ನೂ ಕೈಗೊಳ್ಳದ ಸರಕಾರ ಜನರ ಕಣ್ಣಿಗೆ ಮಣ್ಣೆರಚಲು ಸಮಸ್ಯೆಗಳ ಅಧ್ಯಯನಕ್ಕಾಗಿ ಸಮಿತಿಯ ಮೇಲೆ ವಿಶೇಷ ಸಮಿತಿಗಳನ್ನು ನೇಮಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next