Advertisement

ಬರ ನಿರ್ವಹಣೆಗೆ ರಾಜ್ಯ ಸರ್ಕಾರ ವಿಫ‌ಲ

12:39 PM May 11, 2019 | Team Udayavani |

ತುಮಕೂರು: ನೀರಿನ ಸಮಸ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಜನ ಜಾನುವಾರು ಗಳು ಪ್ರಾಣಿ, ಪಕ್ಷಿಗಳು ನೀರಿಗಾಗಿ ತೊಂದರೆ ಪಡುತ್ತಿವೆ. ಬರನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫ‌ಲವಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಸೊಗಡು ಎಸ್‌. ಶಿವಣ್ಣ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಮಳೆ ಸಮರ್ಪಕವಾಗಿ ಬರದೇ ಇಡೀ ಜಿಲ್ಲೆಯ 10 ತಾಲೂಕುಗಳು ಬರದಿಂದ ಸಂಕಷ್ಟ ಅನುಭವಿಸುತ್ತಿವೆ. ಕೆರೆ, ಕಟ್ಟೆಗಳಲ್ಲಿ ನೀರಿಲ್ಲ. ಜನ- ಜಾನುವಾರುಗಳು ಸಂಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ನುಡಿದರು.

ಜನರ ಸಮಸ್ಯೆ ಅರಿವಿರಲಿ: ಹಳ್ಳಿಗಳಿಗೆ ಅಧಿಕಾರಿ ಗಳು ಹೋಗಿ, ಜನರ ಸಮಸ್ಯೆ ಅರಿಯಬೇಕು. ಇಂದು ಇರುವೆ, ಕೋತಿಗಳು ಇತರೆ ಪ್ರಾಣಿ- ಪಕ್ಷಿಗಳು ನೀರಿಗಾಗಿ ಹುಡುಕಾಟ ನಡೆಸುತ್ತಿವೆ. ಅಂತಹ ಪರಿಸ್ಥಿತಿ ಎದುರಾಗಿದೆ. ಸದಾ ತನುವಿನಿಂದ ಕೂಡಿರುತ್ತಿದ್ದ ಭೂಮಿ ಒಣಗಿ ಬೆಂಡಾಗಿದೆ. ಗೆದ್ದಲುಗಳು ಹುತ್ತಗಳನ್ನು ಕಟ್ಟುತ್ತಿದ್ದವು. ಆದರೆ, ಇಂದು ಗೆದ್ದಲ ಹುಳುಗಳೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಪರಿಸರದಲ್ಲಿ ಅಸಮತೋಲನ ಉಂಟಾಗಿ ಜನ ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ. ಅಧಿಕಾರಿ ಗಳು, ಜನಪ್ರತಿನಿಧಿಗಳು ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

ನೀರು ಬರದೇ ಕೆರೆಗಳು ತುಂಬಿಲ್ಲ: ಜಿಲ್ಲೆಗೆ ಹರಿಯ ಬೇಕಾಗಿರುವ ಹೇಮಾವತಿ ನಾಲೆಯಲ್ಲಿ ನೀರು ಸರಾಗವಾಗಿ ಹರಿಯದ ಕಾರಣ, ಕಳೆದ ಮಳೆಗಾಲ ದಲ್ಲಿ ಜಲಾಶಯದಿಂದ ಬಿಟ್ಟ ನೀರು ಸರಿಯಾಗಿ ಬರದೇ ಕುಡಿಯುವ ನೀರಿನ ಕೆರೆಗಳು ಯಾವು ತುಂಬಲಿಲ್ಲ. ಇದಕ್ಕೆ ಕಾರಣ ಜಲಾಶಯದಲ್ಲಿರುವ ಹೂಳು, ಜೊತೆಗೆ ಗಿಡಗೆಂಟೆಗಳು ಬೆಳೆದಿರುವುದು ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

ನಾಲೆಯಲ್ಲಿನ ಕಸ ತೆಗೆದು, ಗಿಡಿ ಮರಗಳನ್ನು ಹೂಳು ಎತ್ತುವ ಕಾರ್ಯವನ್ನು ಸರ್ಕಾರ ಮಾಡಬೇಕು. ಜೂ.10ರೊಳಗೆ ನಾಲೆಗಳಲ್ಲಿನ ಹೂಳು ಎತ್ತುವ ಕಾರ್ಯವನ್ನು ಸರ್ಕಾರ ಆರಂಭಿಸದಿದ್ದರೆ ನಾಲೆಯೊಳಗೆಯೇ ಕುಳಿತು ಹೋರಾಟ ಆರಂಭಿಸು ವುದು ಅನಿವಾರ್ಯ ಎಂದು ಎಚ್ಚರಿಸಿದರು.

Advertisement

ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿಯಿಲ್ಲ: ಜಿಲ್ಲೆಯಲ್ಲಿ ಪಾಲಿನ ಹೇಮಾವತಿ ನದಿ ನೀರು ಹರಿಸುವಲ್ಲಿ ರಾಜ್ಯ ಸ‌ರ್ಕಾರ ವಿಫ‌ಲವಾಗಿದೆ. ಜನರು, ಜಾನುವಾರುಗಳು ನೀರಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ. ಮಳೆ ಆರಂಭವಾಗಿ ಜಲಾಶಯಕ್ಕೆ ನೀರು ಬರುವಾಗ ನಮ್ಮ ಭಾಗಕ್ಕೆ ನೀರು ಹರಿಸಿದರೆ ಅನುಕೂಲವಾಗುತ್ತದೆ. 10,000 ಕ್ಯೂಸೆಕ್ಸ್‌ ನೀರು ಜಲಾಶಯಕ್ಕೆ ಬಂದರೆ, ಅದರಲ್ಲಿ 2000 ಕ್ಯೂಸೆಕ್ಸ್‌ ನೀರನ್ನು ನಮ್ಮಗೆ ಹರಿಸಿದರೆ ಏನು ತೊಂದರೆಯಾಗುವುದಿಲ್ಲ. ಆದರೆ, ಸರ್ಕಾರ ಜಲಾಶಯ ತುಂಬುವವರಿಗೂ ಕಾದು ಜಲಾಶಯದ ನೀರು ಸಮುದ್ರಕ್ಕೆ ಅರಿಯುವಂತೆ ಮಾಡುತ್ತಾರೆ. ಇವರಿಗೆ ಜನರ ಬಗ್ಗೆ ಕಾಳಜಿಯಿಲ್ಲ ಎಂದರು.

ತಮ್ಮ ಅವಧಿಯಲ್ಲಿ ಜಿಲ್ಲೆಗೆ ಪೂರ್ಣ ಪ್ರಮಾಣದಲ್ಲಿ ಹೇಮಾವತಿ ನದಿ ನೀರು ಹರಿಸಿ, ಕೆರೆಗಳನ್ನು ತುಂಬಿಸುವ ಮೂಲಕ ನೀರಿನ ಸಮಸ್ಯೆ ಇಲ್ಲದಂತೆ ಮಾಡಲಾಗಿತ್ತು. ಆದರೆ, ಈಗ ಜಿಲ್ಲೆಯ ಪಾಲಿನ ನೀರು ಹರಿಯುತ್ತಿಲ್ಲ. ಸರ್ಕಾರ ಹಾಸನಕ್ಕೆ ಮಾತ್ರ ಹೇಮಾವತಿ ನೀರು ಎನ್ನುವಂತೆ ವರ್ತಿಸುತ್ತಿದೆ ಎಂದು ಕಿಡಿಕಾರಿದರು.

ಬರ ನಿರ್ವಹಣೆಗೆ ನಿರ್ಲಕ್ಷ್ಯ: ಇಂದು ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ರೈತರು ನೀರಿಲ್ಲದೆ ಬೆಳೆ ಕಳೆದುಕೊಳ್ಳುವಂತಾಗಿದೆ. ಬೋರ್‌ವೆಲ್ಗಳು ಬತ್ತಿ ಹೋಗಿವೆ. ಜಾನುವಾರುಗಳು ಮೇವು ನೀರಿಲ್ಲದೆ ಪರಿತಪಿಸುತ್ತಿವೆ. ರಾಜ್ಯ ಸರ್ಕಾರ ಬರ ನಿರ್ವಹಣೆ ಮಾಡದೆ ನಿರ್ಲಕ್ಷ್ಯವಹಿಸಿದೆ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ, ವಿರೋಧ ಪಕ್ಷ ನಿದ್ರೆಗೆ ಜಾರಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ಬಿ.ನಂದೀಶ್‌, ಜಯಸಿಂಹ ರಾವ್‌, ಕೆ.ಪಿ. ಮಹೇಶ್‌, ಬನಶಂಕರಿ ಬಾಬು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next