ದಾವಣಗೆರೆ: ಪ್ರತಿಯೊಬ್ಬ ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖ ಘಟ್ಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಜಿಲ್ಲೆಯಲ್ಲಿ ಅಚ್ಚು ಕಟ್ಟುನಿಟ್ಟಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹೆಚ್. ಬಸವರಾಜೇಂದ್ರ ಸೂಚಿಸಿದ್ದಾರೆ.
ಶುಕ್ರವಾರ, ನಗರದ ಸರ್ಕಾರಿ ನೌಕರರ ಭವನದಲ್ಲಿ ಮಾರ್ಚ್-ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ಮುಖ್ಯ ಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್ ಹಾಗೂ ತಾಲ್ಲೂಕು ನೋಡಲ್ ಅಧಿಕಾರಿಗಳ ಪೂರ್ವಭಾವಿಯಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಖ್ಯ ಘಟ್ಟ. ಇಂತಹ ಪರೀಕ್ಷೆಯ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು. ಅತ್ಯಂತ ಪಾರದರ್ಶಕ ಮತ್ತು ಕಟ್ಟುನಿಟ್ಟಿನ ಪರೀಕ್ಷೆಯಿಂದಾಗಿ ದೇಶದಲ್ಲಿ ಪ್ರತಿ ಹಂತದಲ್ಲಿ ಗುಣಮಟ್ಟ ಕಾಣಬಹುದು ಎಂದರು.
ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ನಿಷೇಧ ಇದೆ. ಸೂಕ್ತ ಆಸನಗಳ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು, ಪೊಲೀಸ್ ಬಂದೋಬಸ್ತ್ ಇತರೆ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು. ಅತಿ ಮುಖ್ಯವಾಗಿ ಮಕ್ಕಳು ಪರೀಕ್ಷೆ ಎದುರಿಸಲು ಸಹಕಾರಿಯಾಗಲು ಆಪ್ತ ಸಮಾಲೋಚನೆ ನಡೆಸಬೇಕು. ಆಪ್ತ ಸಮಾಲೋಚನೆ ವೇಳೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಅಕ್ರಮ ನಡೆಸದಂತೆ ಮನದಟ್ಟು ಮಾಡಬಹುದು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನೂ ಉತ್ತಮ ಫಲಿತಾಂಶಕ್ಕಾಗಿ ವಿವಿಧ ನಾವಿನ್ಯ ಕಾರ್ಯಕ್ರಮ ಹಾಕಿಕೊಳ್ಳೋಣ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ಮಾತನಾಡಿ, ಮಾ.21ರಿಂದ ಏಪ್ರಿಲ್ 4ರ ವರೆಗೆ ಜಿಲ್ಲೆಯಲ್ಲಿ ಎಸ್ ಎಸ್‌ಎಲ್‌ಸಿ ಪರೀಕ್ಷೆ ಸುಗಮವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 486 ಪ್ರೌಢಶಾಲೆಗಳ ಪೈಕಿ ಸರ್ಕಾರಿ 44, ಅನುದಾನಿತ 40, ಅನುದಾನ ರಹಿತ 9 ಕೇಂದ್ರಗಳು ಸೇರಿದಂತೆ ಒಟ್ಟು 92 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. 91ರಲ್ಲಿ ನಿಯಮಿತ ವಿದ್ಯಾರ್ಥಿಗಳು ಮತ್ತು 1 ಕೇಂದ್ರದಲ್ಲಿ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ ಎಂದರು.
ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ 12,407 ವಿದ್ಯಾರ್ಥಿಗಳು, 12,515 ವಿದ್ಯಾರ್ಥಿನಿಯರು ಸೇರಿ ಒಟ್ಟು 24,922 ಮಂದಿ ಪರೀಕ್ಷೆ ಬರೆಯಲಿದ್ದಾರೆ. 92 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಒಟ್ಟು 29 ಮಾರ್ಗಗಳಿವೆ. ಎಲ್ಲಾ ಕೇಂದ್ರಗಳಿಗೂ ಪರೀಕ್ಷಾ ಸಿಬ್ಬಂದಿ, ಅಧಿಕಾರಿಗಳನ್ನ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಲು ಪೊಲೀಸ್ ಇಲಾಖೆ ಭದ್ರತೆ ಕಲ್ಪಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್ ನಲ್ಲೇ ಪ್ರವೇಶಪತ್ರ ಪಡೆಯಬಹೇಕು. ಅತಿಯಗಿ ಬಿಸಿಲು ಇರುವುದರಿಂದ ಪರೀಕ್ಷಾ ಕೇಂದ್ರದಲ್ಲಿ ಒಬ್ಬರು ಆರೋಗ್ಯ ಸಹಾಯಕರನ್ನು ನೇಮಿಸಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ, ಅಗತ್ಯ ಪಿಠೊಪಕರಣ, ಕೆಲವೆಡೆ ಸಾಧ್ಯವಾದರೆ ಬಿಸಿಯೂಟ ವ್ಯವಸ್ಥೆಗೆ ಸೂಚಿಸಲಾಗಿದೆ ಎಂದು ಸಭೆ ಗಮನಕ್ಕೆ ತಂದರಲ್ಲದೆ, ಪರೀಕ್ಷೆಗಳು ಯಶಸ್ವಿಯಾಗಿ ಜರುಗಲು ಪರೀಕ್ಷಾ ಕೇಂದ್ರಗಳ ಕಸ್ಟೋಡಿಯನ್ ಹಾಗೂ ಕೊಠಡಿ ಮೇಲ್ವಿಚಾರಕರ ಪಾತ್ರ ಮುಖ್ಯ ಎಂದರು.
ಶಿಕ್ಷಣಾಧಿಕಾರಿ ನಿರಂಜನ್, ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ಮುಖ್ಯ ಅಧಿಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್ ಹಾಗೂ ಕೊಠಡಿ ಪರಿವೀಕ್ಷಕರು ಹಾಗೂ ಸಿಬ್ಬಂದಿ ಅನುಸರಿಸಬೇಕಾದ ಸೂಚನೆ ಕುರಿತು ವಿವರಿಸಿದರು.
ಪರೀಕ್ಷಾ ಕೇಂದ್ರದೊಳಗೆ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಷೆಧೀಸಲಾಗಿದೆ. ಅನಲಾಗ್ ವಾಚ್ ಮಾತ್ರ ಧರಿಸಬಹುದಾಗಿದ್ದು, ಡಿಜಿಟಲ್ ವಾಚ್ ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದರು.