Advertisement

ರಾಜ್ಯ ಸರ್ಕಾರಿ ಶಾಲೆ ಮಕ್ಕಳ “ದಿನಚರಿ’ಬದಲು 

06:00 AM Oct 27, 2018 | |

ರಾಯಚೂರು: ಪ್ರತಿ ಹಂತದಲ್ಲೂ ಖಾಸಗಿ ಶಾಲೆಗಳಿಂದ ಪೈಪೋಟಿ ಎದುರಿಸುತ್ತಿರುವ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ಸರ್ಕಾರ ಮತ್ತೂಂದು ಯೋಜನೆ ಪರಿಚಯಿಸಿದೆ. 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಡೈರಿ ವಿತರಿಸಲು ಮುಂದಾಗುವ ಮೂಲಕ ಕಲಿಕಾ ಪ್ರಗತಿಗೆ ಶ್ರಮಿಸುತ್ತಿದೆ. ಈಗಾಗಲೇ ಆಯಾ ಜಿಲ್ಲೆಗಳಿಗೆ ಡೈರಿಗಳನ್ನು ಸರಬರಾಜು ಮಾಡಿದ್ದು, ಇನ್ನೇನು ವಿದ್ಯಾರ್ಥಿಗಳಿಗೆ ವಿತರಿಸಬೇಕಿದೆ. ಖಾಸಗಿ ಶಾಲೆಗಳಲ್ಲಿ ಇಂಥ ಪದ್ಧಯಿತ್ತು. ಈಗ ಅದನ್ನು ಸರ್ಕಾರಿ ಶಾಲೆಗಳು ಅನುಸರಿಸುತ್ತಿವೆ. ಇದೊಂದು ಆಲ್‌ ಇನ್‌ ಒನ್‌ ಎನ್ನುವ ರೀತಿಯ ಡೈರಿಯಾಗಿದ್ದು, ಮಕ್ಕಳ ಜ್ಞಾನಾರ್ಜನೆಗೆ ಪೂರಕವಾದ ಡೈರಿ ಎನ್ನುತ್ತಾರೆ ಅಧಿಕಾರಿಗಳು.

Advertisement

ಏನಿದು ಯೋಜನೆ?: ವಿದ್ಯಾರ್ಥಿ ವಿವರದ ಜತೆಗೆ ಸಮಗ್ರ ಮಾಹಿತಿ ಒಳಗೊಂಡ 152 ಪುಟಗಳ ಡೈರಿ ಇದಾಗಿದೆ. ಮೊದಲ ಪುಟದಲ್ಲಿ ಶಾಲಾ ವೇಳಾಪಟ್ಟಿ, ವಿದ್ಯಾರ್ಥಿ ಹೆಸರು, ತಂದೆ ಹೆಸರು, ವಿದ್ಯಾರ್ಥಿ ವಿಳಾಸ, ರಕ್ತದ ಗುಂಪು, ಜಾತಿ, ಆಧಾರ್‌ ಸಂಖ್ಯೆ ಇರಲಿದೆ. ಡೈರಿ ನೋಡಿದರೆ ಆ ವಿದ್ಯಾರ್ಥಿಯ ಸಂಪೂರ್ಣ ವಿಳಾಸ ಗೊತ್ತಾಗುತ್ತದೆ. ಅದರ ಜತೆಗೆ ಶೈಕ್ಷಣಿಕ ವರ್ಷದಲ್ಲಿ ಕೈಗೊಂಡ ಚಟುವಟಿಕೆಗಳ ವಿವರ, ಆಯಾ ತಿಂಗಳಲ್ಲಿ ಬರುವ ಸರ್ಕಾರಿ ಆಚರಣೆಗಳು, ಜಯಂತಿಗಳ ವಿವರ ಇರಲಿದೆ. ಇನ್ನು ವಿದ್ಯಾರ್ಥಿಗಳಿಗೆ 
ಸರ್ಕಾರದಿಂದ ಸಿಗುವ ಸೌಲಭ್ಯಗಳೇನು, ಶಾಲೆ ಶಿಕ್ಷಕರ ಮಾಹಿತಿ, ಜತೆ ಅವರ ದೂರವಾಣಿ ಸಂಖ್ಯೆಗಳು ಉಲ್ಲೇಖವಾಗಿರುತ್ತದೆ. ಪರೀಕ್ಷಾ ವೇಳಾಪಟ್ಟಿ, ಪ್ರಾಜೆಕ್ಟ್ಗಳ ವಿವರಣೆ ಕೂಡ ಇರುತ್ತದೆ. 

ನೋಟಿಸ್‌ ಕೂಡ ಇಲ್ಲೇ: ಇಷ್ಟು ದಿನ ಪಾಲಕರಿಗೆ ಯಾವುದಾದರೂ ಮಾಹಿತಿ ನೀಡಬೇಕಾದರೆ ದೂರವಾಣಿ ಕರೆ ಮಾಡಿ ತಿಳಿಸಬೇಕಿತ್ತು. ಆದರೆ, ಇನ್ನು ಮುಂದೆ ಸೂಚನೆಗಳನ್ನು ಈ ಡೈರಿಯಲ್ಲೇ ಬರೆದು ಕಳುಹಿಸಲಾಗುತ್ತದೆ. ಅದಕ್ಕೆ ಪಾಲಕರು
ಉತ್ತರವನ್ನು ಕೂಡ ಡೈರಿಯಲ್ಲಿಯೇ ನೀಡಲು ಕಾಲಂ ನೀಡಲಾಗಿದೆ. ಮಗು ಶಾಲೆಗೆ ಗೈರಾದರೆ ಪಾಲಕರಿಂದ ಕಾರಣ ಉಲ್ಲೇಖೀಸಿ ಸಹಿ ಮಾಡಿ ಕಳುಹಿಸಬೇಕು. ಜ್ಞಾನಾರ್ಜನೆ ಆಗುವಂಥ ಅನೇಕ ವಿಚಾರಗಳಿವೆ. ಶಿಕ್ಷಣಕ್ಕೆ ಸಂಬಂಧಿಸಿದ ಹಲವು ನಾಣ್ಣುಡಿಗಳು, ಆರೋಗ್ಯ ಇಲಾಖೆ ಮಾತ್ರೆಗಳ ವಿವರ ಸೇರಿ ಸಾಕಷ್ಟು ವಿಚಾರಗಳಿವೆ. ಅದರ ಜತೆಗೆ ನನ್ನ ಮೇಲೆ ಪ್ರಭಾವ ಬೀರಿದ ವ್ಯಕ್ತಿ ಎಂಬ
ಅಂಕಣವಿದ್ದು, ಅದನ್ನು ವಿದ್ಯಾರ್ಥಿಗಳೇ ಭರ್ತಿ ಮಾಡಬೇಕಿದೆ. ಪ್ರತಿ ಹಳ್ಳಿಯಲ್ಲೂ ಖಾಸಗಿ ಶಾಲೆ ಹುಟ್ಟಿಕೊಂಡಿದ್ದು, ಸರ್ಕಾರಿ ಶಾಲೆಗಳ ಅಸ್ತಿತ್ವಕ್ಕೆ ಕುತ್ತು ತರುತ್ತಿದೆ. ಇಂಥ ವೇಳೆ ಖಾಸಗಿ ಶಾಲೆಗಳಿಗೆ ಎಲ್ಲ ವಿಧದಲ್ಲೂ ಪೈಪೋಟಿ ನೀಡುವ ಅನಿವಾರ್ಯತೆ ಮನಗಂಡ ಸರ್ಕಾರ ಖಾಸಗಿ ಶಾಲೆಗಳಲ್ಲಿ ಚಾಲ್ತಿಯಲ್ಲಿದ್ದ ಡೈರಿ ಪದ್ಧತಿ ಪರಿಚಯಿಸುತ್ತಿದೆ.

ಶಾಲೆಗಳ ಬಲವರ್ಧನೆ: ಸರ್ಕಾರಿ ಶಾಲೆಗಳಲ್ಲಿ ಎರಡು ಜತೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಬಿಸಿಯೂಟ, ಶೂ, ಹಾಲು, ವಿದ್ಯಾರ್ಥಿ ವೇತನ, ಪ್ರತಿಭಾವಂತರಿಗೆ ಲ್ಯಾಪ್‌ಟಾಪ್‌ ವಿತರಣೆ ಹೀಗೆ ಸಾಕಷ್ಟು ಸೌಲಭ್ಯ ನೀಡಲಾಗುತ್ತಿದೆ. ಆದರೂ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಲ್ಲಿ ಹಿಂದುಳಿಯುತ್ತಿವೆ. ಅದಕ್ಕೆ ಶಿಕ್ಷಕರ ಕೊರತೆ, ಕಟ್ಟಡಗಳ ಸಮಸ್ಯೆ ಸೇರಿ ಅನೇಕ ಕಾರಣಗಳಿವೆ. ಇಂಥ ಯೋಜನೆಗಳಿಂದಾದರೂ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕರೆ ತರುವ ಯತ್ನ ಮಾಡಲಾಗುತ್ತಿದೆ.

ಖಾಸಗಿ ಶಾಲೆಗಳಲ್ಲಿ ಈಗಾಗಲೇ ಪ್ರಚಲಿತದಲ್ಲಿದ್ದ ಯೋಜನೆಯನ್ನು ಸರ್ಕಾರಿ ಶಾಲೆಗಳಿಗೂ ವಿಸ್ತರಿಸಲಾಗಿದೆ. ಮಗುವಿನ ಕಲಿಕಾ ಪ್ರಗತಿ, ಜ್ಞಾನಾರ್ಜನೆ ಹಾಗೂ ಪಾರದರ್ಶಕ ಕಲಿಕೆಗೆ ಇದು ಸಹಕಾರಿ. ಡೈರಿಯಲ್ಲಿ ಸಾಕಷ್ಟು ಉತ್ತಮ ಅಂಶಗಳಿಗೆ. ಈಗಾಗಲೇ  ಅಗತ್ಯದಷ್ಟು ಡೈರಿ ಬಂದಿದ್ದು, ಶೀಘ್ರದಲ್ಲೇ ಶಾಲೆಗಳಿಗೆ ಕಳುಹಿಸಲಾಗುವುದು.
● ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ, ರಾಯಚೂರು

Advertisement

ಸಿದ್ದಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next