Advertisement

“ರಾಜ್ಯ ಸರಕಾರ ನಮ್ಮನ್ನು ಕಡೆಗಣಿಸಿದೆ’ಅಂಧ ಕ್ರಿಕೆಟಿಗರ ಆಕ್ರೋಶ

10:27 AM Jan 31, 2018 | Team Udayavani |

ಬೆಂಗಳೂರು: ಪಾಕಿಸ್ಥಾನವನ್ನು ಸೋಲಿಸಿ 5ನೇ ಅಂಧರ ವಿಶ್ವಕಪ್‌ ಕ್ರಿಕೆಟ್‌ ಗೆದ್ದು ಬಂದ ಭಾರತ ಕ್ರಿಕೆಟಿಗರನ್ನು ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಶ್ಲಾಘಿಸಿದ್ದಾರೆ. ಆದರೆ ಕರ್ನಾಟಕ ಸರಕಾರ ದೇಶ ಪ್ರತಿನಿಧಿಸಿದ್ದ ತಮ್ಮನ್ನು ಕಡೆಗಣಿಸಿದೆ ಎಂದು ಸುನೀಲ್‌ ರಮೇಶ್‌, ಪ್ರಕಾಶ್‌ ಜಯರಾಮಯ್ಯ, ಬಸಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ರಾಜ್ಯ ಕ್ರಿಕೆಟಿಗರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Advertisement

ಕ್ರಿಕೆಟಿಗರಿಗೆ ಏಕೆ ಬೇಸರ?: ಹಿಂದೆ ಟಿ20 ವಿಶ್ವಕಪ್‌ ಗೆದ್ದಾಗ ರಾಜ್ಯ ಸರಕಾರ ಅಂಧ ಕ್ರಿಕೆಟಿಗರಿಗೆ ನಿಯಮ ಪ್ರಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದಕ್ಕಾಗಿ ತಲಾ 10 ಲಕ್ಷ ರೂ. ನೀಡಬೇಕಾಗಿತ್ತು. ಆದರೆ ಸರಕಾರ ಆ ಬಾರಿ ತಂಡ ಪ್ರತಿನಿಧಿಸಿದ್ದ ಪ್ರಕಾಶ್‌ ಜಯರಾಮಯ್ಯ ಹಾಗೂ ಸುನೀಲ್‌ ರಮೇಶ್‌ಗೆ ತಲಾ 7 ಲಕ್ಷ ರೂ. ಪ್ರಕಟಿಸಿತ್ತು. ಜತೆಗೆ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಉದ್ಯೋಗ ನೀಡುತ್ತಿರುವುದರಿಂದ 10 ಲಕ್ಷ ರೂ. ಕೊಡಲಾಗುವುದಿಲ್ಲ ಎಂದು ಅಂದು ಸರಕಾರ ತಿಳಿಸಿತ್ತು. ಆದರೆ ಇದುವರೆಗೆ ಉದ್ಯೋಗ ನೀಡಿಲ್ಲ ಎಂದು ಕ್ರಿಕೆಟಿಗರು ತಿಳಿಸಿದರು.

ಈ ಬಾರಿಯೂ ನಿರ್ಲಕ್ಷ್ಯ: ವಿಶ್ವಕಪ್‌ ಗೆದ್ದು ಬಂದ ನಮ್ಮನ್ನು ಸರ್ಕಾರ ಈ ಬಾರಿಯೂ ನಿರ್ಲಕ್ಷಿಸಿದೆ. ಉಳಿದ ರಾಜ್ಯಗಳು ತಮ್ಮ ಆಟಗಾರರಿಗೆ ಆರ್ಥಿಕ, ಉದ್ಯೋಗದ ನೆರವನ್ನು ನೀಡಿದೆ. ಆದರೆ ನಮ್ಮ ರಾಜ್ಯದಲ್ಲಿ ಗೌರವ ಸಿಕ್ಕಿಲ್ಲ ಎಂದು ಪ್ರಕಾಶ್‌ ಜಯರಾಮಯ್ಯ ತಿಳಿಸಿದರು.

ಬಿಸಿಸಿಐನಿಂದ ಅಂಧರ ಕ್ರಿಕೆಟ್‌ ಸಂಸ್ಥೆಗೆ ಮಾನ್ಯತೆ?
ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂಧರ ಕ್ರಿಕೆಟ್‌ ಸಂಸ್ಥೆಗೆ ಮಾನ್ಯತೆ ನೀಡಬೇಕು ಎಂದು ಇತ್ತೀಚೆಗೆ ಬಿಸಿಸಿಐ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಬಿಸಿಸಿಐನಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ. ಇದು ಖುಷಿಯ ವಿಚಾರ ಎಂದು ವಿಶ್ವ ಅಂಧರ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಮಹಾಂತೇಶ್‌ ತಿಳಿಸಿದರು. ಇದೇ ವೇಳೆ ಮಾತನಾಡಿದ ಅವರು ಐಪಿಎಲ್‌ ಮಾದರಿಯಲ್ಲಿ ಅಂಧರ ಟಿ20 ಕ್ರಿಕೆಟ್‌ ಕೂಟವನ್ನು ಆಯೋಜಿಸಲು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next