Advertisement

Kambala; ಬೆಂಗಳೂರು ಕಂಬಳ ಈ ಬಾರಿ ಅನುಮಾನ

01:49 AM Oct 18, 2024 | Team Udayavani |

ಮಂಗಳೂರು: ಕಳೆದ ವರ್ಷ ಬೆಂಗಳೂರಿನಲ್ಲಿ ಅದ್ದೂರಿ ಯಾಗಿ ನಡೆದಿದ್ದ ಕಂಬಳವು ಈ ಬಾರಿ ಅ.26ಕ್ಕೆ ನಿಗದಿಯಾಗಿತ್ತು. ಆದರೆ ಈ ದಿನದಂದು ಕಂಬಳ ನಡೆಯುವುದಿಲ್ಲ. ಜತೆಗೆ ಈ ವರ್ಷ ನಡೆಯುವುದೇ ಅನುಮಾನ ಎನ್ನಲಾಗುತ್ತಿದೆ.

Advertisement

ಬೆಂಗಳೂರಿನಲ್ಲಿ ಕಂಬಳ ನಡೆಸುವುದು ಬಹಳ ಕಷ್ಟದ ಕೆಲಸ. ಪ್ಯಾಲೇಸ್‌ ಗ್ರೌಂಡ್‌ ಅನುಮತಿ ದೊರೆಯಬೇಕಾದರೆ 3 ತಿಂಗಳ ಮುನ್ನ ಪ್ರಕ್ರಿಯೆ ನಡೆಸಬೇಕು. ಮೈಸೂರು ಅರಮನೆ ಹಾಗೂ ಸರಕಾರದಿಂದ ಅನುಮತಿ ಪಡೆಯಬೇಕು. ಕರೆ ನಿರ್ಮಾಣ ಸಹಿತ ಮೂಲ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಕೋಣಗಳನ್ನು ಕರಾವಳಿಯಿಂದ ಬೆಂಗಳೂರಿಗೆ ಕೊಂಡೊಯ್ಯಬೇಕು; ಇಂತಹ ಹತ್ತು ಹಲವು ಸವಾಲು ಎದುರಿಸುವ ಜತೆಗೆ ಕೋಟ್ಯಂತರ ರೂ. ಖರ್ಚು ಕೂಡ ಆಗುತ್ತದೆ. ಕಳೆದ ವರ್ಷ ಮೊದಲ ಕಂಬಳ ಎಂಬ ನೆಲೆಯಲ್ಲಿ ಯಶಸ್ವಿಯಾಗಿ ಮೂಡಿಬಂತಾದರೂ, ಈ ಬಾರಿ ಮಾತ್ರ ಈ ಕುರಿತ ಉತ್ಸಾಹ ಎಲ್ಲೂ ಕಂಡುಬಾರದೆ ಒಂದೇ ವರ್ಷಕ್ಕೆ ಕಂಬಳದಾಟ ಮುಗಿಯಿತೇ ಎಂಬ ಪ್ರಶ್ನೆ ಮೂಡಿದೆ.

ಮಾರ್ಚ್‌ನಲ್ಲಿ ಸಾಧ್ಯವೇ?
ಸದ್ಯದ ಮಾಹಿತಿ ಪ್ರಕಾರ ಈ ಋತುವಿನ ಆರಂಭದಲ್ಲಿ ಬೆಂಗಳೂರು ಕಂಬಳ ನಡೆಯುವುದಿಲ್ಲ. ಆದರೆ ಕಂಬಳ ಸಮಿತಿ ಹಾಗೂ ಕೋಣಗಳ ಯಜಮಾನರು ಒಪ್ಪಿಗೆ ಸೂಚಿಸಿದರೆ ಮಾರ್ಚ್‌ನಲ್ಲಿ ಬೆಂಗಳೂರು ಕಂಬಳ ನಡೆಸಬಹುದೇ ಎಂಬ ಬಗ್ಗೆ ಚರ್ಚೆ ಈಗ ನಡೆಯುತ್ತಿದೆ. ಇದಕ್ಕಾಗಿ ಅರಮನೆ ಮೈದಾನದ ಅನುಮತಿಗೆ ಬೆಂಗಳೂರು ಸಮಿತಿ ಅರ್ಜಿ ಹಾಕಿದೆ. ಈ ಕುರಿತಂತೆ ಚರ್ಚೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಟಾಪರ್‌ ಕೋಣವಷ್ಟೇ ಭಾಗವಹಿಸಲಿ
ಕಂಬಳದ ತೀರ್ಪುಗಾರರ ಸಮಿತಿಯ ಸಂಚಾಲಕರಾದ ವಿಜಯ್‌ ಕುಮಾರ್‌ ಕಂಗಿನಮನೆ ಅವರು “ಉದಯವಾಣಿ’ ಜತೆಗೆ ಮಾತನಾಡಿ, “157 ಜತೆ ಕೋಣಗಳನ್ನು ಜಿಲ್ಲೆಯ ಹೊರಭಾಗಕ್ಕೆ ಕೊಂಡೊಯ್ಯುವುದು ಸುಲಭದ ಕೆಲಸವಲ್ಲ. ಇದರಲ್ಲಿ ಆಯ್ಕೆ ಮಾಡಿ 65 ಜತೆ ಕೋಣಗಳು ಮಾತ್ರ ಹೊರಜಿಲ್ಲೆಗೆ ಕೊಂಡೊಯ್ದರೆ ಹೆಚ್ಚು ಅನುಕೂಲ. ಹೀಗೆ ಮಾಡಿದರೆ ಬೇರೆ ಕಡೆಯೂ ಕಂಬಳ ನಡೆಸಬಹುದು. ಇಲ್ಲದಿದ್ದರೆ ಕಷ್ಟ’ ಎನ್ನುತ್ತಾರೆ.

ಬೆಂಗಳೂರು ಕಂಬಳ ಸಾಧ್ಯತೆ ಕಡಿಮೆ
ಬೆಂಗಳೂರು ಕಂಬಳಕ್ಕೆ ಸಮಿತಿ ದಿನಾಂಕ ನೀಡಿತ್ತು. ಆದರೆ ಕಂಬಳ ಆಯೋಜನೆಯ ಸಿದ್ಧತೆ ನಡೆದಿಲ್ಲ. ಹೀಗಾಗಿ ಈ ಬಾರಿ ಬೆಂಗಳೂರಿನಲ್ಲಿ ಕಂಬಳ ನಡೆಯುವ ಸಾಧ್ಯತೆ ಕಡಿಮೆ. ಫೆಬ್ರವರಿಯಲ್ಲಿ ಶಿವಮೊಗ್ಗ ಕಂಬಳ ನಡೆಯಲಿದ್ದು, ಈ ಕುರಿತ ತಯಾರಿ ನಡೆಸಲಾಗುತ್ತಿದೆ.
-ಬೆಳಪು ದೇವಿಪ್ರಸಾದ್‌ ಶೆಟ್ಟಿ, ಅಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ.

Advertisement

ಮಾರ್ಚ್‌ನಲ್ಲಿ ನಡೆಸುವ ಬಗ್ಗೆ ಚರ್ಚೆ
ಬೆಂಗಳೂರು ಕಂಬಳಕ್ಕೆ ಕಂಬಳ ಸಮಿತಿಯಿಂದ ದಿನಾಂಕ ಪ್ರಕಟವಾಗಿತ್ತು. ಆದರೆ ನಾವು ಅಂತಿಮ ತೀರ್ಮಾನ ಮಾಡಿರಲಿಲ್ಲ. ಯಾರಾದರೂ ಆಸಕ್ತರಿದ್ದರೆ ಮುಂದೆ ಬರಬಹುದು ಎಂದು ನಾವೂ ನಿರೀಕ್ಷೆಯಲ್ಲಿದ್ದೆವು. ಯಾರೂ ಮುಂದೆ ಬರಲಿಲ್ಲ. ಸದ್ಯಕ್ಕೆ ಕಂಬಳ ನಡೆಸಲು ಸಾಧ್ಯವಿಲ್ಲ. ಆದರೂ ಕಂಬಳ ಸಮಿತಿ ಹಾಗೂ ಕೋಣಗಳ ಯಜಮಾನರು ಅನುಮತಿ ನೀಡಿದರೆ ಫೆಬ್ರವರಿ/ಮಾರ್ಚ್‌ನಲ್ಲಿ ನಡೆಸುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ.
-ಅಶೋಕ್‌ ಕುಮಾರ್‌ ರೈ, ಶಾಸಕರು, ಅಧ್ಯಕ್ಷರು, ಬೆಂಗಳೂರು ಕಂಬಳ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next