Advertisement

ಜನರಲ್ಲಿ ಭೀತಿ ಹುಟ್ಟಿಸಿದ ರಸ್ತೆ ದರೋಡೆ

01:04 PM Apr 04, 2017 | Team Udayavani |

ಕಲಬುರಗಿ: ನಗರದಲ್ಲಿ ಈಚೆಗೆ ರಸ್ತೆ ದರೋಡೆಗಳು ಹೆಚ್ಚಾಗುತ್ತಿದ್ದು, ಕತ್ತಲಾಗುತ್ತಿದ್ದಂತೆ ಹೆಣ್ಣು ಮಕ್ಕಳಿರಲಿ ಗಂಡಸರು ಸಹ ಓಡಾಡಲು ಹೆದರುವಂತಹ ಪರಿಸ್ಥಿತಿ ಬಂದೊದಗಿದೆ. ಕಳೆದ ಒಂದು ವಾರದಲ್ಲಿ ನಾಲ್ಕೈದು ಕಡೆಗಳಲ್ಲಿ ರಸ್ತೆ ದರೋಡೆಗಳಾಗಿವೆ. ಇದಕ್ಕೆ ನಗರದಲ್ಲಿನ ಗಸ್ತು ಕರ್ತವ್ಯದಲ್ಲಿನ ಲೋಪಗಳೇ ಕಾರಣ ಎನ್ನಲಾಗುತ್ತಿದೆ.

Advertisement

ನಗರಕ್ಕೆ ಹೊಂದಿಕೊಂಡಿರುವ ಲೇಔಟ್‌ ಗಳಲ್ಲಿ ಹಾಗೂ ನಿರ್ಜನ ರಸ್ತೆಗಲ್ಲಿ ಓಡಾಡುತ್ತಿರುವವರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಬೈಕ್‌ಗಳಲ್ಲಿ, ಕಾರುಗಳಲ್ಲಿ ಇಬ್ಬರು ಮೂವರು ಇರುವ ತಂಡ ಹಠಾತ್‌ ದಾಳಿ ಮಾಡುತ್ತಿದೆ. ಅಲ್ಲದೆ, ಹಲ್ಲೆ ಮಾಡಿ ಬಂಗಾರದ ಒಡವೆ, ಮೊಬೈಲ್‌, ಎಟಿಎಂ ಕಾರ್ಡ್‌ಗಳು ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದಾರೆ. 

ಇದರಿಂದಾಗಿ ಇಡೀ ನಗರದಲ್ಲಿ ಈಗ ಭಯದ ವಾತಾವರಣ ಶುರುವಾಗಿದೆ. ನೂತನ ಎಸ್‌ಪಿಯಾಗಿ ಶಶಿಕುಮಾರ ಅವರು ಬಂದಾಗ ಅಪರಾಧ ಪ್ರಕರಣಗಳಿಗೆ, ರಸ್ತೆ ದರೋಡೆಗಳಿಗೆ, ಮನೆ ಕಳ್ಳತನ, ಸಂಚಾರ ಸಮಸ್ಯೆ, ಪಾರ್ಕಿಂಗ್‌ ಸಮಸ್ಯೆಗಳು ಹೀಗೆ ಹಲವಾರು ನಿಟ್ಟಿನಲ್ಲಿ ನಗರವನ್ನು ಕಾಡುತ್ತಿದ್ದ ತಲೆನೋವುಗಳೆಲ್ಲವೂ ಮಾಯವಾಗುವ ಲಕ್ಷಣಗಳು ಕಂಡು ಬಂದವು.

ಸಾರ್ವಜನಿಕರಷ್ಟೇ ಅಲ್ಲ, ಮಾಧ್ಯಮಗಳು ಕೂಡ ಬೆನ್ನು ತಟ್ಟಿದ್ದವು. ಆದರೆ, ಈಚೆಗಿನ ಒಂದು ತಿಂಗಳಿಂದ ನಗರದ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಕೊಂಚ ಏರುಪೇರಾಗುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಈ ಮಧ್ಯೆ ನಗರದಲ್ಲಿನ ಗಸ್ತು ಕರ್ತವ್ಯದಲ್ಲಿ ಸಡಿಲವಾಗಿರುವುದು ರಸ್ತೆ ದರೋಡೆ ಹೆಚ್ಚಲು ಕಾರಣ ಎನ್ನಲಾಗುತ್ತಿದೆ.

ಎಸ್‌ಪಿ ಅಮಿತ್‌ಸಿಂಗ್‌ ಇದ್ದಾಗ ಮತ್ತು ಶಶಿಕುಮಾರ ಅವರು ಹೊಸದಾಗಿ ಬಂದಾಗ ಗಸ್ತು ವ್ಯವಸ್ಥೆ ಚೆನ್ನಾಗಿತ್ತು. ಗಸ್ತು ವ್ಯವಸ್ಥೆಯನ್ನು ಇನ್ನಷ್ಟು ಬಲ ಪಡಿಸಲು ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ಬೇಕಾಗುತ್ತದೆ ಎನ್ನುವ ಕೂಗು ಕೇಳಿಬಂದಿತ್ತು. 2016ರ ಕೊನೆಯಲ್ಲಿ ಹೊಸದಾಗಿ ಪೊಲೀಸ್‌ ಪೇದೆಗಳ ನೇಮಕಾತಿ ಮಾಡಿಕೊಳ್ಳಲಾಗಿತ್ತು.

Advertisement

ಅದರಂತೆ ನಗರದ ಕರ್ತವ್ಯಕ್ಕೂ ಒಂದಷ್ಟು ಪೇದೆಗಳು ಲಭ್ಯವಾಗುತ್ತಾರೆ. ಇದರಿಂದ ಗಸ್ತು ಕರ್ತವ್ಯ ಭದ್ರವಾಗಲಿದೆ. ಇದರಿಂದ ನಗರದ ಹೊರವಲಯದ ಬಡಾವಣೆಗಳಲ್ಲಿ ಸಂಜೆ ಮತ್ತು ರಾತ್ರಿ ಹೊತ್ತಿನಲ್ಲಿ ನಡೆಯುವ ಅಪರಾಧಗಳ ಸಂಖ್ಯೆ ಕಡಿಮೆಯಾಗಲಿದೆ. ಜನರಿಗೆ ಭಯವಿಲ್ಲದ ವಾತಾವರಣ ನಿರ್ಮಾಣವಾಗಲಿದೆ ಎನ್ನಲಾಗಿತ್ತು. ಆದರೆ, ಅದೆಲ್ಲವೂ ಈಗ ಸುಳ್ಳಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. 

ರಾತ್ರಿಗಳು ಭಯಾನಕ: ನಗರದಲ್ಲಿ ಈಚೆಗೆ ರಾತ್ರಿಗಳು ಭಯಾನಕವಾಗುತ್ತಿವೆ. ರಾತ್ರಿ 10:00ರ ಬಳಿಕ ನಗರದ ಹೊರ ವಲಯದಲ್ಲಿರುವ ಬಡಾವಣೆಗಳಲ್ಲಿ ಹೆಂಗಸರಿರಲಿ.. ಗಂಡಸರೂ ಓಡಾಡುವುದು ಕಷ್ಟವಾಗುತ್ತಿದೆ.

ತಿಮ್ಮಾಪುರ, ಶಿವಶಕ್ತಿ ಲೇಔಟ್‌, ಸಾಯಿನಗರ, ಗೋದುತಾಯಿ ನಗರ, ನಗರದ ವರ್ತುಲ ರಸ್ತೆಗೆ ಹೊಂದಿ ಕೊಂಡಿರುವ ಬಡಾವಣೆಗಳಲ್ಲಿ ರಸ್ತೆ ದರೋಡೆ ಹೆಚ್ಚಾಗುತ್ತಿದೆ. ಅದರೊಂದಿಗೆ ಮಾರಣಾಂತಿಕ ಹಲ್ಲೆ ಮಾಡಲಾಗುತ್ತಿದೆ. ಇದನ್ನು ತಡೆಯುವಲ್ಲಿ ಪೊಲೀಸ್‌ ಗಸ್ತು ಚುರುಕಾಗಬೇಕು ಎಂದು ನಗರದ ನಿವಾಸಿ ಶಾಂತು ನಿಂಬರಗಿ ಆಗ್ರಹಿಸಿದ್ದಾರೆ. 

ಅನುಮಾನಸ್ಪದ ಓಡಾಟ ಹೆಚ್ಚು: ನಗರದಲ್ಲಿ ವಿವಿಧ ಬಡಾವಣೆ ಮತ್ತು ವೃತ್ತಗಳಲ್ಲಿ ಸಂಜೆ ಹೊತ್ತಿನಲ್ಲಿ ಅನುಮಾನಾಸ್ಪದವಾಗಿ ಓಡಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಮಹಿಳೆ ಮತ್ತು ಮಕ್ಕಳು ಹಾಗೂ ವೃದ್ಧರು ಅಪಾಯದ ಪರಿಸ್ಥಿತಿ ಎದುರಿಸುವಂತಹ ಭಯದ ವಾತಾವರಣ ಉಂಟಾಗಿದೆ. ಇದನ್ನು ತಡೆಯುವಲ್ಲಿ ಪೊಲೀಸರು ಹೆಚ್ಚಿನ ಜಾಗೃತೆಯಿಂದ ಗಸ್ತು ಹಾಗೂ ಭದ್ರತೆ ಹೆಚ್ಚು ಮಾಡಬೇಕು ಎಂದು ತಿಮ್ಮಾಪುರ ಬಡಾವಣೆ ನಿವಾಸಿ ಬಸವರಾಜ ಪಾಟೀಲ ಆಗ್ರಹಿಸಿದ್ದಾರೆ. 

* ಸೂರ್ಯಕಾಂತ ಎಂ. ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next