ತಿರುವನಂತಪುರ: ಶಬರಿಮಲೆಗೆ ಭೇಟಿ ನೀಡುವ ಯಾವ ಭಕ್ತರೂ ನಿರಾಶರಾಗುವುದು ಬೇಡ. ವರ್ಚುವಲ್ ಕ್ಯೂ ಬುಕಿಂಗ್ ಮಾಡದೆ ಆಗಮಿಸಿದ್ದರೂ ಶಬರಿಮಲೆಗೆ (Sabarimala) ಆಗಮಿಸುವ ಯಾತ್ರಾರ್ಥಿಗಳಿಗೆ ಅಯ್ಯಪ್ಪ ದೇವಸ್ಥಾನದಲ್ಲಿ ಸುಗಮ ದರ್ಶನ ವ್ಯವಸ್ಥೆ ಮಾಡಲಾಗುವುದು ಎಂದು ಕೇರಳ ಸರಕಾರ (Kerala Govt) ಮಂಗಳವಾರ ಸ್ಪಷ್ಟಪಡಿಸಿದೆ.
ಈ ಯಾತ್ರೆಯ ವೇಳೆ ಆನ್‌ಲೈನ್ ನೋಂದಣಿ ಮಾಡಿಸಿಕೊಂಡರೆ ಮಾತ್ರ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂಬ ಕೇರಳ ಸರಕಾರದ ನಿರ್ಧಾರದ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಹೀಗಾಗಿ ತನ್ನ ನಿರ್ಧಾರದಿಂದ ಸರಕಾರ ಹಿಂದೆ ಸರಿದಿದೆ.
ಆನ್‌ಲೈನ್ ನೋಂದಣಿ ಇಲ್ಲದೆಯೂ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ವಿಧಾನಸಭೆಯಲ್ಲಿ ಸಿಎಂ ವಿಜಯನ್ ಘೋಷಿಸಿದ್ದಾರೆ.
“ಆನ್‌ಲೈನ್ ನೋಂದಣಿ ಇಲ್ಲದೆ ಬರುವ ಯಾತ್ರಾರ್ಥಿಗಳಿಗೆ ಸುಗಮ ದರ್ಶನಕ್ಕಾಗಿ ಸೌಲಭ್ಯಗಳನ್ನು ಖಾತ್ರಿಪಡಿಸಲಾಗುವುದು. ಆನ್‌ಲೈನ್‌ನಲ್ಲಿ ನೋಂದಾಯಿಸದವರಿಗೆ ಮತ್ತು ವ್ಯವಸ್ಥೆಯ ಬಗ್ಗೆ ತಿಳಿಯದೆ ಬರುವವರಿಗೆ ದರ್ಶನವನ್ನು ಖಾತ್ರಿಪಡಿಸಲಾಗುತ್ತದೆ” ಎಂದು ಪಿಣರಾಯಿ ವಿಜಯನ್ ಹೇಳಿದರು.
ಕಳೆದ ಸೀಸನ್ ನಲ್ಲಿಯೂ ಇದೇ ರೀತಿಯ ಸೌಲಭ್ಯಗಳನ್ನು ಶಬರಿಮಲೆ ದೇವಸ್ಥಾನದಲ್ಲಿ ಒದಗಿಸಲಾಗಿದೆ ಎಂದು ಅವರು ಹೇಳಿದರು.
ಆದಾಗ್ಯೂ, ಮುಖ್ಯಮಂತ್ರಿಗಳು ತಮ್ಮ ಸಂಕ್ಷಿಪ್ತ ಭಾಷಣದಲ್ಲಿ, ವರ್ಚುವಲ್ ಕ್ಯೂ ಬುಕಿಂಗ್‌ನೊಂದಿಗೆ ಹಿಂದಿನ ವರ್ಷದಂತೆ ಸ್ಪಾಟ್ ಬುಕಿಂಗ್ ವ್ಯವಸ್ಥೆಯನ್ನು ನಿರ್ವಹಿಸಬಹುದೇ ಎಂದು ಸ್ಪಷ್ಟವಾಗಿ ಹೇಳಲಿಲ್ಲ.
ಅಕ್ಟೋಬರ್ 5 ರಂದು ನಡೆದ ಮೌಲ್ಯಮಾಪನ ಸಭೆಯಲ್ಲಿ ಶಬರಿಮಲೆಯಲ್ಲಿ ಯಾತ್ರಾರ್ಥಿಗಳಿಗೆ ಸ್ಪಾಟ್ ಬುಕ್ಕಿಂಗ್ ಮಾಡಲು ಅವಕಾಶ ನೀಡುವ ಬಗ್ಗೆ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.